ತುಂಡು ಮಾಂಸ ಕಂಡರೆ ತನ್ನ ಬಳಗವ ಕೂಗಿ ಕರೆವ ಕಾಗೆಯ ಗುಣಕ್ಕೆ ಬೆಂಕಿ ಹಾಕ?

ತುಂಡು ಮಾಂಸ ಕಂಡರೆ ತನ್ನ ಬಳಗವ ಕೂಗಿ ಕರೆವ ಕಾಗೆಯ ಗುಣಕ್ಕೆ ಬೆಂಕಿ ಹಾಕ?

ಬರಹ

‘ಅಂಚೆ ಬರಲಿ, ಬಾರದಿರಲಿ. ಅಂಚೆಯಣ್ಣ ದಿನಕ್ಕೊಮ್ಮೆ ಮಾತ್ರ ಬಂದು ನಕ್ಕು ಹೋಗಲಿ’
- ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿ ಅವರು ಅಂಚೆ ಅಣ್ಣನ ಬಗ್ಗೆ ಮನದುಂಬಿ ಬರೆದ ವಾಕ್ಯಗಳಿವು.

ಆದರೆ ಈ ಅಂಚೆ ಅಣ್ಣನಿಗಿಂತ ಮುಂಚೆ ಓಲೆ ರವಾನಿಸುತ್ತಿದ್ದುದು ಶಾಂತಿಯ ಸಂಕೇತವಾದ ಪಾರಿವಾಳಗಳು. ನಾವೆಲ್ಲ ಪ್ರೌಢ ಶಾಲೆಯ ಹಂತದಲ್ಲಿ ಓದುತ್ತಿದ್ದಾಗ ತೆರೆಕಂಡ ‘ಮೈನೆ ಪ್ಯಾರ ಕಿಯಾ’ ಚಲನಚಿತ್ರ ಹಾಗು ತನ್ನ ಪ್ರೀತಿಯ ಸಂದೇಶವಾಹಕವಾಗಿ ಸಲ್ಮಾನಖಾನ್ ಬಳಸಿದ ಬಿಳಿ ಪಾರಿವಾಳ ನನಗೆ ನೆನಪಾಗುತ್ತದೆ. ಆ ಪಾರಿವಾಳ ನೆನಪಾದಾಗಲೆಲ್ಲ ನಾನು ಒಂದು ಪಾರಿವಾಳ ಸಾಕಬೇಕು ಅದರ ಕಾಲಿಗೆ ಪತ್ರಕಟ್ಟಿ ಹಾರಿ ಬಿಡಬೇಕು ಎಂದು ಹಂಬಲಿಸಿದ್ದುಂಟು. ಮನೆ-ಮಠ, ಗಟಾರು, ಚರಂಡಿ, ಮಂದಿಯ ಮನೆಯ ಕಂಪೌಂಡ್, ಮೇಲೆ ಸಿಕ್ಕಿಸಲಾದ ಗಾಜಿನ ಬಾಟಲಿ ಚೂರು, ಕೈ ಕೊರೆದುಕೊಂಡು ಒಳಗೆ ಹಾರಿದಾಗ ಮೈ ಮೇಲೆ ಎರಗಿದ ನಾಯಿ ಯಾವುದನ್ನೂ ಲೆಕ್ಕಿಸದೇ ಮುಗಿಲು ನೋಡುತ್ತ ಬಂಧಿಸುವ ತವಕದಲ್ಲಿ ಗುರಿ ಇಟ್ಟ ಪಾರಿವಾಳ ಎಲ್ಲಿ ಕೂಡುತ್ತದೆ ಎಂದು ಮೈ-ಕೈ ಗಾಯ ಮಾಡಿಕೊಂಡು ಬೀಳುತ್ತ ಏಳುತ್ತ ಅಡ್ಡಾಡಿ ಸುಸ್ತೂ ಆಗಿದ್ದಿದೆ.

ಧಾರವಾಡದ ಸಿಬಿಟಿ ಬಸ್ ನಿಲ್ದಾಣದ ಬಳಿ ಬಂಡಿ ಗಾಲಿಗೆ ಹಳಿ ಹಾಕುವ, ಕೃಷಿ ಸಲಕರಣೆಗಳನ್ನು ಕಾಸಿ, ಹಣಿದು ಮೊಂಡು ತೀಡಿ ಹರಿತಗೊಳಿಸುವಲ್ಲಿ ಮಗ್ನರಾಗಿರುತ್ತಿದ್ದ ಕಂಬಾರ ಸಾಲಿಯವರಿದ್ದರು. ಆ ಝೋಪಡಿಗಳ ಮುಂದೆ ನಿಂತು ಅವರು ಸಾಕಿದ್ದ ತರಹೇವಾರಿ ಬಣ್ಣಗಳ ಪಾರಿವಾಳ ಕಣ್ಣುತುಂಬಿಕೊಂಡಿದ್ದಿದೆ. ಮನೆಯಲ್ಲಿ ಜೋಪಾನವಾಗಿಟ್ಟಿದ್ದ ‘ಪಿಗ್ಗಿ ಬ್ಯಾಂಕ್’ ಒಡೆದು (ಬಹುಶ: ಹತ್ತಾರು ಬಾರಿ ನಾನು ಆ ಪಿಗ್ಗಿಯ ಹೊಟ್ಟೆ ಒಡೆದಿದ್ದಕ್ಕಾಗಿ ಹಂದಿಗೆ ಜ್ವರ ಬರಲು ಅಂದೇ ಶುರುವಾಗಿರಬೇಕು!) ಹಣ ತೆಗೆದು ಕಂಬಾರ ಸಾಲಿಯವನಿಗೆ ನೀಡಿ ಒಂದು ಬಿಳಿ ಬಣ್ಣದ ಪಾರಿವಾಳ ತಂದಿದ್ದೂ ಆಯಿತು. ಎಣಿಸಿ ನಾಲ್ಕನೇ ದಿನಕ್ಕೆ ಅದು ಹಾರಿ ಹೋಗಿ ಮತ್ತೆ ಆ ಕಂಬಾರ ಸಾಲಿ ಸೇರಿತ್ತು! ಅಮ್ಮ ಹೀಗಾಗುತ್ತದೆ ಎಂದು ಮೊದಲೇ ಎಚ್ಚರಿಸಿದ್ದಾಗಿತ್ತು. ನಾನು ಹ್ಯಾಪ್ ಮೋರೆ ಹಾಕಿಕೊಂಡು ಅವನ ಬಳಿ ಹೋಗಿ ಮತ್ತೆ ನನ್ನ ಆ ಬಿಳಿ ಪಾರಿವಾಳ ಕೊಡುವಂತೆ ಕೇಳಿದೆ. ನನ್ನನ್ನು ಜಬರಿಸಿ ಆಚೆ ಅಟ್ಟಿದ ಆತ.

ನಂತರ ಎಂದೂ ನಾನು ಈ ಕೆಲಸ ಮಾಡಲು ಹೋಗಲಿಲ್ಲ. ಆದರೆ ಇದ್ದಕ್ಕಿದಂತೆ ನಿನ್ನೆಯ ಭಾನುವಾರ ನನ್ನ ಛಾಯಾಪತ್ರಕರ್ತ ಮಿತ್ರ ಕೇದಾರನಾಥ್ ಫೋನಾಯಿಸಿ, ಪಾರಿವಾಳದ ಜೀವನ್ಮರಣದ ಕುರಿತು ಕಾಳಜಿಯಿಂದ ಮಾತನಾಡಿದರು. ನನ್ನ ಹಳೆಯ ಸರ್ಕಸ್ ಗಳೆಲ್ಲ ಕಣ್ಣ ಮುಂದೆ ಹಾಯ್ದುಹೋದವು.

ನನ್ನ ಮನೆಗೆ ಸಮೀಪದಲ್ಲಿರುವ ಧವಳಗಿರಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ಘಟನೆ ನಮ್ಮ ಕೇದಾರಣ್ಣನ ಮಾನವೀಯ ಕಳಕಳಿ ಜಾಗ್ರತಗೊಳ್ಳುವಂತೆ ಮಾಡಿತ್ತು. ಶ್ರೀ ಕ್ಷೇತ್ರ ಸೋಮೇಶ್ವರನ ಸನ್ನಿಧಾನದಲ್ಲಿ ಗುಡ್ಡ ಕಡಿದು ಭವ್ಯವಾಗಿ ಕಟ್ಟಲಾದ ಮಹಾವಿದ್ಯಾಲಯ ಅದು. ಹತ್ತು ವರ್ಷಗಳ ಹಿಂದೆ ಅಲ್ಲಿ ಕಾಡು ‘ಕಾಡಿತ್ತು’. ಈಗ ಭಯಂಕರ ಕಾಂಕ್ರೀಟ್ ಕಾಡು ‘ಕಾದಿದೆ’. ಸುತ್ತಲಿನ ಗುಡ್ಡಗಳೆಲ್ಲ ಕರಗಿ ಜನವಸತಿಗಳಾಗಿವೆ. ಗಿಡಗಳೆಲ್ಲ ನೆಲಸಮಗೊಂಡಿವೆ. ಕಳೆದ ಹತ್ತಾರು ವರ್ಷಗಳ ಕಾಲ ನಡೆದ ಗಣಿಗಾರಿಕೆ ಈಗ ಸ್ಥಬ್ಧವಾಗಿ ಪಳೆಯುಳಿಕೆಗಳಂತೆ ಅಲ್ಲಿನ ಇತಿಹಾಸ ಸಾರುತ್ತಿದೆ.

ಹಾಗಾಗಿ ಸುತ್ತಲಿನ ಪಾರಿವಾಳಗಳು ಎಸ್.ಡಿ.ಎಂ. ಇಂಜಿನೀಯರಿಂಗ್ ಕಾಲೇಜನ್ನೇ ತಮ್ಮ ಮನೆಯಾಗಿಸಿಕೊಂಡಿವೆ. ಸಾವಿರಾರು ಬೂದು ಬಣ್ಣದ ಕಾಡು ಪಾರಿವಾಳಗಳು ನೀರು, ಅನ್ನ ಹಾಗು ವಸತಿಗಾಗಿ ಈ ಕಟ್ಟಡಗಳನ್ನೆ ಆಶ್ರಯಿಸಿವೆ. ಆದರೆ ಕಟ್ಟಡದ ‘ಸಜ್ಜಾ’, ಕಮಾನು ಅಥವಾ ಕಿಟಕಿಗಳು ಅವುಗಳಿಗೆ ದಣಿವಾರಿಸಿಕೊಳ್ಳಲು ಮಾತ್ರ ಅನುಕೂಲವಾಗಿವೆ ಹೊರತು ಗೂಡು ಕಟ್ಟಿ ಮರಿ ಮಾಡಲು ಅಲ್ಲ. ಆದರೂ ಅನಿವಾರ್ಯವಾಗಿ ಪಾರಿವಾಳ ದಂಪತಿಗಳು ಅಂಗೈ ಅಗಲದ ಕಿಟಕಿ ಮುಂದಿನ ಜಾಗೆಯಲ್ಲಿ ನೆರಳು ಹುಡುಕಿ ಗೂಡು ಕಟ್ಟಿ, ತತ್ತಿ ಇಟ್ಟು ಕಾವು ಕೊಡಲು ಅನುವಾಗುತ್ತವೆ. ಜೋಪಾನವಾಗಿ ಪಾರಿವಾಳಗಳು ಕಾವು ಕೊಡುವ ಹಂತದಲ್ಲಿ ಆಯತಪ್ಪಿ ಕೆಲ ತತ್ತಿಗಳು ಕೆಳ ಬಿದ್ದು ಒಡೆದ ಕುರುಹುಗಳು ಅಲ್ಲಲ್ಲಿ ತಾರಸಿಯ ಮೇಲೆ ಸ್ಪಷ್ಟವಾಗಿ ಕಾಣುತ್ತವೆ.

ಅಂತೂ ಮೊಟ್ಟೆಗಳ ಆಯಸ್ಸು ಗಟ್ಟಿ ಇದ್ದರೆ ಕೋಟೆಯನ್ನು ಭೇಧಿಸಿ ಮರಿಗಳು ಹೊರಬರುತ್ತವೆ. ಎಷ್ಟೋ ಸಂದರ್ಭಗಳಲ್ಲಿ ತಾಯಿ ಹಕ್ಕಿ ಮರಿಗೆ ವಾತ್ಸಲ್ಯದಿಂದ ಗುಟುಕು ಕೊಡಲು ಬಂದಾಗ ತುಸು ರೆಕ್ಕೆ ಬಲಿತ ಮರಿ ಗುದ್ದಾಡಿ ನೆಲಕ್ಕೆ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಅಲ್ಲಿನ ವಿದ್ಯಾರ್ಥಿಗಳು, ಕಟ್ಟಡ ಕಾಮಗಾರಿಯಲ್ಲಿ ನಿರತರಾದ ಕಾರ್ಮಿಕರು ಹಾಗು ಸಿಬ್ಬಂದಿ ಜೋಪಾನವಾಗಿ ಅವುಗಳನ್ನು ಎತ್ತಿಕೊಂಡು ಹೋಗಿ ಗೂಡಿಗೆ ಇಟ್ಟ ಉದಾಹರಣೆಗಳು ನೂರು. ಆದರೆ ಸಾಕಷ್ಟು ಸಂದರ್ಭಗಳಲ್ಲಿ ಎತ್ತರದಿಂದ ನೆಲಕ್ಕೆ ಬಿದ್ದ ರಭಸಕ್ಕೆ ಪೆಟ್ಟು ತಿಂದ ಮರಿಗಳು ಇಹ ತ್ಯಜಿಸಿದ್ದು ಹೆಚ್ಚು.

ಸತ್ತ ಪಾರಿವಾಳ ಮರಿಗಳ ನೆತ್ತರು ರುಚಿ ಉಂಡ ಕಾಗೆಗಳು ಈಗ ಗೂಡಿಗೇ ಲಗ್ಗೆ ಹಾಕುವ ಪರಿಪಾಠ ಬೆಳೆಸಿಕೊಂಡಿವೆ. ತಂದೆ ಅಥವಾ ತಾಯಿ ಪಾರಿವಾಳ ಗೂಡಿನಲ್ಲಿರದ ಸಮಯ ಸಾಧಿಸಿ ತತ್ತಿಯನ್ನು ಕದ್ದು ತಿನ್ನುವ ಚಾಳಿ ಒಂದೆಡೆಯಾದರೆ, ಆಹಾರ ಹೆಕ್ಕಲು ತೆರಳಿದ ಸಂದರ್ಭದಲ್ಲಿ ಗುಂಪಿನಲ್ಲಿ ದಾಳಿ ಮಾಡುವ ಕಾಗೆಗಳು ಜೀವಂತ ಮರಿಗಳನ್ನು ಸಹ ಕೊಂದು ತಿನ್ನುತ್ತಿವೆ. ಒಟ್ಟಾರೆ ನೂರು ಮರಿಗಳಲ್ಲಿ ಸರಾಸರಿ ೧೦ ರಿಂದ ೧೨ ಮರಿಗಳು ಬದುಕುಳಿದರೆ ಹೆಚ್ಚು. ಈಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾದ ತುರ್ತು ಅವಶ್ಯಕತೆ ಇದೆ.

ಹೀಗೊಂದು ಉಪಾಯ ಮಾಡಬಹುದೇ: ಕಾಗೆ ಬಲು ಅಂಜುಬುರುಕ ಪಕ್ಷಿ. ಜನದಟ್ಟಣೆ ಇರುವ ಪ್ರದೇಶದಲ್ಲಿ ಅದು ಯೋಗ್ಯ ಅಂತರ ಕಾಯ್ದು ಕೊಳ್ಳುತ್ತದೆ. ಹಾಗಾಗಿ ಹೆಚ್ಚಾಗಿ ಜನ ಸಂಚರಿಸುವ ಪ್ರದೇಶದಲ್ಲಿ ಪಾರಿವಾಳದ ಪೆಟ್ಟಿಗೆಗಳನ್ನು, ಅವುಗಳಿಗೆ ಕುಡಿಯಲು ಅರವಟ್ಟಿಗೆಗಳನ್ನು ಹಾಗು ತುಸು ಕಾಳನ್ನು ಅಲ್ಲಿಯೇ ಪೂರೈಸುವ ವ್ಯವಸ್ಥೆ ಮಾಡಬಹುದಲ್ಲವೇ? ಕಟ್ಟಡದ ಮೊಲೆಗೊಂದರಂತೆ ಸಂಸಾರ ಹೂಡಿರುವ ಪಾರಿವಾಳಗಳಿಗೆ ಪುನರ್ವಸತಿ ಕಲ್ಪಿಸಿದಂತಾಯಿತು. ಹಾಗೆಯೇ ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಅವುಗಳಿಗೆ ನೆರೆ ‘ಹೊರೆ’ಯಾಗದಂತೆ ಪರಿಸರ ಸ್ನೇಹಿಯಾಗಿ, ಅತಿ ಕಡಿಮೆ ಖರ್ಚಿನಲ್ಲಿ ಮನೆ ಕಟ್ಟಿಸಿಕೊಟ್ಟಂತಾಯಿತು. ಒಂದು ವಾರ ಒಂದು ವಿದ್ಯಾರ್ಥಿ ವಸತಿ ನಿಲಯದವರಿಗೆ ಹಾಗು ಮತ್ತೊಂದು ವಾರ ಸ್ಥಳೀಯ ವಿದ್ಯಾರ್ಥಿಗಳಿಗೆ ಹಾಗೆಯೇ ಪ್ರಾಧ್ಯಾಪಕರು-ಸಿಬ್ಬಂದಿಗೆ ಮತ್ತೊಂದು ವಾರ ದೇಖ್-ರೇಖ್ ಉಸ್ತುವಾರಿ ಕೊಟ್ಟರಾಯಿತಲ್ಲ!

ಅಥವಾ ಬೆಂಗಳೂರಿನ ಬಿಡದಿ ಸಮೀಪದ ಕುಂಬಳಗೋಡಿನ ದಿ ಪ್ರಿಂಟರ್ಸ್ ಮೈಸೂರ್ ಪ್ರೈವೇಟ್ ಲಿಮಿಟೆಡ್ (ಪ್ರಜಾವಾಣಿ- ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮುದ್ರಣಾಲಯ) ಮಾಲೀಕರು ದೊಡ್ಡ ಮನಸ್ಸು ಮಾಡಿ, ಇಡೀ ಯೂನಿಟ್ ಗೆ ಜಾಳಗಿ ಹೆಣೆಸಿ ಸಾವಿರಾರು ಪಾರಿವಾಳಗಳಿಗೆ ಆಶ್ರಯ ನೀಡಿದ್ದಾರೆ. ಅದಕ್ಕಿಂತ ಮುಂಚೆ ಅವರು ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ. ಲಕ್ಷಾಂತರ ಪ್ರತಿಗಳ ಮುದ್ರಣ ಚಾಲನೆಯಲ್ಲಿದ್ದಾಗ ಪಕ್ಷಿಗಳ ಮಲ ವಿಸರ್ಜನೆಯಿಂದ ಹಿಡಿದು, ಪುಕ್ಕ ಉದುರಿದಾಗ, ಮರಿಗಳು ಬಿದ್ದಾಗ, ಅವು ಬಾಯಲ್ಲಿ ಕಚ್ಚಿ ತಂದ ಗೂಡು ಕಟ್ಟುವ ಸಾಮಗ್ರಿ ಉದುರಿ ಬಿದ್ದಾಗಲೂ ಸಾವಿರಾರು ರೂಪಾಯಿಯ ನ್ಯೂಸ್ ಪ್ರಿಂಟ್ ಕತ್ತರಿಸಿ ತಲೆ ಚಿಟ್ ಹಿಡಿದ್ದಿದೆ. ಅವುಗಳನ್ನು ಸಾಯಿಸಿ ಬಿಡಬೇಕು ಎಂಬ ನಿರ್ಧಾರ ಅವರು ಮೊದಲು ಮಾಡಿದ್ದರಂತೆ. ಆದರೆ ಮಾಧ್ಯಮದವರಾಗಿ ನಾವೇ ಹೀಗೆ ಮಾಡಿದರೆ? ಎಂದು ಚಿಂತಿಸಿ, ದೊಡ್ಡ ಮನಸ್ಸು ಮಾಡಿ ಈ ಪ್ರಯತ್ನಕ್ಕೆ ಕೈ ಹಾಕಿದರು. ಈಗ ಸಾವಿರಾರು ಪಾರಿವಾಳಗಳಿಗೆ ಅದು ಆಶ್ರಯ ತಾಣ! ಅಕ್ಷರಗಳ ಮನೆಗೆ ಶ್ರೀನಿವಾಸವಾದ ಟಂಕಶಾಲೆ!

‘ಕಾಗೆ ಒಂದಗುಳ ಕಂಡರೆ ಕರೆಯದೇ ತನ್ನ ಬಳಗವ’ ಎನ್ನುತ್ತಾರೆ. ಕೊಟ್ಟು ತಿನ್ನುವ ಗುಣ ಕಾಗೆಯಿಂದ ಕಲಿಯಬೇಕು ಎಂದು ನನ್ನ ಅಜ್ಜಿ ನನಗೆ ಹೇಳಿದ ಕಥೆ ಈಗ ನೆನಪಾಗುತ್ತದೆ. ಬಹುಶ: ಆಕೆಯ ಕಾಲದ ಪೌರಾಣಿಕ ಕಾಗೆಗಳು ಸಾತ್ವಿಕವಾಗಿದ್ದಿರಬೇಕು. ಮೊಮ್ಮಗನ ಈ ಕಾಲದ ಕಾಗೆಗಳು ಕಲಿಯುಗದ ಪ್ರಭಾವ ಎಂಬಂತೆ ಅಸಾತ್ವಿಕವಾಗಿವೆ.