ತಿಳಿವಳಿಕೆ ನಡವಳಿಕೆಯಾದಾಗ...
ಒಳ್ಳೆಯತನ ಉದಾಹರಣೆಯಾಗದೆ ಸಹಜವಾದಾಗ… ಆಟೋದಲ್ಲಿ ಮರೆತು ಹೋಗಿದ್ದ ಲಕ್ಷಾಂತರ ಬೆಲೆಬಾಳುವ ವಸ್ತುಗಳಿದ್ದ ಸೂಟ್ ಕೇಸ್ ಒಂದನ್ನು ಆಟೋ ಡ್ರೈವರ್ ಒಬ್ಬರು ಮರಳಿ ಅದರ ಒಡೆಯನಿಗೆ ತಲುಪಿಸುತ್ತಾರೆ. ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ವಯೋವೃಧ್ಧ ರೋಗಿಯನ್ನು ಶಾಲಾ ಶಿಕ್ಷಕರೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ. ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಮನೆಯವರು ಆತನ, ಎಲ್ಲಾ ಅಂಗಾಂಗಗಳನ್ನು ಅವಶ್ಯಕತೆ ಇರುವವರಿಗೆ ದಾನ ಮಾಡುತ್ತಾರೆ.
ಅಂಗವಿಕಲ ಹುಡುಗಿಯನ್ನು ಪ್ರೀತಿಸಿ ಮದುವೆಯಾದ, ವಿದ್ಯಾವಂತ ಯುವಕನೊಬ್ಬ ಆಕೆಗೆ ಸುಂದರ ಬದುಕು ನೀಡುತ್ತಾನೆ. ಅಧಿಕಾರದ ಅನೇಕ ಹಂತಗಳನ್ನು ಅನುಭವಿಸಿಯೂ ರಾಜಕಾರಣಿಯೊಬ್ಬರು, ಈಗಲೂ ಒಂದೇ ಕೋಣೆಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಆಡಳಿತದ ಅತ್ಯಂತ ಉನ್ನತ ಹುದ್ದೆಗೇರಿ ನಿವೃತ್ತರಾದ ಅಧಿಕಾರಿಯೊಬ್ಬರು, ಈಗಲೂ ಸರ್ಕಾರಿ ಬಸ್ಸುಗಳಲ್ಲೆ ಓಡಾಡುವ ಸರಳತೆ ಬೆಳೆಸಿಕೊಂಡಿದ್ದಾರೆ. ಅತ್ಯಂತ ಶ್ರೀಮಂತ ಉದ್ಯಮಿಯೊಬ್ಬ ತನ್ನ ಮಗಳ ಮದುವೆಯನ್ನು, ಬಹಳ ಸರಳವಾಗಿ ಮಂತ್ರ - ಮಾಂಗಲ್ಯದ ರೀತಿಯಲ್ಲಿ ಮಾಡಿದರು.
ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಿಗೆ ಹತ್ತಿರವಾಗಿದ್ದ ಪತ್ರಕರ್ತರೊಬ್ಬರು, ಈಗಲೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಓದಿಸಿ ಸರಳತೆ ಅಳವಡಿಸಿಕೊಂಡಿದ್ದಾರೆ. ಪೋಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು ನಿವೃತ್ತರಾದ ಅಧಿಕಾರಿಯೊಬ್ಬರು, ಪರೋಕ್ಷವಾಗಿಯೂ ಲಂಚ ಮುಟ್ಟದ ಶುದ್ಧ ಹಸ್ತರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಾರೆ. ಇದೆಲ್ಲವೂ ಘಟಿಸಿರುವುದು, ಸಾಧ್ಯವಾಗಿರುವುದು ನಮ್ಮ ಈಗಿನ ಸಮಾಜದಲ್ಲಿಯೇ. ಆದರೆ ಯೋಚಿಸಬೇಕಾಗಿರುವುದು ಇವು ಕೇವಲ ಅಪರೂಪದ ಉದಾಹರಣೆಗಳು ಮಾತ್ರ. ನಮ್ಮ ಆಶಯ ಬಹುತೇಕ ಸಮಾಜದ ಪ್ರತಿಕ್ರಿಯೆ ಇದೇ ಆಗಿರಬೇಕು. ಇಡೀ ಸಮುದಾಯಗಳ ನಡೆ ನುಡಿ ಇದೇ ಆಗಿರಬೇಕು. ಇಡೀ ಜನಗಳ ಮೂಲಭೂತ ಗುಣ ಇದೇ ಆಗಿರಬೇಕು. ಇದಕ್ಕಾಗಿ ನೀವೇನು ಬೆವರು ಸುರಿಸಬೇಕಾಗಿಲ್ಲ, ಇದಕ್ಕಾಗಿ ನೀವೇನು ಬೆಟ್ಟ ಹತ್ತಿ ಸಮುದ್ರ ದಾಟಬೇಕಾಗಿಲ್ಲ, ಇದಕ್ಕಾಗಿ ನೀವೇನು ಬ್ರಹ್ಮವಿದ್ಯೆ ಕಲಿಯಬೇಕಾಗಿಲ್ಲ, ಕೇವಲ ನಿಮ್ಮ ವ್ಯಕ್ತಿತ್ವವನ್ನು ಸ್ವಲ್ಪ ಮೇಲ್ದರ್ಜೆಗೆ ಏರಿಸಿಕೊಳ್ಳಿ. ನಾಗರಿಕ ಪ್ರಜ್ಞೆ ಬೆಳೆಸಿಕೊಳ್ಳಿ. ಆಗ ಎಲ್ಲವೂ ಸಾಧ್ಯ. ಕೇವಲ ಮಾತುಗಳು, ಭಾಷಣಗಳು, ಬರಹಗಳು, ಚಿಂತನೆಗಳಿಂದ ಮಾತ್ರ ಸಾಧ್ಯವಿಲ್ಲ. ಬದುಕು ಈ ಎಲ್ಲವನ್ನೂ ಮೀರಿದ್ದು...
-ವಿವೇಕಾನಂದ.ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ