ತಾಷ್ಕೆಂಟ್ ಡೈರಿ

ತಾಷ್ಕೆಂಟ್ ಡೈರಿ

ಪುಸ್ತಕದ ಲೇಖಕ/ಕವಿಯ ಹೆಸರು
ಎಸ್.ಉಮೇಶ್
ಪ್ರಕಾಶಕರು
ಧಾತ್ರಿ ಪ್ರಕಾಶನ, ಮೈಸೂರು
ಪುಸ್ತಕದ ಬೆಲೆ
ರೂ.೧೭೦.೦೦ ಮೊದಲ ಮುದ್ರಣ : ಜೂನ್ ೨೦೨೦

ಪ್ರಾಮಾಣಿಕತೆ ಮತ್ತು ಸರಳತೆ ಎಂಬ ವಿಷಯ ಮನಸ್ಸಿಗೆ ಬಂದಾಗಲೆಲ್ಲಾ ನೆನಪಾಗುವುದು ನಮ್ಮ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರು. ತಮ್ಮ ಬದುಕಿನ ಉದ್ದಕ್ಕೂ ಅವರು ನಂಬಿದ ತತ್ವ ಸಿದ್ಧಾಂತದಂತೆಯೇ ಬಾಳಿ ಬದುಕಿದರು. ಆದರೆ ಅವರ ಸಾವು ಅವರ ಬದುಕಿನಷ್ಟು ಸರಳವಾಗಿರಲಿಲ್ಲ. ಭಾರತ-ಪಾಕಿಸ್ತಾನದ ನಡುವೆ ರಷ್ಯಾದ ತಾಷ್ಕೆಂಟ್ ಎಂಬಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ರಾತ್ರಿಯೇ ಶಾಸ್ತ್ರೀಜಿಯವರ ಮರಣವಾಗುತ್ತದೆ. ಆದರೆ ಇದು ಸಹಜ ಮರಣ ಅಲ್ಲವೆಂದೇ ಬಹುತೇಕರ ಸಂಶಯ. ಈ ಎಲ್ಲಾ ಸಂಶಯಗಳನ್ನು ನಿವಾರಿಸಲು ಎಸ್.ಉಮೇಶ್ ಅವರು ‘ತಾಷ್ಕೆಂಟ್ ಡೈರಿ' ಎಂಬ ಪುಸ್ತಕವನ್ನು ಬರೆದು ಕನ್ನಡದ ಓದುಗರಿಗಾಗಿ ಹೊರತಂದಿದ್ದಾರೆ. 

ಪುಸ್ತಕದ ಮುಖಪುಟದಲ್ಲೇ 'ದಿ ಟ್ರ್ಯಾಪ್- ಎಲ್ಲರೂ ಹೇಳುತ್ತಿರುವುದು ಅರ್ಧ ಸತ್ಯವೇ?’ ಎಂದು ಮುದ್ರಿಸಿದ್ದಾರೆ. ಪುಸ್ತಕಕ್ಕೆ ಶಾಸ್ತ್ರೀಜಿಯವರ ಪುತ್ರ ಅನಿಲ್ ಶಾಸ್ತ್ರಿಯವರು ಬೆನ್ನುಡಿ ಬರೆದಿದ್ದಾರೆ. ಅವರು ಬರೆದ ನಾಲ್ಕು ವಾಕ್ಯಗಳು ನಮ್ಮ ಶಾಸ್ತ್ರೀಜಿಯವರು ಹೇಗಿದ್ದರು ಎಂದು ತಿಳಿದು ಬರುತ್ತದೆ. ಅವರು ಬರೆಯುತ್ತಾರೆ ‘ ಜಗತ್ತಿನ ಇತಿಹಾಸದ ರಾಜಕಾರಣಿಗಳಲ್ಲಿ ತಮ್ಮ ಸಾಮಾನ್ಯ ಕಾರಿನ ಬೆಲೆಯ ಮೂರನೇ ಒಂದು ಭಾಗದಷ್ಟು ಹಣ ಹೊಂದಿದ್ದ ಏಕೈಕ ಪ್ರಧಾನಿ ಶಾಸ್ತ್ರೀಜಿ.’ ಧೈರ್ಯಶಾಲಿ ಯೋಧನಂತೆ ದೇಶವನ್ನು ಮತ್ತು ಪ್ರಜೆಗಳನ್ನು ಮುನ್ನಡೆಸಿದರು. ಕೊಬ್ಬಿದ ಗೂಳಿಯ ಕೊಂಬನ್ನು ಹಿಡಿದು ತಲೆತಗ್ಗಿಸುವಂತೆ ಮಾಡಿದರು ಶಾಸ್ತ್ರೀಜಿ. 

ಪುಸ್ತಕದ ಮುನ್ನುಡಿಯಲ್ಲಿ ಉಪ ರಾಷ್ಟ್ರಪತಿಗಳಾದ ಶ್ರೀ ಎಂ.ವೆಂಕಯ್ಯ ನಾಯ್ಡು ಅವರು ‘ಶಾಸ್ತ್ರೀಜಿ ಇಂದಿಗೂ ಏಕೆ ಪ್ರಸ್ತುತರು?’ ಎಂಬ ಶೀರ್ಷಿಕೆಯಲ್ಲಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ದೇಶ ಪ್ರೇಮ, ಸರಳತೆ ಮತ್ತು ನೈತಿಕತೆಯ ಬಗ್ಗೆ ಬೆಳಕು ಚೆಲ್ಲುತ್ತಾರೆ. ೧೯೬೪ರಲ್ಲಿ ಪ್ರಧಾನ ಮಂತ್ರಿಯಾಗಿ ಶಾಸ್ತ್ರೀಜಿಯವರು ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣ ಇಂದಿಗೂ ಪ್ರಸ್ತುತ ಎಂದು ಅಭಿಪ್ರಾಯ ಪಡುತ್ತಾರೆ. ಅಂದು ಅವರು ಹೇಳಿದ್ದು ‘ ಮೊದಲಿಗೆ ನಾವು ಆಂತರಿಕವಾಗಿ ಬಲಿಷ್ಟರಾಗಬೇಕು. ಬಡತನ ಹಾಗೂ ನಿರುದ್ಯೋಗವನ್ನು ತೊಡೆದು ಹಾಕ ಬೇಕು. ಆಗ ಮಾತ್ರ ಜಗತ್ತು ನಮ್ಮನ್ನು ಗೌರವಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಬೇಕಾಗಿರುವುದು ರಾಷ್ಟ್ರೀಯ ಏಕತೆ, ಕೋಮು ದಳ್ಳುರಿಗಳು, ಪ್ರಾಂತೀಯ ಗಲಭೆಗಳು ಮತ್ತು ಭಾಷಾ ಸಂಘರ್ಷಗಳು ದೇಶವನ್ನು ದುರ್ಬಲಗೊಳಿಸುತ್ತವೆ. ಹಾಗಾಗಿ ನಾವು ರಾಷ್ಟ್ರೀಯ ಭಾವೈಕ್ಯವನ್ನು ರೂಪಿಸಬೇಕು. ನಾವೆಲ್ಲರೂ ರಾಷ್ಟ್ರೀಯ ಏಕತೆಗಾಗಿ ಕೆಲಸ ಮಾಡೋಣ. ನಮ್ಮ ಯುವಕರು ಶಿಸ್ತು ಮತ್ತು ಸಂಯಮವನ್ನು ಬೆಳೆಸಿಕೊಳ್ಳಬೇಕು. ಇದು ಅವರಿಗೆ ನನ್ನ ಮನವಿ.'

ತಾಷ್ಕೆಂಟ್ ಡೈರಿಯಲ್ಲಿ ೧೫ ಅಧ್ಯಾಯಗಳಿದ್ದು, ಪ್ರತೀ ಪುಟದಲ್ಲಿ ಅಪರೂಪದ ಛಾಯಾಚಿತ್ರಗಳಿವೆ. ೧೯೬೫ರ ಭಾರತ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಶಾಸ್ತ್ರೀಜಿಯವರು ತೆಗೆದುಕೊಂಡ ಧೃಢ ನಿರ್ಧಾರದ ಬಗ್ಗೆ, ನಂತರದ ದಿನಗಳಲ್ಲಿ ಶಾಂತಿ ಒಪ್ಪಂದದ ಸಮಯದಲ್ಲಿ ಶಾಸ್ತ್ರೀಜಿಯವರ ನಿಗೂಢ ಸಾವು, ಶಾಸ್ತ್ರೀಜಿಯವರನ್ನು ಕಾಡಿಸಿದ ನೇತಾಜಿ ಸುಭಾಷ್ ಚಂದ್ರ ಭೋಸ್ ಅವರ ಅಸ್ತಿತ್ವ. ಹೀಗೆ ಹತ್ತು ಹಲವಾರು ನಮಗೆ ಗೊತ್ತಿರದ ವಿಷಯಗಳ ಬಗ್ಗೆ ಪುಸ್ತಕವು ಮಾಹಿತಿ ನೀಡುತ್ತದೆ. ಸುಮಾರು ೨೧೦ ಪುಟಗಳ ಈ ಪುಸ್ತಕವನ್ನು ಲೇಖಕರು ತಮ್ಮ ಅಕ್ಕರೆಯ ಸಹೋದರ ಅಭಿಲಾಷ್ ಅವರ ಪ್ರೀತಿಗೆ ಮತ್ತು ಅದರ ರೀತಿಗೆ ಅರ್ಪಣೆ ಮಾಡಿದ್ದಾರೆ.