ತುಂಟಕೃಷ್ಣ

ತುಂಟಕೃಷ್ಣ

ಶ್ರಾವಣ ಮಾಸದ ಕೃಷ್ಣ ಪಕ್ಷದಲಿ

ನಟ್ಟಿರುಳು ಬುವಿಗಿಳಿದು ಬಂದೆಯ

ಮಥುರೆಯ ತೊರೆದು ಗೋಕುಲವ ಸೇರಿ

ನಂದನರಮನೆಯಲಿ ಬೆಳೆದೆಯಾ

 

ದೇವಕಿಯ ಕಂದ ನಂದ ಮುಕುಂದ ಗೋವಿಂದ

ಮುರಾರಿ ಅಸುರಾರಿ ಬಾಲಗೋಪಾಲ ಚಿದಾನಂದ

ತುಂಟ ಕೃಷ್ಣ ತಂಟೆಕೋರ ಚೆಲುವ ಚೆನ್ನಿಗರಾಯ

ಅಣ್ಣ ಬಲರಾಮನೊಡನೆ ಬೆಣ್ಣೆ ಮೆದ್ದು ಸಿಕ್ಕಿ ಬಿದ್ದವ

 

ನವಿಲುಗರಿಯ ಆಭರಣ ಮುಕುಟಕೆ ಶೋಭೆ

ಪಟ್ಟೆ ಪೀತಾಂಬರ ತುಳಸಿಹಾರಧರ ದೇವ

ಹೃದಯ ಶ್ರೀಮಂತಿಕೆಗೆ ಕುಚೇಲನ ಬೆಸುಗೆ

ಕೊಳಲ ನಾದದಿ ಆನಂದಮಯವಾಗಿಸಿದೆ

 

ಗೋವುಗಳ ಕಾಯ್ದ ಗೋಪಾಲಕನಾದೆ

ಯದುಕುಲೋತ್ತಮ ಪಾರ್ಥನಿಗೆ ಸಖನಾದೆ

ದ್ರೌಪದಿಯ ಮಾನವ ಸಂರಕ್ಷಿಸಿ ಕರುಣಿಸಿದೆ

ಭಕ್ತಜನ ಸುರಧೇನು ಮನಸಿಜ ಪಿತನಾದೆ

 

ಮಹಾಭಾರತದ ಸೂತ್ರಧಾರ ಸಾರಥಿಯಾದೆ

ದುಷ್ಟ ಶಿಕ್ಷಕ ಶಿಷ್ಟರ ಪರಿಪಾಲಿಸಿ ರಕ್ಷಿಸಿದೆ

ಮಹಾಪ್ರಸಾದ ಜೀವನ ಸಂದೇಶ ಸಾರಿದೆ

ಭಗವದ್ಗೀತೆ ಅನನ್ಯ ಸಂಪದವ ಜಗಕೆ ನೀಡಿದೆ

 

ನಿನ್ನ ನಾಮ ಸ್ಮರಣೆಯಲಿ ಮಿಂದೆದ್ದೆ

ತನುಮನವನಾವರಿಸಿ ಎಚ್ಚರಿಸಿದೆ

ಜಗದೋದ್ಧಾರಕ ಲೀಲಾ ವಿನೋದ

ಪಾದಪದ್ಮಗಳಿಗೆ ಪೊಡಮಡುವೆ

-ರತ್ನಾ ಕೆ.ಭಟ್, ತಲಂಜೇರಿ