ತಿಂಗಳಿನ ಬೆಳದಿಂಗಳಿಗೆ ಆಕರ್ಷಿತಗೊಂಡ ಜ್ಯೋತ್ಸ್ನಾ ಹಕ್ಕಿ!
“That's one small step for man, one giant leap for mankind" -ನೀಲ್ ಆರ್ಮ್ ಸ್ಟ್ರಾಂಗ್
ಹುಣ್ಣಿಮೆಯಂದು ಪೂರ್ಣಚಂದಿರದಿಂದ ಧುಮ್ಮಿಕುವ ರಜತ ಬೆಳದಿಂಗಳಿನ ಜಲಪಾತದ ದೃಶ್ಯ ನಯನ ಮನೋಹರವಾಗಿದ್ದು; ಈ ಸ್ವರ್ಗೀಯ ವಿಲಾಸದ ಸೊಬಗು ಹೇಳತೀರದು! ರಸಿಕರು ದಿಗ್ಮೂಢರಾಗಿ ಮಂತ್ರ ಮುಗ್ಧರಾಗುವರು. ಭಾವುಕರು ತನ್ಮಯರಾಗುವರು; ಕವಿಗಳು ಉತ್ಸಾಹದ ಪುಟಿ ಚೆಂಡಾಗುವರು! ಹಾಗೆಯೇ, ಜ್ಯೋತ್ಸ್ನಾ ಹಕ್ಕಿಗಳಿಗೆ ತಿಂಗಳಿನ ಬೆಳದಿಂಗಳು ಬಡಿದಿಟ್ಟ ಹರ್ಷೋತ್ಕರ್ಷತೆಯಿಂದ ಕೂಡಿದ ರಸದೌತಣವಾಗಿದೆ. ಜ್ಯೋತ್ಸ್ನಾ ಹಕ್ಕಿಯು ಕವಿ ಸಮಯದಲ್ಲಿ ಕವಿಗಳ ರಸಿಕಮನಸ್ಸಿನಲ್ಲಿ ಹುಟ್ಟಿಕೊಂಡಿರುವ ಕಾಲ್ಪನಿಕ ಹಕ್ಕಿಯೊಂದಾಗಿದೆ. ಈ ಹಕ್ಕಿಯು ಚಂದಿರನ ಬೆಳಕಿಗೆ ಅತ್ಯಾಕರ್ಷಿತಗೊಂಡು ಅದನ್ನು ಪಡೆಯುವ ಹಂಬಲ ಹೊಂದಿದ ಪಕ್ಷಿಯೆಂದು ಹೇಳಲಾಗುತ್ತದೆ. ಆದರೆ, ಈಜಿಪ್ಟಿನ ಫಾರೂಕ್ ಅಲ್-ಬಾಝ್ ಎಂಬ ಜ್ಯೋತ್ಸ್ನಾ ಹಕ್ಕಿಯು ಚಂದ್ರನ ಸೌಂದರ್ಯಕ್ಕೆ ಮನಮೋಹಕಗೊಂಡು ಚಂದ್ರನ ಕುರಿತು ಸಮಗ್ರ ಅಧ್ಯಯನ ನಡೆಸಲು ಉತ್ಸುಕ್ತರಾಗಿ, ಚಂದ್ರಕ್ಕೆ ಮೊತ್ತ ಮೊದಲ ಮಾನವನನ್ನು ಕಳುಹಿಸುವ ಯೋಜನೆಯನ್ನು ರೂಪಿಸತೊಡಗಿದರು!
ಜುಲೈ 20, 1969ರಂದು Apollo Lunar Module Eagle ಹೆಸರಿನ ಗಗನನೌಕೆ ಚಂದ್ರನ ಅಂಗಳಕ್ಕೆ ಅವತರಣಗೊಂಡು ನೀಲ್ ಆರ್ಮ್ ಸ್ಟ್ರಾಂಗ್ ಅವರನ್ನು ಚಂದ್ರಕ್ಕೆ ಕಾಲಿಟ್ಟ ಪ್ರಪ್ರಥಮ ಮಾನವವೆಂಬ ಪ್ರಖ್ಯಾತಿ ಕರುಣಿಸಿತು; ಅಲ್ಲದೇ, lunar module pilot ಆದ ಕಮಾಂಡರ್ ಬುಝ್ ಆಲ್ಡ್ರಿನ್ ಅವರನ್ನೂ ಅಪಾರ ಕೀರ್ತಿಯನ್ನು ಒದಗಿಸಿತು. ಆದರೆ, ಚಂದ್ರಲೋಕಕ್ಕೆ ಮೊತ್ತ ಮೊದಲ ಮಾನವನನ್ನು ಕಳುಹಿಸುವ ಯೋಜನೆಯಾದ 'ಅಪೊಲ್ಲೊ ಪ್ರೋಗ್ರಾಮ್' ಅನ್ನು ಕಲ್ಪಿಸಿದ್ದು ಮತ್ತು ನೆರವೇರಿಸಿದ್ದು ಈಜಿಪ್ಟಿನ ಮೇಧಾವಿ ಫಾರೂಕ್ ಅಲ್-ಬಾಝ್ ಎಂಬವರು!
ಫಾರೂಕ್ ಅಲ್-ಬಾಝ್ ಈಜಿಪ್ಟಿನ ಬಾಹ್ಯಾಕಾಶ ವಿಜ್ಞಾನಿಯಾಗಿದ್ದು- ಚಂದ್ರನ ಮೇಲ್ಮೈ ಪರಿಶೋಧನೆ ಮತ್ತು ಅಪೊಲೊ ಕಾರ್ಯಕ್ರಮದ ಯೋಜನೆಯಲ್ಲಿ ಅಮೆರಿಕಾದ ಬಾಹ್ಯಾಕಾಶದ ಸಂಸ್ಥೆಯಾದ 'ನಾಸಾ'ದೊಂದಿಗೆ ಹಗಲಿರುಳೆನ್ನದೆ ದುಡಿದವರು. ಅವರು - ಚಂದ್ರನ ಭೂವಿಜ್ಞಾನ ಸಂಶೋಧನೆ ಕಾರ್ಯಕ್ರಮದಲ್ಲಿ ಪ್ರಮುಖ ವಿಜ್ಞಾನಿಯಾಗಿದ್ದಲ್ಲದೇ, ಅಪೊಲೊ ಕಾರ್ಯಾಚರಣೆಗಳಿಗಾಗಿ ಲ್ಯಾಂಡಿಂಗ್ ಸೈಟ್ (Landing Site) ಗಳ ಆಯ್ಕೆ, ಚಂದ್ರನ ಮೇಲ್ಮೈ ಅವಲೋಕನಗಳು ಮತ್ತು ಛಾಯಾಗ್ರಹಣದಲ್ಲಿ ಗಗನಯಾತ್ರಿಗಳ ತರಬೇತಿಯನ್ನು ಅಧ್ಯಯನ ಮಾಡುವ ಜವಾಬ್ದಾರಿಯನ್ನು ಕರ್ತವ್ಯಪರರಾಗಿ ನೆರವೇರಿಸಿದರು. ಶ್ರೀಯುತರು, ಅಪೊಲೊ 11 ಮೂನ್ ಲ್ಯಾಂಡಿಂಗ್ ಮಿಷನ್ ಮತ್ತು ನಂತರದ ಹಲವಾರು ಅಪೊಲೊ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದರು.
ಫಾರೂಕ್ ಅಲ್-ಬಾಝ್ ಅವರು ಜನವರಿ 2, 1938 ರಂದು ಈಜಿಪ್ಟ್ ದೇಶದ ಶಾರ್ಕಿಯಾ ಗವರ್ನರೇಟ್ನ ಝಗಾಜಿಗ್ನಲ್ಲಿ ಜನಿಸಿದರು. ಅವರ ಕುಟುಂಬವು ಮೂಲತಃ ಈಜಿಪ್ಟ್ನ ತೌಖ್ ಅಲ್ ಅಕ್ಲಾಮ್ನ ನೈಲ್ ಡೆಲ್ಟಾ ಗ್ರಾಮದವರು. ಬಾಲ್ಯದಲ್ಲಿ ತಂದೆಯ ವ್ಯಾಪಾರ ವ್ಯವಹಾರದಿಂದ ಫಾರೂಕ್ ಅವರಿಗೆ ಅನೇಕ ಶಾಲೆಗಳನ್ನು ಬದಲಿಸಬೇಕಾಯಿತು. 1958ರಲ್ಲಿ, ಅವರು ಐನ್ ಶಮ್ಸ್ ವಿಶ್ವವಿದ್ಯಾಲಯಕ್ಕೆ ಸೇರಿ, 1962-1963ರಲ್ಲಿ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಅದನ್ನು ಅನುಸರಿಸಿ, 1964ರಲ್ಲಿ ಅವರು ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಸೇರಿ ತಮ್ಮ ವಿದ್ಯಾಭ್ಯಾಸವನ್ನು ಸಫಲವಾಗಿ ಪಳಕಿಸಿದರು. ಅಂತಿಮವಾಗಿ, 2002ರಲ್ಲಿ, ಅವರು ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯಕ್ಕೆ ಸೇರಿ ಉನ್ನತ ವ್ಯಾಸಂಗ ನಡೆಸಿದರು. ಅಲ್-ಬಾಝ್ ಅವರು ಸಫಲ 'ಅಪೊಲೊ ಪ್ರೋಗ್ರಾಮ್' ನಂತರ ಅಸ್ಸಿಯುಟ್ (Assiut) ವಿಶ್ವವಿದ್ಯಾಲಯ, ಈಜಿಪ್ಟ್ (1958-1960) ಮತ್ತು ಹೈಡೆಲ್ಬರ್ಗ್ ವಿಶ್ವವಿದ್ಯಾಲಯ, ಜರ್ಮನಿ (1964-1965) ನಲ್ಲಿ ಉಪನ್ಯಾಸಕರಾಗಿ ಭೂವಿಜ್ಞಾನವನ್ನು ಕಲಿಸಿದರು.
'ಅಪೊಲೊ ಕಾರ್ಯಕ್ರಮ'ವನ್ನು ಪ್ರಾರಂಭಿಸಿದ ದಿನದಿಂದಲೇ, ಚಂದ್ರನ ಮೇಲ್ಮೈಯ ವಿವರವಾದ ಛಾಯಾಚಿತ್ರಗಳ ಅಧ್ಯಯನ ನಡೆಸುವ ಜವಾಬ್ದಾರಿಯನ್ನು ಅಲ್ ಬಾಝ್ ಅವರಿಗೆ ನೀಡಲಾಯಿತು. ಚಂದ್ರನ ಭೂಪ್ರದೇಶ, ಹವಾಮಾನ ವ್ಯತ್ಯಾಸಗಳು ಮತ್ತು ಇತರ ಅಂಶಗಳ ಆಧಾರದ ಮೇಲೆ ಅತ್ಯಂತ ಸೂಕ್ತವಾದ ಮತ್ತು ನಿಖರವಾದ ಲ್ಯಾಂಡಿಂಗ್ ಸ್ಥಳವನ್ನು ಆಯ್ಕೆಮಾಡುವಲ್ಲಿ ಇವರು ನಿರ್ಣಾಯಕ ಪಾತ್ರವಹಿಸಿದರು. ಶ್ರೀಯುತರು, ಸುಪ್ರಸಿದ್ಧ Apollo-15 Lunar Roving Vehicle ನಿರ್ಮಿಸುವುದರಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು ಮತ್ತು ಅಪೊಲೊ ಗಗನಯಾತ್ರಿಗಳಿಗೆ ಪ್ರಮುಖ ಕೌಶಲ್ಯವಾದ Visual Observation ಮತ್ತು ಬಾಹ್ಯಾಕಾಶ ಛಾಯಾಗ್ರಹಣದ ಕುರಿತು ಸಹ ತರಬೇತಿ ನೀಡಿದರು. ಅದರೊಂದಿಗೆ, ಅವರು ಯಾವ ಬಂಡೆಗಳನ್ನು ಸಂಗ್ರಹಿಸಬೇಕು ಮತ್ತು ಚಂದ್ರನ ಮಣ್ಣನ್ನು ಹೇಗೆ ಸಂಗ್ರಹಿಸಬೇಕು ಎಂದು ನೀಲ್ ಆರ್ಮ್ ಸ್ಟ್ರಾಂಗ್ ಅವರನ್ನು ಹೇಳಿಕೊಟ್ಟರು.
1961ರಲ್ಲಿ, ಅಲ್ ಬಾಝ್ ಅವರು ಮಿಸೌರಿ ಸ್ಕೂಲ್ ಆಫ್ ಮೈನ್ಸ್ ಮತ್ತು ಮೆಟಲರ್ಜಿಯಿಂದ ಭೂವಿಜ್ಞಾನದಲ್ಲಿ ಮಾಸ್ಟರ್ ಆಫ್ ಸೈನ್ಸ್ ಪದವಿಯನ್ನು ಪಡೆದರು. 1962 ರಿಂದ 1963ರವರೆಗೆ ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಂಶೋಧನೆ ನಡೆಸಿದ ನಂತರ, 1964ರಲ್ಲಿ 26ನೇ ಎಳೆ ವಯಸ್ಸಿನಲ್ಲಿ ಅವರು ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಭೂವಿಜ್ಞಾನದಲ್ಲಿ ಡಾಕ್ಟರ್ ಆಫ್ ಫಿಲಾಸಫಿ ಪಡೆದರು.
ಅಲ್-ಬಾಝ್ ಅವರು ಅಪೊಲೊಗೆ ಎಷ್ಟು ಮಹತ್ವದ ಪಾತ್ರ ನೆರವೇರಿಸದರೆಂದರೆ, ಟಾಮ್ ಹ್ಯಾಂಕ್ಸ್'ನ HBO ಟಿವಿ-ಸರಣಿಯಾದ, "From the Earth to the Moon"ದಲ್ಲಿ, ಅಪೊಲೊ ವಿಜ್ಞಾನಿ ಮತ್ತು ಗಗನಯಾತ್ರಿ ತರಬೇತುದಾರನಾಗಿ ದುಡಿದ ಅಲ್-ಬಾಝ್ ಅವರ ಪಾತ್ರವನ್ನು "ದಿ ಬ್ರೈನ್ ಆಫ್ ಫರೂಕ್ ಅಲ್-ಬಾಝ್" ಎಂಬ ಶೀರ್ಷಿಕೆಯಡಿಯಲ್ಲಿ ಪ್ರದರ್ಶಿಸಲಾಗಿದೆ. ಅಲ್-ಬಾಝ್ ಹೆಸರಿನ ಗಗನನೌಕೆ ಜನಪ್ರಿಯ ಟಿವಿ-ಸರಣಿ Star Trek: The Next Generationದಲ್ಲಿ ತೋರಿಸಲಾಗಿದೆ. ಅಲ್-ಬಾಝ್ ಅವರ ಅತ್ಯುತ್ತಮ ಔಪನ್ಯಾಸಿಕ ಸಾಮರ್ಥ್ಯವನ್ನು ಅಪೊಲೊ ಗಗನಯಾತ್ರಿಗಳು ಎದೆ ತುಂಬಿ ಶ್ಲಾಘಿಸಿದ್ದಾರೆ. ಅಪೊಲೊ-15 ರ ಸಮಯದಲ್ಲಿ ಮೊದಲ ಬಾರಿಗೆ ಚಂದ್ರನನ್ನು ಸುತ್ತುತ್ತಿರುವಾಗ, ಕಮಾಂಡ್ ಮಾಡ್ಯೂಲ್ ಪೈಲಟ್ ಆಲ್ಫ್ರೆಡ್ ವರ್ಡ್ನ್ ಅವರು, "ದೊರೆಯ [ಅಲ್-ಬಾಝ್ ಅವರ ಅಡ್ಡಹೆಸರು] ತರಬೇತಿಯ ನಂತರ, ನಾನು ಹಿಂದೆಯೂ ಇಲ್ಲಿಗೆ ಬಂದಿದ್ದೇನೆ ಎಂದು ನನಗೆ ಅನಿಸತೊಡಗಿದೆ" ಎಂದರು.
1978ರಲ್ಲಿ, ಅಲ್-ಬಾಝ್ ಅವರು ಈಜಿಪ್ಟ್ನ ಅಧ್ಯಕ್ಷ ಅನ್ವರ್ ಸಾದತ್ಗೆ ವಿಜ್ಞಾನ ಸಲಹೆಗಾರರಾಗಿ ನೇಮಕಗೊಂಡರು. ಶ್ರೀಯುತರ ವಿಶಿಷ್ಟ ಸೇವೆಗಾಗಿ ಅಧ್ಯಕ್ಷ ಸಾದತ್ ಅವರಿಗೆ ಈಜಿಪ್ಟ್ನ ಆರ್ಡರ್ ಆಫ್ ಮೆರಿಟ್ - ಪ್ರಥಮ ದರ್ಜೆಯನ್ನು ನೀಡಿ ಗೌರವಿಸಿದರು. 1989ರಲ್ಲಿ ಅವರು ನ್ಯೂ ಇಂಗ್ಲೆಂಡ್ ಕಾಲೇಜಿನಿಂದ ಗೌರವ ಡಾಕ್ಟರ್ ಆಫ್ ಸೈನ್ಸ್'ಅನ್ನು ಗಳಿಸಿದರು; 2002ರಲ್ಲಿ ಅವರು ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ವೃತ್ತಿಪರ ಪದವಿ; 2003ರಲ್ಲಿ ಅವರು ಮನ್ಸೌರಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಫಿಲಾಸಫಿ; 2004ರಲ್ಲಿ ಅವರು ಕೈರೋದಲ್ಲಿನ ಅಮೇರಿಕನ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಲಾಸ್ ಮತ್ತು 2004ರಲ್ಲಿ ಅವರು ಮಿಸೌರಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರ್ ಆಫ್ ಇಂಜಿನಿಯರಿಂಗ್'ಅನ್ನು ಗೌರವಾನ್ವಿತವಾಗಿ ಪಡೆದರು.
ಫಾರೂಕ್ ಅಲ್-ಬಾಝ್ ಅವರು ಹಲವಾರು ಗೌರವಗಳು ಮತ್ತು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ, ಅವುಗಳೆಂದರೆ: ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬೋಸ್ಟನ್ನ ಗೋಲ್ಡನ್ ಡೋರ್ ಪ್ರಶಸ್ತಿ; ಡೆಸರ್ಟ್ ರಿಸರ್ಚ್ ಇನ್ಸ್ಟಿಟ್ಯೂಟ್ನ ನೆವಾಡಾ ಪದಕ ಮತ್ತು ಅರಬ್ ಥಾಟ್ ಫೌಂಡೇಶನ್ನ ಪ್ರವರ್ತಕ ಪ್ರಶಸ್ತಿ ಇತ್ಯಾದಿಗಳು ಮಹತ್ವಪೂರ್ಣವಾದ ಪ್ರಶಸ್ತಿಗಳು. 1978ರಲ್ಲಿ ಪಾಲೋಮರ್ ಖಗೋಳ ಸಮೀಕ್ಷಾಮಂದೀರದಲ್ಲಿ ಅಮೇರಿಕನ್ ಖಗೋಳಶಾಸ್ತ್ರಜ್ಞರಾದ ಎಲೀನರ್ ಹೆಲಿನ್ ಮತ್ತು ಶೆಲ್ಟೆ ಬಸ್ ಕಂಡುಹಿಡಿದ ಕ್ಷುದ್ರಗ್ರಹವನ್ನು "7371 ಅಲ್-ಬಾಝ್" ಎಂದು ಗೌರವಾರ್ಥವಾಗಿ ಶ್ರೀಯುತರ ಶುಭನಾಮದಿಂದ ನಾಮಕರಣಗೊಳಿಸಲಾಯಿತು. ಪ್ರಸ್ತುತ ಅಲ್-ಬಾಝ್ ಅವರು ಮ್ಯಾಸಚೂಸೆಟ್ಸ್ನ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರಾಗಿ ದುಡಿಯುತಿದ್ದಾರೆ.
ಚಿತ್ರದಲ್ಲಿ: ಕ್ಷುದ್ರಗ್ರಹವೊಂದಕ್ಕೆ "7371 ಅಲ್-ಬಾಝ್" ಎಂದು ನಾಮಕರಣಗೊಳಿಸಿ, ಡಾ. ಅಲ್-ಬಾಝ್ ಅವರಿಗೆ ಗೌರವ ಪದವಿ ಪ್ರಧಾನ ಮಾಡುತ್ತಿರುವ ಕ್ಷಣ.
-ಶಿಕ್ರಾನ್ ಶರ್ಫುದ್ದೀನ್ ಎಂ, ಮಂಗಳೂರು.
ಚಿತ್ರ: ಇಂಟರ್ನೆಟ್ ತಾಣ