ತಿಪ್ಟೂರ್ ತೆಂಗಿನ್ಕಾಯಿ

ತಿಪ್ಟೂರ್ ತೆಂಗಿನ್ಕಾಯಿ

ಬರಹ

{ತೇಜಸ್ವಿಯವರ ಅಲೆಮಾರಿಯ ಅಂಡಮಾನ್ ಪುಸ್ತಕವನ್ನು ನನ್ನ ಹೆಂಡತಿ ಈಗ ಓದುತ್ತಿದ್ದಾಳೆ. ಆದ್ದರಿಂದ ಅದು ಈಗ ಮನೆಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುತ್ತದೆ. ಇಂದು ಬಳಿಗ್ಗೆ ಕಾಫಿ ಕುಡಿಯುತ್ತ ಸುಮ್ಮನೆ ಅದರ ಒಂದು ಪುಟವನ್ನು ತಿರುಗಿಸಿದೆ. ಆ ಪುಟದಲ್ಲಿ, ಶಾಮಣ್ಣನವರ ತೋಟದ ಪಕ್ಕದಲ್ಲಿ ಏತನೀರಾವರಿ ಪಂಪಿನ ಪ್ರಾರಂಭೊತ್ಸವದ ಸಂದರ್ಭದಲ್ಲಿ ನಡೆದ ಒಂದು ಘಟನೆಯಿತ್ತು. ಪೂಜೆ ಮಾಡುತ್ತಿದ್ದ ಪೂಜಾರಿಗೆ ತೆಂಗಿನ ಕಾಯಿಯನ್ನು ಎಲ್ಲಿ ಒಡೆಯಲು ತಕ್ಷಣಕ್ಕೆ ಏನೂ ಸಿಗದೆ, ಪಂಪ್ ಸೆಟ್ಟಿಗೆ ಒಡೆದನಂತೆ. ಆಗ ಆ ಪಂಪ್ ಸೆಟ್ ಎರಡು ಭಾಗವಾಗಿ ಸೀಳುಬಿಟ್ಟಿತಂತೆ! ಅದಕ್ಕೆ ತೇಜಸ್ವಿ, ನಮ್ಮ ತಿಪಟೂರು ತೆಂಗಿನಕಾಯಿ ಅಷ್ಟೊಂದು ಗಟ್ಟಿ ಎಂದುಕೊಳ್ಳಬೇಕೋ, ಅಥವಾ ಈ ಪಂಪ್ ಸೆಟ್ ಅಷ್ಟೊಂದು ದುರ್ಬಲ ಎಂದುಕೊಳ್ಳಬೇಕೋ ಎಂದು ತಮಾಷೆ ಮಾಡುತ್ತಾರೆ. ಆ ತಿಪಟೂರು ತೆಂಗಿನ ಕಾಯಿಯ ಘಟನೆಯನ್ನು ಓದುವಾಗ ನಾನು ತಿಪಟೂರಿನಲ್ಲಿ ಬಿ.ಎಸ್ಸಿ. ಮಾಡುತ್ತಿದ್ದಾಗ ಬರೆದ ‘ತಿಪ್ಟೂರ್ ತೆಂಗಿನ್ಕಾಯಿ’ ಎಂಬ ಕವಿತೆ ನೆನಪಿಗೆ ಬಂತು. ಅದು ನನ್ನ ‘ವೈತರಣೀದಡದಲ್ಲಿ’ ಕವನಸಂಕಲನದಲ್ಲಿ ಸೇರಿದೆ. ಅದನ್ನು ನನ್ನ ಬ್ಲಾಗ್ ಓದುಗರಿಗಾಗಿ ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇನೆ. }

ತಿಪ್ಟೂರ್ ತೆಂಗಿನ್ಕಾಯಿ

ಬೆಳ್ಗಾನ್ ಎದ್ದು
ಸ್ನಾನ ಮಾಡಿ
ಪೂಜೆಗ್ ಕೂತ್ರೆ
ಬೇಕೆಬೇಕು ತಿಪ್ಟೂರ್ ತೆಂಗಿನ್ಕಾಯಿ||

ಪೂಜೆ ಮುಗ್ಸಿ
ಪ್ರಾರ್ಥ್ನೆ ಮುಗ್ಸಿ
ತಿಂಡಿಗ್ ಕೂತ್ರೆ
ಉಪ್ಪಿಟ್ನಲ್ಲು ತಿಪ್ಟೂರ್ ತೆಂಗಿನ್ಕಾಯಿ||

ಮಧ್ಯಾಹ್ನದೂಟದ್
ದುಡ್ಡು ಉಳ್ಸೋಕೆ
ಹೋಟೆಲ್ಗೋಗಿ ಸಿಂಪಲ್ಲಾಗಿ
ಇಡ್ಲಿ ಅಂದ್ರು
ಚಟ್ನೀಲದೆ ತಿಪ್ಟೂರ್ ತೆಂಗಿನ್ಕಾಯಿ||

ಸಂಜೆ ಸುಸ್ತಾಗಿ
ಮನೆಗ್ ಬಂದ್ರೆ
ಹೆಂಡ್ತಿ ತಪ್ದೆ ಕೇಳ್ತಾಳೆ
ತಂದಿದಿರೇನ್ರಿ ತಿಪ್ಟೂರ್ ತೆಂಗಿನ್ಕಾಯಿ||

ಗುಂಡ್ಕಲ್ ದುಂಡಿನಂಗೆ
ನಾರಿನ್ ಸೀರೆ ಉಟ್ಕೊಂಡು
ಮೇಲ್ಮೂರ್ ತೂತು ಕಣ್ಣಿನಾಗೆ
ಒಳ್ಗೊಂದಿಷ್ಟು
ತೀರ್ಥ ಇಟ್ಕೊಂಡೈತೆ ತಿಪ್ಟೂರ್ ತೆಂಗಿನ್ಕಾಯಿ||

ಹಳ್ಳೀಲ್ ಡಿಳ್ಳೀಲ್
ಎಲ್ಲಿ ನೋಡಿದ್ರಲ್ಲಿ
ಕತ್ತು ಮೇಲೆತ್ತಿದ್ರಲ್ಲಿ
ತೆಂಗಿನ ಮರ್‍ದಲ್
ಜೋತಾಡ್ತವೆ ತಿಪ್ಟೂರ್ ತೆಂಗಿನ್ಕಾಯಿ||