ತಾಳೆ ಬೆಳೆಯಿಂದಲೂ ಲಾಭ ಪಡೆಯಬಹುದು (ಭಾಗ ೧)
ಸುಮಾರು ೨೫ ವರ್ಷಕ್ಕೆ ಹಿಂದೆ ಶಿವಮೊಗ್ಗ, ಭದ್ರಾವತಿ ಸುತ್ತಮುತ್ತ ತಾಳೆ ಬೆಳೆಗೆ ಭಾರೀ ಭವಿಷ್ಯವಿದೆ ಎಂದು ಬೆಳೆ ಬೆಳೆದಿದ್ದ ರೈತರು ಕೊನೆಗೆ ಮರವನ್ನು ಜೆ ಸಿ ಬಿ ಮೂಲಕ ಕಿತ್ತು ಹಾಕಿದ್ದರು. ಕೆಲವರು ಉಳಿಸಿಕೊಂಡಿದ್ದರು. ಹಾಗೆಯೇ ಮೈಸೂರಿನ ಕೆಲವು ಪ್ರದೇಶಗಳಲ್ಲಿ, ಚಾಮರಾಜ ನಗರದ ಕೆಲವು ಪ್ರದೇಶಗಳಲ್ಲಿ ಸಹ ಬಹಳಷ್ಟು ಜನ ತಾಳೆ ಬೆಳೆ ಬೆಳೆಸಿದ್ದರು. ಅಲ್ಪ ಪ್ರಮಾಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲೂ ತಾಳೆ ಬೆಳೆಸಿದ್ದರು. ಇದಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ತಾಳೆ ಬೆಳೆ ಯೋಜನೆ ಚಾಲ್ತಿಯಲ್ಲಿರುವುದನ್ನು ಕೇಳಿದ್ದೇನೆ. ಧಾರವಾಡ, ಗದಗ, ಬೆಳಗಾವಿ, ಬಳ್ಳಾರಿಯಲ್ಲೂ ಕೆಲವರು ತಾಳೆ ಬೆಳೆಸಿದ್ದಿದೆ.
ನಮ್ಮ ಸರಕಾರ ದೇಶದ ಎಣ್ಣೆ ಅವಶ್ಯಕತೆಗೆ ವಿದೇಶದಿಂದ ಪಾಮ್ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದ್ದು ಅದಕ್ಕಾಗಿ ಕೋಟ್ಯಾಂತರ ರೂಪಾಯಿಗಳನ್ನು ವ್ಯಯಿಸುತ್ತಿದೆ. ಇದನ್ನು ಉಳಿಸಲು ದೇಶದೊಳಗೇ ಇದನ್ನು ಬೆಳೆಸುವ ದೃಷ್ಟಿಯಿಂದ ಈ ಕಾರ್ಯಕ್ಕೆ ಇಳಿಯಲಾಗಿದೆ. ಇದಕ್ಕಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಕೇರಳದ ತಿರುವನಂತಪುರಂ ನ ಪಾಲೋದೆಯಲ್ಲಿ ಎಣ್ಣೆ ತಾಳೆ ಬೆಳೆ ನಿರ್ದೇಶನಾಲಯವನ್ನೂ ತೆರೆದಿದೆ. ರಾಜ್ಯದ ಕೆಲವು ಭಾಗಗಳಲ್ಲಿ ತೋಟಗಾರಿಕಾ ಇಲಾಖೆಯ ಬೆಳೆ ಮಾರ್ಗದರ್ಶನ ಮತ್ತು ಬೆಳೆ ಪ್ರವರ್ತಕ ಕಂಪೆನಿಗಳ ಸಹಯೋಗದೊಂದಿಗೆ ತಾಳೆ ಬೆಳೆ ಬೆಳೆಸಲಾಗುತ್ತಿದೆ. ಈಗ ಮತ್ತೆ ಶಿವಮೊಗ್ಗ ಜಿಲ್ಲೆ ಸುತ್ತಮುತ್ತ, ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳು, ಧಾರವಾಡ ಜಿಲ್ಲೆ, ಮುಂತಾದ ಕಡೆ ತಾಳೆ ಬೆಳೆ ಪ್ರದೇಶಗಳು ವಿಸ್ತರಣೆಯಾಗುತ್ತಿದೆ. ಯಾವುದೇ ಬೆಳೆಯಿದ್ದರೂ ಅದು ನಷ್ಟದ ಬೆಳೆ ಎನಿಸಿಕೊಳ್ಳದಂತೆ ಬೆಳೆ ಯೋಜನೆ ಹಾಕಿಕೊಳ್ಳುವುದು ನಮ್ಮ ಜಾಣ್ಮೆ.
ತಾಳೆ ಬೆಳೆ ಏನು? ತಾಳೆ ಒಂದು ಪ್ರಮುಖ ಎಣ್ಣೆ ಕಾಳು ಬೆಳೆ. ತಾಳೆಯ ಬೆಳೆ ಮಲೇಶಿಯಾ, ಇಂಡೋನೇಶಿಯಾ ಮುಂತಾದ ರಾಷ್ಟ್ರಗಳಲ್ಲಿ ಯಥೇಚ್ಚವಾಗಿ ಬೆಳೆಯುತ್ತಿದೆ. ಇಲ್ಲಿಂದಲೇ ನಮ್ಮ ದೇಶಕ್ಕೆ ಆಮದು ಸಹ ಅಗುತ್ತಿದೆ. ತಾಳೆ ಸಸ್ಯ ನಮ್ಮ ಸ್ಥಳೀಯ ಈಚಲು ಮರದ ಜಾತಿಯದಾಗಿದ್ದು, ಈ ಸಸ್ಯದ ಎಲೆ ಕಂಕುಳಲ್ಲಿ ಬಿಡುವ ಹೂ ಗೊಂಚಲು ಬೆಳವಣಿಗೆಯಾಗಿ ದೊರೆಯುವಂತದ್ದು ಅದರ ವಾಣಿಜ್ಯ ಫಲ. ಇದರ ಗೊಂಚಲು ೨೫ ಕಿಲೋದಿಂದ ೫೦-೬೦ ಕಿಲೋ ತನಕ ತೂಗುತ್ತದೆ. ಇದರಲ್ಲಿ ಒತ್ತೊತ್ತಾಗಿ ಕಾಯಿಗಳಿರುತ್ತವೆ. ಈ ಕಾಯಿಯನ್ನು ಎಣ್ಣೆ ತೆಗೆಯಲು ಉಪಯೋಗಿಸುತ್ತಾರೆ. ಕಾಯಿ ಸುಮಾರಾಗಿ ಹಣ್ಣು ಅಡಿಕೆಯನ್ನು ಹೋಲುತ್ತದೆ. ಅದರ ಹೊರ ಭಾಗದ ಸಿಪ್ಪೆಯಿಂದ ದೊರೆಯುವ ದ್ರವ ವಸ್ತುವೇ ಕೇಸರಿ ಬಣ್ಣದ ತಾಳೆ ಎಣ್ಣೆ. ಒಳ ಭಾಗದಲ್ಲಿ ಒಂದು ಸಣ್ಣ ಚಿಪ್ಪಿನಿಂದ ಆವೃತ ಬೀಜ ಇರುತ್ತದೆ. ಇದನ್ನು ಎಣ್ಣೆ ತೆಗೆಯಲು ಬಳಕೆ ಮಾಡಲಾಗುವುದಿಲ್ಲ.
ತಾಳೆಯಲ್ಲಿ ತೆಂಗಿನಂತೆ ಹೈಬ್ರೀಡಿಕರಣ ಕೆಲಸ ಸಾಕಷ್ಟು ನಡೆದಿದೆ. ಇದರ ಫಲವಾಗಿ ಕುಬ್ಜ, ಅಧಿಕ ಇಳುವರಿ ನೀಡಬಲ್ಲ ತಳಿಗಳನ್ನೂ ಬಿಡುಗಡೆ ಮಾಡಲಾಗಿದೆ. ಹಿಂದೆ ಇದ್ದ ತಳಿಗೂ ಈಗ ಇರುವ ತಳಿಗೂ ತುಂಬಾ ವ್ಯತ್ಯಾಸವಿದ್ದು, ಈಗ ಚಾಲ್ತಿಯಲ್ಲಿರುವ ತಳಿಗಳು ಬೇಗ (೩ ವರ್ಷ) ಫಸಲಿಗಾರಂಭಿಸಿ ಉತ್ತಮ ಇಳುವರಿ ಕೊಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಮಾಹಿತಿ: ರಾಧಾಕೃಷ್ಣ ಹೊಳ್ಳ