ತಿರುಕನೋರ್ವ ..ಊರಮುಂದೆ ಒರಗಿರುತ್ತಲೊಂದು ಕನಸ ಕಂಡ..

ತಿರುಕನೋರ್ವ ..ಊರಮುಂದೆ ಒರಗಿರುತ್ತಲೊಂದು ಕನಸ ಕಂಡ..

ಬರಹ

ದೃಶ್ಯ ೧: ‘ಧಾರವಾಡ’ ಎಂಬ ಮಹಾನಗರಿಯ ಬಸ್ ನಿಲ್ದಾಣ. ಕೊರೆಯುವ ಛಳಿ. ಭಿಕ್ಷೆ ಬೇಡುವ ೮ ವರ್ಷದ ಬಾಲಕನೋರ್ವ ತನ್ನ ಪ್ರೀತಿಯ ಬೀದಿ ನಾಯಿಯೊಂದಿಗೆ ನಡುಗುತ್ತ ಮಲಗಿದ್ದಾನೆ. ಪಕ್ಕದಲ್ಲಿಯೇ ೧೪ ವರ್ಷದ ಅಕ್ಕ, ಆಗಲೇ ೧೦ ತಿಂಗಳ ಕೂಸು ಅವಳ ಕಂಕುಳಲ್ಲಿ. ಅದು ಸಹ ಆಕೆಯನ್ನು ಅಪ್ಪಿ ಮಲಗಿದೆ. ಸುತ್ತಮುತ್ತಲೂ ದುರ್ನಾತ. ಜನ ಅಲ್ಲಲ್ಲಿ ಉಗುಳಿ ಚಿತ್ತಾರ ಮೂಡಿಸಿದ ಕುರುಹುಗಳಿವೆ. ಉಗುಳಿದವರ ಕಲಾತ್ಮಕತೆ ನೋಡಿದರೆ ಓಲಿಂಪಿಕ್ ನಲ್ಲಿ ಉಗುಳಾಟದ ಸ್ಪರ್ಧೆ ಏರ್ಪಡಿಸಿದರೆ ಇವರನ್ನೇ ಭಾರತದ ಪ್ರತಿನಿಧಿಯಾಗಿ ಕಳುಹಿಸಬೇಕು..! ಹಾಗಿತ್ತು ಒರಸೆ.

ದೃಶ್ಯ ೨: ಅದೇ ೮ ವರ್ಷದ ಬಾಲಕ. ಕೆಳಗೆ ಗಾದಿ. ಅದರ ಮೇಲೊಂದು ಹೂವಿನ ಚಿತ್ತಾರವಿರುವ ಬೆಡ್ ಶೀಟ್. ತಲೆಗೆ ಆಸರೆಯಾಗಿ ದಿಂಬು. ಹೊದ್ದು ಕೊಳ್ಳಲು ಸೊಲ್ಲಾಪುರದ ಚಾದ್ದರ. ತನ್ನ ಅಕ್ಕ ಹಾಗು ಆ ಮಗುವಿನೊಂದಿಗೆ ಹಂಚಿಕೊಂಡು ಮಲಗಿದ್ದಾನೆ. ಆತನಿಗೀಗ ಗಾಢ ನಿದ್ದೆ!

ಮೊದಲನೇಯ ದೃಶ್ಯ ವಾಸ್ತವ. ಎರಡನೇಯದು ಕನಸು. ‘ತಿರುಕನೋರ್ವ ಊರಮುಂದೆ ..ಒರಗಿರುತ್ತಲೊಂದು ಕನಸ ಕಂಡ..’ ಎಂಬುದರ ಮುಂದುವರೆದ ಭಾಗ. ವಾಸ್ತವ ಜೀವನದ ಕಷ್ಟ, ನಷ್ಟ ಹಾಗು ದು:ಖ-ದುಮ್ಮಾನಗಳನ್ನು ಮರೆಯಲು, ತುಮುಲಗಳನ್ನು ಪರಿಷ್ಕರಿಸಲು ಕನಸು ಕಾಣುವುದೇ ಯೋಗ್ಯ ದಾರಿ. ಈ ವಾಸ್ತವ ಬದುಕಿನ ಜಂಜಡಗಳಿಗೆ ಪರಿಹಾರ ಕಾಣಲು ಕನಸು ಕಣುವವರೇ ಒಟ್ಟು ಬದುಕನ್ನು ಸುಂದರಗೊಳಿಸುವಂಥವರು. ಇಂಥ ಒಬ್ಬ ಕನಸುಗಾರ ಕೆನಡಾ ದೇಶದ ಮರ್ರೆ ಡ್ರೈಡನ್.

ಅವರು ೩೫ ವರ್ಷಗಳ ಹಿಂದೆ ಭಾರತದಂತಹ ಅಭಿವೃಧ್ಧಿಶೀಲ ದೇಶದಲ್ಲಿ ಪ್ರವಾಸಕ್ಕೆ ಬಂದಾಗ ಈ ಮೊದಲ ದೃಶ್ಯ ಕಂಡರು. ತಕ್ಷಣವೇ ೨ನೇ ದೃಶ್ಯದ ಕನಸು ಕಂಡರು. ಮರ್ರೆ ಡ್ರೈಡೆನ್ ಕೆನಡಕ್ಕೆ ಹಿಂದಿರುಗಿದ ಮೇಲೆ ತಮ್ಮ ಸ್ನೇಹಿತರನೆಲ್ಲ ಒಂದೆಡೆ ಸೇರಿಸಿದರು. ‘ನಾವೆಲ್ಲ ದೇಣಿಗೆ ನೀಡಿ ಬಡ ಮಕ್ಕಳಿಗೆ ಮಲಗಲು ಹಾಸಿಗೆಗಳನ್ನು ದಾನವಾಗಿ ಕೊಡೋಣ’ ಎಂದರು. ಹೀಗೆ ಆರಂಭಗೊಂಡ ಸಂಸ್ಥೆಗೆ ಈಗ ೪೦ ವರ್ಷ. ಸಂಸ್ಥೆಯ ಹೆಸರು ‘ಸ್ಲೀಪಿಂಗ್ ಚಿಲ್ಡ್ರನ್ ಅರೌಂಡ್ ದಿ ವರ್ಲ್ಡ’.
ಈ ಸಂಸ್ಥೆ ಆರಂಭಗೊಂಡ ಮೊದಲ ವರ್ಷವೇ (೧೯೭೦) ಡ್ರೈಡನ್ ಪುಣೆಗೆ ಭೇಟಿ ನೀಡಿದ್ದರು. ಅಲ್ಲಿ ೫೦ ಮಕ್ಕಳಿಗೆ ಗಾದಿ, ದಿಂಬು, ಬೆಡ್ ಶೀಟ್ ಹಾಗು ಚಾದರ ಕೊಟ್ಟರು. ಅಂದಿನಿಂದ ಈ ಸಂಸ್ಥೆ ಪ್ರತಿ ವರ್ಷ ೩೦ ದೇಶಗಳ ೪.೫ ಲಕ್ಷ ಬಡ ಮಕ್ಕಳಿಗೆ ಹಾಸಿಗೆ ವಿತರಿಸುತ್ತದೆ. ಅದಕ್ಕಾಗಿ ಪ್ರತಿ ವರ್ಷ ೧.೭೦ ಕೋಟಿ ಕೆನಡಾ ಡಾಲರ್ ಹಣ ವೆಚ್ಚ ಮಾಡುತ್ತದೆ. ಅದರಲ್ಲಿ ಭಾರತಕ್ಕೆ ೧೦ ದಶಲಕ್ಷ ಡಾಲರ್ ಖರ್ಚಿಸಲ್ಪಡುತ್ತದೆ.

ಬೆಳಗಾವಿ, ಹುಬ್ಬಳ್ಳಿ, ರಾಣೆಬೆನ್ನೂರು ಹಾಗು ಕುಂದಗೋಳಗಳಲ್ಲಿ ವಿವಿಧ ಸ್ವಯಂ ಸೇವಾ ಸಂಸ್ಥೆಗಳು ಈ ಯೋಜನೆ ೧೯೯೮ ರ ಸುಮಾರಿಗೆ ಕೈಗೆತ್ತಿಕೊಂಡು ಬಡ ಮಕ್ಕಳಿಗೆ ಬೆಚ್ಚಗಿನ ನಿದ್ರೆ ದೊರಕಿಸಿ ಕೊಟ್ಟಿದ್ದರು. ಹಲವು ವರ್ಷ ಈ ಯೋಜನೆ ಜಾರಿಯಲ್ಲಿತ್ತು. ೧೯೯೮ರಲ್ಲಿ ಡ್ರೈಡನ್ ಅವರಿಗೆ ೮೮ ವರ್ಷ ವಯಸ್ಸಾಗಿತ್ತು. ಆದರೂ ಛಲ ಬಿಡದೇ ಭಾರತದಾದ್ಯಂತ ಪ್ರವಾಸ ಮಾಡಿ ಈ ಕಾರ್ಯ ಯಶಸ್ವಿಗೊಳಿಸಿದ್ದರು. ಆದರೆ ಇಂದು ಅದನ್ನು ಮುಂದೆವರೆಯಿಸುವ ಅವಶ್ಯಕತೆ ಇದೆ. ಇಂತಹ ಮನಕಲಕುವ ಸಂಗತಿಗಳಿಗೆ ನಾವು ಹೃದಯದಿಂದ ಸ್ಪಂದಿಸಬೇಕಿದೆ.

‘ಸರಕಾರದ ಕೆಲಸ ನೌಕರರಿಗೆ ದೇವರ ಕೆಲಸವಾಗಿರಲಿ. ನಾವು ಜನರ ಕೆಲಸ ಮಾಡೋಣ’. ಡ್ರೈಡನ್ ಹೇಳಿದ ಈ ಮಾತು ನಮಗಿನ್ನೂ ಅರ್ಥವಾಗಬೇಕಿದೆ.

ಮತ್ತೆ ಸಹೃದಯ ಮರ್ರೆ ಡ್ರೈಡೆನ್ ನೆನಪಾಗುತ್ತಾರೆ. ಜಾಗೃತ ನಾಗರಿಕ ಡಾ.ಅನಂತ ಹುಯಿಲಗೋಳ, ಜಾಗೃತ ಭಾರತದ ನ್ಯಾಯವಾದಿ ವೆಂಕಟೇಶ ಕುಲಕರ್ಣಿ ಮತ್ತೆ ಟೊಂಕಕಟ್ಟಿ ನಿಂತು ಈ ಇಳಿ ವಯಸ್ಸಿನಲ್ಲಿ ‘ಅವೇ ಸಮಸ್ಯೆಗಳಿಗೆ’ ಹೊಸದಾಗಿ ಹೋರಾಟ ಮಾಡಲಿ ಎನ್ನುತ್ತದೆ ಮನಸ್ಸು.

ಅಭಿವೃದ್ಧಿ ಎಂದರೆ -‘Where we were; there we are!' ಅಲ್ಲವಲ್ಲ. ನಾಳಿನ ನಾಡಿನ ನಾಯಕರಿಗೆ ನಮ್ಮ ಪ್ರಯತ್ನ, ಪ್ರಜ್ನೆ ಕಿರಿಕಿರಿ ಎನ್ನಿಸಬಾರದಷ್ಟೇ?