ತಿಮಿಂಗಿಲದ ‘ವಾಂತಿ' ಬಗ್ಗೆ ಗೊತ್ತೇ?
ಕಳೆದ ಒಂದೆರಡು ದಿನಗಳ ಹಿಂದೆ ಪತ್ರಿಕೆಯನ್ನು ಓದುತ್ತಿದ್ದಾಗ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ತಿಮಿಂಗಿಲದ ವಾಂತಿ ಪತ್ತೆ ಎಂಬ ವರದಿ ನೋಡಿ ಆಶ್ಚರ್ಯವಾಯಿತು. ಏನಿದು ವಾಂತಿಗೂ ಲಕ್ಷಾಂತರ ರೂಪಾಯಿ ಬೆಲೆ ಇದೆಯಾ? ಇದರಲ್ಲಿ ಸತ್ಯ ಎಷ್ಟು? ಈ ವಾಂತಿ ಯಾವುದಕ್ಕೆ ಉಪಯೋಗವಾಗುತ್ತದೆ? ಎಂಬೆಲ್ಲಾ ಯೋಚನೆಗಳು ನನ್ನ ಮನದಲ್ಲಿ ಹಾದು ಹೋದವು. ಅಂತರ್ಜಾಲ ತಾಣದಲ್ಲಿ ಹುಡುಕಾಡಿದಾಗ ಸ್ವಲ್ಪ ಮಾಹಿತಿಗಳು ದೊರೆತವು.
ಮೇಲಿನ ವರದಿಯ ಪ್ರಕಾರ ಈ ವಾಂತಿ ದೊರೆತದ್ದು ಉತ್ತರ ಕನ್ನಡ ಜಿಲ್ಲೆಯ ಪ್ರವಾಸೀ ಕ್ಷೇತ್ರ ಮುರ್ಡೇಶ್ವರದ ಸಮುದ್ರ ತೀರದಲ್ಲಿ. ಈ ತಿಮಿಂಗಿಲದ ವಾಂತಿಗೆ ಅಂಬೆರ್ ಗ್ರಿಸ್ (Ambergris) ಎನ್ನುತ್ತಾರೆ. ಇದು ಉತ್ಪತ್ತಿಯಾಗುವುದು ತಿಮಿಂಗಿಲದ ಪಿತ್ತರಸದ ನಾಳಗಳಲ್ಲಿನ ಸ್ರವಿಸುವಿಕೆಯಿಂದ. ಇವು ತಿಮಿಂಗಿಲದ ಕರುಳಿನಲ್ಲಿರುತ್ತವೆ. ಕೆಲವೊಮ್ಮೆ ತಿಮಿಂಗಿಲ ಸತ್ತಾಗ ಅದರ ಹೊಟ್ಟೆಯಲ್ಲೂ ಕಂಡು ಬಂದದ್ದು ಇದೆ. ಈ ವಾಂತಿಯ ಬಣ್ಣ ತಿಳಿ ಬೂದು ಅಥವಾ ಕಪ್ಪು ಬಣ್ಣದಲ್ಲಿರುತ್ತದೆ. ಇದು ಉತ್ಪತ್ತಿಯಾಗುವುದು ‘ಸ್ಪರ್ಮ್ ತಿಮಿಂಗಿಲ’ (Sperm Whales) ಎಂಬ ಪ್ರಬೇಧದ ತಿಮಿಂಗಿಲಗಳಲ್ಲಿ ಮಾತ್ರ.
ಈ ವಾಂತಿಯನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದಕ್ಕೆ ಲಕ್ಷಾಂತರ ರೂಪಾಯಿಗಳ ಬೆಲೆ ಇದೆ ಎಂದು ಹೇಳುತ್ತಾರಾದರೂ ಭಾರತದಲ್ಲಿ ಯಾರು ಖರೀದಿಸುತ್ತಾರೆ ಎಂಬುವುದರ ಬಗ್ಗೆ ಮಾಹಿತಿ ಇಲ್ಲ. ಇದು ಸಿಗುವುದು ಅಪರೂಪದಲ್ಲಿ ಅಪರೂಪ. ತಿಮಿಂಗಿಲ ಸಮುದ್ರದಲ್ಲಿ ವಾಂತಿ ಮಾಡಿದಾಗ ಈ ವಸ್ತುವು ಬಹಳ ಸಮಯ ಮೇಲ್ಭಾಗದಲ್ಲಿ ತೇಲುತ್ತಾ ಇರುತ್ತದೆ. ಕೆಲವೊಮ್ಮೆ ಸಮುದ್ರ ತೀರಕ್ಕೂ ಬರುತ್ತದೆ.
ಅಂಬೆರ್ ಗ್ರಿಸ್ ಎಂಬ ಪದವು ಹಳೆಯ ಫ್ರೆಂಚ್ ಭಾಷೆಯ ಪದವಾಗಿದೆ. ಈ ವಾಂತಿಯಲ್ಲಿ ದೊಡ್ಡ ಬಂಡಾಸ್ (ಸ್ಕ್ವಿಡ್) ಜಾತಿಯ ಜಲಚರಗಳ ಕೊಕ್ಕಿನಂತಹ ವಸ್ತುಗಳು ಇರುತ್ತವೆ. ಈ ಅಂಬೆರ್ ಗ್ರಿಸ್ ತಿಮಿಂಗಿಲದ ದೇಹದಲ್ಲಿ ಉತ್ಪಾದನೆಯಾಗಲು ಬಹಳ ವರ್ಷಗಳು ಆಗುತ್ತವೆ. ಇವುಗಳ ಉತ್ಪಾದನೆ ಪ್ರಮಾಣ ಕೇವಲ ೧ ಶೇಕಡಾ ಮಾತ್ರ. ಇದು ಬಹಳ ಅಪರೂಪದಲ್ಲಿ ತಿಮಿಂಗಿಲದ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಕ್ರಿಸ್ಟೋಫರ್ ಕೆಂಪ್ ಎಂಬ ಬರಹಗಾರನು ಇದರ ಬಗ್ಗೆ ‘ತೇಲಾಡುವ ಬಂಗಾರ' (Floating Gold : A Natural (and unnatural) History of Ambergris) ಎಂಬ ಪುಸ್ತಕವನ್ನು ಬರೆದಿದ್ದಾನೆ. ಈ ಪುಸ್ತಕದಲ್ಲಿ ಈ ವಸ್ತುವಿನ ಬಗ್ಗೆ ಅಧಿಕ ಮಾಹಿತಿ ದೊರೆಯುತ್ತದೆ.
ಅಂಬೆರ್ ಗ್ರಿಸ್ ವಸ್ತುವು ಹೆಚ್ಚಾಗಿ ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಿಗುತ್ತದೆ. ಕೆಲವೊಮ್ಮೆ ಭಾರತ, ದ.ಆಫ್ರಿಕಾ, ಚೀನಾ, ಜಪಾನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಕಡಲಿನಲ್ಲೂ ಸಿಕ್ಕಿರುವ ಮಾಹಿತಿ ಇದೆ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಸಾವಿರಾರು ವರ್ಷಗಳ ಹಿಂದಿನ ಅಂಬೆರ್ ಗ್ರಿಸ್ ನ ಪಳೆಯುಳಿಕೆಗಳು ದೊರೆತಿವೆ.
ಏನೇ ಆದರೂ ಇದೊಂದು ಅಪರೂಪದ, ಅಚ್ಚರಿಯ ವಿದ್ಯಮಾನ. ಉತ್ತರ ಕನ್ನಡದಲ್ಲಿ ದೊರೆತ ವಾಂತಿಯ ಭಾಗಗಳನ್ನು ಜಿಲ್ಲೆಯ ಅರಣ್ಯ ಅಧಿಕಾರಿಗೆ ನೀಡಲಾಗಿದೆಯಂತೆ. ಇದನ್ನು ಮುಂದೇನು ಮಾಡುತ್ತಾರೆ ಎಂಬುವುದನ್ನು ಕಾದುನೋಡಬೇಕಾಗಿದೆ. ಏಕೆಂದರೆ ಭಾರತದಲ್ಲಿ ಈ ವಸ್ತು ಸಿಗುವುದು ಬಹಳ ಅಪರೂಪ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇದ್ದರೂ ಭಾರತದಲ್ಲಿ ಇದಕ್ಕೆ ಬೆಲೆ ಸಿಗುತ್ತದೆ ಎಂದು ಹೇಳುವಂತಿಲ್ಲ.
ಚಿತ್ರ ೧: ತಿಮಿಂಗಿಲದ ವಾಂತಿ - ಅಂಬೆರ್ ಗ್ರಿಸ್
೨. ಸ್ಪರ್ಮ್ ತಿಮಿಂಗಿಲ
(ಆಧಾರ ಮಾಹಿತಿ)
ಚಿತ್ರ ಕೃಪೆ: ಅಂತರ್ಜಾಲ ತಾಣಗಳು