ತಾಯಿ ಭಾರತಿಗೀಗ ಅಮೃತ ಘಳಿಗೆ
ಅಮೃತ ಸಮಾನಳೀಕೆ
ಅಮರ ಮಕ್ಕಳ ಹಡೆದವಳೀಕೆ
ಇವಳಿಗೀಗ ಅಮೃತ ಘಳಿಗೆಯ ಸಂಭ್ರಮ
ತೊತ್ತ ತೊರೆದು ಬಿಡುಗಡೆ
ಹೊತ್ತ ಅಮೃತದ ಘಳಿಗೆಗೀಗ
ಅಮೃತ ಮಹೋತ್ಸವ.
ತಾಯ ಸಿರಿವಂತಿಕೆಯ ದೋಚಿದ
ನೀಚರಿಗೆ ಕೆಚ್ಚೆದೆಯಲಿ ಬುದ್ಧಿಕಲಿಸಿದ
ವೀರ ಮಕ್ಕಳ ಹಡೆದವಳಿಗೀಗ
ಹೆಮ್ಮೆಯ ಘಳಿಗೆ
ಮಾನವರೂಪಿ ರಾಕ್ಷಸರಿಗೂ
ಸಿಂಹಸ್ವಪ್ನವಾಗಿ ಹುತಾತ್ಮರಾದ
ಧೀರಶೂರರ ಹೆತ್ತು ಸಂಭ್ರಮಿಸಿದ
ತಾಯಿಗೀಗ ಸಂತಸದ ಘಳಿಗೆ
ಉಕ್ಕಿನಂತಹ ದೇಹ ಸೊಕ್ಕಿದ ಮನಸನು
ಬಿಕ್ಕುವಂತೆ ಮಾಡಿದವರ ಮಣ್ಣು
ಮುಕ್ಕುವಂತೆ ಮಾಡಿದ ಮಕ್ಕಳ
ಹಡೆದವಳಿಗೀಗ ಸಂಭ್ರಮದ ಘಳಿಗೆ
ದುರುಳರೇ,ಎಲ್ಲವನೂ ದೋಚಬಹುದು ನೀವು
ಆದರೆ ಧಮನಿ ಧಮನಿಯಲಿ ಹರಿವ
ತಾಯಿಪ್ರೇಮ, ಜ್ಞಾನಧಾರೆ ದೋಚಲಾರಿರಿ
ಎಲ್ಲವೂ ಕಸಿದು ಬಸಿದರೂ
ತೋಳ ಕಸುವ ಕಸಿಯಲಾರಿರಿ
ಸಂಸ್ಕೃತಿಗೆ ಮಸಿಯ ಬಳಿಯಲಾರಿರಿ
ಎಂಬುದನು ಸಾಬೀತು ಪಡಿಸಿದ
ಮಕ್ಕಳ ಪಡೆದ ತಾಯಿ ಭಾರತಿಗೀಗ
ಅಮೃತ ಘಳಿಗೆ
ಭಾರತಾಂಬೆಯ ಮಕ್ಕಳೆಂದರೆ
ಸಿಂಹಸದೃಶರು ನಾವು
ತಾಯತ್ತ ಕುದೃಷ್ಟಿ ಬೀರಿದರೆ
ಎದೆಸೀಳದೆ ಬಿಡುವವರಲ್ಲ ನಾವು
ನಾವೆಂದರೆ ಬರೀ ನಾವಲ್ಲ
ದುರುಳರ ಕೊರಳ ಕೊಯ್ವವವರು ನಾವು
ಉತ್ತಮರ ಪಾಲಿನ ಪ್ರಾಣವಾಯು ನಾವು
ಉಸಿರ ಉಸಿರಲೂ ತಾಯಿ ಭಾರತಿಯ
ಹೆಸರೇ ಹೊತ್ತಿರುವವರು ನಾವು
ಈ ನಮ್ಮ ಅಭಿಮಾನದ ಮಾತೆಗೀಗ
ಅಮೃತ ಘಳಿಗೆ
ಶೌರ್ಯವ ಮೆರೆದು ದಾಸ್ಯವ ಸರಿಸಿ
ವಿಜಯಬಾವುಟವ ಆಗಸದೆತ್ತರಕೇರಿಸಿ ಜಗತ್ತಿಗೇ ಗುರುವೆನಿಸಿ ಮಾದರಿಯಾಗಿ
ಮತ್ತೆ ಸ್ವತಂತ್ರ ನಾಡಾಗಿ ಸಂಭ್ರಮಿಸಿದ ತಾಯಿ ಭಾರತಿಗೀಗ ಉತ್ಸವ ಸ್ವಾತಂತ್ರ್ಯೋತ್ಸವ
ಅಮೃತ ಮಹೋತ್ಸವ.
-ಜಯಶ್ರೀ ರಾಜು, ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣ