ತಿತ್ತಿರಿ ಮಜಲ್ ಹಾಡು
ತಿತ್ತಿರಿ..ತಿತ್ತಿರಿ ಮಜಲ್‌ಡ್ ಪಂತಿ ನಲಿಪುಂಡು..ದಾಯೆ ಎರ್ಮೆ ದಾಯೆ ಎರ್ಮೆ ಈ ಪಂತಿ ಮೇಯಿಜಾ.. ಈರ್ನ ದಿಕ್ಕೆ ಬಲ್ ಬುಡಂದಿನೆಕ್ ಯಾನ್ ದಾನೋಡು,( ಕನ್ನಡದಲ್ಲಿ ಅರ್ಥ- ಒಡೆಯನೊಬ್ಬ ತನ್ನ ಎಮ್ಮೆಯ ಬಳಿ ಬಂದು ಹೀಗೆ ಸಂಭಾಷಿಸುತ್ತಾನೆ. ತಿತ್ತಿರಿ ಮಜಲು ಎಂಬ ಗದ್ದೆಯಲ್ಲಿ ಹುಲ್ಲು ನಲಿದಾಡುತ್ತಿದೆ, ಯಾಕೆ ನೀನು ಹುಲ್ಲು ಮೇಯಲಿಲ್ಲಾ..ಅದಕ್ಕೆ ಎಮ್ಮೆ 'ನಿಮ್ಮ ಆಳು ನನ್ನ ಹಗ್ಗ್ ಬಿಚ್ಚಿ ಬಿಡದ್ದಕ್ಕೆ ನಾನೇನು ಮಾಡಲಿ ? ಎಂದು ಪ್ರತಿಕ್ರಿಯಿಸುತ್ತದೆ.) ಇದು ಒಂದು ಅಪ್ಪಟ ತುಳು ಹಾಡು. ತುಳು ಜಾನಪದದಲ್ಲಿ ಜನರ ಬಾಯಲ್ಲಿ ಹಿಂದಿನಿಂದಲೂ ಗುನುಗುಣಿಸುತ್ತಿದ್ದ ಹಾಡು. ಹಿಂದೆ ಎಳೆಯ ಮಕ್ಕಳ ತಾಯಂದಿರು ಮಕ್ಕಳನ್ನು ಊಟಮಾಡಿಸುವಾಗ ಈ ಹಾಡುಗಳನ್ನು ಹೇಳಿ, ಮಕ್ಕಳಿಗೆ ಅರ್ಥ ಆಗುವಂತೆ ಅದರ ಕಥೆಗಳನ್ನು ಹೇಳುತ್ತಾ ಊಟಮಾಡಿಸುತ್ತಿದ್ದರು. ಇಂದು ಮೊಬೈಲ್ ನಲ್ಲಿ ರಿಂಗ್ ಟೋನ್ ಇಟ್ಟೋ ಅಥವಾ ಕೊಲವೆರಿ ಡಿ, ಶೀಲಾ ಕಿ ಜವಾನಿ, ಇಂತಹ ಹಾಡುಗಳನ್ನು ಇಟ್ಟು ಊಟ ಮಾಡಿಸುತ್ತಿದ್ದಾರೆ ಬಿಡಿ.
ಈ ತಿತ್ತಿರಿ ಮಜಲು ಹಾಡು ನಾನು ಚಿಕ್ಕವಳಿರುವಾಗ ಅಂದರೆ ಸುಮಾರು ಇಪ್ಪತ್ತ ಎರಡು ವರ್ಷಗಳ ಹಿಂದೆಯೇ ನನ್ನ ಅಜ್ಜಿ ಹೇಳುತ್ತಿದ್ದದನ್ನು ಕೇಳುತ್ತಿದ್ದೆ. ಮಕ್ಕಳೆಲ್ಲಾ ಕಥೆ ಹೇಳಿ ಎಂದು ಅಜ್ಜಿ ಜತೆ ಗಂಟು ಬಿದ್ದಾಗ ಒಮ್ಮೊಮ್ಮೆ ಈ ಹಾಡನ್ನು ಹೇಳಿ ಅದರ ಕಥೆಯನ್ನು ಅವರದ್ದೇ ಆದ ಶೈಲಿಯಲ್ಲಿ ಹೇಳುತ್ತಿದ್ದರು. ಇದೇ ಜಾನಪದ ಅಲ್ವಾ? ಅಜ್ಜಿ ಬದುಕಿಗೆ ವಿದಾಯ ಹೇಳಿದ ನಂತರ, ಈ ಹಾಡೂ ನಮ್ಮಿಂದ ವಿದಾಯ ಹೇಳಿಸಿಕೊಂಡಿತ್ತು. ಕೆಲವೊಂದು ಸಾಲುಗಳು ಮನದಲ್ಲಿ ಮೂಡುತ್ತಿದ್ದವಾದರೂ ಅವುಗಳಿಗೆ ಸ್ಪಷ್ಟತೆ ಇರುತ್ತಿರಲಿಲ್ಲ. ಕಾರಣ ಸಣ್ಣವರಿರುವಾಗ ಹಾಡುಗಳನ್ನು ಬೊಬ್ಬೆ ಹಾಕಿ ಹಾಡೋದಲ್ವಾ ಅವು ಬೇಗನೇ ಮರೆತು ಹೋಗುತ್ತಿತ್ತು.
ಇಂದು ಯೋಚಿಸಿದಾಗ ಆ ಹಾಡುಗಳಲ್ಲಿ ಅದೆಷ್ಟು ಅರ್ಥವಿದೆ. ತುಳುನಾಡಿನ ಜನಜೀವನದ,ಜಾನಪದ,ಸಾಂಸ್ಕೃತಿಕ,ಕಲೆ ಇವೆಲ್ಲವುಗಳ ಜೀವಂತಿಕೆಯಿದೆ ಎಂದು ತಿಳಿಯುತ್ತದೆ. ಹಾಗೇ ಸುಮ್ಮನೆ ಪತ್ರಿಕೆಯೊಂದರ ಆನ್ ಲೈನ್ ಆಡಿಯೋ ಗ್ಯಾಲರಿಯಲ್ಲಿ ಕಣ್ಣಾಡಿಸುತ್ತಾ ಹೋಗುತ್ತಿದ್ದ ಹಾಗೆ "ಸಣ್ಣದಾದ ಅಕ್ಷರಗಳಲ್ಲಿ ತಿತ್ತಿರಿ ಮಜಲ್ ಹಾಡು" ಎಂಬ ಶೀರ್ಷಿಕೆ ಕಾಣಿಸಿತು. ಅಂದಿನ ಹಾಡು ನೆನಪಾಗಿ ಆ ಶೀರ್ಷಿಕೆಗೆ ಕ್ಲಿಕ್ಕಿಸಿದಾಗ ತಕ್ಷಣ ಹಾಡು ಶುರುವಾಯಿತು. ಅರೆ! ಅದೇ ಹಾಡು. ಅರ್ಧಂಬರ್ಧ ಬಾಯಲ್ಲಿ ಗುನುಗುಣಿಸುತ್ತಿದ್ದ ತಿತ್ತಿರಿ ಮಜಲು ಹಾಡು. ಆ ಕ್ಷಣ ನಿಧಿ ಸಿಕ್ಕ ಷ್ಟು ಸಂತೋಷವಾಯಿತು. ಹಾಗೇ ಸುಮ್ಮನೆ ಐದು ನಿಮಿಷ ಹಾಡು ಕೇಳುತ್ತಾ ಕೂತೆ. ಜತೆಗೆ ಅಂದು ಇದೇ ಹಾಡನ್ನು ತನ್ನದೇ ಧಾಟಿಯಲ್ಲಿ ಯಾವುದೇ ಸಂಗೀತ ಸಾಧನಗಳಿಲ್ಲದೆ ಹೇಳುತ್ತಿದ್ದ ಅಜ್ಜಿಯನ್ನೂ , ಮಕ್ಕಳೆಲ್ಲಾ ಊಟದ ತಟ್ಟೆ ಹಿಡಿದುಕೊಂಡು ಅಜ್ಜಿಯ ಸುತ್ತಲೂ ಕುಳಿತಿರುತ್ತಿದ್ದ ಬಾಲ್ಯವನ್ನೂ ನೆನೆಸಿಕೊಂಡೆ. ಆಧುನಿಕ ಸಂಗೀತ ಸಾಧನಗಳ ಬಳಕೆಯ ಪರಿಣಾಮದಿಂದಾಗಿ ಹಾಡಿನ ಶೈಲಿ ಸ್ವಲ್ಪ ಬದಲಾದಂತೆ ಕಂಡರೂ ಅದೇ ಕಥೆ. ಅದೇ ಇಂಪು.
ತುಳುನಾಡಿನ ಜಾನಪದದಲ್ಲಿ ಒಡೆಯನೊಬ್ಬ ತನ್ನ ಎಮ್ಮೆಯೊಡನೆ ನಡೆಸುವ ಸಂಭಾಷಣೆಯಿಂದ ತೊಡಗಿ,ಕೆಲಸದ ಆಳು, ಬೆಕ್ಕು, ಕಳ್ಳ, ಭೂತಾರಾಧನೆ, ಹೀಗೆ ಪ್ರತಿಯೊಂದನ್ನೂ ಮಾತನಾಡಿಸಿಕೊಂಡು ಹೋಗುವಂತಹ ಸೊಗಸಾದ ಹಾಡು. ಈ ಹಾಡನ್ನು ಮಂಗಳೂರು- ಸುಳ್ಯದ ಗುತ್ತಿಗಾರು ನೇಸರ ತಂಡದವರು ಬಹಳ ಅದ್ಭುತವಾಗಿ ಹಾಡಿದ್ದಾರೆ ಹಾಗೂ ಈ ಹಾಡಿಗೆ ಒಂದು ಹೊಸ ಕಳೆ ಬಂದಂತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದ ಹಾಡಿದು. ತುಳು ಭಾಷೆ ತಿಳಿಯದವರಿಗೆ ಹಾಡು ಅರ್ಥವಾಗದಿದ್ದರೂ ಸಂಗೀತ ಹಾಗೂ ಸಾಹಿತ್ಯ ಕರಾವಳಿಯ ಜನಪದ ಕಲೆಯನ್ನು ಪರಿಚಯಿಸುವುದರಲ್ಲಿ ಸಂಶಯವಿಲ್ಲ. ತುಳುವರಿಗಂತೂ ತಮ್ಮ ಪೂರ್ವಜರನ್ನು, ಕಲೆ,ಸಂಸ್ಕೃತಿಯನ್ನೂ ನೆನಪಿಸುವಂತಹ ಒಂದು ಅಪೂರ್ವ ಹಾಡು. ಇಂದು ಲಂಗುಲಗಾಮಿಲ್ಲದಂತೆ ಕರ್ಕಶ ಶಬ್ಧಗಳನ್ನು ಹೊರಡಿಸುತ್ತಾ ಸಾಗುತ್ತಿರುವ, ಅರ್ಥವಿಲ್ಲದ ಹಾಡುಗಳು ಈ ಹಾಡಿನ ಮುಂದೆ ಏನೂ ಅಲ್ಲ ಎಂಬಂತಿದೆ.
ಜನಪದ ಎಂದರೆ ಹಾಗೇನೇ. ಅದೆಷ್ಟು ಆಚರಣೆಗಳು, ತನ್ನದೇ ಶೈಲಿಯ ಹಾಡುಗಳು,ಕುಣಿತಗಳು ಇತ್ಯಾದಿ ಸಂಭ್ರಮಗಳನ್ನೊಳಗೊಂಡಿದೆ. ಎಲ್ಲೋ ಮರೆತ ಹಾಡನ್ನು ಹೆಕ್ಕಿ ತಂದು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಿದ ಹಾಗೂ ಇಂಪಾಗಿ ಹಾಡಿದ ನೇಸರ ತಂಡದ ಕಲಾವಿದರಿಗೆ ಹ್ಯಾಟ್ಸ ಅಪ್ ಹೇಳಲೇಬೇಕು. ಹಾಗೆಯೇ ಇನ್ನೂ ಅನೇಕ ಹಾಡುಗಳು ತುಳುನಾಡ ಜನಪದರಲ್ಲಿ ಗುನುಗುಣಿಸುತ್ತಿರುತ್ತವೆ. ಅವುಗಳನ್ನು ಸಂಗ್ರಹಿಸಿ ಇನ್ನೂ ಉತ್ತಮ ರೀತಿಯ ಹಾಡುಗಳನ್ನು ಪರಿಚಯಿಸುವಂತಾಗಲಿ ಎಂಬ ಆಶಯ ನನ್ನದು. ನನಗಂತೂ ಈ ಹಾಡು ತುಂಬಾ ತುಂಬಾ ಇಷ್ಟವಾಯಿತು. ನೀವೂ ಕೇಳಿ.
ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಸಮಾರಂಭದಲ್ಲಿ ಗಮನ ಸೆಳೆದ ಗುತ್ತಿಗಾರು ನೇಸರ ಕಲಾವಿದರು ಹಾಡಿದ ತಿತ್ತಿರಿ ಮಜಲ್ ಹಾಡು
http://www.udayavani.com/gallery/GalleryFullpage.aspx?videoid=887&catid=887&cat3=2039&albumid=2221660&languageid=15
ಚಿತ್ರ ಕೃಪೆ:http://mahighlandcattle.org/about_highland_cattle
http://www.mo.nrcs.usda.gov/news/MOphotogallery/hay_grassland.html
Comments
ದಾಯೆ ಎರ್ಮೆ ದಾಯೆ ಎರ್ಮೆ ಈ ಪಂತಿ
In reply to ದಾಯೆ ಎರ್ಮೆ ದಾಯೆ ಎರ್ಮೆ ಈ ಪಂತಿ by ಗಣೇಶ
ಹಾಡು ಅದ್ಭುತ, ತುಳು ಸಾಹಿತ್ಯ.
ಎರ್ಮೆ ಪಂತಿ ಮೇಯಿಜಾ!!! . . . .
In reply to ಎರ್ಮೆ ಪಂತಿ ಮೇಯಿಜಾ!!! . . . . by sasi.hebbar
ನಿಜ ಶಶಿಯವರೆ, ತುಂಬಾ ಖುಷಿಯಾಯಿತು
ತಿತ್ತಿರಿ ಮಜಲ್ ಹಾಡು
In reply to ತಿತ್ತಿರಿ ಮಜಲ್ ಹಾಡು by nkumar
ನಂದಕುಮಾರೆರೆ ಎಂಕ್ ಲಾ ಪದ ಕೇಂಡ್