ತಿಳಿರು ತೋರಣ- ಪರ್ಣಮಾಲೆ 1
‘ವಿಶ್ವವಾಣಿ' ಪತ್ರಿಕೆಯ ಪ್ರಾರಂಭದ ದಿನಗಳಿಂದ ‘ತಿಳಿರು ತೋರಣ' ಎಂಬ ವಿಶಿಷ್ಟ ಹೆಸರಿನ ಅಂಕಣ ಬರೆಯುತ್ತಿರುವವರು ಅಮೇರಿಕಾದಲ್ಲಿರುವ ಶ್ರೀವತ್ಸ ಜೋಶಿ. ಜೋಶಿಯವರು ಈ ಹಿಂದೆಯೇ ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ ಪತ್ರಿಕೆಗಳಿಗೆಲ್ಲಾ ಅಂಕಣ ಬರೆದಿದ್ದಾರೆ. ಪ್ರತಿಯೊಂದು ಅಂಕಣದಲ್ಲೂ ಹೊಸ ವಿಚಾರಗಳನ್ನು ಅಥವಾ ಹಳೆಯ ವಿಚಾರಗಳನ್ನೇ ಹೊಸತನದಲ್ಲಿ ಮೂಡಿಸಿ ಜನವರಿ ೨೦೧೬ರಿಂದ ನಿರಂತರವಾಗಿ ವಿಶ್ವವಾಣಿಗೆ ಬರೆಯುತ್ತಿದ್ದಾರೆ. ಅವರ ಬರಹಗಳಿನ್ನೂ ತಾಜಾ ಆಗಿವೆ ಮತ್ತು ಬೋರ್ ಹೊಡೆಸಿಲ್ಲ ಎನ್ನುವುದಕ್ಕೆ ಈ ಆರು ವರ್ಷಗಳ ನಿರಂತರ ಯಾನವೇ ಸಾಕ್ಷಿ.
ಪುಸ್ತಕದ ಬೆನ್ನುಡಿಯನ್ನು ಬರೆಯುತ್ತಾ ಎಸ್ಕೆ. ಶಾಮಸುಂದರ ಅವರು ತಮ್ಮದೇ ವಿಭಿನ್ನ ಶೈಲಿಯಲ್ಲಿ ಬರೆಯುವುದು ಹೀಗೆ "ಓಬೀರಾಯನ ಕಾಲದಿಂದ ಅಂದ್ರೆ ೨೦೦೨ರಿಂದ ‘ಹೊರಗಿದ್ದುಕೊಂಡೂ ಕನ್ನಡ ಓದುಗರಿಗೆ ಒಳಗಿನವರೇ’ ಆಗಿರುವ ಶ್ರೀವತ್ಸ ಜೋಶಿ ಅವರ ಲೇಖನಿಯು (ಅಥವಾ ಕೀಬೋರ್ಡ್ ಎನ್ನೋಣವೇ?) ಮತ್ತೊಮ್ಮೆ ಹೆತ್ತ ಅವಳಿ ಮಕ್ಕಳು ಈಗ ನಿಮ್ಮ ತೆಕ್ಕೆಗೆ ಬಿದ್ದಿವೆ. ತಾಯಿ ಮಕ್ಕಳು ಆರೋಗ್ಯ !
ಒನ್ ಇಂಡಿಯಾ ಕನ್ನಡ ಡಾಟ್ ಕಾಮ್, ವಿಜಯ ಕರ್ನಾಟಕ ಮತ್ತು ಇದೀಗ ವಿಶ್ವವಾಣಿ ಪತ್ರಿಕೆಗಳ ಮೂಲಕ ಸತತ ಹದಿನಾರು ವರ್ಷ ಸಾಪ್ತಾಹಿಕ ಅಂಕಣ ಬರಹಗಳನ್ನು ನಾಟಿ ಮಾಡುತ್ತಾ ಬಂದಿರುವ ಪ್ರಗತಿಪರ ಕೃಷಿಕರು ಅವರು. ಅವರ ಗದ್ದೆಯಲ್ಲಿ ಬೆಳೆದ ಹೊಸ ಫಸಲು ಕನ್ನಡ ಪುಸ್ತಕ ಪ್ರಿಯರ ಅಂಗೈಗಳನ್ನು ಅಲಂಕರಿಸಿದೆ. ಇದು ಫೇಸ್ ಬುಕ್, ಟ್ವಿಟರ್, ವಾಟ್ಸಾಪಾದಿ ಸ್ಮಾರ್ಟ್ ಮಾಧ್ಯಮಗಳಲ್ಲಿ ಕಂತು ಕಂತಾಗಿ ಕಂಗೊಳಿಸಿರುವಂಥದ್ದೇ ಆದರೂ ಹೀಗೆ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ಖುಶಿಯೇ ಬೇರೆ ಅಲ್ಲವೇ?
‘ಬತ್ತದ ಉತ್ಸಾಹ ಎಲ್ಲರಲ್ಲೂ ಇರಲಿ' ಎನ್ನುವುದು ಜೋಶಿ ಅವರ ಟ್ಯಾಗ್ ಲೈನ್. ಈ ಟ್ಯಾಗ್ ಲೈನ್ ಮತ್ತು ಕ್ಯಾಚ್ ಲೈನಿಗೆ ಬದ್ಧರಾಗಿ ಅವರು ಹೊರ ತಂದಿರುವ ವಿಚಿತ್ರಾನ್ನ, ಒಲವಿನ ಟಚ್, ನಲಿವಿನ ಟಚ್, ಗೆಲುವಿನ ಟಚ್ ಮುಂತಾದ ಎಂಟು ಕೃತಿಗಳ ಮುಂದುವರೆದ ಭಾಗವೇ ‘ತಿಳಿರು ತೋರಣ' ಪರ್ಣಮಾಲೆ !
ಈ ಬೆನ್ನುಡಿಯ ಮೂಲಕ ನಾನವರ ಬೆನ್ನು ತಟ್ಟುತ್ತಿರುವುದಕ್ಕೆ ಕಾರಣ ಅವರ ಅಸ್ಖಲಿತ ಧ್ಯೇಯವಾಕ್ಯ - ಮಾಹಿತಿ, ಮನೋರಂಜನೆ, ಸಾಧ್ಯವಾದರೆ ಒಂಚೂರು ವಿವೇಕ!”
೨೦೧೬ರ ಒಂದು ವರ್ಷ ಪೂರ್ತಿ ಬರೆದ ೫೨ ಅಂಕಣ ಬರಹಗಳು ಈ ಪರ್ಣಮಾಲೆ ೧ರಲ್ಲಿ ಸಂಗ್ರಹವಾಗಿದೆ. ಪತ್ರಿಕೆ ಓದುವಾಗ ತಪ್ಪಿ ಹೋದ ಅಥವಾ ಆ ಸಮಯದಲ್ಲಿ ಪತ್ರಿಕೆ ಸಿಗದೇ ಓದಲಾಗದ ಬರಹಗಳನ್ನು ಒಂದೇ ಗುಟುಕಿಗೆ ಓದುವ ಅನನ್ಯ ಅವಕಾಶ. ಎಲ್ಲಾ ಬರಹಗಳು ಎಲ್ಲರಿಗೂ ಇಷ್ಟವಾಗಲಾರದು. ಇದು ಸತ್ಯವಾದರೂ, ಶ್ರೀವತ್ಸ ಜೋಶಿ ಅವರ ಬರಹಗಳನ್ನು ಒಂದೊಂದಾಗಿ ಓದುತ್ತಾ ಓದುತ್ತಾ ನಿಮಗೆ ಅವರ ಬರವಣಿಗೆಯ ಶೈಲಿಯು ಎಲ್ಲಾ ಲೇಖನಗಳನ್ನು ಆಪ್ತವನ್ನಾಗಿಸುತ್ತಾ, ಓದಿಸಿಕೊಂಡು ಹೋಗುತ್ತದೆ.
ಜೋಶಿ ಅವರು ತಮ್ಮ ಮುನ್ನುಡಿಯಾದ ಪರ್ಣಮಾಲೆಯಲ್ಲಿ ಈ ಮಾಲೆಯನ್ನು ಕಟ್ಟಲು ಸಹಕರಿಸಿದವರನ್ನು ಮರೆಯದೇ ನೆನಪಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೆಲುಕು ಹಾಕಿದ ನೆನಪುಗಳೆಂದರೆ “‘ಅಕ್ಷರ ಮಿತ್ರರಿಗೆ ಆತ್ಮೀಯ ನಮಸ್ಕಾರ’ ಎಂದು ಆರಂಭವಾದ ೧೭ ಜನವರಿ ೨೦೧೬ರ ಮೊತ್ತ ಮೊದಲ ಕಂತಿನಿಂದ ಹಿಡಿದು, ‘ಅಜರಾಮರ ಎಂದೆನಿಸಿಕೊಳ್ಳುವ ಕೆಲವು ಸಂಗತಿಗಳಿರುತ್ತವೆ...' ಎಂದು ಆರಂಭವಾದ ೨೬ ನವೆಂಬರ್ ೨೦೧೭ರ ಕಂತಿನವರೆಗೆ. ವಿಶ್ವವಾಣಿ ಪತ್ರಿಕೆಗಳಲ್ಲಿ ಭಾನುವಾರಗಳಂದು ಪ್ರಕಟವಾದ ತಿಳಿರು ತೋರಣ ಅಂಕಣದ ಒಟ್ಟು ೯೭ ಲೇಖನಗಳ ಸಂಗ್ರಹ ಇವೆರಡು ಅವಳಿ ಪುಸ್ತಕಗಳು: ಪರ್ಣಮಾಲೆ ೧ ಮತ್ತು ಪರ್ಣಮಾಲೆ ೨. ‘ಅಕ್ಷರಾಣಾಂ ಅಕಾರೋಸ್ಮಿ’ ಎಂದು ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೇಳಿದ್ದನ್ನು ನೆನಪಿಸಿಕೊಂಡು ಮೊದಲ ಲೇಖನವನ್ನು ಅ ಅಕ್ಷರದಿಂದ ಆರಂಭಿಸಿದ್ದಾಗಿತ್ತು. ಅಂಕಣಕ್ಕೆ ಅದೇ ಒಂದು ಅನನ್ಯತೆಯ ಅಸ್ಮಿತೆ ಆಗಿರಲಿ ಎಂದುಕೊಂಡು ಆಮೇಲಿನ ಪ್ರತಿಯೊಂದು ಲೇಖನವನ್ನೂ ಅ ಅಕ್ಷರದಿಂದಲೇ ಆರಂಭಿಸಿದೆ. ಪ್ರತಿವಾರವೂ ಏನೋ ಒಂದು ಹೊಸ ವಿಚಾರವನ್ನು ತಿಳಿದುಕೊಳ್ಳುವ, ಸಣ್ಣದೊಂದು ಸ್ವಾರಸ್ಯವನ್ನು ಅನಾವರಣಗೊಳಿಸಿ ಸಂಭ್ರಮಿಸುವ ಹಂಬಲ. ಅದಕ್ಕೆ ಓದುಗಮಿತ್ರರಿಂದ ದೊರೆತ ಅಭೂತಪೂರ್ವ ಬೆಂಬಲ. ಒಟ್ಟಿನಲ್ಲಿ ತಿಳಿರು ತೋರಣ ಅಂಕಣ ಬರವಣಿಗೆಯಿಂದ ನಾನು ಅತೀವ ಆನಂದ ಪಡೆದಿದ್ದೇನೆ. ಅಂಕಣದ ಲೇಖನಗಳು ಇದೀಗ ಪುಸ್ತಕವಾಗಿ ಪ್ರಕಟವಾಗುತ್ತಿರುವ ಸಂದರ್ಭದಲ್ಲಿಯೂ ಅಷ್ಟೇ ಆನಂದಪಡುತ್ತಿದ್ದೇನೆ. “
ಪುಸ್ತಕದ ಮೊದಲ ಅಧ್ಯಾಯವಾದ ‘ತಿಳಿಯಾದ ತಿಳುವಳಿಕೆಯ ಹದವರಿತ ಹೂರಣ' ದಲ್ಲಿ ತಮ್ಮ ಅಂಕಣಕ್ಕೆ ‘ತಳಿರು ತೋರಣ’ ಎಂಬ ಸಿದ್ಧ ಹೆಸರಿನ ಬದಲು ‘ತಿಳಿರು ತೋರಣ' ಎಂದು ಹೆಸರಿಸಿದ ಬಗೆಯನ್ನು ಬಹಳ ಸ್ವಾರಸ್ಯಕರವಾಗಿ, ಅಷ್ಟೇ ಅಲ್ಲ, ಮಾಹಿತಿಪೂರ್ಣವಾಗಿ ತಿಳಿಸುತ್ತಾ ಹೋಗಿದ್ದಾರೆ. ಈ ಬರಹವನ್ನು ಓದಿದ ಬಳಿಕ ಉಳಿದ ಬರಹಗಳು ನಿಧಾನವಾಗಿ ನಿಮ್ಮನ್ನು ಆವರಿಸುತ್ತಾ ಹೋಗುತ್ತವೆ. ಪೌರಾಣಿಕ ಕಥೆಯಾಗಲಿ, ಸಾಹಿತ್ಯದ ವಿಚಾರವಾಗಲಿ ಅಥವಾ ಇತ್ತೀಚಿನ ಪ್ರಚಲಿತ ವಿದ್ಯಮಾನದ ವಿಷಯವಾಗಿರಲಿ ಬಹಳ ನವಿರು ಹಾಸ್ಯದೊಂದಿಗೆ, ಸರಳ ಮಾತುಗಳಲ್ಲಿ ತೋರಣ ಕಟ್ಟಿದ್ದಾರೆ ಶೀವತ್ಸ ಜೋಶಿ ಇವರು.
ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯುವ ದಿನಾಂಕದ ಬಗ್ಗೆ ಇರುವ ಸ್ವಾರಸ್ಯಕರ ಸಂಗತಿಯನ್ನು (ಬಹುತೇಕರು ಎಲ್ಲೂ ಓದದ) ಇವರು ತಮ್ಮ ಬರಹ ‘ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರ’ ದಲ್ಲಿ ವರ್ಣಿಸಿದ್ದಾರೆ.ಅಮೇರಿಕಾದ ಅಧ್ಯಕ್ಷೀಯ ಚುನಾವಣೆ ನವೆಂಬರ್ ನಲ್ಲೇ ಏಕೆ ನಡೆಯುತ್ತದೆ ಅದೂ ಮೊದಲ ಮಂಗಳವಾರ ಅಲ್ಲಲ್ಲ, ಮೊದಲ ಸೋಮವಾರದ ನಂತರದ ಮೊದಲ ಮಂಗಳವಾರವೇ ಏಕೆ ನಡೆಯುತ್ತದೆ? ಈ ವಿಷಯವನ್ನು ಬಹಳ ಅದ್ಭುತವಾಗಿ ವಿವರಿಸಿದ್ದಾರೆ. ನವೆಂಬರ್ ೧ ಮಂಗಳವಾರವೇ ಬಂದರೂ ಆ ದಿನ ಅಧ್ಯಕ್ಷೀಯ ಚುನಾವಣೆ ನಡೆಸಲಿಕ್ಕಾಗಲ್ಲ, ಏಕೆ ಗೊತ್ತೇ? ಅಲ್ಲಿನ ಕಾನೂನಿನ ಪ್ರಕಾರ ನವೆಂಬರ್ ಮೊದಲ ಸೋಮವಾರದ ನಂತರ ಬರುವ ಮೊದಲ ಮಂಗಳವಾರವೇ ಚುನಾವಣೆ ನಡೆಸಬೇಕು. ಇಂತಹ ನೂರಾರು ವಿಶೇಷ, ಸ್ವಾರಸ್ಯಕರ ವಿಷಯಗಳು ಪುಸ್ತಕದ ತುಂಬೆಲ್ಲಾ ಅಡಗಿದೆ. ಓದುವ ಮನಸ್ಸು ಮತ್ತು ಸಮಯ ಮಾತ್ರ ನೀವು ಹೊಂದಿಸಿಕೊಳ್ಳಬೇಕು. ಉಳಿದ ವಿಷಯ ಜೋಶಿಯವರಿಗೆ ಬಿಡಿ.
ಸುಮಾರು ೨೧೩ ಪುಟಗಳ ಈ ಪುಸ್ತಕವನ್ನು ‘ತಿಳಿಯುವ ಹಂಬಲವುಳ್ಳ ತಿಳಿಯಾದ ಮನಸುಗಳಿಗೆ' ಶ್ರೀವತ್ಸ ಜೋಶಿಯವರು ಅರ್ಪಣೆ ಮಾಡಿದ್ದಾರೆ. ಈ ಪುಸ್ತಕದ ಜೊತೆಯಲ್ಲೇ ತಿಳಿರು ತೋರಣ ಭಾಗ ೨ ಸಹಾ ಬಿಡುಗಡೆಯಾಗಿದೆ. ಜೊತೆಯಾಗಿಯೇ ಕೊಂಡು ಓದಿದಲ್ಲಿ ಉತ್ತಮ ಓದಿಗೇನೂ ಕೊರತೆಯಾಗಲಾರದು.