ತಾಳೆ ಮರದ ನೆರಳಿನಲ್ಲಿ ಬೆಲ್ಲದ ಗುಂಗು

ತಾಳೆ ಮರದ ನೆರಳಿನಲ್ಲಿ ಬೆಲ್ಲದ ಗುಂಗು

ಹಳೆಯ ತಾಳೆ ಮರದ ಬುಡದಲ್ಲಿ ನಿಂತಿದ್ದರು ವೃದ್ಧ ಲಕ್ಷ್ಮೀಪ್ರಸಾದ್. ದಪ್ಪ ಹುರಿಹಗ್ಗವನ್ನು ಮರದ ಕಾಂಡಕ್ಕೆ ಸುತ್ತಿ, ಅದರ ಎರಡೂ ತುದಿಗಳನ್ನು ಕೈಗಳಿಂದ ಹಿಡಿದುಕೊಂಡರು. ಕಾಂಡದಲ್ಲಿ ಮೊಣಗಂಟಿನ ಎತ್ತರದಲ್ಲಿದ್ದ ತಾಳೆಲೆಯ ಮೋಟು ಬುಡಕ್ಕೆ ಎಡಪಾದವನ್ನು ಊರಿದರು. ಕೆಲವೇ ನಿಮಿಷಗಳಲ್ಲಿ, ಯುವಕರನ್ನೂ ಹಿಂದಿಕ್ಕುವ ವೇಗದಲ್ಲಿ, ಕಾಲು ಹಾಗೂ ಕೈಗಳನ್ನು ಮಡಚಿ ಬಿಡಿಸುತ್ತಾ, ಆ ಎತ್ತರದ ಮರದ ತುದಿಗೇರಿದರು.

ಲಕ್ಷ್ಮೀಪ್ರಸಾದರ ಹಳ್ಳಿ, ಪಶ್ಚಿಮ ಬಂಗಾಲದ ಜಿಲ್ಲಾ ಕೇಂದ್ರ ಮಹೋಬಾದಿಂದ 25 ಕಿಮೀ ದೂರದಲ್ಲಿರುವ ಸುಗ್ರಾ. ಅಲ್ಲಿನ ತಾಳೆ ಮರವೇರುವ ವ್ಯಕ್ತಿಗಳಲ್ಲಿ ಅವರು ಅತಿ ಹಿರಿಯರು. ಊರಿನವರು ಪ್ರೀತಿಯಿಂದ ಅವರನ್ನು ಕರೆಯುವುದು ಪಲ್ಲು ಎಂದು. ಮರದ ತುದಿಯೇರಿದೊಡನೆ ಹಾಡಲು ಶುರುವಿಟ್ಟರು ಲಕ್ಷ್ಮೀಪ್ರಸಾದ್. ಅಲ್ಲೇ ಇದ್ದ ಇನ್ನೊಬ್ಬ ಹಳ್ಳಿಗ ಸೇವಾರಾಮ್ ಆ ಹಾಡಿನ ಅರ್ಥ ಹೇಳಲು ಆರಂಭಿಸಿದರು: "ತಾಳೆ ಮರದ ಉಪಯೋಗಗಳು ಹಲವು. ಹಕ್ಕಿಗಳಿಗೂ ಪ್ರಾಣಿಗಳಿಗೂ ತಾಳೆ ಮರ ನೀಡುತ್ತದೆ ಆಹಾರ. ಇದರ ಭಾಗಗಳಿಂದ ಮಾಡಿಕೊಳ್ಳುತ್ತೇವೆ ಬೀಸಣಿಕೆ ಮತ್ತು ಕಸಬರಿಕೆ.”

ಲಕ್ಷ್ಮೀಪ್ರಸಾದರ ಹಾಡಿನ ಸದ್ದು ಜೋರಾಯಿತು. ಸೇವಾರಾಮ್ ಅರ್ಥ ಹೇಳೋದನ್ನು ಮುಂದುವರಿಸಿದರು: “ತಾಳೆಯ ರಸದಿಂದ ನಮಗೆ ಸಿಗ್ತದೆ ಬೆಲ್ಲ. ಈ ಸಂಪತ್ತಿಗಾಗಿ ನಾವು ದೊಡ್ಡಣ್ಣನಿಗೆ ಋಣಿ” ಆ ದೊಡ್ಡಣ್ಣನ ಹೆಸರು ಲಕ್ಷ್ಮೀಕಾಂತ್ ಮಿಶ್ರಾ ಎಂದು ತಿಳಿಸಿದರು ಸೇವಾರಾಮ್.

ಐವತ್ತು  ವರುಷಗಳ ಮುಂಚೆ ಖಾದಿಗ್ರಾಮೋದ್ಯೋಗ ಕಾರ್ಯಕರ್ತನಾಗಿ ಸುಗ್ರಾ ಗ್ರಾಮಕ್ಕೆ ಕಾಲಿಟ್ಟವರು ಮಿಶ್ರಾ. ಆ ಕಾಲದಲ್ಲಿ ಸುಗ್ರಾದಲ್ಲಿ ಬೆಲ್ಲದ ಬಳಕೆ ಕಡಿಮೆ. ಆಗ ತಾಳೆ ಬೆಲ್ಲದ ಔಷಧೀಯ ಗುಣಗಳನ್ನು ಹಳ್ಳಿಗರಿಗೆ ಪರಿಚಯಿಸಿದರು ಮಿಶ್ರಾ. ಹೊಟ್ಟೆಯ ತೊಂದರೆಗಳನ್ನು ಗುಣ ಪಡಿಸಲು ತಾಳೆಬೆಲ್ಲ ನಿಜಕ್ಕೂ ಪರಿಣಾಮಕಾರಿ ಎನ್ನುತ್ತಾರೆ ಸೇವಾರಾಮ್.

ಮಿಶ್ರಾರಿಂದ ತಾಳೆಬೆಲ್ಲ ಮಾಡುವ ವಿಧಾನ ಕಲಿತುಕೊಂಡರು ಲಕ್ಷ್ಮೀಪ್ರಸಾದ್. “ಆಗ ಯುವಕನಾಗಿದ್ದ ನಾನು ದಿನಕ್ಕೆ 40 ತಾಳೆ ಮರಗಳನ್ನೇರಿ ರಸ ಸಂಗ್ರಹಿಸುತ್ತಿದ್ದೆ” ಎಂದು ನೆನಪು ಮಾಡಿಕೊಳ್ಳುತ್ತಾರೆ. “ತಾಳೆರಸ ಸಂಗ್ರಹಿಸುವುದು ಒಂದು ಕಲೆ. ಅದು ಸೇಂದಿ ಆಗದಂತೆ ಎಚ್ಚರ ವಹಿಸಬೇಕು. ಇಲ್ಲವಾದರೆ ಸೇಂದಿ ತಯಾರಿಸಿದ ಆಪಾದನೆಗೆ ಒಳಗಾಗಿ, ಆರು ತಿಂಗಳು ಜೈಲಿನಲ್ಲಿ ಕೊಳೆಯಬೇಕಾದೀತು” ಎಂದು ತಿಳಿಸಿದರು.

ಸೇವಾರಾಮ್‌ನ ಮಗ ವಿಶ್ವನಾಥ ಈ ಸಂದರ್ಭದಲ್ಲಿ ಹೇಳಿದ, "ನಾನು ಇಂಟರ್-ಮೀಡಿಯತ್ ಪಾಸು ಮಾಡಿದ್ದೇನೆ. ಆದರೆ ನನಗೆ ನಗರಕ್ಕೆ ಹೋಗುವ ಇರಾದೆಯಿಲ್ಲ. ನಾನು ಹಳ್ಳಿಯಲ್ಲೇ ಇದ್ದು ಈ ಸಂಪ್ರದಾಯ ಮುಂದುವರಿಸ್ತೇನೆ.”

ಆ ಮಾತು ಕೇಳಿದ ಲಕ್ಷ್ಮೀಪ್ರಸಾದ್ ನಿರಾಶೆಯಿಂದ ಪ್ರತಿಕ್ರಿಯಿಸಿದರು, “ಬೆಲ್ಲ ಮಾಡಲಿಕ್ಕಾಗಿ ನಮ್ಮ ಯುವಕರು ಹಳ್ಳಿಯಲ್ಲೇ ಉಳಿಯುತ್ತಾರೆಂದು ನಾನು ನಂಬೋದಿಲ್ಲ." ಇದಕ್ಕೆ ಕಾರಣವೇನೆಂದು ಸೇವಾರಾಮ್ ವಿವರಿಸಿದರು: ಬೆಲ್ಲದ ಹಂಗಾಮು ಸಪ್ಟಂಬರಿನಿಂದ ಜನವರಿ ತನಕ. ಈ ಅವಧಿಯಲ್ಲಿ ನಾವು ದಿನಕ್ಕೆ ರೂಪಾಯಿ 200ರಿಂದ 300 ಗಳಿಸುತ್ತೇವೆ. ಆದರೆ ಕಳೆದ ಐದು ವರುಷಗಳಲ್ಲಿ ತಾಳೆಮರಗಳಿಂದ ನಾವು ಪಡೆಯುವ ರಸದ ಪ್ರಮಾಣ ಕಡಿಮೆಯಾಗುತ್ತಿದೆ. ತಾಳೆರಸ ಕಡಿಮೆಯಾದರೆ ಬೆಲ್ಲದ ಉತ್ಪಾದನೆ ಮತ್ತು ಆದಾಯವೂ ಕಡಿಮೆ ಆಗ್ತದೆ.

ತಾಳೆರಸ ಕಡಿಮೆಯಾಗಲು ಬರಗಾಲ ಕಾರಣವೆಂದು ಲಕ್ಷ್ಮೀಪ್ರಸಾದ್ ಹೇಳಿದಾಗ, ಅದೊಂದೇ ಕಾರಣವಲ್ಲ ಎಂದರು ಸೇವಾರಾಮ್. ಅವರ ಮಗ ವಿಶ್ವನಾಥ ವಿವರಿಸಿದ: “ತಾಳೆಮರದ ಎಲೆಗಳಿಂದ ಕಸಬರಿಕೆ ಮತ್ತು ಬೀಸಣಿಕೆ ಮಾಡುತ್ತಾರೆ. ನಮ್ಮ ಸುಗ್ರಾದ ಜನರೇ ಇವನ್ನು ಮಾಡುತ್ತಿದ್ದರು. ಆದರೆ ಈಗ ಮಹೋಬಾದಿಂದ ಕಂಟ್ರಾಕ್ಟ್-ದಾರರು ಬಂದು ತಾಳೆ ಎಲೆಗಳನ್ನು ಒಯ್ಯುತ್ತಿದ್ದಾರೆ.”

ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಮಧ್ಯವಯಸ್ಸಿನ ಮಹಿಳೆ ಅಮ್‌ರಾ ಯಾದವ್ ಸ್ವರವೇರಿಸಿ ಹೇಳಿದರು, “ಇದು (ಉಪಕಸಬು) ಮುಂದುವರಿಯಲು ಸರಕಾರ ಕ್ರಮ ಕೈಗೊಳ್ಳಬೇಕು ಅಥವಾ ನಮಗೆ ಬದಲಿ ವ್ಯವಸ್ಥೆ ಮಾಡಬೇಕು.” ಅವಳ ಸಮಸ್ಯೆ ಹೀಗಿದೆ: “ತಾಳೆರಸ ಸಂಗ್ರಹಕಾರನ ಅತಿ ಮುಖ್ಯ ಸಾಧನ ಚೂರಿ. ಇದು ಕೇವಲ ಮೂರು ವರುಷ ಬಾಳಿಕೆ ಬರುತ್ತದೆ. ಇದು ಸಿಗೋದು ಕೊಲ್ಕೊತಾದಲ್ಲಿ ಮಾತ್ರ. ಹಾಗಾಗಿ ಮೂರು ವರುಷಕ್ಕೊಮ್ಮೆ ನಾವು ಕೊಲ್ಕೊತಾಕ್ಕೆ ಹೋಗಿಬರಬೇಕು ಅಥವಾ ವ್ಯಾಪಾರಿಗಳಿಂದ ಖರೀದಿಸಬೇಕು. ಹೇಗಿದ್ದರೂ ಅದು ದುಬಾರಿ.”

ಅಲ್ಲಿನ "ಕೃತಿ ಶೋಧಕ್ ಸಂಸ್ಥಾನ್" ಎಂಬ ಸಂಸ್ಥೆಯಿಂದ, ಸುಗ್ರಾದ ತಾಳೆರಸ ಸಂಗ್ರಾಹಕರಿಗೆ “ಕುಶಲಕರ್ಮಿಗಳ ಕಾರ್ಡ್” ನೀಡಬೇಕೆಂದು ರಾಜ್ಯದ ಖಾದಿಗ್ರಾಮೋದ್ಯೋಗ ಮಂಡಳಿಗೆ ಒತ್ತಾಯ. ಯಾಕೆಂದರೆ, ತಾಳೆರಸ ಸಂಗ್ರಹ ಅಪಾಯಕಾರಿ ಕೆಲಸ. ಯಾರಾದರೂ ಮರದಿಂದ ಕೆಳಕ್ಕೆ ಬಿದ್ದು ಅಂಗಹೀನರಾದರೆ ಅಥವಾ ಪ್ರಾಣ ಕಳೆದುಕೊಂಡರೆ, ಕಾರ್ಡ್ ಇದ್ದವರಿಗೆ ವಿಮೆ ಸಿಗುತ್ತದೆ. ಆ ಕಾರ್ಡುಗಳು ಇನ್ನೂ ತಮ್ಮ ಕೈಸೇರಿಲ್ಲ ಎಂಬುದು ಸುಗ್ರಾದ ತಾಳೆರಸ ಸಂಗ್ರಾಹಕರ ದೂರು.

ಭಾರತದ ಗ್ರಾಮೀಣ ಪ್ರದೇಶಗಳ ಜನಜೀವನ ಹಿಂದೆಂದೂ ಕಂಡುಕೇಳರಿಯದ ವೇಗದಲ್ಲಿ ಬದಲಾಗುತ್ತಿದೆ. ಅಲ್ಲಿನ ಜನರ ಸಮಸ್ಯೆಗಳು ನೂರಾರು. ಆ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಜ್ಯಾರಿಗೊಳಿಸುತ್ತಿರುವ ಯೋಜನೆಗಳೂ ನೂರಾರು. ಆದರೆ, ಭ್ರಷ್ಟಾಚಾರ, ಅಧಿಕಾರಿಗಳ ಅಸಡ್ಡೆ ಇಂತಹ ಕಾರಣಗಳಿಂದಾಗಿ ಆ ಯೋಜನೆಗಳು ನಿರೀಕ್ಷಿತ ಫಲಿತಾಂಶ ನೀಡುತ್ತಿಲ್ಲ. ಭಾರತದ ಜನಸಂಖ್ಯೆ 140 ಕೋಟಿ ದಾಟಿದ್ದು, ಸುಮಾರು 80 ಕೋಟಿ ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಅವರ ಜೀವನದ ಗುಣಮಟ್ಟ ಸುಧಾರಿಸುವ ಸವಾಲನ್ನು ಸಮರ್ಥವಾಗಿ ನಿಭಾಯಿಸುವುದು ಇಂದಿನ ತುರ್ತು.

ಫೋಟೋ 1: ತಾಳೆ ಮರಗಳು … ಕೃಪೆ: ಸ್ಕ್ರೋಲ್.ಇನ್
ಫೋಟೋ 2 ಮತ್ತು 3: ತಾಳೆ ಮರ ಏರುವವರು (ಪ್ರಾತಿನಿಧಿಕ ಫೋಟೋಗಳು)