ತುಂಗೆಯ ತಟ - ಸಿಬ್ಬಲುಗುಡ್ಡ

ತುಂಗೆಯ ತಟ - ಸಿಬ್ಬಲುಗುಡ್ಡ

ಕುವೆಂಪು ಅವರ ಆತ್ಮಕತೆಯಲ್ಲಿ ಹಲವು ಬಾರಿ ವರ್ಣಿಸಿಕೊಂಡಿರುವ ಸ್ಥಳ ಸಿಬ್ಬಲುಗುಡ್ಡೆ – ತುಂಗಾ ನದಿ ತೀರದಲ್ಲಿರುವ ಈ ಸುಂದರ ಸ್ಥಳವನ್ನು ನೋಡಬೇಕೆಂಬ ನನ್ನ ಬಯಕೆ ಹಲವು ದಶಕಗಳದ್ದು. ಆ ಒಂದು ಕನಸು ಮೊನ್ನೆ ತಾನೆ ನನಸಾದಾಗ, ಇಷ್ಟು ವರ್ಷ ಕಾದು ಕಾದು, ಅಲ್ಲಿಗೆ ಭೇಟಿ ನೀಡಿದ್ದು ಸಾರ್ಥಕವೆನಿಸಿತು. ಕುವೆಂಪು ಅವರ ಜನ್ಮಸ್ಥಳವಾದ ಕುಪ್ಪಳಿಯಿಂದ ಸುಮಾರು ಹನ್ನೆರಡು ಕಿಲೊಮೀಟರ್ ದೂರದಲ್ಲಿರುವ ಈ ಚಂದದ ತಾಣಕ್ಕೆ ಬಂದು, ಅಲ್ಲಿನ ನೀರನ್ನು, ಮರಳನ್ನು ನೋಡುತ್ತಾ ಕುವೆಂಪುರವರು ಮನೋಲ್ಲಾಸವನ್ನು ಪಡೆಯುತ್ತಿದ್ದರಂತೆ.
     ಸಿಬ್ಬಲು ಗುಡ್ಡೆ ಎಂಬ ಹೆಸರು ಕೇಳಿದ ಕೂಡಲೆ, ಎಲ್ಲರ ಸಾಮಾನ್ಯ ಪ್ರತಿಕ್ರಿಯೆ ಎಂದರೆ, “ ಓ ಅಲ್ಲಿ ಮೀನುಗಳು ಇವೆ – ದೊಡ್ಡ ದೊಡ್ಡ ಮೀನುಗಳಿವೆ!”. ನಿಜ, ಅಲ್ಲಿನ ನದಿಯಲ್ಲಿ ಸ್ವಚ್ಚಂದವಾಗಿ ಆಡಿಕೊಂಡಿರುವ ಮೀನುಗಳು ಎಲ್ಲರಿಗೂ ಕಾಣಸಿಗುತ್ತವೆ. ಆ ಸ್ಥಳಕ್ಕೆ ಭೇಟಿ ನೀಡಿದ ನಂತರ, ನನಗೆ ಅನ್ನಿಸಿದ್ದು, ಮೀನುಗಳಿಗಿಂತಾ ಬಹಳ ಹೆಚ್ಚಿನ ಅನುಭವ ಅಲ್ಲಿ ದೊರಕಬಲ್ಲದು. ಅವರವರ ಭಾವಕ್ಕೆ ತಕ್ಕ ಅನುಭವ ಅವರವರಿಗೆ ಆಗುವುದು ನಿಜವಾದರೂ, ಸಿಬ್ಬಲು ಗುಡ್ಡ ಎಂಬಸ್ಥಳ ನನಗಂತೂ ಅದೇನೋ ಒಂದು ರೀತಿಯ, ಬರಹದಲ್ಲಿ ಮೂಡಿಸಲಾಗದ, ಮಾತಿನಲ್ಲಿ ಹೇಳಲಾಗದ, ಕವನದಲ್ಲಿ ಹಿಡಿದಿಡಲಾಗದ ಅನುಭೂತಿಯನ್ನು ನೀಡಿತು.
     ಸಹ್ಯಾದ್ರಿಯ ಬೆಟ್ಟಗಳಿಂದ ಹರಿದು ಬರುವ ತುಂಗಾನದಿಯು ಒಂದು ಪುಟ್ಟ ತಿರುವು ಹಾಕುತ್ತಾ, ಪೂರ್ವಕ್ಕೆ ಸಾಗುವ ಆ ವಿಶಾಲ ತಟದಲ್ಲಿ, ಆಚೆ ದಡದ ತುಂಬಾ ಮಿರ ಮಿರ ಮಿಂಚುವ ಮರಳು. ಅದರಾಚೆ ಮರಗಳು, ಕಾಡು - ಅಲ್ಲಿದ್ದ ಮರಗಳು ಹಸಿರಿನ ಸಿರಿಯನ್ನು ತುಂಬಿಕೊಂಡು ಚೆಂದ ಕಾಣುತ್ತಿದ್ದವು. ನಾವು ನಿಂತಿದ್ದ ತಟದಲ್ಲಿ, ಜುಳು ಜುಳು ಹರಿಯುವ ನೀರು. ಕೇವಲ ನೀರಷ್ಟೇ ಅಲ್ಲ, ಸ್ಪಟಿಕ ಶುದ್ಧ ಸಲಿಲ – “ಇಲ್ಲಿ ನೀರೆಲ್ಲವೂ ತೀರ್ಥ”! ಆ ನೀರಿನಲ್ಲಿ ಮಾರುದ್ದ ಗಾತ್ರದ ಮೀನುಗಳು ದಡದ ಬಳಿಯೇ ಸುಳಿಯುವುದು ನಿಜಕ್ಕೂ ಒಂದು ವಿಶೇಷ ನೋಟ. ನದಿಯ ನೀರಿನಲ್ಲಿ, ದಡದಿಂದ ಅನತಿ ದೂರದಲ್ಲಿದ್ದ ಮಧ್ಯಮಗಾತ್ರದ ಒಂದು ಕಲ್ಲಿನ ಆಕಾರವು ಕೂರ್ಮವನ್ನು ನೆನಪಿಸುತ್ತಿತ್ತು. ಕೂರ್ಮ ಎಂಬುದು ನನ್ನ ಅನಿಸಿಕೆ, ನೋಡುಗರ ಮನದ ಭಾವಕ್ಕನುಗುಣವಾಗಿ, ಬೇರೆ ರೂಪದಲ್ಲೂ ಕಾಣಬಹುದು ಆ ಜಲಶಿಲೆ! ಉದ್ದಕ್ಕೂ ಹರಿದು ಬರುವ ನದಿ, ಅದರಲ್ಲಿ ಹರಿಯುವ ನೀಲ ಬಣ್ಣದ ನೀರು, ಆಚೆ ದಡದಲ್ಲಿ ಹರಡಿದ್ದ ಮರಳು ಮತ್ತು ಮರಗಳು, ಇತ್ತ ಉದ್ದಕ್ಕೂ ಸಾಗಿ ಹೋಗುವ ತುಂಗಾ ನದಿ ಇವೆಲ್ಲವೂ  ಸುಂದರವಾಗವೆ ಎಂದರೆ ತೀರ ಸರಳವಾಗಿ ಹೇಳಿದಂತಾಗುತ್ತದೆ, ಮನಮೋಹಕವಾಗಿವೆ ಎಂದರೆ ಸರಿಯಾದೀತು.


     ನದಿ ತೀರದಲ್ಲಿ ಕಲ್ಲಿನ ಪಾವಟಿಗೆಗಳನ್ನು ಮಾಡಿಸಿದ್ದಾರೆ. ಕುಳಿತುಕೊಳ್ಳಲು ಸಿಮೆಂಟಿನಿಂದ ರಚಿಸಿದ ನಾಲ್ಕಾರು ಆಸನಗಳೂ ಇವೆ. ನದಿ ದಡದಲ್ಲೇ ಬೆಳೆದಿರುವ ಒಂದೆರಡು ಬೃಹದಾಕಾರದ ಮರಗಳು ಅಲ್ಲೆಲ್ಲಾ ತಮ್ಮ ವಿಶಾಲ ಕೊಂಬೆಗಳ ಟಿಸಿಲುಗಳನ್ನು ಹರಡಿ, ನೆರಳಿನ ಚಿತ್ತಾರವನ್ನೇ ಬಿಡಿಸಿದ್ದವು. ಆ ತುಂಗಾ ತಟದ ಪಾವಟಿಗೆಗಳನ್ನು ಹತ್ತಿ ಬಂದರೆ, ಒಂದು ಪುಟ್ಟ, ಚೊಕ್ಕ, ಸರಳ ದೇವಾಲಯ – ಗಣಪತಿಯ ಆ ದೇಗುಲವು, ಅಲ್ಲಿನ ಗಿಡಮರಗಳ ಮಧ್ಯೆ, ಕಾಡಿನ ಇಳಿಜಾರಿನಲ್ಲಿ, ನಿಶ್ಶಬ್ದ ಸ್ಥಳದಲ್ಲಿ ತಲೆಎತ್ತಿದೆ. ಪಕ್ಕದಲ್ಲಿರುವ ಏಕಾಂಗಿ ಮನೆಯೊಂದನ್ನು ಬಿಟ್ಟರೆ, ಆ ಸುತ್ತಲೆಲ್ಲೂ ಜನವಸತಿಯ ಸುಳಿವೇ ಇಲ್ಲ – ತೀರ್ಥಹಳ್ಳಿಯಿಂದ ಬಂದು, ತಿರುವು ದಾರಿಯಲ್ಲಿ ಏರಿ ಹೋಗುವ ಟಾರು ಹಾಕಿದ ರಸ್ತೆಯೊಂದನ್ನು ಬಿಟ್ಟರೆ, ನಾಗರಿಕ ಜಗತ್ತಿನ ಬೇರಾವ ಸುಳಿವೂ ಅಲ್ಲಿ ಕಾಣದು. ದೇವಾಲಯದ ಪೌಳಿಯೊಳಗಿನ ಜಗಲಿಯಲ್ಲಿ ಕುಳಿತರೆ, ಅದ್ಯಾವುದೋ ನಿಶ್ಶಬ್ದ ಲೋಕದಲ್ಲಿದ್ದೇವೇನೋ ಅನಿಸಿದರೂ, ಆ ನಿಶ್ಶಬ್ದ ಜಗತ್ತಿನಲ್ಲೂ, ಅಮೂರ್ತವೋ, ಮೂರ್ತವೋ ಅನಿಸುವ ಹಲವಾರು ದನಿಗಳು ಮನದ ಕದವನ್ನು ತಟ್ಟುತ್ತಿದ್ದವು. ಸುತ್ತಲೂ ಮುತ್ತಿದ್ದ ಕಾಡು ಧ್ಯಾನ ಮಾಡುತ್ತಿತ್ತೋ, ಅಥವಾ ಆ ಅನೂಹ್ಯ ಪರಿಸರದಲ್ಲಿ ಮಿಂದೆದ್ದ ನಮ್ಮೆಲ್ಲರ ಮನವೇ ತನ್ನಷ್ಟಕ್ಕೆ ತಾನೇ ಧ್ಯಾನಕ್ಕೆ ಜಾರುತ್ತಿತ್ತೋ ಏನೊಂದೂ ಗೊತ್ತಾಗದ ಅಯೋಮಯ ಮನಸ್ಥಿತಿ.
     ದೇಗುಲದ ಪಕ್ಕದ ಮನೆಯಲ್ಲಿದ್ದ ಮನೆ ಸಹಾ ತನ್ನದೇ ರೀತಿಯಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿದ್ದಂತೆ ಕಂಡು ಬಂತು. ಸಗಣಿ ಹಾಕಿ ಚೊಕ್ಕಗೊಳಿಸಿದ ಅಂಗಳ, ಮಂಗಳೂರು ಹಂಚಿನ ಛಾವಣಿ, ಕೆಂಪುಬಣ್ಣ ಹಾಕಿ ಗಾರೆ ಮಾಡಿದ ನೆಲ, ಮನೆಯ ಸುತ್ತಲೂ ಮರಗಳು, ಮತ್ತೊಂದು ಭಾಗದಲ್ಲಿ ತುಂಗಾ ನದಿ. ತುಂಬಾ ದೂರದ ತನಕ ಮರ,ಗಿಡ,ಕಲ್ಲು,ಕಾಡು – ಮನೆಯ ಸುತ್ತಲಿನ ಬೆಟ್ಟದ ಇಳಿಜಾರಿನಲ್ಲಿ ಕೆಲವು ಜೇನು ಪೆಟ್ಟಿಗೆಗಳನ್ನಿಟ್ಟಿದ್ದರು – ಸಿಬ್ಬಲು ಗುಡ್ಡ ನೋಡಲು ಬಂದವರಿಗೆ ಆ ಮನೆಯವರು ಜೇನುತುಪ್ಪ ನೀಡುವ ಪ್ರಕ್ರಿಯೆಯೂ ಆ ಸುತ್ತಲಿನ ಧ್ಯಾನಸ್ಥ ಜಗತ್ತಿಗೆ ಮತ್ತೊಂದು ಆಯಾಮವನ್ನು ನೀಡಿದಂತೆ ಅನಿಸಿತು.
     ಸಿಬ್ಬಲು ಗುಡ್ಡ ಎಂಬ ಹೆಸರು ಬಂದುದಕ್ಕೆ ಕಾರಣವೆಂದರೆ, ಸಿಬ್ಬು ಅಥವಾ ಚಿಬ್ಬು ಆದವರು ಅಲ್ಲಿಗೆ ಬಂದು ನದಿಗೆ ಅಕ್ಕಿ ಹಾಕುವ ಸಂಪ್ರದಾಯ ಆ ಗ್ರಾಮೀಣ ಪರಿಸರದಲ್ಲಿದೆ. ಭಕ್ತರು ನದಿಗೆ ಚೆಲ್ಲಿದ ಅಕ್ಕಿಯನ್ನು ತಿಂದು ಅಭ್ಯಾಸವಾದ ಮೀನುಗಳು, ಯಾವುದೇ ಭಯವಿಲ್ಲದೆ, ಪಾವಟಿಗೆಯ ಹತ್ತಿರ ಬಂದು ನೀರಿನಲ್ಲಿ ಉರುಳಾಡುತ್ತಾ ಅಕ್ಕಿಗಾಗಿ ಪೈಪೋಟಿ ಮಾಡುವ ದೃಶ್ಯ ಮುದನೀಡುತ್ತದೆ. ಅಲ್ಲಿನ ಮೀನುಗಳ ಕುರಿತು ಇರುವ ಐತಿಹ್ಯವೆಂದರೆ, ಅಲ್ಲಿರುವ ನೂರಾರು ಮೀನುಗಳಲ್ಲಿ ಒಂದು ಮೀನಿಗೆ ಚಿನ್ನದ ಮೂಗುತಿ ಇದ್ದು, ಒಂದು ಮುಡಿ ಅಥವಾ ಪಲ್ಲ ಅಕ್ಕಿ ಹಾಕಿದಾಗ ಅದು ಕಾಣಿಸಿಕೊಳ್ಳುತ್ತದೆ ಎಂದು. ಆ ಐತಿಹ್ಯದ ಸತ್ಯಾಸತ್ಯತೆಗಿಂತಲೂ, ಆ ಐತಿಹ್ಯದ ಮೂಲಕ ಸ್ಥಳೀಯರು ಅಲ್ಲಿರುವ ಚಂದದ ಮೀನುಗಳಿಗೆ ನೀಡುತ್ತಿರುವ ಗೌರವ ಗಮನಸೆಳೆಯುತ್ತದೆ. ಸಿಬ್ಬು ಆದವರು ಅಕ್ಕಿ ಹಾಕುವ ಸಂಪ್ರದಾಯದ ಕುರಿತು ಗಮನ ಸೆಳೆಯುವ ಮತ್ತೊಂದು ವಿಚಾರವೆಂದರೆ, ಈ ಒಂದು ಸಂಪ್ರದಾಯ ನಮ್ಮ ನಾಡಿನ ಮಲೆನಾಡು ಮತ್ತು ಕರಾವಳಿಯುದ್ದಕ್ಕೂ ಹರಡಿತ್ತು ಎಂಬ ವಿಚಾರ. ಉಡುಪಿ ಜಿಲ್ಲೆಯ ಕೋಟೇಶ್ವರದ ಜಾತ್ರೆಯ ದಿನ, ಅಲ್ಲಿನ ವಿಶಾಲವಾದ  ಕೆರೆಯ ಸುತ್ತಲ್ಲೂ ಅಕ್ಕಿಯನ್ನು ಚೆಲ್ಲುವ ಸಂಪ್ರದಾಯವಿದೆ. ಅದೇ ಜಿಲ್ಲೆಯ ವಂಡಾರು ಎಂಬಲ್ಲಿ, ವಾರ್ಷಿಕ ಕಂಬಳದ ದಿನ, ಕಂಬಳಗದ್ದೆಯ ಸುತ್ತಲೂ ಅಕ್ಕಿಯನ್ನು ಚೆಲ್ಲುವ ಪದ್ದತಿ ಇದೆ – ಇವೆರಡೂ ಸ್ಥಳಗಳಲ್ಲಿ, ಆ ಪದ್ದತಿಯಿಂದಾಗಿ, ಸಿಬ್ಬು ಮಾಯವಾಗುತ್ತದೆಂಬ ನಂಬಿಕೆ ಉಂಟು.   ಜಲಚರಗಳಿಗೆ ಅಕ್ಕಿಯನ್ನು ತಿನಿಸುವುದರಿಂದಾಗಿ, ಮೈ ಚರ್ಮದ ಮೇಲಿನ ಸಿಬ್ಬು ಮಾಯವಾಗುವುದೆಂಬ ಜನಪದರ ಅನಿಸಿಕೆಯೇ ಕುತೂಹಲಕಾರಿಯಾಗಿ ಕಾಣುತ್ತದೆ. ಅದೊಂದು ರೀತಿಯ ಮುಷ್ಠ ಇರಬಹುದೇನೊ!
     ಸಿಬ್ಬಲು ಗುಡ್ಡದಲ್ಲಿ ಹರಿಯುವ ತುಂಗಾ ನದಿ, ಅಲ್ಲಿನ ಮೀನುಗಳು, ಸುತ್ತಲೂ ಹರಡಿರುವ ಕಾಡು, ಆ ಕಾಡಿನಲ್ಲಿರುವ ಜೇನು – ಅಲ್ಲಿಂದ ತಂದಿರುವ ಜೇನುತುಪ್ಪವನ್ನು ಪ್ರತಿ ದಿನ ಒಂದೊಂದು ಚಮಚ ಸೇವಿಸುವಾಗಲೆಲ್ಲಾ ನೆನಪಾಗುತ್ತಿರುತ್ತದೆ!                                                                           

Comments

Submitted by nr_nagendra Mon, 01/14/2013 - 14:35

ತುಂಬಾ ಒಳ್ಳೆಯ ಲೇಖನ ಶಶಿಯವರೇ ...... ನನಗೂ ಇಲ್ಲೊಮ್ಮೆ ಹೋಗಬೇಕು ಅನಿಸ್ತಾ ಇದೆ ... :) ತೀರ್ಥಹಳ್ಳಿಯಿಂದ ಸಿಬ್ಬಲು ಗುಡ್ಡಕ್ಕೆ ಹೇಗೆ ಹೋಗುವುದೆಂದು ದಯವಿಟ್ಟು ಹೇಳುತ್ತೀರಾ ?
Submitted by sasi.hebbar Tue, 01/15/2013 - 17:43

In reply to by nr_nagendra

ಸಿಬ್ಬಲು ಗುಡ್ಡ ಸಾಕಷ್ಟು ಹೆಸರುವಾಸಿ ತಾಣ. ತೀರ್ಥಹಳ್ಳಿಯಿಂದ ಸುಮಾರು 10ರಿಂ 12 ಕಿ.ಮೀ. ದೂರ - ಬಸ್ಸುಗಳಿವೆ ಗಂಟೆಗೊಮ್ಮೆ. ಸ್ವಂತ ವಾಹನ ಸೌಕರ್ಯವಿದ್ದವರು, ಸುಮಾರಾಗಿ ಉತ್ತಮವೆನಿಸುವ ರಸ್ತೆಯಲ್ಲಿ ಸಾಗಿ ಆ ಸ್ಥಳವನ್ನು ತಲುಪಬಹುದು. ಸಿಬ್ಬಲು ಗುಡ್ಡ, ಕವಿಶೈಲ, ಕುಂದಾದ್ರಿ ಮತ್ತು ಆಗುಂಬೆ - ಈ ನಾಲ್ಕು ಸ್ಥಳಗಳನ್ನು ಒಂದು ದಿನ ನೋಡುವ ಕಾರ್ಯಕ್ರಮ ಚೆನ್ನಾಗಿರುತ್ತೆ - ಊಟ, ತಿಂಡಿಗಾಗಿ ತೀರ್ಥಹಳ್ಳಿಯ ಹೋಟೆಲ್ಲುಗಳಿದ್ದೇ ಇವೆ. ತಡವೇಕೆ, ಈ ಭಾನುವಾರ ಸಿಬ್ಬಲುಗುಡ್ಡಕ್ಕೆ ಹೋಗಿ, ಮೀನುಗಳನ್ನು ನೋಡಲು, ಧ್ಯಾನ ಮಾಡಲು, ಜೇನು ತುಪ್ಪ ತಿನ್ನಲು!