ತಿರುಕ್ಕುರಳ್

‘ತಿರುಕ್ಕುರಳ್' ಪುಸ್ತಕವು ಕನ್ನಡದಲ್ಲಿ ರಾಧಾಕೃಷ್ಣ ಇವರಿಂದ ಭಾವಾನುವಾದಗೊಂಡು ಹೊರಬಂದಿದೆ. ಈ ಪುಸ್ತಕವು ‘ಅರಿವಿನೆಡೆಗೆ ಅರಿವಿನ ಹೆಜ್ಜೆ...' ಎಂದು ಮುಖಪುಟದಲ್ಲಿ ಮುದ್ರಿಸಿದ್ದಾರೆ. ಪುಸ್ತಕವನ್ನು ಮಹಾ ದಾರ್ಶನಿಕ ಕವಿ ತಿರುವಳ್ಳವವರಿಗೆ ಅರ್ಪಣೆ ಮಾಡಲಾಗಿದೆ.
ರಾಧಾಕೃಷ್ಣರು ತಮ್ಮ ಅನುಭವವನ್ನು ‘ಬಿಟ್ಟೆನೆಂದರೂ ಬಿಡದೀ ಮಾಯೆ' ಎಂಬ ಲೇಖನದಲ್ಲಿ ಹಂಚಿಕೊಂಡಿರುವುದು ಹೀಗೆ - ಹನ್ನೆರಡು ವರ್ಷಗಳ ಹಿಂದೆ ನನ್ನ ಗೆಳೆಯ ರಾಜೇಶ್ ಶೇಟ್ ರೊಂದಿಗೆ ತಿರುವನಂತಪುರ ಮತ್ತು ಕನ್ಯಾಕುಮಾರಿಯ ಪ್ರವಾಸಕ್ಕೆ ಹೋಗಿದ್ದೆವು. ಕನ್ಯಾಕುಮಾರಿಗೆ ತೀರ ಹತ್ತಿರ ಇರುವ ಒಂದು ಖಾಸಗಿ ಅತಿಥಿಗೃಹದಲ್ಲಿ ತಂಗಿದ್ದೆವು. ಸಾಮಾನ್ಯ ಅತಿಥಿಗೃಹವಾಗಿದ್ದರೂ ಅದರಲ್ಲಿ ಒಂದು ಸಣ್ಣ ವಸ್ತು ಸಂಗ್ರಹವಿತ್ತು. ನಾವಿಬ್ಬರೂ ಸುತ್ತಾಡುವಾಗ ನನ್ನ ಗೆಳೆಯನ ಗಮನ ಒಂದು ಇಂಗ್ಲೀಷ್ ಪುಸ್ತಕದ ಮೇಲೆ ಬಿತ್ತು. ನೋಡಿ ‘ತಿರುಕ್ಕುರಳ್’ ಎಂದು ಉದ್ಗಾರ ತೆಗೆದ. ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದುದರಿಂದ ಆ ಪುಸ್ತಕದ ಹೆಸರು ಮತ್ತು ಕೃತಿಕಾರನ ಹೆಸರನ್ನು ಓದಿದ್ದೆ. ಆದರೆ ಈವರೆಗೆ ನೋಡಿರಲಿಲ್ಲ. ಶ್ರೀ ಯೋಗಿ ಶುದ್ಧಾನಂದ ಭಾರತಿಯವರು ತಮಿಳಿನಿಂದ ಇಂಗ್ಲಿಷಿಗೆ ದ್ವಿಪದಿಯಲ್ಲಿ ಭಾಷಾಂತರ ಮಾಡಿ, ಸಾರಾಂಶವನ್ನು ನೀಡಿರುವ ಪುಸ್ತಕ. ಗೆಳೆಯ ತೆಗೆದುಕೊಳ್ಳಿ, ಇದು ತಮಿಳರ ಅತಿ ಶ್ರೇಷ್ಠವಾದ ಕೃತಿ ಎಂದ. ನನಗೆ ನಿಜಕ್ಕೂ ಆಸಕ್ತಿ ಇರಲಿಲ್ಲ. ಪುಸ್ತಕ ಹಲವು ಸಮಯದಿಂದ ಅಲ್ಲೇ ಇದ್ದು, ಧೂಳು ತಿಂದು ತಿಂದು ಹಳತಾಗಿತ್ತು. ಬೇಕು-ಬೇಡಗಳ ನಡುವೆ ಜೀಕಾಟವಾಡಿ ಪುಸ್ತಕದ ದರವನ್ನು ವಿಚಾರಿಸಿದೆವು. ಅರ್ಧ ಬೆಲೆಯಲ್ಲಿ ಕೊಡಲು ಒಪ್ಪಿದಾಗ ತೆಗೆದುಕೊಂಡೆ.
ಈ ಘಟನೆ ನಡೆದು ಹೋದ ಎರಡು ವರ್ಷದ ನಂತರ ಕುದ್ರೋಳಿಯಲ್ಲಿ ಬಾಡಿಗೆ ಮನೆ ಮಾಡಿದ್ದೆ. ಯಾವುದೋ ಒಂದು ದಿನ ಬೆಳಗಾತ ‘ತಿರುಕ್ಕುರಳ್’ ಪುಸ್ತಕವನ್ನು ಕೈಗೆತ್ತಿಕೊಂಡು ಓದಲು ತೊಡಗಿದೆ. ಅದರ ಮೊದಲ ಕುರುಳ್ ನನ್ನನ್ನು ಆಕರ್ಷಿಸಿತ್ತು. ಮನೆಯ ಮಾಲೀಕರು ಓದಲು ಕೊಟ್ಟ ಋಗ್ವೇದದ ಪುಸ್ತಕದ ಕೆಲವು ಋಕ್ಕುಗಳು ಸ್ವಲ್ಪಮಟ್ಟಿಗೆ ತಾಳೆಯಾದವು....."
ತಿರುಕ್ಕುರಳ್ ಪುಸ್ತಕದಲ್ಲಿರುವ ಕೆಲವು ದ್ವಿಪದಿಗಳು ಇಲ್ಲಿವೆ
* ಶ್ರೇಯಸ್ಸನ್ನು ಮತ್ತು ಪ್ರೇಯಸ್ಸನ್ನು ತಂದುಕೊಡುವ ಧರ್ಮಕ್ಕಿಂತ ಮಿಗಿಲಾದ ಭಾಗ್ಯಗಳು ಈ ಲೋಕದಲ್ಲಿ ಬೇರೆ ಯಾವುದುಂಟು?
* ಒಬ್ಬಾತನ ಮನಸ್ಸು ನಿರ್ಮಲವಾಗಿದ್ದರೆ ಧರ್ಮ, ಉಳಿದೆಲ್ಲವೂ ಬರಿಯ ಆಡಂಬರವಿಲ್ಲದೆ ಬೇರೇನೂ ಅಲ್ಲ.
* ಧರ್ಮದ ಸದಾಚಾರವನ್ನು ನಾಳೆಗೆ ಮುಂದೂಡದೆ ಇಂದೇ ಇಲ್ಲೇ ಆಚರಿಸಬೇಕು. ಹಾಗಿದ್ದರೆ ಮಾತ್ರ ಮರಣ ಕಾಲದಲ್ಲಿ ಅದು ಖಂಡಿತವಾಗಿಯೂ ಆಶ್ರಯವನ್ನು ನೀಡುತ್ತದೆ,
ಇವು ಕೆಲವು ಸ್ಯಾಂಪಲ್ ಗಳಷ್ಟೇ. ಪುಸ್ತಕದಲ್ಲಿ ನೂರಕ್ಕೂ ಅಧಿಕ ದ್ವಿಪದಿಗಳಿವೆ. ಓದಲು ಪುಸ್ತಕವನ್ನು ಕೆಳಗಿಡಲು ಮನಸ್ಸಾಗದು. ಪುಸ್ತಕ ತುಳು ಭಾಷೆಯಲ್ಲೂ ಮುದ್ರಿತವಾಗಿದೆ. ಬಹಳ ಸುಂದರವಾದ ಮುಖಪುಟವನ್ನು ಹೊಂದಿದೆ.