ತುಂಟ ಹುಡುಗನ ಕೀಟಲೆಗಳು

ತುಂಟ ಹುಡುಗನ ಕೀಟಲೆಗಳು

ಉತ್ತರ ಜಪಾನಿನ ಒಂದು ಹಳ್ಳಿಯಲ್ಲಿ ಒಬ್ಬ ತುಂಟ ಹುಡುಗನಿದ್ದ. ಇತರರಿಗೆ ಕೀಟಲೆ ಮಾಡುವುದೆಂದರೆ ಅವನಿಗೆ ಖುಷಿಯೋ ಖುಷಿ. ಕೆಲವೊಮ್ಮೆ ಅವನ ಕೀಟಲೆಯಿಂದ ತೊಂದರೆ ಅನುಭವಿಸಿದ ಹಳ್ಳಿಗರಿಗೆ ಕೋಪ ಬರುತ್ತಿತ್ತು.
 
ಅವನು ದೊಡ್ಡವನಾದಂತೆ, ಅಲ್ಲಿನ ಭತ್ತದ ಹೊಲಗಳಲ್ಲಿ ದಿನವಿಡೀ ದುಡಿದು ಮನೆಗೆ ಬರುತ್ತಿದ್ದ ಮಧ್ಯಮ ವಯಸ್ಸಿನ ಹಳ್ಳಿಗರು ಅವನ ಹಾಸ್ಯಮಯ ಪ್ರಸಂಗಗಳನ್ನು ಇಷ್ಟ ಪಡತೊಡಗಿದರು. ಕೆಲವೊಮ್ಮೆ ಅವನ ಕೀಟಲೆಗಳಲ್ಲಿ ಇತರ ಕೆಲವು ಬಾಲಕ- ಬಾಲಕಿಯರೂ ಸೇರಿಕೊಳ್ಳುತ್ತಿದ್ದರು. ಕ್ರಮೇಣ ತನ್ನನ್ನು ಎಲ್ಲರೂ ಗಮನಿಸುತ್ತಿದ್ದಾರೆ ಎಂಬುದು ಅವನ ತಲೆಗೇರಿತು.

ಅವನು ಹಿರಿಯರ ಬಗ್ಗೆ ದಯಾಮಯನೂ ವಿನಯವಂತನೂ ಆಗಿರಬೇಕೆಂಬುದು ಅವನ ಅಮ್ಮನ ಬಯಕೆ. ಆದರೆ ಅವನು ಕೆಲವೊಮ್ಮೆ ಇದನ್ನು ಮರೆತು, ಹಿರಿಯರಿಗೆ ನೋವು ಕೊಡುವಂತಹ ಕೀಟಲೆಗಳನ್ನು ಮಾಡುತ್ತಿದ್ದ.

ಅವನ ಅಮ್ಮ ಅವನನ್ನು ಯಾವಾಗಲೂ ಎಚ್ಚರಿಸುತ್ತಿದ್ದಳು, “ಯಾವತ್ತಾದರೂ ನಿನಗೆ ಕಿನ್ನರ ಕಾಣ ಸಿಕ್ಕಿದರೆ, ವಿನಯದಿಂದ ವರ್ತಿಸು. ಅವನೊಂದಿಗೆ ಅಹಂಕಾರದಿಂದ ವರ್ತಿಸಬೇಡ ಅಥವಾ ಅವನಿಗೆ ಕೀಟಲೆ ಮಾಡಬೇಡ. ಯಾಕೆಂದರೆ ಅವನು ಯಾವಾಗಲೂ ಸೇಡು ತೀರಿಸಿಕೊಳ್ಳುತ್ತಾನೆ.” ಆ ಕಿನ್ನರರಿಗೆ ಉದ್ದ ಮೂಗು ಇರುತ್ತದೆ. ಅವರು ಹುಲ್ಲಿನಿಂದ ಮಾಡಿದ ಮೇಲಂಗಿ ಧರಿಸುತ್ತಾರೆ. ತಲೆಗೆ ಹಾಕಿಕೊಂಡ ಕಪ್ಪು ಟೋಪಿಯನ್ನು ಗದ್ದದ ಕೆಳಗೆ ನೂಲಿನಿಂದ ಬಿಗಿದಿರುತ್ತಾರೆ. ಕೀಟಲೆ ಮಾಡುವುದೇ ಅವರ ಕೆಲಸ. ಆದರೆ ತಮಗೆ ಲೇವಡಿ ಮಾಡೋದನ್ನು ಅವರು ದ್ವೇಷಿಸುತ್ತಾರೆ.

ಅದೊಂದು ದಿನ ತುಂಟ ಹುಡುಗ ಕೈಯಲ್ಲೊಂದು ಬಿದಿರಿನ ತುಂಡು ಹಿಡಿದುಕೊಂಡು ಒಂದು ಮರದಡಿಯಲ್ಲಿ ಕುಳಿತಿದ್ದ. ಆಗ ರಸ್ತೆಯಲ್ಲಿ ತನ್ನತ್ತ ಒಬ್ಬ ಕಿನ್ನರ ಬರೋದನ್ನು ಕಂಡ. ಈಗೊಂದು ಕೀಟಲೆ ಮಾಡಲು ನಿರ್ಧರಿಸಿದ ತುಂಟ ಹುಡುಗ. ಆ ಬಿದಿರಿನ ತುಂಡನ್ನು ಕಣ್ಣಿಗೊತ್ತಿಕೊಂಡು ಆಕಾಶದತ್ತ ನೋಡತೊಡಗಿದ.

ತುಂಟ ಹುಡುಗನೆದುರು ನಿಂತ ಕಿನ್ನರ ಕೇಳಿದ, "ಯಾಕೆ ಬಿದಿರಿನಿಂದ ಆಕಾಶದತ್ತ ನೋಡ್ತಾ ಇದ್ದಿ?” ತುಂಟ ಹುಡುಗ ಎದ್ದು ನಿಂತು ಕಿನ್ನರನಿಗೆ ವಂದಿಸಿದ. “ನಿನ್ನ ಬಿದಿರಿನ ತುಂಡಿನ ಮೂಲಕ ಏನು ನೋಡಬಲ್ಲೆ? ಬಿಳಿ ಮೋಡಗಳಾಚೆ ಏನಿದೆಯೆಂದು ನೋಡಬಲ್ಲೆಯಾ?" ಎಂದು ಪುನಃ ಕೇಳಿದ ಕಿನ್ನರ.

ತುಂಟ ಹುಡುಗ ಬಿದಿರಿನ ತುಂಡನ್ನು ಪುನಃ ಕಣ್ಣಿಗೊತ್ತಿಕೊಂಡು ಆಕಾಶದತ್ತ ನೋಡಿದ ಹೊರತು ಕಿನ್ನರನ ಪ್ರಶ್ನೆಗೆ ಉತ್ತರಿಸಲಿಲ್ಲ. ಆಗ ತನಗೊಮ್ಮೆ ಆ ಬಿದಿರಿನ ತುಂಡನ್ನು ಕೊಡಬೇಕೆಂದು ಕಿನ್ನರ ವಿನಂತಿಸಿದ. ತುಂಟ ಹುಡುಗ ಅದನ್ನು ಕೊಡಲು ನಿರಾಕರಿಸುತ್ತಾ ಹೇಳಿದ, “ನೀನು ಯಾವತ್ತೂ ನೋಡದಿರುವ ಅದ್ಭುತಗಳನ್ನು ನನ್ನ ಬಿದಿರಿನ ತುಂಡಿನ ಮೂಲಕ ನಾನು ನೋಡುತ್ತಿದ್ದೇನೆ.”

ಈಗ ತುಂಟ ಹುಡುಗನನ್ನು ಪುಸಲಾಯಿಸಲು ಶುರು ಮಾಡಿದ ಕಿನ್ನರ. ಮೊದಲು ಅವನು ತನ್ನ ಟೋಪಿ ಕೊಡುತ್ತೇನೆಂದ; ಅದು ಬೇಡವೆಂದ ಹುಡುಗ. ನಂತರ ಕಿನ್ನರ ತನ್ನ ಹುಲ್ಲಿನ ಮೇಲಂಗಿ ಕೊಡುತ್ತೇನೆಂದ. ನೀರು ಸೋರದಿರುವ ಆ ಮೇಲಂಗಿ ಪ್ರಯೋಜನಕ್ಕೆ ಬರುತ್ತದೆ ಎಂದು ತುಂಟ ಹುಡುಗನಿಗೆ ಆಶೆಯಾಯಿತು. ಕೊನೆಗೆ “ನಿನ್ನ ಮೇಲಂಗಿಗೆ ಬದಲಾಗಿ ನನ್ನ ಬಿದಿರಿನ ತುಂಡು ಕೊಡ್ತೇನೆ” ಎಂದ ತುಂಟ ಹುಡುಗ.

ಅಂತೆಯೇ ಅವರು ಮೇಲಂಗಿ ಮತ್ತು ಬಿದಿರಿನ ತುಂಡನ್ನು ಬದಲಾಯಿಸಿಕೊಂಡರು. ತುಂಟ ಹುಡುಗ ಆ ಹುಲ್ಲಿನ ಮೇಲಂಗಿ ಧರಿಸಿ ಹಳ್ಳಿಗೆ ಓಡಿದ. ಸ್ವಲ್ಪ ದೂರ ಹೋದ ನಂತರ ಈತ ಹಿಂದಕ್ಕೆ ತಿರುಗಿ ನೋಡಿದಾಗ, ಕಿನ್ನರ ಸಿಟ್ಟಿನಿಂದ ಬಿದಿರಿನ ತುಂಡನ್ನು ಇವನತ್ತ ಝಳಪಿಸುತ್ತಿದ್ದ. ಯಾಕೆಂದರೆ ಅದು ಟೊಳ್ಳಾಗಿರಲಿಲ್ಲ; ಅದರ ಮೂಲಕ ಏನನ್ನೂ ಕಾಣಲು ಸಾಧ್ಯವಿರಲಿಲ್ಲ.

ತನ್ನ ಸಾಹಸವನ್ನು ಅಮ್ಮನಿಗೆ ಹೇಳಬೇಕೆಂದು ತುಂಟ ಹುಡುಗ ಮನೆಗೆ ಹೋದ. ಅವನ ಅಮ್ಮ ಚಾಪೆಯ ಮೇಲೆ ಕುಳಿತು ಅವನ ಒಳ್ಳೆಯ ಉಡುಪಿಗೆ ಹೊಲಿಗೆ ಹಾಕುತ್ತಿದ್ದಳು. “ಅಮ್ಮಾ, ಇಲ್ಲಿ ನೋಡು. ನೀರು ಸೋರದ ಹುಲ್ಲಿನ ಮೇಲಂಗಿಯನ್ನು ಮೋಸದಿಂದ ಕಿನ್ನರನಿಂದ ತಗೊಂಡು ಬಂದಿದ್ದೇನೆ” ಎಂದು ಕೂಗಿದ ತುಂಟ ಹುಡುಗ.

ಆದರೆ ಅವನ ಅಮ್ಮ ತಲೆಯೆತ್ತಲೇ ಇಲ್ಲ. ಅವನು ಪುನಃ ಅಮ್ಮನಿಗೆ ಕೂಗಿ ಹೇಳಿದ. ಆದರೆ ಅವಳು ಹೊಲಿಯುತ್ತಲೇ ಇದ್ದಳು. ಈಗ ಅವನು ತನ್ನನ್ನೇ ನೋಡಿಕೊಂಡ. ಅವನ ಕೈಗಳು ಮತ್ತು ಪಾದಗಳು ಕಣ್ಮರೆಯಾಗಿದ್ದವು! ಮೇಲಂಗಿ ಹಾಕಿಕೊಂಡ ತಾನು ಯಾರಿಗೂ ಕಾಣಿಸುತ್ತಿಲ್ಲ ಎಂದು ಅವನಿಗೆ ತಿಳಿಯಿತು.

ತಕ್ಷಣವೇ ಅವನು ಹಳ್ಳಿಯಲ್ಲಿ ಇಲ್ಲಸಲ್ಲದ ಕೀಟಲೆ ಶುರು ಮಾಡಿದ. ಮುದುಕಮುದುಕಿಯರ ಕಿವಿಗಳನ್ನು ತಿರುಚಿದ. ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರ ಬ್ಯಾಗುಗಳನ್ನು ಅಡಿಮೇಲಾಗಿಸಿದ. ಜನರಿಲ್ಲದ ಗಾಡಿಯೊಂದನ್ನು ರಸ್ತೆಯ ಒಂದು ತುದಿಯಿಂದ ಇನ್ನೊಂದು ತುದಿಗೆ ಎಳೆದೊಯ್ದ. ಒಂದು ಗಾಡಿಯಲ್ಲಿ ಒಬ್ಬ ಕುಳಿತಿದ್ದಾಗಲೇ ಅದನ್ನು ತಲೆಕೆಳಗಾಗಿಸಿದ; ಅದರಲ್ಲಿದ್ದ ವ್ಯಕ್ತಿ ಗಾಡಿ ಎಳೆಯುತ್ತಿದ್ದಾತನಿಗೆ ಬಯ್ದ. ತಮ್ಮ ಹಳ್ಳಿಯಲ್ಲಿ ಭೂತಚೇಷ್ಟೆ ಶುರುವಾಗಿದೆ ಎಂದು ಭಾವಿಸಿದರು ಹಳ್ಳಿಗರು.

ಕೊನೆಗೆ ಸುಸ್ತಾಗಿ, ತುಂಟ ಹುಡುಗ ಮನೆಗೆ ಹಿಂತಿರುಗಿದ. ತನ್ನ ಹುಲ್ಲಿನ ಮೇಲಂಗಿಯನ್ನು ಗೂಟಕ್ಕೆ ನೇತು ಹಾಕಿದ. ರಾತ್ರಿ ಊಟ ಮಾಡಿ ಮಲಗಿದ. ಅನಂತರ ಅವನ ಅಮ್ಮ ಗೂಟದಲ್ಲಿ ನೇತಾಡುತ್ತಿದ್ದ ಹುಲ್ಲಿನ ಮೇಲಂಗಿಯನ್ನು ನೋಡಿದಳು. ಅದು ಹಳೆಯದಾಗಿ ಧೂಳು ಹಿಡಿದಂತೆ ಕಾಣಿಸಿತು. ಹಾಗಾಗಿ ಅದನ್ನು ಹೊರಗೆಸೆದು ಸುಟ್ಟು ಹಾಕಿದಳು.

ಮರುದಿನ ತುಂಟ ಹುಡುಗನಿಗೆ ಮೇಲಂಗಿ ಕಾಣಿಸಲಿಲ್ಲ. ಅದನ್ನು ಸುಟ್ಟು ಹಾಕಿದ್ದೇನೆಂದಳು ಅಮ್ಮ. ಅವನು ಹೊರ ಹೋಗಿ, ಅದರ ಬೂದಿಯನ್ನೆಲ್ಲ ಒಂದು ಬಕೆಟಿಗೆ ಹಾಕಿದ. ಆ ಬೂದಿಯನ್ನು ಮೈಗೆ ಸವರಿದರೆ ತಾನು ಯಾರಿಗೂ ಕಾಣಿಸುವುದಿಲ್ಲ ಎಂದು ಅವನಿಗೆ ತಿಳಿಯಿತು. ಹಾಗಾಗಿ ಅವನು ಅದನ್ನು ಮೈಗೆ ಸವರಿಕೊಂಡು, ಪುನಃ ತನ್ನ ಕೀಟಲೆ ಶುರು ಮಾಡಿದ.

ಮಧ್ಯಾಹ್ನದ ಹೊತ್ತಿಗೆ ತುಂಟ ಹುಡುಗನಿಗೆ ಹಸಿವಾಯಿತು. ಅವನು ಹಳ್ಳಿಯ ಹೋಟೆಲಿಗೆ ಹೋಗಿ, ಅಲ್ಲಿ ತಿನಿಸು ತಿನ್ನುತ್ತಿದ್ದವರ ಪ್ಲೇಟುಗಳಿಂದ ತಿನಿಸನ್ನು ತೆಗೆದು ತಿನ್ನತೊಡಗಿದ. ಅಲ್ಲಿದ್ದವರಿಗೆಲ್ಲ ಗೊಂದಲವಾಯಿತು. ಅವನಿಗೆ ಬಾಯಾರಿಕೆಯಾಯ್ತು. ಆತ ಲೋಟ ಎತ್ತಿ ನೀರು ಕುಡಿದ. ಆಗ ಸ್ವಲ್ಪ ನೀರು ಅವನ ಮುಖಕ್ಕೆ ಚೆಲ್ಲಿತು. ಅಲ್ಲಿದ್ದವರಿಗೆ ಅವನ ಅರೆಬರೆ ಮುಖ ಕಾಣಿಸಿತು. ಅವರು ಅವನನ್ನು ಸುತ್ತುವರಿದರು. ಅವನಿಗೆ ಭಯವಾಯಿತು. ಅವನು ಓಡತೊಡಗಿದ. ಜನರೆಲ್ಲ ಕೋಲು ಹಿಡಿದುಕೊಂಡು ಅವನನ್ನು ಅಟ್ಟಿಸಿಕೊಂಡು ಹೋದರು.

ತುಂಟ ಹುಡುಗ ಹೆದರಿ ಕಂಗಾಲಾಗಿ ಓಡಿದ. ನದಿ ದಡಕ್ಕೆ ಬಂದಾಗ, ಏಟುಗಳನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನದಿಗೆ ಹಾರಿದ. ಆಗ ಅವನು ಸವರಿಕೊಂಡಿದ್ದ ಬೂದಿಯೆಲ್ಲ ನೀರಿನಲ್ಲಿ ತೊಳೆದು ಹೋಗಿ, ಅವನ್ಯಾರೆಂದು ಎಲ್ಲರಿಗೂ ತಿಳಿಯಿತು. ಅವನು ಈಜಿಕೊಂಡು ನದಿಯ ಆಚೆಯ ದಡ ಸೇರಿದಾಗ, ಜನರು ಸೇತುವೆ ದಾಟಿ ಹೋಗಿ, ಅಂತೂ ಅವನನ್ನು ಹಿಡಿದರು. ಆದರೂ ಅವನು ಮಾಡಿದ ಅನಾಹುತಗಳಿಗಾಗಿ ಅವನನ್ನು ಥಳಿಸದೆ, ಎಚ್ಚರಿಸಿ ಮನೆಗೆ ಕಳಿಸಿದರು.

ಈ ಘಟನೆಯಿಂದ ಬುದ್ಧಿ ಕಲಿತ ತುಂಟ ಹುಡುಗ, ಇನ್ನು ಮುಂದೆ ಯಾರಿಗೂ ಕೀಟಲೆ ಮಾಡುವುದಿಲ್ಲವೆಂದು ನಿರ್ಧರಿಸಿದ.

ಗಮನಿಸಿ: ಇದು “ಸಂಪದ"ದಲ್ಲಿ ಪ್ರಕಟವಾದ “ಮಕ್ಕಳ ಕತೆ ಸರಣಿ”ಯ ೧೦೦ನೇ ಕತೆ. ಕನ್ನಡದ ಈ ವರೆಗಿನ ಮಕ್ಕಳ ಕತೆಗಳ ಕಲ್ಪನಾ ಲಹರಿಗೂ ಇವುಗಳದ್ದಕ್ಕೂ ಇರುವ ವ್ಯತ್ಯಾಸ ಓದುಗರು ಗಮನಿಸಿರಬಹುದು. ಕತೆಗಳ ಓದಿನ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವುದೇ ಈ ಎಲ್ಲ ಕತೆಗಳ ಮುಖ್ಯ ಆಶಯ. ಇಂತಹ ಇನ್ನಷ್ಟು ಕತೆಗಳಿಗೆ “ಸಂಪದ"ದಲ್ಲಿ ಸದಾ ಸ್ವಾಗತ.