ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ....
ರಂಜಾನ್ ಹಬ್ಬದ ಶುಭಾಶಯಗಳು. ತಿಳಿವಳಿಕೆ ನಡವಳಿಕೆಯಾಗಬೇಕಾದ ಸಂದರ್ಭದಲ್ಲಿ… ಧರ್ಮವೇ ಕರ್ಮ(ಕಾಯಕ) ವಾಗಬೇಕಾದ ಸನ್ನಿವೇಶದಲ್ಲಿ… ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಸಾಮಾಜಿಕ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿ ಈಗಾಗಲೇ ದೇವರು ಧರ್ಮ ಸಂವಿಧಾನ ಪ್ರಜಾಪ್ರಭುತ್ವ ಹಿಂದು ಮುಸ್ಲಿಂ ಖುರಾನ್ ಭಗವದ್ಗೀತೆ ಭಾರತ ಪಾಕಿಸ್ತಾನ ಸೌಹಾರ್ಧತೆ ಸಂಯಮ ಸಮನ್ವಯ ಮುಂತಾದ ವಿಷಯಗಳ ಬಗ್ಗೆ ಬಹುತೇಕ ಸಾಮಾನ್ಯ ಜನರಿಗೂ ತಲುಪುವಷ್ಟು ಚರ್ಚೆಗಳು ಅಭಿಪ್ರಾಯಗಳು ವ್ಯಕ್ತವಾಗಿದೆ. ಈಗ ಉಳಿದಿರುವುದು ಮತ್ತು ಮುಂದುವರಿಯ ಬೇಕಾಗಿರುವುದು ನಮ್ಮ ತೀರ್ಮಾನ ಹಾಗೂ ತಿಳಿವಳಿಕೆ ಮತ್ತು ನಡವಳಿಕೆ. ಇದೇ ಅತ್ಯಂತ ಮಹತ್ವದ ವಿಷಯ.
ಆಧುನಿಕ ಸಮಾಜ ನೀಡಿರುವ ಎಲ್ಲಾ ಸಿರಿ ಸಂಪತ್ತುಗಳು - ಪ್ರಜಾಪ್ರಭುತ್ವ ಎಂಬ ಅಪರಿಮಿತ ಸ್ವಾತಂತ್ರ್ಯ ಎಲ್ಲವನ್ನೂ ಉಪಯೋಗಿಸಿಕೊಂಡು ಇರುವಷ್ಟು ದಿನ ಇರುವುದರಲ್ಲಿ ಒಂದಷ್ಟು ಸುಖ ಸಂತೋಷ ನೆಮ್ಮದಿಯಿಂದ ಬಾಳಬೇಕೆ ಅಥವಾ ಈಗಿನ ಸಂದರ್ಭಕ್ಕೆ ಅಪ್ರಸ್ತುತವಾದ ಅಥವಾ ಅಷ್ಟೇನೂ ಪ್ರಯೋಜನವಲ್ಲದ ಪುರಾತನ ಕಾಲದ ಯಾವುದೋ ನಂಬಿಕೆ ಸಂಪ್ರದಾಯಗಳಿಗೆ ಕಟ್ಟುಬಿದ್ದು ಮನುಷ್ಯರೇ ಧರ್ಮದ ಜಾತಿಯ ಆಧಾರದಲ್ಲಿ ಒಬ್ಬರಿಗೊಬ್ಬರು ದ್ವೇಷಿಸುತ್ತಾ ಅಸೂಯೆಪಡುತ್ತಾ ಮಚ್ಚು ಚಾಕು ಬಂದೂಕು ಬಾಂಬುಗಳಿಂದ ಕೊಂದುಕೊಳ್ಳುತ್ತಾ ಸದಾ ಆತಂಕದಿಂದ ಬದುಕಬೇಕೇ ಎಂಬ ಆಯ್ಕೆಗಳು ಮಾತ್ರ.
ನಿಮಗೆ ಧರ್ಮ ಗ್ರಂಥಗಳು ಹಿಜಾಬ್, ಕುಂಕುಮ, ನಾಮ, ಹಲಾಲ್ ಕಟ್, ಜಟ್ಕಾ ಕಟ್, ವಿಭೂತಿ, ಗಡ್ಡ, ಅಜಾನ್, ಹನುಮಾನ್ ಚಾಲೀಸು ಮುಂತಾದ ಆಚರಣೆಗಳು ಬೇಕೆ ಅಥವಾ ಮನುಷ್ಯ - ಮನುಷ್ಯತ್ವ ಪ್ರೀತಿ ಸಹಕಾರ ಸಂಯಮ ಸುಖಬದುಕು ಬೇಕೆ ಎಂಬ ಆಯ್ಕೆಗಳು ಮಾತ್ರ ನಮ್ಮ ಮುಂದಿವೆ. ಇದನ್ನು ಯಾರೋ ಮುಲ್ಲಾಗಳು, ಪಾದ್ರಿಗಳು, ಮೌಲ್ವಿಗಳು, ಸ್ವಾಮೀಜಿಗಳು, ಮಠಾಧೀಶರು ಹೇಳಿಕೊಡಬೇಕಿಲ್ಲ ಅಥವಾ ನಿರ್ಧರಿಸ ಬೇಕಿಲ್ಲ. ನಮ್ಮ ನಮ್ಮ ಜ್ಞಾನದ ಮಿತಿಯಲ್ಲಿ ನಾವೇ ನಿರ್ಧಾರ ತೆಗೆದುಕೊಳ್ಳಬೇಕು. ಇದನ್ನು ನಿಮ್ಮ ವಿವೇಚನೆಗೆ ಬಿಡುತ್ತಾ… ಮತ್ತೊಮ್ಮೆ ಎಲ್ಲರಿಗೂ ರಂಜಾನ್ ಹಬ್ಬದ ಶುಭಾಶಯಗಳು.
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ