ತಿಂಗಳಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಾಟ
“ಒಂದೇ ತಿಂಗಳಿನಲ್ಲಿ ಒಂದು ಕ್ವಿಂಟಾಲ್ ಎರೆಹುಳ ಮಾರಿದೆ. ಅದ್ರಿಂದಲೇ ಇಪ್ಪತ್ತು ಸಾವಿರ ರೂಪಾಯಿ ಸಿಕ್ತು” ಎಂದು ಗರ್ಜೆ ಹಳ್ಳಿಯ ಜಿ.ಎಂ. ಈಶ್ವರಪ್ಪ ಹೇಳಿದಾಗ ನಂಬಲು ಕಷ್ಟವಾಯಿತು. ಆದರೆ ಜನವರಿ ೨೦೦೭ರಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಕಿಲೋ ಎರೆಹುಳ ಮಾರಾಟ ಮಾಡಿದ್ದರೆಂದು ಲೆಕ್ಕಾಚಾರ ನೀಡಿದಾಗ ನಾನು ನಂಬಬೇಕಾಯಿತು.
ಎರೆಹುಳ ಗೊಬ್ಬರ ತಯಾರಿ ತರಬೇತಿಗಾಗಿ ಬಂದಿದ್ದ ಕೃಷಿಕರನ್ನು ೧೧ ಎಪ್ರಿಲ್ ೨೦೦೭ರಂದು ಬೆಳಗ್ಗೆ ಚಿಕ್ಕಮಗಳೂರಿನ “ಸ್ವ-ಉದ್ಯೋಗ ತರಬೇತಿ ಸಂಸ್ಥೆ”ಯ ನಿರ್ದೇಶಕನಾಗಿದ್ದ ನಾನು ಗರ್ಜೆಗೆ ಕರೆದೊಯ್ದಿದ್ದೆ. ಕಡೂರಿನಿಂದ ಬಸ್ಸಿನಲ್ಲಿ ಪುರಕ್ಕೆ ಹೋದೆವು. ಪುರಾತನ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಎದುರಿನ ಬಸ್ ಸ್ಟಾಪಿನಲ್ಲಿ ಇಳಿದು, ಅಲ್ಲಿಂದ ಒಂದು ಕಿಮೀ ನಡೆದು, ಈಶ್ವರಪ್ಪನವರ “ಶ್ರೀ ಶಾರದಾಂಬ ಎರೆಹುಳ ಸಾಕಾಣಿಕೆ ಘಟಕ” ತಲಪಿದೆವು. ಬಿಳಿ ಷರಟು, ಪಂಚೆ ತೊಟ್ಟಿದ್ದ ವ್ಯಕ್ತಿ "ನಾನೇ ಈಶ್ವರಪ್ಪ” ಎಂದು ಪರಿಚಯಿಸಿಕೊಂಡು ನಮ್ಮನ್ನು ಸ್ವಾಗತಿಸಿದರು.
ಪಕ್ಕದಲ್ಲೇ ಇದ್ದವು ನಾಲ್ಕು ಎರೆಹುಳ ಸಾಕಾಣಿಕೆ ತೊಟ್ಟಿಗಳು. ಪ್ರತಿಯೊಂದರ ಅಗಲ ೪ ಅಡಿ, ಉದ್ದ ೬೦ ಅಡಿ ಮತ್ತು ಎತ್ತರ ೨ ಅಡಿ. “ಉದ್ದ ೨೦ ಅಡಿ ಸಾಕು. ಜಾಗ ಇದ್ರೆ ಇಲ್ಲಿ ಮಾಡಿದಂಗೆ ೬೦ ಅಡಿ ಉದ್ದಕ್ಕೆ ಮಾಡಿ" ಎಂದರು ಈಶ್ವರಪ್ಪ. ಕಡಪ ಕಲ್ಲಿನ ತೊಟ್ಟಿಗಳ ತಳಕ್ಕೆ ಸಿಮೆಂಟಿನ ಸಾರಣೆ.
ಎರಹುಳ ಸಾಕಣೆ ತೊಟ್ಟಿಗಳೆಲ್ಲ ತುಂಬಿದ್ದವು - ತೆಂಗಿನ ಸೋಗೆಯ ಚೂರು, ತೆಂಗಿನ ಕೊತ್ತಳಿಗೆಯ ಚೂರು, ತೆಂಗಿನ ಸಿಪ್ಪೆಯ ಚೂರುಗಳಿಂದ. ಅಲ್ಲಿನ ಎರೆಹುಳಗಳಿಗೆ ಅದುವೇ ಆಹಾರ. ಎಲ್ಲ ತೊಟ್ಟಿಗಳಿಗೂ ಮೇಲ್ಭಾಗದಲ್ಲಿ ಸೆಣಬಿನ ಚೀಲದ ಹಾಸು - ತೇವಾಂಶ ಉಳಿಸಲಿಕ್ಕಾಗಿ. ಅರ್ಧ ತಾಸಿಗೊಮ್ಮೆ ಮೈಕ್ರೊಸ್ಪ್ರಿಂಕ್ಲರ್ ಮೂಲಕ ನೀರಿನ ಸಿಂಪರಣೆ. ತೊಟ್ಟಿಗೆ ಹಾಸಿದ್ದ ಸೆಣಬಿನ ಚೀಲ ಎತ್ತಿ, ಕೆಳಗಿನ ಸಾವಯವ ಪದಾರ್ಥ ಕೆದಕಿ ತೋರಿಸುತ್ತಾ ಈಶ್ವರಪ್ಪ ಹೇಳಿದರು, “ತಂಪಾಗಿದ್ದರೆ ಎರೆಹುಳಗಳು ಚೆನ್ನಾಗಿ ತಿಂದು, ಹೆಚ್ಚು ಗೊಬ್ರ ಕೊಡ್ತವೆ. ಅದಕ್ಕೇ ಮೈಕ್ರೋ ಸ್ಪಿಂಕ್ಲರ್ ಹಾಕಿಸಿದೆ.”
ಎರೆಹುಳ ಸಾಕಣೆ ತೊಟ್ಟಿಗಳಿಗೆ ಕಬ್ಬಿಣದ ಪೈಪುಗಳ ಹಂದರದ ಆಧಾರದಲ್ಲಿ ಜಿಂಕ್-ಷೀಟುಗಳ ಚಾವಣಿ. ಅವರು ನಿರ್ಮಿಸಿದ ಷೆಡ್‌ನ ಉದ್ದ ೮೦ ಅಡಿ, ಅಗಲ ೨೬ ಅಡಿ. ಷೆಡ್ ಮತ್ತು ತೊಟ್ಟಿಗಳ ನಿರ್ಮಾಣಕ್ಕೆ ಆಗಿರುವ ಒಟ್ಟು ವೆಚ್ಚ ರೂಪಾಯಿ ಮೂರು ಲಕ್ಷ. ಅದಕ್ಕಾಗಿ ಬ್ಯಾಂಕಿನಿಂದ ಸಾಲ. ಈ ಯೋಜನೆಗೆ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಬ್ಸಿಡಿಯನ್ನೂ ಪಡೆದಿದ್ದಾರೆ.
ಈಶ್ವರಪ್ಪನವರದು ಎಂಟು ಎಕ್ರೆ ತೆಂಗಿನ ತೋಟ. ಅವರು ತೆಂಗಿನಮರಗಳಿಗೆ ಹಾಕುವುದು ರಾಸಾಯನಿಕ ಗೊಬ್ಬರವನ್ನಲ್ಲ; ಬದಲಾಗಿ ತಾನೇ ಉತ್ಪಾದಿಸಿದ ಎರೆಹುಳ ಗೊಬ್ಬರವನ್ನು. ಇದರಿಂದಾಗಿ ತೋಟದ ಇಳುವರಿ ಶೇ.೨೫ ಹೆಚ್ಚಳವಾಗಿದೆ ಎಂಬುದವರ ಹೇಳಿಕೆ.
ತನ್ನ ತೋಟಕ್ಕೆ ಹಾಕಿದ ನಂತರ ಉಳಿದ ಎರೆಹುಳ ಗೊಬ್ಬರವನ್ನು ಅವರು ಮಾರುತ್ತಾರೆ. ನಾವು ಭೇಟಿಯಿತ್ತಾಗ ಅವರಲ್ಲಿದ್ದ ಗೊಬ್ಬರದ ಸ್ಟಾಕ್ ೧೦೦ ಚೀಲ. ಪ್ರತಿಯೊಂದು ಚೀಲದ ತೂಕ ೨೮ ಕಿಗ್ರಾ. ರೂ.೪ ದರದಲ್ಲಿ ಗೊಬ್ಬರ ಮಾರಾಟ. ಟೊಮೆಟೊ ಹಾಗೂ ವೆನಿಲ್ಲಾ ಬೆಳೆಗಾರರಿಂದ ಎರೆಹುಳ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ.
ಎರೆಹುಳಗಳು ಮೊದಲ ಸಲ ಗೊಬ್ಬರ ಮಾಡಲು ೩೦ರಿಂದ ೪೫ ದಿನಗಳ ಅವಧಿ ಅಗತ್ಯ. ಅನಂತರ ಎರಡು ದಿನಗಳಿಗೊಮ್ಮೆ ಮೂರು ಇಂಚಿನಿಂದ ಆರು ಇಂಚು ಗೊಬ್ಬರವನ್ನು ತೊಟ್ಟಿಯ ಮೇಲ್ಭಾಗದಿಂದ ತೆಗೆಯುತ್ತಿರಬೇಕು. ಹೀಗೆ ತೆಗೆಯುತ್ತಾ ತೊಟ್ಟಿ ಖಾಲಿ ಆದ ನಂತರ, ತೊಟ್ಟಿಗೆ ಪುನಃ ಸಾವಯವ ಪದಾರ್ಥ ತುಂಬಿಸಬೇಕು ಎಂದು ಈಶ್ವರಪ್ಪ ವಿವರಿಸಿದರು. ತೊಟ್ಟಿ ಖಾಲಿ ಮಾಡಲು ಅವರು ಸೂಚಿಸಿದ ಸುಲಭ ವಿಧಾನ: ತೊಟ್ಟಿಯಲ್ಲಿ ಆರು ಇಂಚು ಎರೆಹುಳ ಗೊಬ್ಬರ ಉಳಿದಿರುವಾಗ, ತೊಟ್ಟಿಯ ಒಂದು ಮೂಲೆಯಲ್ಲಿ ಎರಡು ಕಿಗ್ರಾ ಸೆಗಣಿ ಚೆಲ್ಲಿ ಬಿಡಿ. ಎರೆಹುಳಗಳಿಗೆ ಸೆಗಣಿ ಅಂದರೆ ಇಷ್ಟ. ಎಲ್ಲ ಎರೆಹುಳಗಳೂ ಆ ಮೂಲೆಗೆ ಬಂದು ಸೇರಿಕೊಳ್ಳುತ್ತವೆ. ಅವನ್ನು ಎತ್ತಿ ಒಂದೆಡೆ ಹಾಕ್ಕೊಳ್ಳಿ. ತೊಟ್ಟಿಗೆ ಹೊಸ ಸಾವಯವ ಪದಾರ್ಥ ತುಂಬಿದಾಗ ಈ ಹುಳಗಳನ್ನು ಮೇಲ್ಭಾಗದಲ್ಲಿ ಬಿಡಿ. ಅವು ಆಹಾರ ತಿನ್ನುತ್ತಾ ಕೆಳಕ್ಕೆ ಹೋಗುತ್ತವೆ.
ಇದು ಇಸವಿ ೨೦೦೦ದಲ್ಲಿ ಕೇವಲ ಎರಡು ಕಿಗ್ರಾ ಎರೆಹುಳ ತಂದು ಸಾಕತೊಡಗಿದ ಈಶ್ವರಪ್ಪ ಎರೆಹುಳಗಳ ಸರದಾರರಾದ ಯಶೋಗಾಥೆ. ಅವರ ಎರೆಹುಳ ಸಾಕಣೆಯ ಕಾಯಕಕ್ಕೆ ಪತ್ನಿ ಶಾರದಾಂಬ ಮತ್ತು ಇಬ್ಬರು ಗಂಡು ಮಕ್ಕಳ ಒತ್ತಾಸೆ. “ಇದು ಬಂಗಾರಕ್ಕಿಂತ ದೊಡ್ಡ ಸಂಪತ್ತು. ಯಾಕೆಂದರೆ ಎರೆಹುಳ ಜಲಕ್ಕೆ ಲೀಟರಿಗೆ ೧,೦೦೦ ರೂಪಾಯಿ ರೇಟಿದೆ. ಎರೆಹುಳ ಮಾರಾಟ ಮಾಡಲಾಗದಿದ್ರೆ, ಅವನ್ನೇ ಒಣಗಿಸಿ ಹುಡಿ ಮಾಡಿ ಮಾರಿದರೆ ಕಿಲೋಕ್ಕೆ ೨,೦೦೦ ರೂಪಾಯಿ ರೇಟಿದೆ” ಎಂದು ಸಮರ್ಥಿಸಿಕೊಂಡರು ಈಶ್ವರಪ್ಪ.
"ನನ್ನಿಂದ ಎರೆಹುಳ ಒಯ್ದವರೆಲ್ಲ ಎರೆಹುಳಗಳ ಸರದಾರರಾಗಲಿ. ಅವರ ಜಮೀನಿನ ಮಣ್ಣು ಚಿನ್ನವಾಗಲಿ” ಎಂಬುದೇ ಅವರ ಹಾರೈಕೆ. ಅವರಂತೆ ದುಡಿದರೆ ಇತರರಿಗೂ ಇದು ಸಾಧ್ಯ, ಅಲ್ಲವೇ?
ಫೋಟೋ ೧ ಮತ್ತು ೨: ತೊಟ್ಟಿಯ ಎರೆಹುಳ ಗೊಬ್ಬರ ತೋರಿಸುತ್ತಿರುವ ಈಶ್ವರಪ್ಪ
ಫೋಟೋ ೩: ಈಶ್ವರಪ್ಪನವರ ಎರೆಹುಳ ಸಾಕಣೆ ತೊಟ್ಟಿಗಳು