ತಿಳಿಮುಗಿಲ ತೊಟ್ಟಿಲಲಿ ಚಂದಿರ

ತಿಳಿಮುಗಿಲ ತೊಟ್ಟಿಲಲಿ ಚಂದಿರ

ಕವನ

ಬಾನಿನ ಅಂಗಳ ಇರುಳಲಿ ಹೊಳೆದಿದೆ

ಮೇನೆಯು ಹೊರಟಿದೆ ಮೆರವಣಿಗೆ

ಸೋನೆಯ ಹನಿಯದು ಅಕ್ಷತೆ ಹಾಕಿದೆ

ಯಾನದಿ ಸುಂದರ ಬರವಣಿಗೆ..

 

ಚಂದಿರ ತೊಟ್ಟಿಲು ಮಿಂಚಿದೆ ಬಾನಲಿ

ಅಂದದ ಹಾಲ್ನೊರೆ ಬೆಳಕಾಗಿ

ಗಂಧದಿ ಸೆಳೆಯುತ ಸೋಮನ ಕರೆಯಲಿ

ಮಂದದಿ ಸೂಸುವ ನಗುವಾಗಿ...

 

ಮಗುವಿಗೆ ಅಕ್ಕರೆ ಚಂದ ಮಾಮನು

ಪಗಿನದಿ ಹರಿಸುವ ಒಲವನ್ನು

ಜಗದೊಳು ಸೊಬಗಿನ ಇರುಳಿಗೆ ಹಂದರ

ಯುಗದಲಿ ನೀಡುವ ಬೆಳಕನ್ನು....

 

ಕಂದನ ಊಟಕೆ ಮೋಡದ ಮರೆಯಲಿ

ತಂದನು ರಾತ್ರಿಗೆ ಮೋಜನ್ನು

ಬಂದನು ಸಂತಸ ಮಗುವನು ಮೆರೆಸುತ

ಚಂದನ ವನದಲಿ ಸೊಬಗನ್ನು...

 

ತಂಪಿನ ಗಾಳಿಲಿ ಮಿಂದುತ ತಿಂಗಳು

ಕಂಪನು ಸೂಸುತ ಬರುತಿಹನು

ಇಂಪಿನ ಕಲರವ ಹಕ್ಕಿಯ ಸಂಗಡ

ಸೊಂಪನು ತರುತಲಿ ಬೀಗುವನು...

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್