ತುಪ್ಪದ ಅನ್ನ (ಗೀ ರೈಸ್)

ತುಪ್ಪದ ಅನ್ನ (ಗೀ ರೈಸ್)

ಬೇಕಿರುವ ಸಾಮಗ್ರಿ

ಬಾಸುಮತಿ ಅಕ್ಕಿ ೧ ಕಪ್, ನೀರುಳ್ಳಿ ೨, ಹಸಿ ಮೆಣಸು ೨-೩, ತುಪ್ಪ, ಕರಿಬೇವಿನ ಎಲೆ ೨ ಎಸಳು, ರುಚಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಬಿರಿಯಾನಿ ಎಲೆ, ಚಕ್ಕೆ, ಲವಂಗ, ಗೋಡಂಬಿ ಚೂರುಗಳು, ಒಣ ದ್ರಾಕ್ಷಿ, ಏಲಕ್ಕಿ, ಸೋಂಪು, ಕಾಳು ಮೆಣಸು ೧ ಚಮಚ.

ತಯಾರಿಸುವ ವಿಧಾನ

ಮೊದಲಿಗೆ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನಂತರ ಸ್ವಲ್ಪ ನೀರು ಹಾಕಿ ಹತ್ತು ನಿಮಿಷ ನೆನೆಯಲು ಬಿಡಿ. ನಂತರ ನೀರುಳ್ಳಿ, ಮೆಣಸನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿರಿ. ಒಂದು ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಗೋಡಂಬಿ ಚೂರುಗಳನ್ನು ಹಾಗೂ ಒಣ ದ್ರಾಕ್ಷಿಯನ್ನು ಹುರಿದು ತೆಗೆದು ಇಟ್ಟುಕೊಳ್ಳಿರಿ. ಅದೇ ಬಾಣಲೆಗೆ ಮತ್ತೆ ತುಪ್ಪ ಹಾಕಿ ಬಿರಿಯಾನಿ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಸೋಂಪು, ಕರಿಬೇವಿನ ಸೊಪ್ಪು, ಕಾಳುಮೆಣಸನ್ನೆಲ್ಲಾ ಹಾಕಿ ಹುರಿದುಕೊಳ್ಳಿರಿ. 

ನಂತರ ಅದಕ್ಕೆ ಕತ್ತರಿಸಿದ ನೀರುಳ್ಳಿ ಹಾಕಿ, ಕಂದು ಬಣ್ಣ ಬರುವವರೆಗೆ ಹುರಿಯಿರಿ. ಮೆಣಸಿನ ಕಾಯಿ ಹಾಕಿ ಚೆನ್ನಾಗಿ ಬೆರೆಸಿ. ರುಚಿಗೆ ಬೇಕಾದಷ್ಟು ಉಪ್ಪು ಹಾಕಿ. ನಂತರ ನೆನೆಸಿಟ್ಟ ಬಾಸುಮತಿ ಅಕ್ಕಿಯನ್ನು ಸೇರಿಸಿ ಒಮ್ಮೆ ಹುರಿದಿಟ್ಟ ಎಲ್ಲಾ ಸಾಮಾಗ್ರಿಗಳನ್ನು  ಸರಿಯಾಗಿ ಬೆರೆಸಿ. ೧ ಕಪ್ ಅಕ್ಕಿಗೆ ೨ ಕಪ್ ನೀರು ಹಾಕಿ ಒಲೆಯ ಮೇಲಿಟ್ಟು ಕುದಿಸಿ. ಒಮ್ಮೆ ಕುದಿ ಬಂದ ನಂತರ ಒಲೆಯ ಬೆಂಕಿಯನ್ನು ಸಣ್ಣದು ಮಾಡಿ ಹಾಗೇ ಬೇಯಲು ಬಿಡಿ. ಅನ್ನ ಸರಿಯಾಗಿ ಬೆಂದ ಮೇಲೆ ಒಲೆಯಿಂದ ಬಾಣಲೆಯನ್ನು ಕೆಳಗಿಳಿಸಿ. ಅದಕ್ಕೆ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಅಲಂಕರಿಸಿ. ನಿಮ್ಮ ತುಪ್ಪದ ಅನ್ನ ತಯಾರು. ಬಿಸಿ ಬಿಸಿಯಾಗಿ ಸಾಂಬಾರು ಅಥವಾ ಮಾಂಸದ ಸಾರಿನ ಜೊತೆಗೆ ತಿನ್ನಲು ಹಿತಕರ.