ತಿರು ಯತಿರಾಜ ಮಠದ ಪೀಠಾಧಿಪತಿಯಾಗಬೇಕೆ..? ಖಂಡಿತಾ ಬೇಡ..!
ತಿರು ಪರಿವಾರದವರೆಲ್ಲ ಈ ಲೇಖನ ಓದಿ ಪ್ರತಿಕ್ರಿಯಿಸಿ....
ಎಲ್ಲಿಯ ಮೇಲುಕೋಟೆ-ಎಲ್ಲಿಯ ಮಚ್ಚೇರಿ..?
ನನ್ನ ಮಚ್ಚೇರಿ ಗ್ರಾಮಕ್ಕೆ ಚೆಲುವನಾರಾಯಣನಂತೆ ಬಂದವರು ತಿರು ಮಾಮ. ರಾಮಾನುಜಾಚಾರ್ಯ ರಬಗ್ಗೆ ತಿಳಿದಿದ್ದೇ ತಿರು ಅವರಿಂದ. ಮೇಲುಕೋಟೆಯ ದರ್ಶನವಾದದ್ದೂ ತಿರು ಅವರಿಂದ. ಅತ್ಯಂತ ಎಡಬಿಡಂಗಿತನದ ಸಾಕಾರ ಮೂರ್ತಿಯಾದಂತಹ ನನ್ನಂತಹ ಅನೇಕರ ಪಾಲಿಗೆ ಗುರುವಾಗಿರುವವರು ತಿರು ಮಾಮ.
ರಾಮಾನುಜರು ಹಾಕಿಕೊಟ್ಟ ದಾರಿಯಲ್ಲಿಯೇ ನಡೆದವರು ತಿರು. ಸ್ವಾರ್ಥವಿಲ್ಲದೇ ತಾಯಿಯಂತಹ ಪ್ರೀತಿಯನ್ನು ಎಲ್ಲರಿಗೂ ಹಂಚಿ ಮಾನವ ಧರ್ಮದ ಸಾರವನ್ನು ನಮಗೆ ತಿಳಿಸಿದವರು. ಶ್ರೀ ಕೃಷ್ಣನನ್ನು ನಮ ಗೆ ಹತ್ತಿರಾಗಿಸಿದವರು. ಸಾಹಿತ್ಯ-ಕಲೆ-ಸಂಗೀತ-ಆಧ್ಯಾತ್ಮ ದಲ್ಲಿ ಆಸಕ್ತಿ ಮೂಡಿಸಿದವರು ಅವರು. ಅವರದೇ ಆದ ಪರಿವಾರದಲ್ಲಿ ಸೇರಿದವರೆಲ್ಲರಿಗೂ ತಿರು ಅವರ ರಕ್ಷೆ ಇದೆಯೆಂಬುದೇ ಒಂದು ಧೈರ್ಯದ ಸಂಗತಿಯಾಗಿತ್ತು. ಎಂತಹ ಸಂಧರ್ಭವೇ ಬರಲಿ ಅದನ್ನು ಎದುರಿಸಲು ಬೇಕಾದ ಮಾನಸಿಕ ಸ್ಥೈರ್ಯವನ್ನು ನಮಗಿತ್ತವರು ತಿರು. ಅವರ ನಿಷ್ಕಲ್ಮಷ ಹೃದಯದ ಪ್ರೀತಿಯನ್ನು ಅನುಭವಿಸಿದವರೆಲ್ಲರಿಗೂ ತಿರು ಎಂದರೆ "ಗುರು". ಅವರ ಮಾರ್ಗ ದರ್ಶನದಲ್ಲಿ ಬಹುಶ: ಎಲ್ಲರಿಗೂ ಸರಿಯಾದ ದಾರಿ ಸಿಕ್ಕಿತ್ತು. ಜೀವಿತೋದ್ಧೇಶ ಏನು ಎಂಬ ಅರಿವಾಗಿತ್ತು.
ಆದರೆ ವೈಯುಕ್ತಿಕವಾಗಿ ನನಗೆ ಆಘಾತಕಾರಿ ವಿಚಾರವೊಂದು ಅರಿವಿಗೆ ಬಂದಿದೆ. ನಮ್ಮ ಪ್ರೀ ತಿಯ ತಿರುಮಾಮ ಯತಿರಾಜ ಮಠದ ಪೀಠಾಧಿಪತಿಯಾಗುತ್ತಾರೆ ಎಂಬ ಸುದ್ದಿ ಕೇಳಿದೆ. ಅಧಿಕೃತವಾಗಿ ಸನ್ಯಾಸ ಸ್ವೀಕರಿಸದಿದ್ದರೂ ಸನ್ಯಾಸ ಜೀವನವನ್ನೇ ನಡೆಸುತ್ತಿರುವ ಸಾತ್ವಿಕ ಜೀವಿ ತಿರು ಅವರು ಸನ್ಯಾಸ ಸ್ವೀಕರಿಸಬೇಕೆ..? ಅವರು ಸನ್ಯಾಸಿ ಎಂಬ ಅಧಿಕೃತ ಮೊಹರು ಅಗತ್ಯವಿದೆಯೇ? ಯತಿರಾಜ ಮಠದ ಬಗ್ಗೆ -ಆಚಾರ್ಯ ರಾಮಾನುಜರ ಬಗ್ಗೆ ನಮಗೆಲ್ಲ ಅತೀವ ಗೌರವವಿದೆ. ಆದರೆ ಯತಿರಾಜ ಮಠದ ಪೀಠಾಧಿಪತಿಯಾಗಿ ತಿರು ಅವರನ್ನು ನೋಡಲು ಖಂಡಿತಾ ನಮಗೆ ಸಾಧ್ಯವಿಲ್ಲ. ಏಕೆಂದರೆ ಆಗಸದಲ್ಲಿ ಸ್ವಚ್ಚಂಧವಾಗಿ ಹಾರುತ್ತಿರುವ ಹಕ್ಕಿಗೂ-ಪಂಜರದಲ್ಲಿ ಬಂದಿಯಾಗಿರುವ ಹಕ್ಕಿಗೂ ವ್ಯತ್ಯಾಸವುಂಟು. ತಿರು ಮಾಮ ಖಂಡಿತಾ ಯಾರ ಕಟ್ಟುಪಾಡುಗಳಲ್ಲಿ ಬಂದಿಯಾಗದೆ ಸ್ವಚ್ಚಂದವಾಗಿದ್ದವರು. ನೊಂದವರ ಬಳಿ ತಾವಾಗಿಯೇ ಹೋಗಿ ಅವರ ಕಣ್ಣೀರೊರೆಸಿದ ಮಹಾನ್ ವ್ಯಕ್ತಿ. ನೂರಾರು ಜನರಿಗೆ ದಾರಿದೀಪವಾಗಿದ್ದಾರೆ. ಇನ್ನೂ ಅನೇಖ ಕಾರ್ಯಗಳು ಅವರಿಗಾಗಿ ಕಾಯುತ್ತಿದೆ.
ಆದರೆ ನಮ್ಮ ತಿರು ಮಾಮ ಅವರ ನೋಟವೇ ಬೇರೆ. ಅವರನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಹೋಗಿ ನೋಡಬಹುದು. ತಮ್ಮ ನೋವು ತೋಡಿಕೊಂಡು ಹಗುರಾಗಬಹುದು. ಸಮಸ್ಯೆಗೆ ಪರಿಹಾರವನ್ನೂ ಕಂಡುಕೊಳ್ಳಬಹುದು. ನಮ್ಮ ಜೀವನದ ಮಾರ್ಗದರ್ಶಕ ಗುರುವಾಗಿ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯಬಹುದು.
ತಿರು ಮಾಮ ಪೀಠಾಧಿಪತಿಯಾದರೆ ಇದು ಸಾಧ್ಯವೇ..? ನಾವು ಅವರ ಬಳಿ ಮಾತನಾಡಲು ಸಾಧ್ಯವೇ? ಹಕ್ಕಿಯಂತೆ ಸ್ವಚ್ಚಂದವಾಗಿರುವ ತಿರುಮಾಮ ನಾಲ್ಕು ಗೋಡೆಯ ಮಧ್ಯೆ ಬಂದಿಯಾಗಿರುವುದನ್ನು ನೋಡಲು ಸಾಧ್ಯವೇ? ತಿರು ಪರಿವಾರಕ್ಕೆ ಆಗ ಏನು ಹೆಸರಿಡಬೇಕು..?"ತಿರು ಕೈ ಬಿಟ್ಟ ಪರಿವಾರ" ಅಂತಲೇ? ಈಗ ತಿರು ಮಾಮ ನಡೆಸುತ್ತಿರುವ ಪ್ರಕಲ್ಪಗಳ ವಿಚಾರವೇನು? ತಿರು ಎಂದರೆ ತಮ್ಮ ಮಾರ್ಗದರ್ಶಿಯಾಗಿ, ಗುರುವಾಗಿ, ಮನೆಯ ಹಿರಿಯನಾಗಿ ನೋಡುತ್ತಿರುವ ನನ್ನಂತಹ ನೂರಾರು ಜನರಿಗೆ ತಿರು ಅವರನ್ನು ಕಳೆದುಕೊಂಡು ಇರಲಾಗುತ್ತದೆಯೇ..?
ತಿರು ಮಾಮ ಯಾವುದೇ ಕಾರಣಕ್ಕೂ ಯತಿರಾಜ ಮಠದ ಪೀಠಾಧಿಪತಿಯಾಗಿ ಹೋಗಬಾರದು. ರಾಮಾನುಜರ ಸೇವೆಯನ್ನು ಪೀಠಾಧಿಪತಿಯಾಗಿಯೇ ಮಾಡಬೇಕಾಗಿಲ್ಲ. ಹಾಗೆಂದು ರಾಮಾನುಜರು ಹೇಳಿಯೂ ಇಲ್ಲ. ಒಂದು ಪೀಠ ಮಾಡುವುದಕ್ಕಿಂತ ಹೆಚ್ಚಿನ ರಾಮಾನುಜಾಚಾರ್ಯರ ಸೇವೆಯನ್ನು ತಿರು ಮಾಮ ಪೀಠಾಧಿಪತಿ ಆಗದೆಯೇ ಮಾಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಒಂದು ಸಮಾಜಕ್ಕೆ ಸೀಮಿತವಾಗಿ ತಿರು ಕಳೆದು ಹೋಗಬಾರದು. ಅವರು ಎಲ್ಲರಿಗೂ ಸಿಗಬೇಕು.
ರಾಮಾನುಜರು ಹೇಳಿದ್ದ ಪ್ರಮುಖ ಮತ್ತು ಶ್ರೀ ವೈಷ್ಣವ ಸಿದ್ದಾಂತದ ಮುಖ್ಯ ಲಕ್ಷಣ ಎಂದರೆ-"ಯಾರ ಮನಸ್ಸಿಗೂ ಬೇಜಾರು ಮಾಡಬೇಡ" ಎಂಬುದು.
ಹಾಗಾದರೆ ನಮ್ಮನ್ನೆಲ್ಲಾ ಬಿಟ್ಟು ತಿರು ಮಾಮಾ ಹೋಗಿ ಬೇಸರ ಮಾಡುತ್ತಾರೆಯೇ..? ಇದೇ ರಾಮಾನುಜರ ಸೂಕ್ತಿಯೇ..?
ತಿರು ಪರಿವಾರ ದ ಸದಸ್ಯರೇ...ದಯಮಾಡಿ ಪ್ರತಿಕ್ರಿಯೆ ನೀಡಿ..