ತಿನ್ನುವುದು ಬೇಡವಾದಾಗ....
ಮ್ಯಾಗಿ ಮಾರುಕಟ್ಟೆಯಿಂದ ಮಾಯವಾದಾಗ ವಿಚಲಿತರಾಗದೇ ಇದ್ದ ಭಾರತೀಯರ ಪೈಕಿ ನಾನೂ ಒಬ್ಬ. ಆದರೆ ಈ ವಿಷಯದಲ್ಲಿ ನಾನು ಮೈನಾರಿಟಿಯವನೇ ಅಥವಾ ಮೆಜಾರಿಟಿಯವನೇ ಎಂಬುದು ಗೊತ್ತಿಲ್ಲ. ಸುಮಾರು 400 ಕೋಟಿ ಮೌಲ್ಯದ ಈ "ಟೂ ಮಿನಿಟ್ ವಂಡರ್ ಫುಡ್" ಅಗ್ನಿಗೆ ಆಹುತಿಯಾಯಿತು ಎಂದು ಓದಿದಾಗ ನನಗೆ ಏನೂ ಅನ್ನಿಸಲಿಲ್ಲ. ಏಕೆಂದರೆ ನಾನು ಮ್ಯಾಗಿ ಪ್ರಿಯ ಅಲ್ಲ. ಅದರ ಬದಲು ಮನೆಯಲ್ಲೇ ಮಾಡುವ ಅಕ್ಕಿ ಶಾವಿಗೆ ಚಪ್ಪರಿಸಿ ತಿನ್ನುವ ಜಾತಿಗೆ ಸೇರಿದವನು. ಹಾಗೆಯೇ, ಕೆ ಎಫ್ ಸಿ ತಿನಿಸಿನಲ್ಲಿ ಬ್ಯಾಕ್ಟೀರಿಯ ಇದೆ ಎಂದು ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡಿದಾಗಲೂ ನಾನು ಸ್ಥಿತಪ್ರಜ್ಞನೇ , ಏಕೆಂದರೆ ನಾನು ಪ್ಯೂರ್ ವೆಜ್. ಆದುದರಿಂದ ಚಿಕನ್ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಲಿ?
ಆದರೆ ನನ್ನ ಹಳೆಯ ಸ್ನೇಹಿತರೊಬ್ಬರ ಪ್ರಶ್ನೆ ನನ್ನನ್ನು ಡಿಸ್ಟರ್ಬ್ ಮಾಡಿದೆ. “ನಮಗೀಗ ಬದುಕಲು ಆಹಾರ ಬೇಡ ಎಂದರೆ ನೀವು ತಿನ್ನುವುದನ್ನು ನಿಲ್ಲಿಸುವಿರಾ?” ಇದೇ ಅವರು ನನಗೆ ಹಾಕಿದ ಪ್ರಶ್ನೆ . ಇದು ನನಗೆ ಲೋಕಸಭೆಯಲ್ಲಿ ಕೇಳುವ ಸ್ಟಾರ್ ಪ್ರಶ್ನೆಯಂತೆ ಕಂಡಿತು.
“ತಿನ್ನಲು ಬದುಕದಿರಿ; ಬದುಕಲು ತಿನ್ನಿ " ಎಂದು ನಮ್ಮ ಹಿರಿಯವರೇಣ್ಯರು ಹೇಳಿ ನೂರಾರು ವರ್ಷ ಗಳೇ ಕಳೆದಿದ್ದು , ನಾನು ಈಗ ಬದುಕಲು ತಿನ್ನುತ್ತಿದ್ದೇನೆಯೋ ಅಥವಾ ತಿನ್ನಲು ಬದುಕುತ್ತಿದ್ದೇನೆಯೋ ಗೊತ್ತಿಲ್ಲ. ಆದರೆ ತಿನ್ನುವುದನ್ನು ಮಾತ್ರ ನಿಲ್ಲಿಸಲ್ಲ. ಹೊಟ್ಟೆ ಕೆಟ್ಟಾಗ ಮಾತ್ರ ತಿನ್ನುವುದಕ್ಕೆ ಟೆಂಪರಿರಿ ಬ್ರೇಕ್ ಸಿಗುತ್ತಿದೆಯೇ ಹೊರೆತು ಸತತ 24 ಗಂಟೆ ಅಲ್ಲದಿದ್ದರೂ 24 ಬೈ 7 ಈ ಕ್ರಿಯೆ ನಡೆಯುತ್ತಲೇ ಇದೆ. . ಬದುಕಲು ತಿನ್ನುವುದರ ಜತೆಗೆ ತಿನ್ನುವುದಕ್ಕೆ ಬದುಕುವ ಅವಕಾಶಗಳು ಹೇರಳವಾಗಿ ದೊರೆಯುತ್ತಲೇ ಇರುತ್ತವೆ . ಹಬ್ಬ ಹುಣ್ಣಿಮೆಗಳ ಜತೆ ಮದುವೆ, ಮುಂಜಿ , ಎಂಗೆಜ್ ಮೆಂಟ್ , ವೈಕುಂಠ ಸಮಾರಾಧನೆ, ಮದುವೆ ವಾರ್ಷಿಕೋತ್ಸವ ಮುಂತಾದವುಗಳೊಡನೆ ಏನೂ ತೋಚದೆ ಇದ್ದಾಗ ಒಂದು ಸತ್ಯನಾರಾಯಣ ಪೂಜೆ ಮಾಡಿ ಸುಗ್ರಾಸ ಭೋಜನ ಹಾಕುವಂತಹ ವಿಶಾಲ ಹೃದಯದವರೂ ಇದ್ದಾರೆ . ಇಂತಹ ಆಹ್ವಾನಗಳನ್ನು ಸ್ವೀಕರಿಸುವಾಗ ತಿನ್ನಲು ಬದುಕುತ್ತಿದ್ದೇನೆ ಎನಿಸುತ್ತದೆ. ಗಿಲ್ಟಿ ಫೀಲಿಂಗ್ಸ್ ಇಲ್ಲದಿದ್ದರೂ ಎಲ್ ಡಿಎಲ್ ಕೊಲೆಸ್ಟ್ರಾಲ್ ನದ್ದೇ ಭಯ. ಆದರೂ ಇನ್ ಟೇಕ್ ಮುಂದುವರೆದಿದೆ. ಒಳ್ಳೆಯ ಊಟ ಸಿಕ್ಕಾಗ ಮನಸ್ಸು ಖುಷಿಗೊಳ್ಳುತ್ತದೆ.
ಇಂತಹ ಪರಿಸ್ಥಿತಿಯಲ್ಲಿ "ನಮಗೀಗ ಬದುಕಲು ಆಹಾರ ಬೇಡ ಎಂದರೆ ತಿನ್ನುವುದನ್ನು ನಿಲ್ಲಿಸುವಿರಾ?” ಎಂದು ಕೇಳಿದರೆ? ಮ್ಯಾಗಿ ಅಥವಾ / ಮತ್ತು ಕೆಂಟಕಿ ಚಿಕನ್ ವಿಷಯದಲ್ಲಿ ಇದ್ದಂತೆ ನಿರಾಳವಾಗಿರಲು ಸಾಧ್ಯವಿಲ್ಲ ಎಂದು ನನಗೆ ಕೂಡಲೇ ಅನ್ನಿಸಿತು. ಏಕೆಂದರೆ ಇಲ್ಲಿನ ಪರಿಸ್ಥಿತಿ ತೀರಾ ವಿಭಿನ್ನ. ಮೇಲ್ನೋಟಕ್ಕೇನೋ ಇದು ಸರಳವಾಗಿ ಕಂಡಿತು. ಬದುಕಲು ಆಹಾರ ಬೇಡ ಎಂದ ಮೇಲೆ ತಿನ್ನಬೇಕೇಕೆ? ಪರೀಕ್ಷೆಯೇ ಇಲ್ಲ ಎಂದ ಮೇಲೆ ಅಭ್ಯಾಸ ಏಕೆ ಮಾಡಬೇಕು?
ಆದರೆ ರಾತ್ರಿ ಊಟಕ್ಕೆ ಕೂತಾಗ ಬಿಸಿ ಬಿಸಿ ಪುಲ್ಕಾ, ಆಲೂ ಗೋಬಿ ಪಲ್ಯ, ನನಗಿಷ್ಟವಾದ ಹಾಗಲಕಾಯಿ ಗೊಜ್ಜು , ಘಮ ಘಮ ಎನ್ನುತ್ತಿದ್ದ ಸಾರು, ಕೆನೆಯುಕ್ತ ಬೆಣ್ಣೆ, ನಂತರ ಊಟವಾದಮೇಲೆ ಒಂದಿಷ್ಟು ಕ್ಯಾರೆಟ್ ಹಲ್ವ ಹೊಟ್ಟೆ ಸೇರಿದಾಗ, “ನಮಗೀಗ ಬದುಕಲು ಆಹಾರ ಬೇಡ ಎಂದರೆ ಇದನ್ನೆಲ್ಲ ತಿನ್ನುವುದನ್ನು ನಿಲ್ಲಿಸುವಿರಾ?” ಎಂಬ ಬೆಳಗಿನ ಪ್ರಶ್ನೆ ಧುತ್ತೆಂದು ನೆನೆಪಾಯಿತು. ಹೌದು. ಪುಲ್ಕಾ, ಆಲೂ ಗೋಬಿ, ಹಾಗಲಕಾಯಿ ಗೊಜ್ಜು, ಕ್ಯಾರೆಟ್ ಹಲ್ವ
ಎಟಸೆಟರಾ ಎಟಸೆಟರಾ ಯಾವುದೂ ಅನಗತ್ಯ . ಬಿಸಿಬೇಳೇ ಹುಳಿ ಅನ್ನ , ಪಲ್ಯ / ಎಂಟಿಆರ್/ವಿದ್ಯಾರ್ಥಿಭವನ್/ಸಿಟಿಆರ್ ಮಸಾಲೆದೋಸೆ, ದಾವಣಗೆರೆ ಬೆಣ್ಣೇ ದೋಸೆ, ದ್ವಾರಕಾ ಖಾಲಿ ದೋಸೆ, ವೀಣಾ ಸ್ಟೋರ್ಸ್ನ ನ ಇಡ್ಲಿ, ಹೋಳಿಗೆ ಮನೆ ಹೋಳಿಗೆ, ವಿಬಿ ಬೇಕರಿಯ ಕಡಲೇ ಬೀಜದ ಬನ್... ಹೀಗೆ ನನ್ನ ಮೆನು ಕಾರ್ಡಿನಲ್ಲಿರುವ ನೂರಾರು ಐಟಂ ಗಳು ಬಿಲ್ ಕುಲ್ ಅನಗತ್ಯ. ಆಹಾರವೇ ಬೇಡ ಎಂದ ಮೇಲೆ ಮೆನುಕಾರ್ಡಾದರೂ ಏಕೆ ಬೇಕು?
ನಾನೇನೋ ಇಂದ್ರಿಯನಿಗ್ರಹ ಮಾಡಿ ಜಿಹ್ವಾಚಾಪಲ್ಯಕ್ಕೆ ಕಡಿವಾಣ ಹಾಕಿದೆ ಎಂದುಕೊಳ್ಳಿ. ಆದರೆ ನನ್ನ ಹೆಂಡತಿ ಮಕ್ಕಳು ಇಂತಹ ದೌರ್ಬಲ್ಯಗಳಿಗೆ ಬಲಿಯಾಗದೆ ಮಾಮೂಲಿನಂತೆ ಎಲ್ಲವನ್ನೂ ಮಾಡಿಕೊಂಡು ತಿನ್ನುತ್ತಿದ್ದರೆ ನಾನು
ಅದನ್ನು ಮೂಕ ಪ್ರೇಕ್ಷಕನಂತೆ ಸಹಿಸಿಕೊಂಡಿರಲೆ? ಪುಲಾವಿನ ಘಮಘಮ ಮನೆ ತುಂಬಾ ಹರಡಿದ್ದರೆ ಅದನ್ನು ದೂರೀಕರಿಸಲು ಮನೆಯ ಬಳಿಯೇ ಇರುವ ಗಣೇಶನ ಗುಡಿಯಲ್ಲಿ ಟೆಂಪೊರರಿ ಆಸರೆ ಪಡೆಯಲೆ?
ಅಥವಾ ಧ್ಯಾನ ಮಾಡಲೆ?
ಈಗಾಗಲೇ ನಾನು "ಕುಡಿಯುವುದಿಲ್ಲ, ಧೂಮಪಾನ ಮಾಡುವುದಿಲ್ಲ. ನಾನ್ ವೆಜ್ ತಿನ್ನುವುದಿಲ್ಲ" ಎಂಬ ಈ ತ್ರಿಕಾರಣಗಳಿಗೆ ಸ್ನೇಹಿತರಿಂದ ಗೇಲಿಗೊಳಗಾಗಿದ್ದೇನೆ. ಇದರಿಂದ ನನಗೇನೂ ಕೊರತೆ ಕಂಡುಬಂದಿಲ್ಲದಿದ್ದರೂ ಕ್ಯಾರೆಟ್ ಹಲ್ವ, ರವೆ ದೋಸೆ, ಅವರೆಕಾಯಿ ಉಪ್ಪಿಟ್ಟು, ಈರನಗೆರೆ ಬದನೆಕಾಯಿ ಪಲ್ಯ , ಸೊಪ್ಪಿನ ಹುಳಿ, ಮುಂತಾದವುಗಳನ್ನು ನಾನು ತ್ಯಜಿಸಲು ಸಾಧ್ಯವೆ?
ಹಾಗೆ ಮಾಡಿದೆ ಎಂದುಕೊಳ್ಳಿ. ಆಗ ನಾನು ಮದುವೆಮನೆಗೆ ಹೋದರೆ ನನ್ನ ಕೆಲಸ ಎಂದರೆ ವಧು-ವರರಿಗೆ ಆಶೀರ್ವಾದ ಮಾಡುವುದಷ್ಟೇ ಆಗುತ್ತದೆ. ಡೈನಿಂಗ್ ಹಾಲ್ ಕಡೆ ಇಣುಕಿ ನೋಡುವ ಅಗತ್ಯವೂ ಇರದು. ಊಟವೇ ಬೇಡವೆಂದಮೇಲೆ ಅಡುಗೆ ಹೇಗಿದ್ದರೆ ಏನು, ಐಟಂಗಳು ಏನಿದ್ದರೆ ಏನು? ನಂತರ ನಳಪಾಕದ ಬಗ್ಗೆ ಚರ್ಚೆಯಲ್ಲಿ ಭಾಗವಹಿಸುವ ಅವಕಾಶವೂ ಇರುವುದಿಲ್ಲ.
ಬದುಕಲು ಬ್ರೆಡ್ ಇದ್ದರೆ ಸಾಲದು, ಒಂದಿಷ್ಟು ಜಾಮ್ ಅಥವಾ/ ಮತ್ತು ಬೆಣ್ಣೆ ಸಹ ಬೇಕು. ಆದುದರಿಂದ ನಾನು ತಿನ್ನಲು ಬದುಕಿಲ್ಲದಿರಬಹುದು . ಜಿಹ್ವಾಚಾಪಲ್ಯಕ್ಕಾಗಿಯಾದರೂ ಏನೇನನ್ನೋ ತಿನ್ನಬೇಕಿದೆ.
ನೀವೇನಂತೀರಿ?
(ಚಿತ್ರಕೃಪೆ : ಗೂಗಲ್)
Comments
ಉ: ತಿನ್ನುವುದು ಬೇಡವಾದಾಗ....
ನಮ್ಮ ಆರೋಗ್ಯದ ಗುಟ್ಟು ಇರುವುದು ನಮ್ಮ ಊಟದಲ್ಲೇ,,ನಮ್ಮ ನಮ್ಮ ಹಿರಿಯರಿಂದ ತಲೆ ತಲಾಂತರಗಳಿಂದ ನಮ್ಮ ನಮ್ಮ ಕುಟುಂಬಗಳಲ್ಲಿ ಯಾವ ರೀತಿಯ ಆಹಾರ ಪಧ್ಧತಿ ಇದೆಯೋ ಅದನ್ನೇ ನಾವು ಮುಂದುವರೆಸಿಕೊಂಡು ಹೋದರೆ ಒಳ್ಳೆಯದು. ಯಾಕಂದ್ರೆ ನಮ್ಮ ದೇಹದ ಜೀನ್ಸ್ ಆ ಆಹಾರಕ್ಕೆ ಒಗ್ಗಿಕೊಂಡಿರುತ್ತದೆ. ಬಾಯಿ ರುಚಿಗಂತ ತಿನ್ನುವ ಹೊರಗಿನ ಊಟ ನಾಲಿಗೆಗೆ ರುಚಿ ಕೊಡಬಹುದು ಆದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ನನ್ನ ಅನಿಸಿಕೆ.