ತಾಲಿಬಾನ್ ಮತ್ತು ಪಾಕಿಸ್ತಾನ್ : ಆಯ್ಕೆ ಯಾವುದು ?

ತಾಲಿಬಾನ್ ಮತ್ತು ಪಾಕಿಸ್ತಾನ್ : ಆಯ್ಕೆ ಯಾವುದು ?

ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರಕ್ಕಿಂತ ಪಾಕಿಸ್ತಾನದ ಮಿಲಿಟರಿ ನಿಯಂತ್ರಣದ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೋ ಉತ್ತಮ. ಶತ್ರುವಿನ ಶತ್ರು ಮಿತ್ರ ಎಂಬುದು ರಾಜಕೀಯವಾಗಿ, ರಕ್ಷಣಾತ್ಮಕವಾಗಿ ಒಳ್ಳೆಯ ಚಾಣಕ್ಯ ನೀತಿ ಎಂಬುದೇನು ನಿಜ, ಆದರೆ ಆ ಶತ್ರುವಿನ ಶತ್ರು ಎಷ್ಟು ಪ್ರಾಮಾಣಿಕ, ಎಷ್ಟು ಯೋಗ್ಯ, ದೀರ್ಘಕಾಲದಲ್ಲಿ ಅವರೊಂದಿಗೆ ಹೊಂದಬಹುದಾದ ಸಂಬಂಧಗಳ ಅರ್ಹತೆ, ಅವರ ಸಾಮಾಜಿಕ ಮತ್ತು ರಾಜಕೀಯ ಬದ್ಧತೆ, ಮನಸ್ಥಿತಿ ಎಲ್ಲವನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ. 

ರಷ್ಯಾ ಮತ್ತು ಅಮೆರಿಕಾದ ನಡುವಿನ ಶೀತಲ ಕದನದಲ್ಲಿ ರಷ್ಯಾ ಆಫ್ಘಾನಿಸ್ತಾನದಲ್ಲಿ ತನ್ನ ನಿಯಂತ್ರಿತ ಸರ್ಕಾರವನ್ನು ನೇಮಿಸಿರುತ್ತದೆ. ಅದನ್ನು ದುರ್ಬಲಗೊಳಿಸಲು ಅಮೆರಿಕ ಆಫ್ಘಾನಿಸ್ತಾನದ ಬುಡಕಟ್ಟು ಸಮುದಾಯಗಳಿಗೆ ಶಸ್ತ್ರಾಸ್ತ್ರಗಳನ್ನು ನೀಡಿ ತಾಲಿಬಾನೆಂಬ ಸಂಘಟನೆಯನ್ನು ಬೆಳೆಸುತ್ತದೆ. ಪಾಕಿಸ್ತಾನ ಸಹ ಇದನ್ನು ಬೆಂಬಲಿಸುತ್ತದೆ. ಒಂದು ದೃಷ್ಟಿಯಲ್ಲಿ ಅದನ್ನು ದೇಶದ ಸ್ವಾತಂತ್ರ್ಯ ಯೋಧರ ಆಜಾದಿ ಸೈನ್ಯ ಎಂಬಂತೆ ಬಿಂಬಿಸಿದರೆ, ಇನ್ನೊಂದು ದೃಷ್ಟಿಯಲ್ಲಿ ಸರ್ಕಾರ ವಿರುದ್ಧ ಬಂಡಾಯ ಏಳುವ ಭಯೋತ್ಪಾದಕ ಸಂಘಟನೆ ಎಂದೂ ಕರೆಯಲಾಗುತ್ತದೆ. 

ಒಮ್ಮೆ ಇದೇ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದಾಗ ಆಫ್ಘಾನಿಸ್ತಾನದ ಬೃಹತ್ ಬೌದ್ಧ ವಿಗ್ರಹವನ್ನು ಅನಾವಶ್ಯಕವಾಗಿ ನುಚ್ಚುನೂರುಗೊಳಿಸಲಾಯಿತು. ಐತಿಹಾಸಿಕ ಮಹತ್ವದ ಅದನ್ನು ಹಾಗೇ ಉಳಿಸಿದ್ದರೆ ಸಮಸ್ಯೆ ಏನು ಇರಲಿಲ್ಲ. ಅದನ್ನು ಸಿಡಿಮದ್ದು ಸಿಡಿಸಿ ಸಂಪೂರ್ಣ ನಾಶ ಮಾಡಿದರು. 

ಇತ್ತೀಚೆಗಿನ ಪೆಹಲ್ಗಾಮ್ ಘಟನೆಗೆ ಹೋಲಿಕೆ ಮಾಡಬಹುದಾದ, ಆದರೆ ಬೇರೆ ರೂಪದ ಒಂದು ಘಟನೆ ಅವರ ಆಡಳಿತದ ಮೊದಲನೆಯ ಅವಧಿಯಲ್ಲಿ ನಡೆಯಿತು. ನೇಪಾಳದಿಂದ ಭಾರತಕ್ಕೆ ಬರುತ್ತಿದ್ದ ವಿಮಾನವನ್ನು ಪಾಕಿಸ್ತಾನಿ ಬೆಂಬಲಿತ ಭಯೋತ್ಪಾದಕರು ಅಪಹರಣ ಮಾಡಿ ಆಶ್ರಯ ಪಡೆದಿದ್ದು ಮತ್ತು ಅವರಿಗೆ ಆಶ್ರಯ ನೀಡಿದ್ದು ಇದೇ ತಾಲಿಬಾನ್ ಸರ್ಕಾರ. ಆಗ ಭಾರತ ಸರ್ಕಾರವೇ ಈಗ ನಟೋರಿಯಸ್ ಭಯೋತ್ಪಾದಕನೆಂದು ವಿಶ್ವವೇ ಘೋಷಿಸಿರುವ ಹಫೀಜ್ ಸಯೀದ್ ನನ್ನು ಕಾಶ್ಮೀರದ ಜೈಲಿನಿಂದ ಆಫ್ಘಾನಿಸ್ತಾನಕ್ಕೆ ವಿದೇಶಾಂಗ ಸಚಿವರೇ ವಿಮಾನದಲ್ಲಿ ಕರೆದೊಯ್ದು ಅವರಿಗೆ ಒಪ್ಪಿಸಿ ವಿಮಾನ ಮತ್ತು ಅದರಲ್ಲಿದ್ದ ಸುಮಾರು 200 ಜನರನ್ನು ರಕ್ಷಿಸಿ ಸುರಕ್ಷಿತವಾಗಿ ಕರೆತರಲಾಯಿತು. 

ಆದರೆ ವಿಮಾನ ಅಪಹರಣಕಾರರು ಭಾರತಕ್ಕೆ ಕಠಿಣ ಸಂದೇಶ ನೀಡಲು ಪೆಹಲ್ಗಾಮ್ ನಂತೆಯೇ ಅತ್ಯಂತ ಕ್ರೂರ ಹತ್ಯೆ ಮಾಡುತ್ತಾರೆ. ನೇಪಾಳಕ್ಕೆ ಹನಿಮೂನ್ ಗೆಂದು ಹೋಗಿದ್ದ ನವ ಜೋಡಿಯಲ್ಲಿ ರೂಪೇನ್ ಕತ್ಯಾಲ್ ಎಂಬ ಯುವಕನನ್ನು  ಹೊರಗೆ ಕರೆತಂದು ಶೂಟ್ ಮಾಡಿ ಕೊಂದು ಭಾರತ ಸರ್ಕಾರಕ್ಕೆ ನಾವು ಏನು ಮಾಡಲು ಹೇಸುವುದಿಲ್ಲ ಎಂಬ ಭಯದ ಸಂದೇಶ ಕಳುಹಿಸುತ್ತಾರೆ. ಹಾಗೆಯೇ ಇಂದಿನ ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರ ಸಂಪೂರ್ಣ ಸ್ವಾತಂತ್ರವನ್ನು ಹರಣ ಮಾಡಲಾಗಿದೆ. ಅನೇಕ ಹಿಂಸಾತ್ಮಕ ಕೃತ್ಯಗಳು, ಅನಾಗರಿಕ ಆಡಳಿತ ನಡೆಯುತ್ತಲೇ ಇದೆ. ಧರ್ಮ ಯಾವುದೇ ಇರಲಿ ಆದರೆ ಮಾನವೀಯತೆ ಇಲ್ಲದ ಯಾವ ದೇಶ ಮತ್ತು ಸಮಾಜವನ್ನು ಒಪ್ಪಲು ಸಾಧ್ಯವಿಲ್ಲ. ಅದರ ವಿರುದ್ಧ ಸದಾ ನಮ್ಮ ಪ್ರತಿಭಟನೆ ಇರಲೇಬೇಕು. 

ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಮಧ್ಯೆ ಘರ್ಷಣೆ ನಡೆಯುತ್ತಿದೆ, ಜೊತೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಅನೇಕ ವರ್ಷಗಳಿಂದ ವೈಷಮ್ಯವಿದೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕಾಶ್ಮೀರ ವಿಷಯಕ್ಕೆ ಮಾತ್ರ ಮುಖ್ಯವಾಗಿ ಘರ್ಷಣೆ ಇದ್ದರೆ,  ಆಫ್ಘಾನಿಸ್ತಾನ್ ತಾಲಿಬಾನ್ ಸರ್ಕಾರ ಅದನ್ನು ಮೀರಿ ಅವಕಾಶ ಸಿಕ್ಕರೆ ಜಿಹಾದ್ ಮನಸ್ಥಿತಿಯನ್ನು ಹೊಂದಿದೆ. ಇದು ಪಾಕಿಸ್ತಾನಕ್ಕಿಂತ ಅಪಾಯಕಾರಿಯಲ್ಲವೇ. 

ಏನೇ ಆಗಲಿ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಸರ್ಕಾರ ಇದೆ. ಚುನಾವಣೆಗಳು ನಡೆಯುತ್ತವೆ. ನ್ಯಾಯಾಲಯವಿದೆ. ಮಾಧ್ಯಮ, ಉದ್ಯಮ, ಕ್ರೀಡೆ, ಸೈನಿಕ ಶಕ್ತಿ ಎಲ್ಲವೂ ಇದೆ. ಅಲ್ಲಿನ ಸುಪ್ರೀಂ ಕೋರ್ಟ್ ಭ್ರಷ್ಟಾಚಾರ ವಿರುದ್ಧ ಕೆಲವು ಮಹತ್ವದ ತೀರ್ಮಾನಗಳನ್ನು ನೀಡಿದೆ. ಅಲ್ಪಸಂಖ್ಯಾತರ ರಕ್ಷಣೆಗಾಗಿ ದುಷ್ಕರ್ಮಿಗಳಿಂದ ನಾಶವಾದ ಹಿಂದೂ ದೇವಸ್ಥಾನದ ಮರು ನಿರ್ಮಾಣಕ್ಕಾಗಿ ಕೊಟ್ಟ ಕೆಲವು ತೀರ್ಮಾನಗಳು ಪ್ರಶಂಸನೀಯವಾಗಿದೆ. ಅದು ಎಷ್ಟೇ ಆದರೂ ನಮ್ಮಿಂದ ಬೇರೆಯಾದ ನಮ್ಮ ನೆರೆಯ ಸಹೋದರ ರಾಷ್ಟ್ರ. ಇಂದಲ್ಲ ನಾಳೆ ನಮ್ಮೊಂದಿಗೆ ಉತ್ತಮ ಗೆಳೆತನ ಹೊಂದಬಹುದು. 

ಈ ಅಮೆರಿಕ ದೇಶ ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳಿಗೂ ಬೆಂಬಲ ನೀಡಿದೆ. ಇರಾಕ್ ನಲ್ಲಿ ಸದ್ದಾಂ ಹುಸೇನ್ ನಂತಹ  ಸರ್ವಾಧಿಕಾರಿಯನ್ನು ಪ್ರೋತ್ಸಾಹಿಸಿದ್ದೇ ಅಮೆರಿಕ. ಇರಾನ್ ವಿರುದ್ಧ ಇರಾಕ್ ದೇಶವನ್ನು ಎತ್ತಿ ಕಟ್ಟಿ ದೀರ್ಘಕಾಲ ಯುದ್ಧ ಮಾಡಲು ಶಸ್ತ್ರಾಸ್ತ್ರಗಳನ್ನು ಒದಗಿಸಿತು. ನಂತರ ಸದ್ದಾಂ  ತಿರುಗಿ ಬಿದ್ದಾಗ ಇರಾಕ್  ಗೆ ನುಗ್ಗಿ ಆ ದೇಶವನ್ನು ವಶಪಡಿಸಿಕೊಂಡಿತು. ತಾಲಿಬಾನ್ ತಿರುಗಿ ಬಿದ್ದಾಗ, ಅಮೆರಿಕಾದ ಮೇಲೆ ದಾಳಿ ಮಾಡಿದಾಗ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತು. 

ಹೀಗೆ ಬೇರೆ ಬೇರೆ ದೇಶಗಳ ದುಷ್ಟರನ್ನು ಬೆಳೆಸುವುದು, ಇತರರ ಮೇಲೆ  ಎತ್ತಿ ಕಟ್ಟುವುದು, ತದನಂತರ ಅವರಿಂದ ಅಪಾರ ನೋವು ಮಾಡಿಸಿ ಮುಂದೆ ಅನುಕೂಲಕ್ಕೆ ತಕ್ಕಂತೆ ಅವರ ಮೇಲೆ ಕ್ರಮ ಕೈಗೊಳ್ಳುವುದು. ಇಂತಹ ಸನ್ನಿವೇಶದಲ್ಲಿ ಆಫ್ಘಾನಿಸ್ತಾನದ ತಾಲಿಬಾನ್ ಸರ್ಕಾರದಿಂದ ಯಾವುದೇ ರೀತಿಯ ಬೆಂಬಲ ಪಡೆಯುವುದು  ಭಾರತೀಯ ನೆಲದ ಮೌಲ್ಯಗಳ ದೃಷ್ಟಿಯಿಂದ ಉತ್ತಮ ನಡೆಯಲ್ಲ. ಅಧಿಕೃತವಾಗಿ ಒಂದಷ್ಟು ರಾಜತಾಂತ್ರಿಕ ಸಂಬಂಧವನ್ನು ಅದರೊಂದಿಗೆ ಇಟ್ಟುಕೊಳ್ಳಬಹುದು. ಆಫ್ಘಾನಿಸ್ತಾನದ ಪುನರ್ ನಿರ್ಮಾಣಕ್ಕೆ ಸಹಾಯ ಮಾಡಬಹುದು. 

ಆದರೆ ಅಲ್ಲಿ ಒಂದಷ್ಟು ಉದಾರವಾದಿ ಆಡಳಿತವನ್ನು ಅವರು ತೋರಿಸಬೇಕಾಗುತ್ತದೆ. ಕ್ರೀಡಾಂಗಣ, ಗ್ರಂಥಾಲಯ, ಮಹಿಳಾ ಶಿಕ್ಷಣ, ಸ್ವಾತಂತ್ರ್ಯ, ಧಾರ್ಮಿಕ ಸಹಿಷ್ಣುತೆ, ಈ ವಿಷಯದಲ್ಲಿ ಆಫ್ಘಾನಿಸ್ತಾನಿ ಸರ್ಕಾರ ಉದಾರನೀತಿಯನ್ನು ಅನುಸರಿಸಿದ್ದೇ ಆದಲ್ಲಿ ನಿಜಕ್ಕೂ ಅದ್ಭುತ ಬೆಳವಣಿಗೆ. ಅದನ್ನು ಹೊರತುಪಡಿಸಿ ಈ ಕ್ಷಣದ ವೈರಿಯನ್ನು ಎದುರಿಸಲು ಮತ್ತೊಂದು ದುಷ್ಟ ಮನಸ್ಥಿತಿಯ ವೈರಿಯ ಜೊತೆ ಕೈಜೋಡಿಸಿದರೆ ಇಂದಲ್ಲಾ ನಾಳೆ ಅದು ಅಪಾಯಕಾರಿ ಆಗಬಹುದು. 

ಭಾರತ ವಿಶ್ವದಲ್ಲಿ ಸಾಮಾನ್ಯ ದೇಶವಲ್ಲ. ಒಂದು ಬೃಹತ್ ವೈವಿಧ್ಯಮಯ ವಿಶಿಷ್ಟ ಮಾದರಿ ದೇಶ. ಭಾರತದಲ್ಲಿರುವಷ್ಟು ವೈವಿಧ್ಯ ಜಾತಿ, ಧರ್ಮ, ಭಾಷೆ, ಸಂಸ್ಕೃತಿ, ಸಮನ್ವಯ, ಏಕತೆ ಬೇರೆ ದೇಶಗಳಲ್ಲಿ ಎಲ್ಲೂ ಕಾಣಸಿಗುವುದಿಲ್ಲ. ಇಲ್ಲಿರುವ ಮೌಲ್ಯಗಳು ಅತ್ಯಂತ ಮಾನವೀಯವಾಗಿ, ನಾಗರೀಕವಾಗಿ ಜನಪ್ರಿಯತೆ ಪಡೆದಿದೆ. ಅದನ್ನು ಉಳಿಸಿಕೊಳ್ಳಲು, ವಿಶ್ವಕ್ಕೆ ಮೌಲ್ಯಗಳ ಸಂದೇಶ ಕಳಿಸಲು ಭಾರತದ ವಿದೇಶಾಂಗ ನೀತಿ ಯಾವಾಗಲೂ ಉದಾರವಾದಿಯಾಗಿ, ಪ್ರಾಮಾಣಿಕವಾಗಿ, ಆದರ್ಶವಾಗಿ, ಜೀವ ಪರವಾಗಿ ಇರಬೇಕಾಗುತ್ತದೆ. 

ಪಾಕಿಸ್ತಾನದೊಂದಿಗೆ ಇಂದಲ್ಲಾ ನಾಳೆ ಮಾತುಕತೆಯ ಸಾಧ್ಯತೆಯಂತೂ ಇದೆ, ಆದರೆ ಅಫ್ಘಾನಿಸ್ತಾನ ಇನ್ನೂ ಸಾಕಷ್ಟು ಸುಧಾರಣೆಯಾಗಬೇಕಾಗಿದೆ. ಅಲ್ಲಿನ ಸರ್ಕಾರ ನಾಗರೀಕವಾಗಿ ವರ್ತಿಸಬೇಕಾಗಿದೆ. ಈ ತಕ್ಷಣದ ಶತ್ರುವಿನ ನಾಶಕ್ಕಾಗಿ ಇನ್ನೊಂದು ದುಷ್ಟ ಶಕ್ತಿಯ ಜೊತೆ ಕೈಜೋಡಿಸುವುದು ಉತ್ತಮ ನಡೆಯಂತು ಅಲ್ಲ. ಪ್ರತೀಕಾರ ಮನೋಭಾವ ನಮ್ಮನ್ನು ಕುರುಡಾಗಿಸಬಾರದು, ಎಚ್ಚರವಿರಲಿ...

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ