ತಾಯಿಗೆ ನಮನ

ತಾಯಿಗೆ ನಮನ

ಬರಹ

ಬೆಳೆದಷ್ಟೂ ಮತ್ತೆ ಮತ್ತೆ ಬೆಳೆಯುವ ಹಂಬಲ
ಬೇರು ಕೆಳಗಿಳಿದಷ್ಟೂ ಹೆಚ್ಚುತಿದೆ ಮರಕೆ ಬಲ
ವನ್ಯರಾಶಿಯ ತೂಕ ಹೊತ್ತಿಹ ತಾಯಿ
ಅವಳ ತೂಕ, ಒಡಲ ಶಕ್ತಿ ಬಲ್ಲವರಾರು

ಮಾನವನ ಉಳುಮೆಗಾಗಿ ಮರಗಳ ಕಡಿಯುವ ಕಾಲ
ಎಂದಿಗೂ ಯಾರೂ ತಡೆಯಲಾಗದು ಈ ಜಾಲ
ಜಾಲದ ಮೋಸ ವಂಚನೆಗಳ ನೋಡಿಯೂ ನೋಡದಂತಿಹಳು
ಇವಳು ಒಮ್ಮೆ ಹೂಂಕರಿಸಲು ವಂಚಕರು ಉಳಿದಾರೇನು?

ತಾಯಿಯ ಮಡಿಲಲ್ಲಿಹರು ಬಗೆ ಬಗೆಯ ಮಕ್ಕಳು
ನಿಸರ್ಗ, ಗಣಿಗಳು, ಪ್ರಾಣಿ ಪಕ್ಷಿಗಳು
ಎಲ್ಲರಲು ಉದಯೋನ್ಮುಖ ಬೆಳವಣಿಗೆಯ ಕಾಣುತಿರಲು
ಒಡಲು ಬಿರಿಯುತಿರಲೂ ತಲೆ ಎತ್ತಿ ನಿಂತಿಹಳು
ಅಧೋನ್ಮುಖಿಯಾಗದಿರಲು ಎಲ್ಲರ ಪಾಡೇನು?

ಸೂರ್ಯನ ಪ್ರಖರ ಕೋಪದಿ ನರಳಿದರೂ
ಸಮುದ್ರದ ತೀವ್ರ ಕೊರೆತದಿ ಅಳುತಿರಲೂ
ಮಳೆ ಗಾಳಿ ಹೊಡೆತಗಳಿಗೆ ದಿಕ್ಕೆಡುತಿರಲೂ
ತನ್ನ ಮಕ್ಕಳನು ಕಾರುಣ್ಯದಿ ಕಾಪಾಡುತಿಹ ಮಾತೆ

ನಿನ್ನ ಮೇಲಿನ ಪ್ರಹಾರಕೆ ನೀನೊಮ್ಮೆ ನಡುಗಲು
ವಿಶ್ವವೆಲ್ಲಾ ನಡುಗಿ ನುಚ್ಚು ನೂರಾಗುವುದು
ಶಾಂತಳಗು, ಎಲ್ಲರನು ಕಾಪಾಡು ಮಹಾತಾಯಿ
ನಿನಗೆ ನಮ್ಮೆಲ್ಲರ ನೂರೆಂಟು ನಮನ