ತಾಳೆ ಬೆಳೆಯಿಂದಲೂ ಲಾಭ ಪಡೆಯಬಹುದು (ಭಾಗ ೨)

ತಾಳೆ ಬೆಳೆಯಿಂದಲೂ ಲಾಭ ಪಡೆಯಬಹುದು (ಭಾಗ ೨)

ಎಲ್ಲಿ ಬೆಳೆಯಬಹುದು? ತಾಳೆ ಬೆಳೆಗೆ ಉತ್ತಮ ಫಲವತ್ತಾದ ಮಣ್ಣು ಅಗತ್ಯ. ಮಲೇಶಿಯಾ, ಇಂಡೋನೆಶಿಯ, ಮುಂತಾದ ಪ್ರದೇಶಗಳಲ್ಲಿನ ಜ್ವಾಲಮುಖಿಯಿಂದ ಉಧ್ಭವಿಸಿದ ಮಣ್ಣು ಮತ್ತು ಕಾಡು ಮಣ್ಣು ಇದರ ಯಶಸ್ವೀ ಬೆಳೆಗೆ ಅನುಕೂಲಕರವಾಗಿ ಪರಿಣಮಿಸಿದೆ. ನಮ್ಮಲ್ಲಿ ಅಂತಹ ಮಣ್ಣು ಇದ್ದ ಪ್ರದೇಶಗಳಲ್ಲಿ ಇದನ್ನು ಬೆಳೆಸಬಹುದು. ಕರಾವಳಿಯ ಮರಳು ಮಣ್ಣಿನಲ್ಲಿ ಬೆಳೆಸುವುದು ಅಷ್ಟೊಂದು ಸೂಕ್ತವಲ್ಲ. ಇದರಲ್ಲಿ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.

ತಾಳೆ ಸಸ್ಯಕ್ಕೆ ಉತ್ತಮ ನೀರು ಬೇಕು. ವರ್ಷದುದ್ದಕ್ಕೂ ಮಳೆ ಬರುವ ಪ್ರದೇಶಗಳಲ್ಲಿ ಇದನ್ನು ನೀರಾವರಿ ರಹಿತವಾಗಿ  ಬೆಳೆಯಬಹುದು. ಒಂದು ಫಲ ಕೊಡುವ ತಾಳೆಗೆ  ದಿನಕ್ಕೆ ೧೫೦-೨೦೦ ಲೀ ಮತ್ತು ತೀರಾ ಬೇಸಿಗೆಯಲ್ಲಿ ೩೦೦ ಲೀ ತನಕ ನೀರು ಬೇಕಾಗುತ್ತದೆ. ಇಷ್ಟು ನೀರು ಕೊಟ್ಟಾಗ ಅದರಲ್ಲಿ ನಿರೀಕ್ಷಿತ ಇಳುವರಿ ಪಡೆಯಬಹುದು. ನೀರು ಕಡಿಮೆ ಇರುವ, ಕೊಳವೆ ಬಾವಿಯ ನೀರನ್ನು ಆಶ್ರಯಿಸಿ ಬೆಳೆಯಬೇಕಾದ ಸನ್ನಿವೇಶ ಇರುವಲ್ಲಿ ಇದನ್ನು ಬೆಳೆಸುವುದು ಸೂಕ್ತವಲ್ಲ. ಎಳೆ ಪ್ರಾಯದಲ್ಲಿ ಸುಮಾರು ೩ ವರ್ಷ ತನಕ ಉತಮವಾಗಿ ನೀರು ಗೊಬ್ಬರ ಕೊಟ್ಟರೆ  ಮಾತ್ರ ಅದರ ಮುಂದಿನ ಇಳುವರಿ ಉತ್ತಮವಾಗಿರುತ್ತದೆ. ಮೇಲು ಹೊದಿಕೆ ಮುಂತಾದವುಗಳನ್ನು ಮಾಡಿ ಈ ನೀರನ್ನು ಎರಡು ಮೂರು ದಿನಕ್ಕೆ ಹಂಚಿ ಕೊಡಬಹುದು. ಹನಿ ನೀರಾವರಿ ಮಾಡಿ ನೀರುಣಿಸುವಾಗ ಒಂದು ಸಸ್ಯಕ್ಕೆ ೪ ಡ್ರಿಪ್ಪರ್ ಹಾಕಿ ದಿನಕ್ಕೆ  ೫-೬ ಗಂಟೆ ನೀರಾವರಿ ಮಾಡಬೇಕು.

ತಾಳೆ ಏನೂ ಬಯಸದ ಬೆಲೆ ಅಲ್ಲ. ಉತ್ತಮ ಇಳುವರಿಗೆ  ಉತ್ತಮ ಪೋಷಕಾಂಶವೂ ಬೇಕಾಗುತ್ತದೆ. ಹೆಚ್ಚು ಹೆಚ್ಚು ಪೋಷಕಾಂಶಗಳನ್ನು ಪೂರೈಸಿದಾಗ ಮಾತ್ರ ಉತ್ತಮ ಕಾಯಿ ಗೊಂಚಲುಗಳು ಬರಲು ಸಾಧ್ಯ. ವರ್ಷಕ್ಕೆ ಮೂರು ಸಾರಿ ಗೊಬ್ಬರಗಳನ್ನು ಕೊಡಬೇಕು. ಒಂದು ಫಲ ಕೊಡುವ ಗಿಡಕ್ಕೆ ೨.೫ ಕಿಲೋ ಯೂರಿಯಾ, ೩೭೫೦ ಗ್ರಾಂ ಸೂಪರ್ ಫೋಸ್ಫೇಟ್, ಮತ್ತು ೨೦೦೦ಗ್ರಾಂ ಪೊಟಾಶಿಯಂ ಬೇಕು. ಜೊತೆಗೆ ೫೦೦ ಗ್ರಾಂ ಮೆಗ್ನೀಶಿಯಂ ಸಲ್ಫೇಟ್ ಮತ್ತು ೧೦೦ ಗ್ರಾಂ ಬೋರಾನ್ ಕೊಡಬೇಕಾಗುತ್ತದೆ.

ತಾಳೆ  ಸಸಿ ನಾಟಿ ಮಾಡಿ ೧೪-೧೮ ತಿಂಗಳಿಗೆ ಹೂ ಗೊಂಚಲು ಬಿಡಲಾರಂಭಿಸುತ್ತದೆ. ಆದರೆ ಅದನ್ನು ಉಳಿಸದೇ ೩ ವರ್ಷ ತನಕ ತೆಗೆಯುತ್ತಾ ಇರಬೇಕು. ಇಲ್ಲವಾದರೆ ಸಸಿಯ ಶಕ್ತಿ ಕಡಿಮೆಯಾಗಿ ಇಳುವರಿ ಸಾಮರ್ಥ್ಯ ಕಡಿಮೆಯಾಗುತ್ತದೆ. ಯಾವುದೇ ಕಾರಣಕ್ಕೆ ಸಮರ್ಪಕ ಕಾಂಡದ ಬೆಳವಣಿಗೆ, ಎಲೆಗಳ ಗಾತ್ರ ಬೆಳೆಯದೆ ಇದ್ದಾಗ ಫಸಲಿಗೆ ಬಿಡಬಾರದು.

ತಾಳೆ ಬೆಳೆಗೆ ತೆಂಗಿನಂತೆ ಕೆಲವು ಕೀಟ ರೋಗ ಸಮಸ್ಯೆಗಳು ಇವೆ. ಕುರುವಾಯಿ ಕೀಟ, ಕೆಂಪು ಮೂತಿ ಹುಳ, ಸುಳಿ ಕೊಳೆಯುವಿಕೆ, ಕಾಂಡದಲ್ಲಿ ರಸ ಸೋರುವಿಕೆ ಸಮಸ್ಯೆ ಇರುತ್ತದೆ. ಇದನ್ನು ಬೆಳೆಯುವ ಮುಂಚೆ ತಿಳಿದುಕೊಳ್ಳಬೇಕು. ಒಂದು ಹೆಕ್ಟೇರು ವಿಸ್ತೀರ್ಣದಲ್ಲಿ ತಾಳೆಯನ್ನು ಬೆಳೆದಾಗ ಪಡೆಯಬಹುದಾದ ಇಳುವರಿ ೨೦ ಟನ್. ಈಗಿನ ಧಾರಣೆಯಲ್ಲಿ ಇದರ ಹುಟ್ಟುವಳಿ ೨ ಲಕ್ಷಗಳಷ್ಟು. ಇಷ್ಟು  ಉತ್ಪತ್ತಿ ಪಡೆಯಬೇಕಾದರೆ ಇದಕ್ಕೆ ಕೊಡಬೇಕಾದ ಆರೈಕೆ, ನೀರಾವರಿ ಕೊಯಿಲು ಇತ್ಯಾದಿಗಳ ಖರ್ಚೂ ಸಹ ಇರುತ್ತದೆ.

ತಾಳೆ ಮರದ ಗರಿಗಳ ದಂಟಿನಲ್ಲಿ ಮುಳ್ಳು ಇರುತ್ತದೆ. ಈ ಮುಳ್ಳು ಹರಿತವಾಗಿರುತ್ತದೆ. ಇದನ್ನು ಕಾಂಡ ನೆಲದಿಂದ ಬಿಟ್ಟ ತರುವಾಯ ತೆಗೆಯುತ್ತಾ ಇರಬೇಕಾಗುತ್ತದೆ. ಇದು ಹೆಚ್ಚಿನ ಕೆಲಸವನ್ನು ಅಪೇಕ್ಷಿಸುತ್ತದೆ. ಫಸಲನ್ನು ತೆಂಗಿನ ಕಾಯಿ ಕಿತ್ತಂತೆ ಮರ ಹತ್ತಿ ಕೀಳಲಿಕ್ಕಾಗುವುದಿಲ್ಲ. ಅದಕ್ಕಾಗಿಯೇ ಇರುವ ಕತ್ತಿಯ ಮೂಲಕ ತೆಗೆಯಬೇಕು. ಕೊಯಿಲು ಮಾಡಿ ಅದನ್ನು ಹತ್ತಿರದ ಅಂಗಡಿಗೆ ಕೊಡುವುದಲ್ಲ. ಅದನ್ನು ಆಯಾ ಪ್ರದೇಶದಲ್ಲಿ ಯಾರು ಖರೀದಿ ಮಾಡುತ್ತಾರೆಯೋ ಅವರ ಖರೀದಿ ಕೇಂದ್ರಕ್ಕೆ ಸಾಗಾಟ ಮಾಡಿ ಮಾರಾಟ ಮಾಡಬೇಕು. ಇವರ ಪಾವತಿ ತಕ್ಷಣವೂ ಇರಬಹುದು ಅಥವಾ ಸಲ್ಪ ತಡವಾಗಲೂ ಬಹುದು. ಇದಕೆಲ್ಲಾ ತೋಟಗಾರಿಕಾ ಇಲಾಖೆ ಭರವಸೆಯಾಗಿ ನಿಂತರೂ ಸಹ ಕಬ್ಬಿನ ಬೆಳೆಯಂತೆ ಇಲ್ಲಿಯೂ ತೊಂದರೆ ಬರಲಿಕ್ಕಿಲ್ಲ ಎನ್ನುವಂತಿಲ್ಲ.

ತಿಂಗಳಿಗೆ ೧ ಗೊಂಚಲಿನಂತೆ ಇದರ ಇಳುವರಿ ಲೆಕ್ಕಾಚಾರ. ಅತಿಯಾಗಿ ಮಳೆ  ಬೀಳುವ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಪರಾಗ ತೊಳೆದು ಹೋಗಿ ಇಳುವರಿ ಕ್ಷೀಣಿಸಬಹುದು. ಒಂದು ಗೊನೆ ಸುಮಾರು ೫೦ ಕಿಲೋ ತನಕ ತೂಕ ಬಂದರೆ  ವರ್ಷಕ್ಕೆ ೮ ಗೊಂಚಲು ದೊರೆತರೆ ಮಾತ್ರ ಮರವೊಂದರ ಸದ್ಯದ ದರದಲ್ಲಿ ೩೦೦೦ ರೂ. ಗಳಷ್ಟು ಒಟ್ಟಾರೆ ಆದಾಯ ಪಡೆಯಬಹುದು. 

ಈ ಬೆಳೆಗೆ ಹೆಚ್ಚಿನ ತಾಪಮಾನ ವರ್ಜ್ಯ. ಸುಮಾರಾಗಿ ೨೯ ಡಿಗ್ರಿಯಿಂದ ೩೩ ಡಿಗ್ರಿ ತನಕದ  ಉಷ್ಣತಾಮಾನ ಈ ಬೆಳೆಗೆ  ಅಗತ್ಯ. ದಿನದಲ್ಲಿ ಕನಿಷ್ಟ ೫ ಗಂಟೆಯಾದರೂ ಬಿಸಿಲು ಬೇಕಾಗುತ್ತದೆ. ವಾತಾವರಣದಲ್ಲಿ ೮೦% ಆರ್ಧ್ರತೆ ಅಗತ್ಯವಾಗಿ ಬೇಕಾಗುತ್ತದೆ. ಉತ್ತಮ ಹೈಬ್ರೀಡ್ ತಳಿಗಳಲ್ಲಿ ಟೆನೆರಾ ತಳಿ ಒಂದು . ಈ ತಳಿಯನ್ನು ಡುರಾ ಮತ್ತು ಫ್ಹೆಸಿಫೆರಾ ತಳಿಯಲ್ಲಿ ಸಂಕರಣ ಮಾಡಿ ಪಡೆಯಲಾಗಿದೆ.

ಸಾಮಾಜಿಕ ಆರೋಗ್ಯ ಮತ್ತು  ತಾಳೆ: ತಾಳೆ ಎಣ್ಣೆಯಲ್ಲಿ ಸಾಕಷ್ಟು ಜೀವಸತ್ವಗಳು ಇವೆ ಎನ್ನುತ್ತಾರೆ. ಇದು ನಿಜವಿರಬಹುದು. ಆದರೆ  ತಾಳೆ ಹಣ್ಣನ್ನು ಕೊಯಿಲು ಮಾಡಿದ ೨೪ ಗಂಟೆಯೊಳಗೆ ಅದನ್ನು  ಎಣ್ಣೆ ತೆಗೆದಾಗ ಮಾತ್ರ ಅದರಲ್ಲಿ ಈ ಜೀವ ಸತ್ವಗಳು ಇರುತ್ತವೆ ಎಂಬುದಂತೂ ಸತ್ಯ. ಎಷ್ಟೋ ದೂರದಲ್ಲಿರುವ ಎಣ್ಣೆ ತೆಗೆಯುವ ಮಿಲ್ಲು, ಎಷ್ಟೋ ದೂರದಲ್ಲಿರುವ ಬೆಳೆಗಾರರು, ಅಲ್ಲಿಗೆ ಇದರ ಸಾಗಾಟ. ಈ ವ್ಯವಸ್ಥೆಯಲ್ಲಿ ಇದು ೨೪ ಗಂಟೆಯ ಗಡುವಿನಲ್ಲಿ ಎಷ್ಟು ಸಮರ್ಪಕವಾಗಿ ತಲುಪಬಲ್ಲುದು ಎಂಬುದೂ ಒಂದು ಕುತೂಹಲದ ವಿಚಾರ. ಒಂದು ವೇಳೆ ಇದು ೨೪ ಗಂಟೆ ಕಳೆದರೆ ಅದು ಖಾದ್ಯ ಎಣ್ಣೆಯಾಗದೆ ಔದ್ಯಮಿಕ ಬಳಕೆಯ ಎಣ್ಣೆಯೆನಿಸುತ್ತದೆ. ಮೇಲು ನೋಟಕ್ಕೆ ಇದರ ವ್ಯತ್ಯಾಸ ಯಾರಿಗೂ ತಿಳಿಯಲು ಅಸಾಧ್ಯ. ಕೆಲವು ಮೂಲಗಳ ಪ್ರಕಾರ ನಮ್ಮಲ್ಲಿ ಉತ್ಪಾದನೆಯಾಗುವ ಹೆಚ್ಚಿನ ಪಾಮ್‌ ಎಣ್ಣೆ ಖಾದ್ಯ ಎಣ್ಣೆಯಾಗಿಲ್ಲವಂತೆ. ಈ ಎಣ್ಣೆ ಲೀಟರಿಗೆ ೮೦-೧೦೦ ರೂ. ಗಳಿಗೆ ಲಭ್ಯ.

ಇಂದು ಸಾಮಾಜಿಕ ಅರೋಗ್ಯ ಹಾಳಾಗಲು ಮುಖ್ಯ ಕಾರಣ ಎಣ್ಣೆಗಳು. ಖಾದ್ಯ ಗುಣಮಟ್ಟದಲ್ಲಿದ್ದ ಎಣ್ಣೆ ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಲಭ್ಯವಾಗುವ ಕಾರಣ ಹೆಚ್ಚಿನ ಲಾಭದ ಆಶೆಗೆ ಇದನ್ನು ಇದನ್ನು ಮಾರಾಟ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ತಾಳೆ ಸಿಪ್ಪೆಯ ಒಳ ಭಾಗದ ತಿರುಳನ್ನು ಬಳಸಿಯೂ ಎಣ್ಣೆ ತೆಗೆಯುವ ವ್ಯವಹಾರ ಕೆಲವು ಕಡೆ ಇದ್ದು, ಇದಕ್ಕೆ  ಯಾವುದೇ ಸುವಾಸನೆ, ಬಣ್ಣ ಇರುವುದಿಲ್ಲ. ಇದನ್ನು ಯಾವುದೇ ಎಣ್ಣೆಯ ಜೊತೆಗೆ ಮಿಶ್ರಣ ಮಾಡಬಹುದು. 

ತಾಳೆ ಬೆಳೆ ಬೆಳೆಸುವ ಮುನ್ನ ಬೆಳೆಗಾರರು ತಮಗೆ ಈ ಬೆಳೆಯನ್ನು ಸಮರ್ಪಕವಾಗಿ ಬೆಳೆಯಲು ಸಾಧ್ಯವಾದೀತೇ, ಇದು ಎಷ್ಟು ನಮ್ಮ ಪ್ರದೇಶಕ್ಕೆ  ಹೊಂದಿಕೆಯಾಗುತ್ತದೆ, ಅದನ್ನು ಸಾಕುವಷ್ಟು ನೀರಿನ ಅನುಕೂಲ ನಮ್ಮಲ್ಲಿ  ಇದೆಯೇ ಎಂಬುದನ್ನು ಗಮನಿಸಿ ನಂತರ ಬೆಳೆ ಬೆಳೆಸಿ. ಹನಿ ನೀರಾವರಿ, ಸಸಿ, ಗೊಬ್ಬರ ಮುಂತಾದ ಸಬ್ಸಿಡಿಯ ಆಶೆಗಾಗಿ ಈ ಬೆಳೆಗೆ  ಕೈ ಹಾಕಿ ಹೊಲದ ಉತ್ಪಾದಕತೆಯನ್ನು ಕಡಿಮೆ ಮಾಡಿಕೊಳ್ಳದಿರಿ.  

(ಮುಗಿಯಿತು)  

ಮಾಹಿತಿ: ರಾಧಾಕೃಷ್ಣ ಹೊಳ್ಳ