ತಿಳಿ ನೀಲದಲ್ಲಿ, ತಾ ಲೀನವಾಗಿ, ಅವ ಹೋದ ದೂರ ದೂರ...

ತಿಳಿ ನೀಲದಲ್ಲಿ, ತಾ ಲೀನವಾಗಿ, ಅವ ಹೋದ ದೂರ ದೂರ...

ಬರಹ

ಹಲವಾರು ವಿವಾದಗಳ ಮೂಲಕವೂ ಖ್ಯಾತಿ ಗಳಿಸಿದ್ದ ಅಶ್ವಥ್‌ ಸಾವಿನ ವಿಷಯವೂ ಕೊಂಚ ವಿವಾದಾಸ್ಪದವೇ. ಅವರು ಈ ಲೋಕದಿಂದ ದೂರವಾಗಿ ಬಹುತೇಕ ನಾಲ್ಕು ದಿನಗಳಾಗಿದ್ದರೂ ಅಧಿಕೃತ ಪ್ರಕಟಣೆ ಹೊರಬಿದ್ದಿದ್ದು ಮಂಗಳವಾರ ಬೆಳಿಗ್ಗೆ. ಮಾಧ್ಯಮಮಿತ್ರರ ನಡುವೆ ಅವರ ಸಾವಿನ ಸುದ್ದಿ ಗುಸುಗುಸು ರೂಪದಲ್ಲಿ ಹರಿದಾಡುತ್ತಲೇ ಇತ್ತಾದರೂ ಸಂಬಂಧಿಸಿದವರು ಅದನ್ನು ದೃಢಪಡಿಸಲಿಲ್ಲ. ಜೀವರಕ್ಷಕ ಸಾಧನಗಳ ಮೂಲಕ ಬದುಕಿದ್ದಾರೆ ಎಂದೇ ಹೇಳುತ್ತಿದ್ದರು. ಈ ಕುರಿತು ಪರಿಶೀಲಿಸಲು ಆಸ್ಪತ್ರೆಗೆ ಹೋದ ಮಾಧ್ಯಮದವರಿಗೆ ಪ್ರವೇಶ ದೊರೆಯಲಿಲ್ಲ. ಅಶ್ವಥ್‌ ಇನ್ನಿಲ್ಲ ಎಂಬುದು ಬಹುತೇಕರಿಗೆ ಗೊತ್ತಾಗಿದ್ದರೂ, ಅವರ ಜನ್ಮದಿನದಂದೇ ಸಾವಿನ ಸುದ್ದಿ ಪ್ರಕಟಿಸುವ ಉದ್ದೇಶ ಕೆಲವರಿಗೆ ಇತ್ತೆನಿಸುತ್ತದೆ. ಅದೀಗ ಈಡೇರಿದೆ.

ಸಿಕ್ಕಾಪಟ್ಟೆ ಮುಂಗೋಪಿ, ತಮ್ಮದೇ ಬೆಸ್ಟ್‌ ಎಂಬ ಕಲಾವಿದನ ಸಹಜ ಅಹಂ, ವಿಮರ್ಶಕರ ಬಗ್ಗೆ ಅಸಹನೆ ಹಾಗೂ ಅಪಾರ ಪ್ರತಿಭೆ ಹೊಂದಿದ್ದ ಸುಗಮ ಸಂಗೀತದ ಮೇರು ವ್ಯಕ್ತಿ ಸಿ. ಅಶ್ವಥ್‌ ಹಾಡು ಮುಗಿಸಿ ಎದ್ದು ಹೋಗಿದ್ದಾರೆ. ಬೆಂಗಳೂರಿನ ಯಶವಂತಪುರದ ಕೊಲಂಬಿಯಾ ಏಷ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹಲವಾರು ದಿನಗಳ ಕಾಲ ಸೆಣಸಿದ ಗಾನಕೋಗಿಲೆ ’ಇನ್ನು ಸಾಕು’ ಎಂದು ಹಾರಿಹೋಗಿದೆ.

ಹಲವಾರು ಕವಿಗಳ ಕವಿತೆಗಳಿಗೆ ಕಂಠವಾದ ಅಶ್ವಥ್‌ ಅತ್ಯಂತ ಇಂಪಾದ ರಾಗಗಳನ್ನು ಸಂಯೋಜಿಸಿದರು. ಅಷ್ಟೇ ಅಲ್ಲ, ಅವನ್ನು ಅತ್ಯಂತ ಸಮರ್ಥವಾಗಿ ಹಾಡಿದರು. ಕೇವಲ ಸಾಹಿತ್ಯಾಸಕ್ತರ ಮಧ್ಯೆ ಮಾತ್ರ ಜೀವಂತವಾಗಿದ್ದ ಕನ್ನಡದ ಹಲವಾರು ಕವಿಗಳನ್ನು ಜನಸಾಮಾನ್ಯರಿಗೆ ಪರಿಚಯಿಸಿದ ಅಶ್ವಥ್‌ ಒಬ್ಬ ಕಲಾವಿದನ ಕನ್ನಡ ಸೇವೆಗೆ ಉತ್ತಮ ಉದಾಹರಣೆ.



ಭಾವಗೀತೆಗಳೆಂದರೆ ಭಾವತೀವ್ರತೆ ಹೊಂದಿದ ಗೀತೆಗಳೆಂಬುದನ್ನು ದೊಡ್ಡಮಟ್ಟದಲ್ಲಿ ಪರಿಚಯಿಸಿದ್ದು ಅಶ್ವಥ್‌ ಸಾಧನೆ. ಅದುವರೆಗೆ ಭಾವಗೀತೆಗಳೆಂದರೆ ಶಾಸ್ತ್ರೀಯ ಸಂಗೀತದ ಮುಂದುವರಿದ ಭಾಗದಂತೆ ಭಾಸವಾಗುವ ವಾತಾವರಣ ಇತ್ತು. ಮೈಸೂರು ಅನಂತಸ್ವಾಮಿ, ಪಿ. ಕಾಳಿಂಗರಾವ್‌ ಮುಂತಾದವರು ಆಗಾಗ ಈ ಅಭಿಪ್ರಾಯವನ್ನು ಬದಲಿಸುವಂಥ ಹಾಡುಗಳನ್ನು ನೀಡಿದ್ದರಾದರೂ, ಅಶ್ವಥ್‌ ಅದನ್ನೊಂದು ಸಂಚಲನೆ ಎಂಬಂತೆ ಬೆಳೆಸಿದರು. ಜೊತೆಗೆ ತಾವೂ ಬೆಳೆದರು. ಕನ್ನಡ ಗೀತೆಗಳನ್ನು ಆಲಿಸುವ ಅಭಿರುಚಿ ಹಾಗೂ ಕನ್ನಡ ಸಂಗೀತ ಮುದ್ರಿಕೆಗಳಿಗೆ ದೊಡ್ಡ ಮಾರುಕಟ್ಟೆಯನ್ನೂ ಸೃಷ್ಟಿಸಿದರು.

ಕೆ.ಎಸ್‌. ನರಸಿಂಹಸ್ವಾಮಿಯವರ ’ಮೈಸೂರು ಮಲ್ಲಿಗೆ’ ಜನರನ್ನು ತಲುಪಿದ್ದು ಹೀಗೆ. ಅದೇ ರೀತಿ, ಬಹುತೇಕ ಅನಾಮಧೇಯರಾಗಿಯೇ ಉಳಿದಿದ್ದ ಸಂತ ಶಿಶುನಾಳ ಶರೀಫರು ಜನಮಾನಸ ತಲುಪಿದ್ದೂ ಅಶ್ವಥ್‌ ಅವರ ಸಂಗೀತ ಗಾರುಡಿಯಿಂದಲೇ. ಇವೆರಡೂ ಕವಿಗಳ ಗೀತೆಗಳ ಮಾಧುರ್ಯ ಕನ್ನಡಿಗರನ್ನು ಅದ್ಯಾವ ಪರಿ ಹುಚ್ಚೆಬ್ಬಿಸಿತ್ತೆಂದರೆ, ನಿರ್ದೇಶಕ ಟಿ.ಎಸ್‌. ನಾಗಾಭರಣ, ಹಾಡುಗಳ ಆಧಾರದ ಮೇಲೆಯೇ ’ಮೈಸೂರು ಮಲ್ಲಿಗೆ’ ಹಾಗೂ ’ಸಂತ ಶಿಶುನಾಳ ಶರೀಫ’ ಚಿತ್ರಗಳನ್ನು ಮಾಡಿದರು. ಇದು ಅಶ್ವಥ್‌ ಸಂಗೀತ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ. ಗಾಯಕನೊಬ್ಬ ಹಾಡುವುದನ್ನೇ ವೃತ್ತಿಯಾಗಿ ಸ್ವೀಕರಿಸಿ ಯಶಸ್ವಿಯಾಗಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದು ಅಶ್ವಥ್‌ ಅವರ ವಿಶೇಷತೆ.

ಟಿವಿಯಲ್ಲಿ ಅವರ ಅಂತಿಮ ದರ್ಶನದ ಚಿತ್ರಗಳನ್ನು ನೋಡುತ್ತಿದ್ದಂತೆ ಮನಸ್ಸು ಮೂಕವಾಗುತ್ತಿದೆ. ಎಷ್ಟೊಂದು ಸುನೀತ ಭಾವನೆಗಳನ್ನು ಕೆರಳಿಸಿದ್ದವು ಅವರ ಹಾಡುಗಳು! ತಲೆಮಾರಿಗೆ ತಲೆಮಾರೇ ನಾದಗುಂಗಿನಲ್ಲಿ ತೇಲುವಂತೆ ಮಾಡಿದ್ದ ಈ ಗಾನಗಾರುಡಿಗ ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳುವುದೇ ಕಷ್ಟವಾಗುತ್ತಿದೆ. ’ಬಂಗಾರ ತೀರ ಕಡಲಾಚೆಗೀಚೆಗಿದು ನೀಲ ನೀಲ ತೀರ...’ ಎಂದು ಹಾಡುತ್ತ ಹೊರಟುಹೋಗಿರುವ ಅಶ್ವಥ್‌ ಇನ್ನೊಂದಿಷ್ಟು ಕಾಲ ನಮ್ಮೊಂದಿಗಿರಬೇಕಿತ್ತು. ಇನ್ನೊಂದಿಷ್ಟು ಕವಿತೆಗಳಿಗೆ ಹಾಡಾಗಬೇಕಿತ್ತು. ಭಾವನೆಗಳಿಗೆ ತೇರಾಗಬೇಕಿತ್ತು. ಎದೆಯೊಳಗೆ ಅವಿತುಕೂಡುವ ಭಾವನೆಗಳನ್ನು ಹೊರಹಾಕುವ ದಾರಿಯಾಗಬೇಕಿತ್ತು. ಓದಿ ಅನುಭವಿಸಬೇಕಿದ್ದ ಎಷ್ಟೋ ಕವಿತೆಗಳನ್ನು ಕೇಳಿ ಅನುಭವಿಸುವಂತೆ ಮಾಡುತ್ತಿದ್ದ ಅಪರೂಪದ ಕಾಯಕವನ್ನು ಮುಂದುವರಿಸಬೇಕಿತ್ತು.

ಮನಸ್ಸು ಮತ್ತೆ ಮತ್ತೆ ಅವರ ಹಾಡುಗಳನ್ನು ನೆನಪಿಸಿಕೊಳ್ಳುತ್ತದೆ. ಹೃದಯ ಮತ್ತೆ ಮತ್ತೆ ಕಣ್ಣೀರಿಡುತ್ತದೆ.

- ಚಾಮರಾಜ ಸವಡಿ

(ಚಿತ್ರ ಕೃಪೆ: ಡಿ.ಜಿ. ಮಲ್ಲಿಕಾರ್ಜುನ)