ತಿಂಡಿಗೆ ಬೆಲೆ ಕಟ್ಟಬಹುದು, ಆದರೆ ಪ್ರಾರ್ಥನೆಗೆ ಬೆಲೆ ಕಟ್ಟಬಹುದೇ!?

ಅದೊಂದು ಊರು. ಅಲ್ಲೊಂದು ಹೋಟೆಲು. ಊರಿನ ಮಟ್ಟಿಗೆ ಭಾರಿ ಜನಪ್ರಿಯವೇ ಆಗಿತ್ತು. ಸಾಕಷ್ಟು ಜನ ಬಂದು ಅಲ್ಲಿ ತಿಂಡಿ, ಊಟ ಮಾಡಿ ಹೋಗ್ತಾ ಇದ್ರು. ಅದೊಂದು ಸಾರಿ ಒಬ್ಬ ವ್ಯಕ್ತಿ ಅಲ್ಲಿಗೆ ಊಟಕ್ಕೆ ಹೋದ. ಹೊಟೆಲ್ ತುಂಬಿ ತುಳುಕುತ್ತಿತ್ತು. ಆಗ ಯಾರೋ ಒಬ್ಬ ಹೋಟೆಲಿಗೆ ಬಂದು ಊಟ ಮಾಡಿ ತುಂಬ ಜನರ ಮಧ್ಯೆ ಹಣವನ್ನೇ ಕೊಡದೆ ಕಳ್ಳನ ಹಾಗೆ ತಪ್ಪಿಸಿಕೊಂಡು ಹೋಗುತ್ತಿರುವುದು ಕಂಡಿತು.
ಜನ ಹೇಗೆ ಮೋಸ ಮಾಡ್ತಾರಲ್ವಾ, ಅವನನ್ನು ಹಿಡೀಬೇಕು ಅಂತ ಈ ವ್ಯಕ್ತಿ ಮರುದಿನವೂ ಅದೇ ಹೊತ್ತಿಗೆ ಅಲ್ಲಿಗೆ ಹೋದ. ಹಿಂದಿನ ದಿನ ಊಟ ಮಾಡಿ ಹಣ ಕೊಡದೆ ತಪ್ಪಿಸಿಕೊಂಡು ಹೋಗಿದ್ದವನೂ ಅದೇ ಸಮಯ ಅಲ್ಲಿ ಊಟ ಮಾಡ್ತಾ ಇದ್ದ.
ಈ ವ್ಯಕ್ತಿ ಮೆಲ್ಲನೆ ಹೋಗಿ ಹೋಟೆಲ್ ಮಾಲೀಕನಿಗೆ ವಿಷಯ ತಿಳಿಸಿದ. ಆಗ ಹೋಟೆಲ್ ಮಾಲೀಕರು, "ಹೋಗ್ಲಿ ಅವನು. ನಾವು ಆಮೇಲೆ ಮಾತಾಡೋಣ" ಎಂದು ಹೇಳಿದರು.
ಹಿಂದಿನ ದಿನದ ಹಾಗೇ ಊಟ ಮಾಡಿದ ವ್ಯಕ್ತಿ ಮೆಲ್ಲಗೆ ತಲೆ ತಗ್ಗಿಸಿಕೊಂಡು ಜನರ ಮಧ್ಯೆ ತಪ್ಪಿಸಿಕೊಂಡು ಹೋದ, ಹಣವನ್ನು ಪಾವತಿ ಮಾಡಲೇ ಇಲ್ಲ. ಆಗ ಈ ವ್ಯಕ್ತಿ ಹೋಟೆಲ್ ಮಾಲೀಕನ ಬಳಿ ಬಂದು ಕೇಳಿದ: "ಯಾಕೆ ಹೋಗಲು ಬಿಟ್ರಿ ಅವನನ್ನು? ಏನು ವಿಷಯ ಕೇಳ್ಬೋದಾ?" ಅಂತ ಕೇಳಿದ.
ಮಾಲೀಕರು ಹೇಳಿದ್ರು: "ಸರ್, ನೀವೊಬ್ರೇ ಅಲ್ಲ... ನಮ್ಮ ಹೋಟೆಲ್‌ನ ಹಲವಾರು ರೆಗ್ಯುಲರ್ ಕಸ್ಟಮರ್ ಗಳು ಅವನು ಇಲ್ಲಿ ತುಂಬ ಜನ ಇರುವಾಗ ಬಂದು ಬಿಲ್ ಕೊಡದೆ ಹೋಗುವುದನ್ನು ಗಮನಿಸಿದ್ದಾರೆ. ಕಂಪ್ಲೇಂಟ್ ಕೂಡಾ ಮಾಡಿದ್ದಾರೆ. ನನಗೆ ಗೊತ್ತಿದೆ. ಅವನು ತುಂಬಾ ಹೊತ್ತು ನಮ್ಮ ಹೋಟೆಲ್ ಎದುರುಗಡೆ ಕಲ್ಲಿದೆಯಲ್ಲಾ, ಅದ್ರಲ್ಲಿ ಕೂತಿರ್ತಾನೆ. ನಮ್ಮ ಹೋಟೆಲಲ್ಲಿ ಜನ ರಶ್ ಆಗೋದನ್ನೇ ಕಾಯ್ತಾ ಇರ್ತಾನೆ. ಜನ ತುಂಬಿರುವಾಗ ಬಂದು ಊಟ ಮಾಡಿ ಮೆಲ್ಲಗೆ ತಪ್ಪಿಸಿಕೊಂಡು ಹೋಗ್ತಾನೆ.. ನಾನೇ ತುಂಬ ಸಾರಿ ನೋಡಿದ್ದೇನೆ. ಆದರೂ ಯಾವತ್ತೂ ಹಿಡಿದು ಹಾಕಬೇಕು ಅನಿಸಿಲ್ಲ.. ಅವನನ್ನು ನಾನು ತಡೆಯಲೇ ಇಲ್ಲ."
ವ್ಯಕ್ತಿ ಕೇಳಿದ : "ಅದೇ ಯಾಕೆ?"
ಮಾಲಿಕರು ಹೇಳಿದರು: "ನನಗೆ ಏನನಿಸ್ತಾ ಇದೆ ಗೊತ್ತಾ? ನನ್ನ ಹೋಟೆಲ್ ಈ ಥರ ತುಂಬಿ ತುಳುಕ್ತಾ ಇರೋದಕ್ಕೆ ಅವನೇ ಕಾರಣ ಅಂತ. ಅವನು ನನ್ನ ಹೋಟೆಲ್ ಮುಂದೆ ಬಂದು ಕೂತಿರ್ತಾನೆ. ಹೊಟೆಲ್ ಗೆ ತುಂಬಾ ಜನ ಬರ್ಲಿ ಅಂತ ದೇವರ ಹತ್ತಿರ ಪ್ರಾರ್ಥನೆ ಮಾಡ್ತಾ ಇರ್ತಾನೆ. ಹಾಗೆ ಬಂದರೆ ತಾನೇ ಅವನಿಗೆ ಒಳಗೆ ಬಂದು ಊಟ ಮಾಡಿ ದುಡ್ಡು ಕೊಡದೆ ತಪ್ಪಿಸಿಕೊಳ್ಳಲು ಸಾಧ್ಯವಾಗುವುದು. ಅವನ ಕಷ್ಟವೇನೋ ಗೊತ್ತಿಲ್ಲ. ಎಷ್ಟು ಬಡತನವೋ ತಿಳಿದಿಲ್ಲ. ಆದರೆ...ಒಂದು ಊಟಕ್ಕಾಗಿ ದೇವರಲ್ಲಿ ನನಗಾಗಿ ಪ್ರಾರ್ಥನೆ ಮಾಡ್ತಾನಲ್ಲ...ಅದಕ್ಕೆ ನಾನು ಬೆಲೆ ಕಟ್ಟೋದು ಸಾಧ್ಯಾನಾ?"
ಗ್ರಾಹಕ ಮಾಲೀಕನ ಮುಖವನ್ನೇ ನೋಡುತ್ತಿದ್ದ.
-ಕೃಷ್ಣ ಭಟ್ ಅಳದಂಗಡಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ