ತೀರ್ಪಿನ ಎಡಬಿಡಂಗಿತನ ಸಕ್ರಿಯವಾಗಿ ಗೋಚರಿಸತೊಡಗಿದೆ!
ಅಯೋಧ್ಯಾ ರಾಮಜನ್ಮಭೂಮಿಯಲ್ಲಿ “ಒಂದಿಂಚೂ ಜಾಗ ಬಿಟ್ಟುಕೊಡುವುದಿಲ್ಲ” ಎಂದು ವಿಶ್ವ ಹಿಂದೂ ಪರಿಷತ್ ಒಳಗೊಂಡಂತೆ ಧರ್ಮಮುಖಂಡರ ಸಭೆ ’ಪಣ’ತೊಟ್ಟಿರುವುದಾಗಿ ಪ್ರಜಾವಾಣಿ (ಅ.21) ವರದಿ ಮಾಡಿದೆ. ಮುಸ್ಲಿಂ ಸಂಘಟನೆ, ವಿವಾದವನ್ನು ಸುಪ್ರೀಂ ಕೋರ್ಟಿಗೆ ಒಯ್ಯುವುದಾಗಿ ಈಗಾಗಲೇ ಪ್ರಕಟಿಸಿದೆ. ಅಲ್ಲಿಗೆ ಅಲಹಾಬಾದ್ ಹೈಕೋರ್ಟಿನ “ಕೃಷ್ಣ ಸಂಧಾನ” ಎಷ್ಟರಮಟ್ಟಿಗೆ ಊರ್ಜಿತವಾಯಿತೆನ್ನುವುದು ಗೊತ್ತಾಯಿತಲ್ಲಾ!
ಯಾರಾದರೂ, ಯಾವ ಹಂತದಲ್ಲಾದರೂ, ಈ ವಿಷಯವಾಗಿ ಕೋರ್ಟಿಗೆ ಸಂಧಾನಕಾರನ “ಧೌತ್ಯ” ವಹಿಸಿಕೊಟ್ಟಿದ್ದರೇ? ಅಲ್ಲಿ ಕೇಳಿದ್ದು, “ನ್ಯಾಯ’ವಾಗಿ ಜಮೀನು ಯಾರಿಗೆ ಸೇರಬೇಕು ಎಂದಷ್ಟೇ ಅಲ್ಲವೇ? 60 ವರ್ಷಗಳ ಸುದೀರ್ಘ ಸುನಾವಣೆ ಮತ್ತು ಸಾಕ್ಷ್ಯಾಧಾರಗಳ ಪರಿಶೀಲನೆಯ ನಂತರ ಶ್ರೀರಾಮಚಂದ್ರನ “ಐತಿಹಾಸಕ ಅಸ್ತಿತ್ವ”ವನ್ನೂ, ಆ ’ವ್ಯಕ್ತಿ’ ತ್ರೇತಾಯುಗದಲ್ಲಿ ಅ ಸ್ಥಾನ ವಿಶೇಷದಲ್ಲೇ ಅವತರಿಸಿದನೆಂಬುದನ್ನೂ ಕೋರ್ಟ್ ಮನವರಿಕೆ ಮಾಡಿಕೊಂಡಿದೆಯೆಂಬ ಭಾವನೆ ಹುಟ್ಟಿಸಿದೆ. ಅದು ಖಚಿತವೇ ಆಗಿದ್ದಲ್ಲಿ, ಆ ಪೂರ್ತೀ ಜಾಗ ಹಿಂದೂಗಳದ್ದೆಂದು ಏಕೆ ಡಿಕ್ರಿ ನೀಡಲಿಲ್ಲ? ಅಥವಾ ಇದ್ದ ಏಚಾನ್ಯ ದೇವಾಲಯವೊಂದನ್ನು ಕೆಡವಿ ಮೊಘಲರು ಮಸೀದಿ ಕಟ್ಟಿಸಿದ್ದು ಐತಿಹಾಸಿಕ ಸತ್ಯ ಎಂದು ಮನವರಿಕೆಯಾಗಿದ್ದಲಿ, ಈ ಜಾಗ ಆ ಸಮುದಾಯದ್ದೆಂದು ಹೇಳುವ ಧೈರ್ಯವೇಕೆ ಮಾಡಲಿಲ್ಲ? ಕೋರ್ಟಿನಲ್ಲಿ ಒಂದು “ಹ್ಞೂ” ಆದರೆ ಇನ್ನೊಂದು ತಂತಾನೇ “ಉಹ್ಞೂ” ಆಗಬೇಕು. ಇದು ’ರಾಮಾಯ ಸ್ವಸ್ತಿ; ರಾವಣಾಯ ಸ್ವಸ್ತಿ’ ಹೇಳುವ ಸ್ಥಾನವಲ್ಲವಲ್ಲಾ!
’ಕೊಡು’, ’ಕೊಳು’ ಔದಾರ್ಯದಿಂದ ಜಗಳ ಇತ್ಯರ್ಥ ಮಾಡಿಕೊಳ್ಳಬೇಕಾದ್ದು ಪರಸ್ಪರ ಕಕ್ಷಿದಾರರೇ ಹೊರತು “ಡಿಕ್ರಿ”ಯಿಂದ ಇದನ್ನು ತರುವುದು ಸಾಧ್ಯವಿಲ್ಲ. ದಶಕಗಳ ‘ಹಾವೂ-ಕೋಲೂ ಅಟ’ದಿಂದ ಕಕ್ಷಿದಾರರೂ ಬೇಸತ್ತಿರುತ್ತಾರೆ; ಈ ಪೀಳಿಗೆಯವರ ಜೀವಿತ ಕಾಲದಲ್ಲೇ ಇತ್ಯರ್ಥ ನೋಡಲು ತವಕಿಸುತ್ತಿರುತ್ತಾರೆಂಬ ಭಾವನೆಯಿಂದ ಆ ಔದಾರ್ಯವನ್ನು ನಿರೀಕ್ಷಿಸಲಾಗಿತ್ತು; ಆ ನಿರೀಕ್ಷೆಯಿಂದಲೇ ರಾಜೀ-ಸಂಧಾನ ಸ್ವರೂಪದ ಹೈ ಕೋರ್ಟ್ ತೀರ್ಪನ್ನು ಜನ ಹಾಡಿ ಹೊಗಳಿದ್ದು. ಆದರೆ ‘ಅದೂ ಸರಿ; ಇದೂ ಸರಿ’ ನಿಲವಿನಿಂದಾಗಿ ಅದು ಓಳಾಗಿದೆ. ಜಡ್ಜ್ಗಳೀಗ ವಿದುರನ ಮನೆ ಹಾಲುಣ್ಣಲು ಹೋಗಬಹುದು. ಈ ‘ರಾಮಾಯಣ’ವಂತೂ ದೇಶವನ್ನು ’ಮಹಾಭಾರತ ಯುದ್ಧ’ದತ್ತ ಕೊಂಡೊಯ್ಯಲಾರದಲ್ಲಾ? ಅದರಲ್ಲಿ ಕೌರವರು ಉಳಿಯಲಿಲ್ಲ; ಪಾಂಡವರಂತೂ ಎಂದಿಗೂ ಸುಖ ಪಡಲಿಲ್ಲ!