ತಿಳಿರುತೋರಣ ; ಪರ್ಣಮಾಲೆ - 5

ತಿಳಿರುತೋರಣ ; ಪರ್ಣಮಾಲೆ - 5

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀವತ್ಸ ಜೋಶಿ
ಪ್ರಕಾಶಕರು
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ -೫೮೦೦೨೦
ಪುಸ್ತಕದ ಬೆಲೆ
ರೂ.೨೨೦.೦೦, ಮುದ್ರಣ: ೨೦೨೦

ದೂರದ ಅಮೇರಿಕಾ ದೇಶದಿಂದ ‘ವಿಶ್ವವಾಣಿ' ಪತ್ರಿಕೆಗೆ ಪ್ರತೀ ಭಾನುವಾರ ಹೊಸ ಹೊಸ ವಿಚಾರಗಳನ್ನು ಹೊತ್ತುಕೊಂಡು ಅಂಕಣವನ್ನು ಬರೆಯುವವರು ಶ್ರೀವತ್ಸ ಜೋಶಿ. ವಿಶ್ವವಾಣಿಗೂ ಮೊದಲು ವಿಜಯ ಕರ್ನಾಟಕ ಪತ್ರಿಕೆಗೆ ಬರೆಯುತ್ತಿದ್ದರು. ವಿಶ್ವವಾಣಿ ಪತ್ರಿಕೆಗೆ ಅಂಕಣ ಬರೆಯಲು ಶುರು ಮಾಡಿದ ಬಳಿಕ ಪರ್ಣಮಾಲೆ ೩ ಮತ್ತು ೪ ಪುಸ್ತಕಗಳು ಹೊರಬಂದವು. ಅದೇ ತಿಳಿರುತೋರಣ ಅಂಕಣ ಬರಹಗಳ ಸಂಗ್ರಹ ಸರಣಿಯಲ್ಲಿ ಪರ್ಣಮಾಲೆಯ ೫ನೇ ಭಾಗ ಪುಸ್ತಕವಾಗಿ ಪ್ರಕಟವಾಗಿದೆ.  

ಈ ಪುಸ್ತಕದ ಬೆನ್ನುಡಿಯಲ್ಲಿ ಅಂಕಣಕಾರ, ಸಾಹಿತಿ ಜೋಗಿಯವರು ಬರೆದ ಮಾತುಗಳು ಬಹಳ ಸೊಗಸಾಗಿವೆ. ಅವರು ಬರೆಯುತ್ತಾರೆ “ಇಂಗ್ಲಿಷ್ ಸಾಹಿತ್ಯಲೋಕದ ಸೊಗಸೇನೆಂದರೆ ಅಲ್ಲಿ ವೈವಿಧ್ಯಮಯ ವಿಚಾರಗಳನ್ನು ಕುರಿತ ಪುಸ್ತಕಗಳು ಪ್ರಕಟವಾಗುತ್ತಿರುತ್ತವೆ. ಸಾಹಿತ್ಯ ಅಂದರೆ ಕೇವಲ ಕತೆ, ಕಾದಂಬರಿ, ಕವಿತೆ, ವಿಮರ್ಶೆ ಅಷ್ಟೇ ಅಲ್ಲ. ನಮ್ಮಲ್ಲೂ ಡಿವಿಜಿ, ಜೆ.ಪಿ.ರಾಜರತ್ನಂ, ಶಿವರಾಮ ಕಾರಂತ-ಇವರೆಲ್ಲ ಯಾವ್ಯಾವುದರ ಬಗ್ಗೆಯೋ ಸಲೀಸಾಗಿ ಬರೆದುಬಿಡುತ್ತಿದ್ದರು.

ಕನ್ನಡದಲ್ಲಿ ಹೀಗೆ ನಾವ್ಯಾರೂ ಮುಟ್ಟದ ಸಂಗತಿಗಳನ್ನು ಕುರಿತು ಬರೆಯುವವರಲ್ಲಿ ಶೀವತ್ಸ ಜೋಶಿ ಒಬ್ಬರು. ಅವರ ನೆನಪಿನ ಶಕ್ತಿ ಮತ್ತು ವಿಷಯ ವಿಸ್ತಾರವೂ ಅಚ್ಚರಿ ಹುಟ್ಟಿಸುವಂತಿದೆ. ಅದಕ್ಕೆ ಬೇಕಾದ ಅಧ್ಯಯನ ಶೀಲತೆಯೂ ಅವರಲ್ಲಿದೆ. ಇಲ್ಲಿಯ ಯಾವುದೇ ಒಂದು ಲೇಖನವನ್ನು ತೆರೆದು ಓದಿದರೂ ಅದರಲ್ಲಿ ನಿಮಗೆ ಎಷ್ಟೋ ಹೊಸ ಸಂಗತಿಗಳು ಗೊತ್ತಾಗುತ್ತವೆ; ಆಲೋಚನೆಗಳು ಮನಸ್ಸಿಗೆ ಹೊಳೆಯುತ್ತವೆ. ‘ನಾವು ಇಲ್ಲಿಯ ತನಕ ಇದನ್ನು ಗಮನಿಸಿಯೇ ಇರಲಿಲ್ಲವಲ್ಲ ! ಎಂದು ಅನಿಸುವುದೂ ಇದೆ. ಒಟ್ಟಾರೆಯಾಗಿ ಓದುಗರನ್ನು ಅವಕ್ಕಾಗಿಸುವ, ಹೊಸ ವಿಚಾರಗಳನ್ನು ಅರಿಯುವಂತೆ ಮಾಡುವ ಅನೇಕ ಸಂಗತಿಗಳು ನಿಮಗಿಲ್ಲಿ ಸಿಗುತ್ತವೆ.”

ನಿಜಕ್ಕೂ ಜೋಗಿಯವರ ಮಾತು ನೂರಕ್ಕೆ ನೂರು ಸತ್ಯ ಎಂದು ಈ ಪುಸ್ತಕದ ಬರಹಗಳನ್ನು ಓದುವಾಗ ಅರ್ಥವಾಗುತ್ತದೆ. ನಮಗೆ ತಿಳಿದೇ ಇರುವ ದೀಪದ ಮಹಿಳೆ ಫ್ಲೊರೆನ್ಸ್ ನೈಟಿಂಗೇಲ್, ಚುಟುಕುಗಳ ಬ್ರಹ್ಮ ದಿನಕರ ದೇಸಾಯಿ, ಚಂದ್ರನ ಮೇಲೆ ಮೊದಲು ಕಾಲೂರಿದ ಗಗನ ಯಾತ್ರಿ ಇವರೆಲ್ಲರ ಬಗ್ಗೆ ನಮಗೆ ತಿಳಿಯದೇ ಇರುವ ಹಲವಾರು ಸಂಗತಿಗಳನ್ನು ತಿಳಿಸಿ ಆಶ್ಚರ್ಯವನ್ನುಂಟು ಮಾಡುತ್ತಾರೆ. ಯಾರೂ ಕೈಗೆತ್ತಿಕೊಳ್ಳದ ವಿಷಯವನ್ನೂ (ಕಣ್ಮರೆಯಾಗುತ್ತಿದೆ ಕುಕ್ಕರಗಾಲಿನಲ್ಲಿ ಕೂರುವಿಕೆ) ಬರೆದು ಇನ್ನಷ್ಟು ಅಚ್ಚರಿಯಲ್ಲಿ ಮುಳುಗಿಸುತ್ತಾರೆ. ನಮಗೆ ಸೌಕರ್ಯ, ಸೌಲಭ್ಯ ಬಂದ ಬಳಿಕ ನಾವು ನೆಲದಲ್ಲಿ ಕುಕ್ಕರಗಾಲಿನಲ್ಲಿ ಕೂರುವುದನ್ನೇ ಮರೆತುಬಿಟ್ಟಿದ್ದೇವೆ ಅಲ್ಲವೇ? ನಮಗೆ ಗೊತ್ತಿರುವ ವಿಷಯವೇ ಆಗಿದ್ದರೂ ಆ ವಿಷಯದಲ್ಲಿ ನಮಗೆ ತಿಳಿಯದ ವಿಷಯವನ್ನು ಹುಡುಕಿ ತೆಗೆದು ಸ್ವಾರಸ್ಯಕರವಾಗಿ ಬರೆಯುತ್ತಾರೆ. ಆಕಾಶವಾಣಿ ಆಲಿಸುವಿಕೆ, ನದಿ ನಾಮಗಳ ನಿಗೂಢ ಲೋಕ, ಮೊನಾಲಿಸಾ ವರ್ಣಚಿತ್ರ ಕಳವು ಪ್ರಕರಣ ಎಲ್ಲವೂ ಸ್ವಾರಸ್ಯಕರವಾಗಿ ಓದಿಸಿಕೊಂಡು ಹೋಗುತ್ತದೆ. 

ಹಿಂದಿನ ನಾಲ್ಕು ಪುಸ್ತಕಗಳಲ್ಲಿ ಇರುವ ಸ್ವಾರಸ್ಯವನ್ನು ಇಲ್ಲೂ ಉಳಿಸಿಕೊಂಡಿದ್ದಾರೆ. ತಮ್ಮ ಎಲ್ಲಾ ಬರಹಗಳನ್ನು ‘ಅಕ್ಷರಾಣಾಂ ಅಕಾರೋಸ್ಮಿ' ಎಂಬ ಶ್ರೀಕೃಷ್ಣನ ಮಾತಿನಂತೆ 'ಅ' ಅಕ್ಷರದಿಂದಲೇ ಎಲ್ಲಾ ಲೇಖನಗಳನ್ನು ಪ್ರಾರಂಭಿಸಿದ್ದಾರೆ. ಲೇಖನದ ಪ್ರಾರಂಭವು ಶ್ಲೋಕದಿಂದ ಆಗಿರಲಿ, ಪದ್ಯವೇ ಆಗಿರಲಿ ಅಥವಾ ಗದ್ಯವೇ ಆಗಿರಲಿ ‘ಅ’ಕಾರದಿಂದಲೇ ಪ್ರಾರಂಭವಾಗಿದೆ. ಪರ್ಣಮಾಲೆಯಲ್ಲಿ ೩೭ ಅಧ್ಯಾಯಗಳಿವೆ. ಪೂರಕ ಚಿತ್ರಗಳೂ ಇವೆ. ಸುಮಾರು ೨೩೦ ಪುಟಗಳ ಈ ಪುಸ್ತಕವನ್ನು ಶ್ರೀವತ್ಸ ಜೋಶಿ ಇವರು ‘ತಿಳಿಯುವ ಹಂಬಲವುಳ್ಳ ತಿಳಿಯಾದ ಮನಸುಗಳಿಗೆ' ಅರ್ಪಣೆ ಮಾಡಿದ್ದಾರೆ.