ತುರುಬು ನೆನೆಸಿಕೊಂಡಾಗ

ತುರುಬು ನೆನೆಸಿಕೊಂಡಾಗ

 
ಒಬ್ಬಾತನ ವಯಸ್ಸು ತಿಳಿದುಕೊಳ್ಳಬೇಕೆ? ಹಾಗಿದ್ದರೆ ಅವನನ್ನು ಯಾವ ಯಾವ ಬೆಲೆಗಳು ನೆನಪಿನಲ್ಲಿವೆ ಎಂದು ಕೇಳಿ. ತೀರಾ ಕಡಿಮೆ ಹೇಳಿದಷ್ಟೂ ಅವನ ವಯಸ್ಸು ಹೆಚ್ಚಿದೆ ಎಂದೇ ಅರ್ಥ. ಫಾರ್ಮುಲಾ ಅರ್ಥವಾಯಿತೆ?
 
ಉದಾಹರಣೆಗೆ, ವಿದ್ಯಾರ್ಥಿ ಭವನದಲ್ಲಿ 5 ರೂಪಾಯಿಗೆ ಮಸಾಲೆ ದೋಸೆ ತಿನ್ನುತ್ತಿದ್ದೆ ಎನ್ನವವನು "ಅದೇನು ಮಹಾ! ನಾನು ಒಂದು ರೂಪಾಯಿಗೆ ಒಂದು ಎಂ.ಡಿ. ತಿಂದಿದ್ದೇನೆ ಅಲ್ಲಿ" ಎನ್ನುವವನಿಗಿಂತ ಚಿಕ್ಕವನು. ಆದರೆ "ಅಲ್ಲಿ ನಾಲ್ಕಾಣೆಗೊಂದು ಮಸಾಲೆ ದೋಸೆ ತಿನ್ನುತ್ತಿದ್ದೆ. ಅದು 30 ಪೈಸೆ ಆದಾಗ ಮಾಲೀಕನಿಗೆ ಹಿಡಿ ಶಾಪ ಹಾಕಿದ್ದೆ" ಎಂದು ಸ್ವತಃ ನಾನೇ ಹೇಳಿಕೊಂಡಾಗ ನಾನು ತ್ರೇತಾಯುಗದವನೋ ಅಥವಾ ದ್ವಾಪರಯುಗದವನೋ ಎಂದು ನೀವು ಭಾವಿಸಲು ಖಂಡಿತ ನನ್ನ ಅಡ್ಡಿಯಿಲ್ಲ.
 
ಹ್ಞಾ! ಏನೆಂದೆ? 4 ಆಣೆಗೊಂದು ದೋಸೆ ಎಂದೆ ಅಲ್ಲವೆ? ನಮ್ಮ ಅಜ್ಜಿ ಒಂದು ರೂಪಾಯಿಗೆ 16 ಸೇರು ಅಕ್ಕಿ ತರುತ್ತಿದ್ದರಂತೆ. ಅಂದ ಹಾಗೆ 16 ಆಣೆ ಹಾಕಿದರೆ ಒಂದು ರೂಪಾಯಿ. ಅಂದರೆ ಒಂದು ಸೇರಿಗೆ ಒಂದು ಆಣೆ, ಸೇರು ಎಂದರೆ ಒಂದು ಕಿಲೋಗಿಂತ ಜಾಸ್ತಿ ಎಂದು ವಿವರಿಸಿದರೆ ಜನರೇಷನ್ ಎಕ್ಸ್ ಅವರಿಗೆ, ಅಂದರೆ ಈಗಿನ ಕಾಲದವರಿಗೆ, ಅಂದರೆ ಸಂಗೀತ ಎಂದರೆ ಮೈಕೇಲ್ ಜಾಕ್ಸನ್ ಅಥವಾ ಕ್ರೀಡೆ ಎಂದರೆ ಕ್ರಿಕೆಟ್ ಎಂದುಕೊಂಡವರಿಗೆ , ಅರ್ಥವಾಗಬಹುದು.
 
 
ಆದುದರಿಂದಲೇ ನಾನು - ನನ್ನ ವಯಸ್ಸು ಎಷ್ಟು ಎಂದು ಈಗಾಗಲೇ ನೀವು ಲೆಕ್ಕ ಹಾಕಿರಬಹುದು - ಕೆಲಸಕ್ಕೆ ಸೇರಿದಾಗ ನನಗೆ ಮೊದಲನೆ ತಿಂಗಳು ಬಂದ ಸಂಬಳ 175 ರೂಪಾಯಿ. ಮುಸಿಮುಸಿ ನಗಬೇಡಿ. ಈಗಿನ ಕಾಲದಲ್ಲಿ ದಿನಗೂಲಿಯವರ ಸಂಬಳವೇ ಅದಕ್ಕಿಂತ ಹೆಚ್ಚಿದೆ. ಆದರೆ ನನಗೆ 175 ರೂಪಾಯಿ ತರುವ ನೌಕರಿ ಸಿಕ್ಕಾಗ " ಪರವಾಗಿಲ್ವೇ 175 ರೂಪಾಯಿ ಸಂಬಳ ಬರುವ ನೌಕರೀನೇ ಗಿಟ್ಟಿಸಿದಾನೆ" ಎಂದು ನನ್ನನ್ನು ಅಂಡರ್ ಎಷ್ಟಿಮೇಟ್ ಮಾಡಿದ್ದವರೆಲ್ಲ ಹುಬ್ಬೇರಿಸಿದ್ದರು. ಆಗ ಕಾಫಿ ನಾಲ್ಕಾಣೇ, ಇಡ್ಲಿ 20 ಪೈಸೆ, ಮಸಾಲೆ ದೋಸೆ 60 ಪೈಸೆ ಇದ್ದಾಗ ನಾವು ಇನ್ನೂ ಕಡಿಮೆ ದರ ಇರುವ ಹೋಟೆಲಿನ ತಲಾಷಿನಲ್ಲಿ ತೊಡಗುತ್ತಿದ್ದೆವು. ಆಗ ಯಾರಿಗಾದರೂ ಸಾವಿರ ರೂಪಾಯಿ ಸಂಬಳ ಎಂದರೆ "ಅಬ್ಬಾ!! ಸಾವಿರ ರೂಪಾಯಿ" ಎಂದು ಉದ್ಗಾರ ಹೊರಡಿಸುತ್ತಿದ್ದೆವು. ಅವನ ಜಾತಕ ಪಡೆಯಲು ಕ.ಪಿ.ಗಳು ಪ್ರಯತ್ನಿಸುತ್ತದ್ದರು. ಅಂತಹವನು ಈಗಿನ , ಅಂದರೆ ಪ್ರಿ ರೆಸೆಷನ್ ದಿನಗಳ ಇನ್ಫೋಸಿಸ್,
ಐಬಿ ಎಂ, ಸಿಟಿಬ್ಯಾಂಕ್, ಮುಂತಾದ ಕಂಪನಿಗಳ ಎಕ್ಷಿಕ್ಯುಟಿವ್ ನಂತೆ. ಡಿಮಾಂಡೋ ಡಿಮಾಂಡೋ. ಏಕೆಂದರೆ ಅವನು ಕೆಲವೇ ವರ್ಷಗಳಲ್ಲಿ ಲಕ್ಷಾಧಿಪತಿಯಾತುತ್ತಿದ್ದ. ವ್ಹಾ! ಯಾವ ಮಾವನಿಗೆ ಬೇಡ ಅಂತಹ ಅಳಿಯ? ಆದರೆ
ಇಂದು ಒಂದು ವೋಟಿನ ಬೆಲೆಯೇ 1000 ಇದೆ.
 
 
ಸನ್ ಎರಡು ಸಾವಿರದ ಒಂಬತ್ತನೆ ಇಸವಿಯಲ್ಲಿ ಲಕ್ಞಾಧಿಪತಿಗಳಿಗಿರಲಿ, ಮಿಲಿಯಾಧಿಪತಿಗಳಿಗೇ ಬೆಲೆ ಇಲ್ಲ. ಪೇಪರ್ ನೋಡಿ. ಲೋಕಾಯುಕ್ತರು ಹಿಡಿಯುವ ಮಿಕಗಳೆಲ್ಲ ಕ್ರೋರ್ ಪತಿಗಳೇ ಆಗಿರುತ್ತಾರೆ. ಕೋಟಿಗಿಂತ ಕಡಿಮೆ ಆಸ್ತಿ ಮಾಡಿಕೊಂಡಿರುವವನು ಸಿಕ್ಕಿಬಿದ್ದರೆ ಆ ಸುದ್ದಿ 4-5ನೇ ಪುಟದಲ್ಲಿ ಪ್ರಿಂಟಾಗುತ್ತದೆ. ಪೇಜ್ 1 ಎಂದರೆ ಮಿನಿಮಮ್ ಒಂದು ಕೋಟಿ ಆಗಿರಲೇಬೇಕು.
 
ಮನೆ ಬೆಲೆಗಳು ನೋಡಿ. ಈಗ ಒಂದು ಚದರ ಕಟ್ಟಲು ಒಂದು ಲಕ್ಷ ಮಿನಿಮಮ್ ಬೇಕಂತೆ. ನಾನು ನನ್ನ ಇಡೀ ಮನೆಗೆ ಖರ್ಚು ಮಾಡಿದ್ದು ಎ ಲಿಟಲ್ ಮೋರ್ ದ್ಯಾನ್ ಒಂದು ಲಕ್ಷ. ಆದರೆ ಆ ಮೊತ್ತ ಹೊಂದಿಸಸಲು ನಾನು ಹರಸಾಹಸ ಪಟ್ಟೆ. ಈಗ ಬ್ಯಾಂಕ್ "ಸಾಲ ತೊಗೊಳ್ಳಿ, ನಾವು ಕೊಡ್ತೀವಿ, ನಾವು ಕೊಡ್ತೀವಿ" ಎಂದು ಕರಪತ್ರ ಹಂಚ್ತಾರೆ. ಆದರೆ ನಾನು ಕಟ್ಟಿದಾಗ ಸರ್ಕಾರಿ ಬ್ಯಾಂಕ್ ನವರು ನಮ್ಮನ್ನು ಹತ್ತಿರ ಸೇರಿಸ್ತಾನೇ ಇರಲಿಲ್ಲ. ಮನೆ ಅಡವಿಟ್ಟರೆ ಸಾಲ ಕೊಡುತ್ತಿದ್ದರು. ಆದರೆ ಮನೆ ಕಟ್ಟಲು ಸಾಲ ಕೊಡುತ್ತಿರಲಿಲ್ಲ. ಸಹಕಾರಿ ಬ್ಯಾಂಕ್ ನವರು ಸಂಬಳ 2500ಕ್ಕಿಂತ ಕಡಿಮೆ ಬಂದವರಿಗೆ ಮಾತ್ರ ಗರಿಷ್ಥ 75000 ಸಾಲ ಕೊಡ್ತಾ ಇದ್ದರು - ಶೇ 15ರ ಬಡ್ಡಿ ದರದಲ್ಲಿ. ಅದನ್ನು ಪಡೆಯಲು ನಾನು ನನ್ನ ಸಂಬಳ ರೂ 2494 ಎಂದು ಸುಳ್ಳು ಸರ್ಟಿಫಿಕೇಟ್ ಕೊಟ್ಟಿದ್ದೆ ಎಂದು ಸಚ್ ಕಾ ಸಾಮನಾ ಈಗ ಹೇಳುತ್ತಿದ್ದೇನೆ.
 
ಗಾಲ್ಫ್ ಗ್ರೌಂಡ್ ಬಳಿ ಫ್ಲಾಟ್ ಬೆಲೆ 40 ಲಕ್ಕ ಎಂದಾಗ ನಮ್ಮ ಹೃದಯ ಆಗ, ಈಗ ತೊಗರಿ ಬೇಳೆ ಬೆಲೆಯಂತೆ, ನಾಗಾಲೋಟದಲ್ಲಿ ಓಡಿತ್ತು. ಈಗ ಅದೇ 40 ಲಕ್ಷ ಹಿಡಿದು ಬ್ರೋಕರ್ ಬಳಿ ಹೋದರೆ ಅವನು ಯಲಹಂಕದಾಚೆಗೆ ನೀವೇ ಟ್ರೈಮಾಡಿ ಸಾರ್, ಸಿಗಬಹುದು ಎಂದು ಹೇಳುತ್ತಾ ನಮ್ಮನ್ನು ಹೊರಹಾಕುತ್ತಾನೆ.
 
ನಾನು ವಿಪರೀತ ನಷ್ಟ ಅನುಭವಿಸಿದ್ದೇನೆ ಎಂದರೆ ನೀವು ನಂಬುವಿರಾ? ನನ್ನ ಹತ್ತಿರ 100 ಷೇರುಗಳಿವೆ. ಅದರ ಬೆಲೆ ಇತ್ತೀಚಿನ ವರೆಗೂ ತಲಾ ರೂ. 3000 ಇತ್ತು. ಮಾರಿದ್ದರೆ 3 ಲಕ್ಷ ಸಿಗ್ತಿತ್ತು. ಆದರೆ 4000 ಮುಟ್ಟಬಹುದು ಎಂದು ಕಾದಿದ್ದೆ. ಆದರೆ ಈಗ ಅದು 1200ರ ಆಸುಪಾಸಿನಲ್ಲಿದೆ. ನೋಡಿ ಎಷ್ಟು ಲಕ್ಷ ಲಾಸ್ ಆಯಿತು? ವಿದ್ಯಾರ್ಥಿ ಭವನದಲ್ಲಿ 30 ಪೈಸೆಗೆ ಮಸಾಲೆ ದೋಸೆ ತಿನ್ನುತ್ತಿದ್ದ ನನಗೆ ಈಗ ನಷ್ಟವೇ ಅಗಾಧ ಎನ್ನಿಸುತ್ತಿದೆ. ಅಂತಹ ಒಂದು ಲಕ್ಷ ಷೇರ್ ಇಟ್ಟುಕೊಂಡಿರುವವನ ಲಾಸ್ ಅನ್ನು ಹೇಗೆ ಲೆಕ್ಕ ಹಾಕುವುದು? ಅದೇನೊ ಸಾವಿರ ಲಕ್ಷ, ಸಾವಿರ ಕೋಟಿ ಅನ್ನುತ್ತಾರಲ್ಲ.......
 
 
ಅಂದಹಾಗೆ ಒಂದು ಕೋಟಿಯಲ್ಲಿ ಎಷ್ಟು ಸೊನ್ನೆ ಇರಬಹುದು?
 
 
(ಚಿತ್ರ ಕೃಪೆ : ಗೂಗಲ್)