ತಾಯಿಯ ಮಡಿಲಲ್ಲಿ..
(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟವಾದ ಕವಿತೆ )
ಕತ್ತಲೆಯಲಿ ಕಣ್ಮುಚ್ಚಿ
ಆತ್ಮ ಕಂಡ ದೇಶಕ್ಕೆ
ಯಾಕೆ ಬೇಕು ಬೆಳಕು
ಪಾಶ್ಚಾತ್ಯರ ತಳುಕು,
ಮೈ ಮುಚ್ಚಿ ಮನ ಬಿಚ್ಚಿ
ನನ್ನ ಸಾಕಿದವಳು
ಕತ್ತಲೆಯ ತಂಪಿನಲಿ
ಎದೆಹಾಲ ಕುಡಿಸಿದಳು
ಈಗ ಮೈ ಬಿಚ್ಚಿರುವಳು
ಮನವ ರೊಚ್ಚೆ ಎಬ್ಬಿಸಿ
ಬೆಳಕಿನಲೇ ಬೆತ್ತಲಾಗಿಹಳು
ದೊಚುತ್ತಿರುವರು ಆಕೆಯ ಮಾನವ,
ನಮ್ಮೆದೆಯ ಸ್ವಾಭಿಮಾನವ
ನಾವೆಲ್ಲ ನಗರದಲೇ ತಿಣುಕಾಡೊ
ನೆರಳಿಲ್ಲದ ನರ ಮಾನವರು
ಅನ್ನ ಬೆಳೆವವನು ತಿರುಕ
ಅನ್ಯರ ಚಾಕರಿ ಮಾಡುವವನು
ಧನಿಕ ಅತೀ ಧನಿಕ
ಸತ್ತಿದೆ ನನ್ನಂತವರ ಗಮಕ
ಬೆಳಕು ಕಾಣೊ ಆಸೆಯಲಿ
ಮಾರಿದೆವು ನಮ್ಮೆದೇ ಸ್ವಮುಖ
ಮುಖವಾಡ ಇನ್ನೀಗ
ಹಗಲು ಬೆಳಕಿನಲೇ ನಾಟಕ
ಇನ್ನೊಬ್ಬನ ಮನೆಯ
ನಾಯಾಗಿ ನಮ್ಮ ಕಾಯಕ
ಸೆಳೆದಿಹರು ನಮ್ಮನು
ಯಂತ್ರ-ಕುತಂತ್ರ ರಾಶಿಯೊಳಗೆ
ಮರೆತಿಹವು ನಾವು ನಮ್ಮನೊಡೆದ
ಪರ-ಮಂತ್ರವ,
ಇನ್ನಾವ ಹುನ್ನಾರ ಕಾದಿದೆಯೊ
ನನ್ನ ಜಗದ ಮಕ್ಕಳಿಗೆ
ಕರುಣಾಳು ಬೆಳಕೇ ಬಿಟ್ಟು ತೊಲಗು
ರಕ್ತ ಸುರಿಸಿ ಕಟ್ಟಿದ ನನ್ನ ದೇಶವ,
ಬದುಕಲು ಬಿಡು ಕತ್ತಲೆಯ
ತಂಪಿನೊಳಗೆ
ನನ್ನ ಭಾರತಾಂಬೆಯ
ಮಡಿಲಿನೊಳಗೆ.
Comments
ಉ: ತಾಯಿಯ ಮಡಿಲಲ್ಲಿ,,,
ಜಾಗತಿಕ ಗೋಮಾಳದ ವೇಗದೋಟದ ಪ್ರವೃತ್ತಿಯ ಈ ದಿನಗಳಲ್ಲಿ 'ನಿಮ್ಮ' ಕತ್ತಲಿನಲ್ಲಿ ನಿಮ್ಮ ಪಾಡಿಗಿರಲು ಬಿಡುವುದು ಅನುಮಾನ ನವೀನರೆ! ಆದರೆ ನಮ್ಮಲ್ಲೆ ನಮ್ಮ ಸಮಸ್ಯೆಗಳಿಗೆ, ತೊಡಕುಗಳಿಗೆ ನಮ್ಮದೆ ಆದ 'ಮಣ್ಣಿನ' ಪರಿಹಾರ ಸರಿ ಹೊಂದುವ ಹಾಗೆ ಮತ್ತಾವುದು ಹೊಂದದೆನ್ನುವುದು ನಿಜ. ಆದರೀಗ ವಿದೇಶಿ ಪ್ರಗತಿಯ ಮಾದರಿಯನ್ನು ಬೆನ್ನಟ್ಟಿ ನಕಲು ಮಾಡುವ ಸಂಸ್ಕೃತಿಯ ಹಿಂದೆ ಓಡಿರುವವರಿಗೆ ' ಹಳತಲ್ಲೂ ಒಳಿತಿರುವುದು' ಕಾಣದು; ಅಂತೆಯೆ ಹಳೆ ಪೀಳಿಗೆಗೆ ಹೊಸತನ್ನು ಸಂಸ್ಕರಿಸಿ ನೋಡಿ ಹಳತಿಗೆ ಪೂರಕವಾದದನ್ನು ಹೆಕ್ಕಿ ಅವುಗಳನ್ನು ಸಂಗಮಿಸಿ ಹೊಸತನ್ನು ಚಿಗುರಿಸುವ ಪರಿಯೂ ಒಗ್ಗದು. ಒಟ್ಟಾರೆ ಇಲ್ಲೂ ಹಳೆ ಬೇರು ಹೊಸ ಚಿಗುರಿನ ಆಶಯ ಅಂತರ್ಗತವಾಗಿರುವುದು ವಿಸ್ಮಯವೆ ಸರಿ! :-)
In reply to ಉ: ತಾಯಿಯ ಮಡಿಲಲ್ಲಿ,,, by nageshamysore
ಉ: ತಾಯಿಯ ಮಡಿಲಲ್ಲಿ,,,
ನಾಗೇಶರಿಗೆ ನಮಸ್ತೆ, ಜಾಗತೀಕ ಗೋಮಾಳ, ಪರಿಸ್ಥಿತಿಗೆ ತಕ್ಕ ಆಳವಾದ ಪದ, ನೀವು ಹೇಳಿದಂತೆ ನಮ್ಮ ಸಮಸ್ಸ್ಯೆಗಳಿಗೆ ನಾವೆ ಪರಿಹಾರ ಕಂಡುಕೊಳ್ಳಬೇಕು, ಆದರೆ ಬೇರೆ ಯಾವುದರ ಹಿಂದೆಯೋ ಓಡುತ್ತಿದ್ದೇವೆ, ಪ್ರತಿಕ್ರಿಯೆಗೆ ಧನ್ಯವಾದಗಳು,,,,
ಉ: ತಾಯಿಯ ಮಡಿಲಲ್ಲಿ,,,
ಜ್ಞಾನ-ವಿಜ್ಞಾನ-ನಮ್ಮತನ ಈ ಮೂರೂ ಮೇಳವಿಸಿದಲ್ಲಿ ಮತ್ತೊಮ್ಮೆ ಭಾರತ ನಂದನವನವಾಗುತ್ತದೆ. ಧೀಮಂತ ನಾಯಕತ್ವ ಇದ್ದಲ್ಲಿ ಇದು ಸಾಧ್ಯವಾಗುತ್ತದೆ.
In reply to ಉ: ತಾಯಿಯ ಮಡಿಲಲ್ಲಿ,,, by kavinagaraj
ಉ: ತಾಯಿಯ ಮಡಿಲಲ್ಲಿ,,,
ಹೌದು ಕವಿಗಳೇ, ಮೂರರ ಸಂಗಮ, ಜೊತೆಗೆ ಹೊಸತನ್ನು ಆಘ್ರಾಣಿಸುವ ತೆರೆದ ಹೃದಯದ ನಾಯಕ, ಪ್ರತಿಕ್ರಿಯೆಗೆ ಧನ್ಯವಾದಗಳು,