ತೀವ್ರಗೊಂಡ ಉಕ್ರೇನ್ ಬಿಕ್ಕಟ್ಟು

ತೀವ್ರಗೊಂಡ ಉಕ್ರೇನ್ ಬಿಕ್ಕಟ್ಟು

ಉಕ್ರೇನ್ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಸಮರ ಸಾಧ್ಯತೆ ಇನ್ನಷ್ಟು ನಿಕಟವಾಗಿದೆ. ಉಕ್ರೇನ್ ನ ಎರಡು ಪ್ರಾಂತ್ರ್ಯಗಳನ್ನು ರಷ್ಯಾ ಸ್ವತಂತ್ರ ರಾಷ್ಟ್ರಗಳೆಂದು ಮಾನ್ಯ ಮಾಡಿದೆ. ಡೊನೆಸ್ಕ್ ಮತ್ತು ಲುಹಾನ್ಸ್ಕ್ ಎಂಬ ಹೆಸರಿನ ಈ ಪ್ರಾಂತ್ಯಗಳಿಗೆ ತನ್ನ ಶಾಂತಿಪಾಲನಾ ಪಡೆಗಳನ್ನೂ ಕಳುಹಿಸಿದೆ. ಪುತಿನ್ ರವರು ಅದು ಶಾಂತಿಪಾಲನಾ ಪಡೆಗಳು ಎಂದು ಹೇಳಿಕೊಂಡಿದ್ದರೂ ನಿಜವಾಗಿ ಅದು ರಷ್ಯನ್ ಸೇನಾ ಪಡೆಯೇ ಆಗಿದೆ ಎಂಬುದರಲ್ಲಿ ಸಂಶಯವಿಲ್ಲ. ಈ ಪ್ರಾಂತ್ಯಗಳಲ್ಲಿರುವ ರಷ್ಯನ್ ಬೆಂಬಲಿತ ಬಂಡುಕೋರರು ಉಕ್ರೇನ್ ಸರಕಾರದ ವಿರುದ್ಧ ಸಮರ ಸಾರಿದ್ದರು. ಈಗ ಈ ಪ್ರಾಂತ್ರ್ಯಗಳನ್ನು ಸ್ವತಂತ್ರವೆಂದು ಘೋಷಿಸುವ ಮೂಲಕ ರಷ್ಯಾ ಉಕ್ರೇನನ್ನು ತಾನಾಗಿಯೇ ವಿಭಜಿಸಿದೆ. ಇದೀಗ ಶಾಂತಿಪಾಲನೆಯ ಹೆಸರಿನಲ್ಲಿ ರಷ್ಯನ್ ಪಡೆಗಳು ಉಕ್ರೇನ್ ನ ಒಳಗೆ ಪ್ರವೇಶಿಸಿರುವುದರಿಂದ ಮುಂದಿನ ದಾಳಿ ಯಾವಾಗ ನಡೆದೀತೆಂದು ಹೇಳಲಾಗದ ಪರಿಸ್ಥಿತಿ ಉದ್ಭವಿಸಿದೆ.

ರಷ್ಯಾದ ಈ ಕ್ರಮಕ್ಕೆ ಸಹಜವಾಗಿಯೇ ಅಮೇರಿಕ, ಇಂಗ್ಲೆಂಡ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಈ ರಾಷ್ಟ್ರಗಳು ರಷ್ಯಾದ ವಿರುದ್ಧವಾಗಿ ಹಲವಾರು ನಿರ್ಭಂಧಗಳನ್ನು ಹೇರಿದೆ. ಡೋನೆಸ್ಕ್ ಮತ್ತು ಲುಹಾನ್ಸ್ಕ್ ಗಳಿಗೆ  ಮಾನ್ಯತೆ ನೀಡಿರುವ ಕುರಿತಂತೆ ಚರ್ಚಿಸಲು ವಿಶ್ವಸಂಸ್ಥೆಯು ಭದ್ರತಾ ಮಂಡಳಿಯ ತುರ್ತು ಸಭೆ ಕರೆದಿದ್ದರೂ ಭದ್ರತಾ ಮಂಡಳಿ ಯಾವುದೇ ನಿರ್ಣಯ ತಾಳುವುದು ಅಸಾಧ್ಯವೇ ಸರಿ. ಏಕೆಂದರೆ ವೀಟೋ ಅಧಿಕಾರ ರಷ್ಯಾದ ಕೈಯಲ್ಲಿದೆ. ಹಾಗಾಗಿ ಈ ಸಭೆಯಿಂದ ಯಾವುದೇ ಪ್ರಯೋಜನವಾಗದು. ಜತೆಗೇ ಚೀನಾದ ಪರೋಕ್ಷ ಬೆಂಬಲ ಕೂಡ ರಷ್ಯಾಕ್ಕಿದೆ. ಇದೇ ಬೆಳವಣಿಗೆಯನ್ನು ತೈವಾನ್ ಮೇಲೆ ಆಕ್ರಮಣ ಮಾಡಲು ಚೀನಾ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ಹಾಗಾಗಿಯೇ ಅದು ಉಕ್ರೇನ್ ಬಿಕ್ಕಟ್ಟನ್ನು ಆಸಕ್ತಿಯಿಂದ ಗಮನಿಸುತ್ತಿದೆ ಹಾಗೂ ರಷ್ಯಾದ ಕ್ರಮಗಳನ್ನು ಬೆಂಬಲಿಸುತ್ತಿದೆ. ಉಕ್ರೇನ್ ದೇಶವು ಐರೋಪ್ಯ ಒಕ್ಕೂಟ ಸೇರುವುದನ್ನು ಮತ್ತು ನ್ಯಾಟೋ ಸೇರುವುದನ್ನು ಪುತಿನ್ ವಿರೋಧಿಸುತ್ತಾ ಬಂದಿದ್ದಾರೆ. ಹಿಂದೊಮ್ಮೆ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನನ್ನು ಮರಳಿ ರಷ್ಯಾದ ಹಿಡಿತದೊಳಕ್ಕೆ ತೆಗೆದುಕೊಳ್ಳುವುದು ಅವರ ಉದ್ದೇಶವಾಗಿದೆ. 

ಒಂದು ವೇಳೆ ರಷ್ಯಾವು ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮಕ್ಕೆ ಮುಂದಾದರೆ ಅದು ಜಾಗತಿಕವಾಗಿ ಪರಿಣಾಮ ಬೀರಲಿರುವುದು ಸ್ಪಷ್ಟ. ಭಾರತದ ಮೇಲೂ ಅದರ ಪರಿಣಾಮ ಉಂಟಾಗಲಿದೆ. ಈಗಾಗಲೇ ಜಾಗತಿಕವಾಗಿ ತೈಲ ಬೆಲೆಯಲ್ಲಿ ಏರಿಕೆ ಕಂಡು ಬರತೊಡಗಿದೆ. ಉಕ್ರೇನ್ ನ ಬಿಕ್ಕಟ್ಟು ಭಾರತದ ಶೇರು ಮಾರುಕಟ್ಟೆಯ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಜಗತ್ತಿನ ದೇಶಗಳು ಹಾಗೂ ವಿಶ್ವ ಸಂಸ್ಥೆಯು ಉಕ್ರೇನ್ ಬಿಕ್ಕಟ್ಟು ಕೂಡಲೇ ಶಮನವಾಗುವ ನಿಟ್ಟಿನಲ್ಲಿ ತಕ್ಷಣವೇ ಕಾರ್ಯನ್ಮುಖವಾಗ ಬೇಕಾಗಿರುವುದು ಅಗತ್ಯವಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ. ೨೪-೦೨-೨೦೨೨

ಚಿತ್ರ ಕೃಪೆ: ಇಂಟರ್ನೆಟ್ ತಾಣ