ತಾಳಿಕೋಟೆಯ ಕದನದಲ್ಲಿ

ತಾಳಿಕೋಟೆಯ ಕದನದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ವಿಠಲ್ ಶೆಣೈ
ಪ್ರಕಾಶಕರು
ಟೋಟಲ್ ಕನ್ನಡ, ಜಯನಗರ ೪ನೇ ಬಡಾವಣೆ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೫೦.೦೦, ಮುದ್ರಣ: ೨೦೧೮

ಬಿಟ್ ಕಾಯಿನ್ ಕುರಿತ 'ನಿಗೂಢ ನಾಣ್ಯ' ಎಂಬ ರೋಚಕ ಕಾದಂಬರಿ ಬರೆದ ವಿಠಲ ಶೆಣೈ ಅವರ ಕೃತಿಯೇ ‘ತಾಳಿಕೋಟೆಯ ಕದನದಲ್ಲಿ’. ಈ ಕಾದಂಬರಿಯಲ್ಲಿ ಹಂಪಿಯ ದೇಗುಲಗಳೂ ಇವೆ, ಕೆಲವೊಂದು ಚಾರಿತ್ರಿಕ ಪಾತ್ರಗಳೂ ಜೀವಂತವಾಗಿವೆ. ವೈಕುಂಠರಾವ್ ಎಂಬ ವ್ಯಕ್ತಿ ತನ್ನ ಆತ್ಮೀಯ ಗೆಳೆಯ ವಿಶ್ವನಾಥನನ್ನು ಆಗುಂಬೆ ಘಾಟಿಯಲ್ಲಿ ಕಾರ್ ಅಪಘಾತವಾಗುವಂತೆ ಮಾಡಿ ಕೊಂದು ಬಿಡುವಲ್ಲಿಂದ ಪ್ರಾರಂಭವಾಗುವ ಪುಸ್ತಕವು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. ಅನಿರೀಕ್ಷಿತ ತಿರುವುಗಳು ನಮ್ಮನ್ನು ಯಾವಾಗ ಪುಸ್ತಕದ ಕೊನೆಯ ಪುಟ ಬರುವುದೋ ಎಂಬ ಕಾತುರ ಮೂಡಿಸುತ್ತದೆ. 

ಸಾಗರದಲ್ಲಿರುವ ವೈಕುಂಠ ರಾವ್ ಎಂಬ ಚರಿತ್ರೆ ಕಲಿಸುವ ಉಪನ್ಯಾಸಕ, ತನ್ನ ಪಾಠಗಳನ್ನು ವಿದ್ಯಾರ್ಥಿಗಳಿಗೆ ರಸವತ್ತಾಗಿ ಕಲಿಸುವುದರಲ್ಲಿ ಎತ್ತಿದ ಕೈ. ಅವನ ಏಕೈಕ ಆತ್ಮೀಯ ಗೆಳೆಯನೇ ವಿಶ್ವನಾಥ. ತನ್ನ ಹೆಂಡತಿಯ ತಮ್ಮನ ಮದುವೆಗೆ ಹೊಸಪೇಟೆಗೆ ತೆರಳುವ ವೈಕುಂಠರಾವ್ ಹಂಪಿಯ ದರ್ಶನಕ್ಕೆ ಹೋದ ಬಳಿಕ ಕಥೆ ಬೇರೊಂದು ತಿರುವು ಪಡೆಯುತ್ತದೆ. ತಾಳಿಕೋಟೆಯ ಕದನದ ಸಮಯದಲ್ಲಿ ಬದುಕಿದ್ದ ಇಬ್ಬರು ಯೋಧರ ಪರಿಚಯವಾಗುತ್ತದೆ. ಆ ಯೋಧರ ಮೂಲಕ ಇತಿಹಾಸವನ್ನು ತಿಳಿಸುವ ಕೆಲಸವನ್ನು ಲೇಖಕರು ಮಾಡಿದ್ದಾರೆ. ವೈಕುಂಠ ರಾವ್ ಅವರಿಗೆ ಕಾಣಿಸುವ ಆ ಯೋಧರು ಅವರ ಹೆಂಡತಿ, ಸಂಬಂಧಿಕರು ಯಾರಿಗೂ ಕಾಣಿಸುವುದಿಲ್ಲ. ವೈದ್ಯರು ಈ ಕಾಯಿಲೆಗೆ ‘ಸ್ಕಿಝೋಫರ್ನಿಯಾ’ ಎಂದು ಹೆಸರಿಸುತ್ತಾರೆ. ಮುಂದೇನಾಯಿತು? ವೈಕುಂಠ ರಾವ್ ತನ್ನ ಸ್ನೇಹಿತ ವಿಶ್ವನಾಥ್ ನನ್ನು ಯಾಕೆ ಕೊಂದ?, ವಿಜಯನಗರದ ಯೋಧರ ಕಥೆ ಏನಾಯಿತು? ತನ್ನ ಕಾಯಿಲೆಯಿಂದ ಅವನು ಮುಕ್ತನಾದನೇ? ತಿಳಿಯಬೇಕಾದರೆ ಈ ಮನೋವೈಜ್ಞಾನಿಕ ಕಾದಂಬರಿಯನ್ನು ಓದಲೇ ಬೇಕು.

ಮುನ್ನುಡಿಯಲ್ಲಿ ಶಿಕ್ಷಣ ತಜ್ಞೆ ಡಾ.ಶುಭದಾ ಹೆಚ್.ಎನ್. ಇವರು ಬರೆಯುತ್ತಾರೆ “ವಿಠಲ್ ಶೆಣೈಯವರ ‘ತಾಳಿಕೋಟೆಯ ಕದನದಲ್ಲಿ' ಕಾದಂಬರಿಯನ್ನು ಓದಿದಾಗ, ಹಲವು ಕಾರಣಗಳಿಂದ ಈ ಕೃತಿ ಆಪ್ತವಾಯಿತು. ಭರವಸೆ ಹುಟ್ಟಿಸಿತು. ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಥೆ-ಕಾದಂಬರಿಗಳ ಬೆಳೆ ಹುಲುಸಾಗಿಯೇ ಆಗುತ್ತಿದ್ದರೂ, ಅದರಲ್ಲಿ ಹೆಚ್ಚಿನವು ಮಾನವ ಸಂಬಂಧಗಳ ವಸ್ತುವನ್ನೇ ಹೊಂದಿವೆ. ಮನುಷ್ಯರ ಹಂಬಲ, ತುಡಿತ, ಭಾವನೆಗಳ ತಾಕಲಾಟದ ಕೃತಿಗಳ ಮಹಾಪೂರದ ನಡುವೆ ಚಾರಿತ್ರಿಕ-ವೈಜ್ಞಾನಿಕ ಕೃತಿಗಳು ವಿರಳವೆಂದೇ ಹೇಳಬಹುದು. ಕನ್ನಡದ ಈಗಿನ ಸಾಹಿತ್ಯಿಕ ಸಂದರ್ಭದಲ್ಲಿ ಆಗಿಹೋದ ಚರಿತ್ರೆಯನ್ನು ಧ್ಯಾನಿಸುವ ಲೇಖಕರು ಕಡಿಮೆ. 

ವಿಶೇಷವಾಗಿ ನನ್ನ ಗಮನ ಸೆಳೆದಿದ್ದೇನೆಂದರೆ ಶ್ರೀ ವಿಠಲ್ ಶೆಣೈಯವರ ಈ ಕೃತಿಯಲ್ಲಿ ಕಥಾನಾಯಕನಷ್ಟೇ ಸಶಕ್ತವಾದ ಪಾತ್ರವಾಗಿ ಚರಿತ್ರೆಯೂ ಇಲ್ಲಿ ವಿಜೃಂಭಿಸಿದೆ. ಇದೇ ಈ ಕೃತಿಯ ಹೆಗ್ಗಳಿಕೆ. ಈ ಕೃತಿ ನಮ್ಮನ್ನು ಮರೆತುಹೋದ ಸಾಮ್ರಾಜ್ಯವಾದ ವಿಜಯನಗರದ ದಿನಗಳಿಗೆ ಕರೆದೊಯ್ದು ಮಂತ್ರ ಮುಗ್ಧ ಮಾಡುತ್ತದೆ. ಹಂಪಿ, ಹೊಸಪೇಟೆ, ಕಮಲಾಪುರ, ವಿರೂಪಾಕ್ಷ, ಉಗ್ರನರಸಿಂಹ, ಹಜಾರರಾಮ, ಮಹಾನವಮಿ ದಿಬ್ಬಗಳಲ್ಲಿ ಸಂಭವಿಸುವ ಎಲ್ಲ ಘಟನೆಗಳೂ ಕನ್ನಡಿಗರ ಅಭಿಮಾನದ ಕೇಂದ್ರಗಳಾಗಿವೆ.”

ಲೇಖಕರಾದ ವಿಠಲ್ ಶೆಣೈ ಅವರು ತಮ್ಮ ಮಾತು ‘ಕದನದ ಮುಂಚೆ' ಯಲ್ಲಿ ಬರೆಯುತ್ತಾರೆ “ಈ ಕಥೆಯಲ್ಲಿ ನಾಯಕ-ನಾಯಕಿ, ಸರಸ-ವಿರಸ ಅಂತ ಇಲ್ಲ. ಆದರೂ ಓದುಗರನ್ನು ತನ್ನತ್ತ ಸೆಳೆಯುವ ಆಕರ್ಷಣೆ ಇದೆ ಅಂತ ನನ್ನ ದೃಢ ನಂಬಿಕೆ. ಬರೆಯಲು ಬೇಕಿರುವ ಅನೇಕ ಮಾಹಿತಿಗಳಿಗೆ ಅಂತರ್ಜಾಲದಲ್ಲಿ ಮತ್ತು ರಾಬರ್ಟ್ ಸೆವೆಲ್ ರವರ ‘ಮರೆತು ಹೋದ ಮಹಾ ಸಾಮ್ರಾಜ್ಯ ವಿಜಯನಗರ' ಪುಸ್ತಕದಲ್ಲಿ ದೊರಕಿದ ಸಹಾಯ ಉಲ್ಲೇಖಿಸದಿದ್ದರೆ ತಪ್ಪಾಗುತ್ತದೆ.”

೧೬೦ ಪುಟಗಳ ಕಿರು ಕಾದಂಬರಿಗೆ ಅಜಿತ್ ಕೌಂಡಿನ್ಯ ಇವರು ಸೊಗಸಾದ ಮುಖಪುಟ ರಚಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಕಿರು ಪರಿಚಯವನ್ನು ಮಾಡುತ್ತಾ ಸಾಗುವ ಕಾದಂಬರಿಯ ಅಂತ್ಯ ಯಾರೂ ಊಹಿಸದ ರೀತಿಯಲ್ಲಿ ಕೊನೆಗೊಳ್ಳುತ್ತದೆ. ನಿಮ್ಮ ಮನದ ರೋಚಕತೆಯನ್ನು ತಣಿಸಲು ನೀವು ಈ ಕಾದಂಬರಿಯನ್ನು ಓದಲೇ ಬೇಕು.