ತಾಯಿ ಮತ್ತು ಮಗಳಿಗೆ.

ತಾಯಿ ಮತ್ತು ಮಗಳಿಗೆ.

ಬರಹ

ಸೀತೆ ನಿನ್ನ ಮಗಳೆ?
ನಿಜ ಹೇಳೆ ಭೂಮಿ
ಹೌದೆ! ಹಾಗಾದರೆ
ನೀನೇಕೆ ಕಲಿಸಲಿಲ್ಲ
ಅವಳಿಗೆ
ತಪ್ಪಿಲ್ಲದಾಗ ಸಿಡಿಯುವುದನ್ನು
ಎದೆಯ ಮೇಲೆ ನಿಂತು
ನೋಯಿಸುವವರ ಎದೆ
ನಡುಗಿಸುವುದನ್ನು
ಇಡೀ ಜೀವಮಾನದಲಿ
ಎಂದಾದರೂ ವರ್ತಿಸಿದಳೆ
ಆಕೆ ನಿನ್ನಂತೆ
ಇಲ್ಲಾ ನಿನ್ನುದರದಲ್ಲಿ
ಜನಿಸಿದ ದುರ್ಬಲ
ಶಿಶುವೆ
ಸೀತೆ;ನಿನ್ನ ಮಗಳೆ?
*
ಜಗತ್ತು ಬಲ್ಲ
ನಿನ್ನ ಕತೆಯನ್ನು
ಹೇಳಲು ನಾನಿಲ್ಲಿ
ಕುಳಿತಿಲ್ಲ ಸೀತೆ
ನಿನ್ನನ್ನೆ ಕೇಳಬೇಕಿದೆ
ಪ್ರಶ್ನೆಗಳು ಹಲವಾರು
ಎಲ್ಲ ಬೇಡ
ಉತ್ತರಿಸು ಈ ಕೆಲವಕ್ಕಾದರೂ
ಹೆಣ್ಣುಗಳೆಲ್ಲ ಇರಬೇಕು
ಸೀತೆಯಂತೆ ಎಂದಾಗಲೆಲ್ಲ
ಕೈ ಕಾಲು
ಕಟ್ಟಿ ಹಾಕಿದ ಅನುಭವ
ಹೇಗಿದ್ದೆ ಸೀತೆ ನೀನು?
..............
ಭಾವನೆಗಳಿಲ್ಲದ ಕಲ್ಲಿನಂತೆ?
ಎಲ್ಲದಕ್ಕೂ ಕತ್ತಾಡಿಸುವ
ಕೋಲೆ ಬಸವನಂತೆ?
ಹೆಚ್ಚು ನಕ್ಕರೆ
ಮಾತಾಡಬೇಕಾದೀತು
ಮಾತಾಡಿದರೆ ಪ್ರಶ್ನೆಗಳೆದ್ದಾವು
ಎಂಬ ಹೆದರು ಪುಕ್ಕಿಯಂತೆ?
ಅಥವಾ
ನಿನ್ನದೆಂಬ ಆಸೆಗಳ
ಕೊಂದುಕೊಂಡು...
ಯಾಕೆ ಹಾಗಿದ್ದೆ ಸೀತೆ?
ಹೇಗಿದ್ದೆ ನೀನು??....