ತುಳಸಿ ದೇವತೆಯ ರೋಚಕ ಕಥೆ
ಇಂದು ತುಳಸಿ ಪೂಜೆ. ಹಿಂದೂ ಪುರಾಣಶಾಸ್ತ್ರಗಳಲ್ಲಿ ಉಲ್ಲೇಖಿಸಿರುವುದರ ಪ್ರಕಾರ, ತುಳಸಿಗಿರುವ ಮತ್ತೊಂದು ಹೆಸರು ವೃಂದಾ ಎಂದು. ಕಾಲನೇಮಿ ಎಂದು ಕರೆಯಲ್ಪಡುವ ರಾಕ್ಷಸ ರಾಜನ ಅತ್ಯಂತ ಸುಂದರಳಾದ ರಾಜಕುವರಿಯೇ ಈ ವೃಂದಾ. ಈಕೆಯು ಶಿವನ ಶಕ್ತಿಸ್ವರೂಪದ ಭಾಗವೇ ಆದಂತಹ ಜಲಂಧರನನ್ನು ವರಿಸಿದಳು. ಜಲಂಧರನು ಭಗವಾನ್ ಶಂಕರನ ಮೂರನೆಯ ಕಣ್ಣಿನ ಅಗ್ನಿಯಿಂದ ಜನಿಸಿದವನಾಗಿದ್ದರಿಂದ, ಜಲಂಧರನು ಅಪರಿಮಿತವಾದ ಶಕ್ತಿಯುಳ್ಳವನಾಗಿದ್ದನು. ಈ ಜಲಂಧರನಿಗೆ ಪರಮ ಪವಿತ್ರಳೂ, ಆದ ರಾಜಕುಮಾರಿ ವೃಂದಾಳಲ್ಲಿ ಅನುರಕ್ತಿಯುಂಟಾಯಿತು.
ವೃಂದಾಳು ಭಗವಾನ್ ಶ್ರೀ ವಿಷ್ಣುವಿನ ಪರಮ ಭಕ್ತಳಾಗಿದ್ದು, ಜಲಂಧರನು ಎಲ್ಲಾ ದೇವ, ದೇವತೆಗಳನ್ನು ದ್ವೇಷಿಸುತ್ತಿದ್ದನು. ಆದರೂ ಕೂಡ, ವಿಧಿಯು ಇವರಿಬ್ಬರನ್ನೂ ಮದುವೆಯ ಬಂಧನದಲ್ಲಿ ಸಿಲುಕಿಸಿತ್ತು. ವೃಂದಾಳನ್ನು ವಿವಾಹವಾದ ಬಳಿಕ, ಆಕೆಯ ಪಾವಿತ್ರ್ಯ ಹಾಗೂ ದೈವಭಕ್ತಿಯ ಕಾರಣದಿಂದಾಗಿ, ಜಲಂಧರನ ಶಕ್ತಿಯು ನೂರ್ಮಡಿಗೊಂಡಿತು. ಈತನ ಸಾಮರ್ಥ್ಯವು ಎಷ್ಟರಮಟ್ಟಿಗೆ ಹೆಚ್ಚಿತೆಂದರೆ, ಸ್ವಯಂ ಭಗವಾನ್ ಶಿವನಿಗೂ ಸಹ ಜಲಂಧರನನ್ನು ಸೋಲಿಸುವುದು ಅಸಾಧ್ಯದ ಮಾತಾಯಿತು. ಇದರಿಂದಾಗಿ, ಜಲಂಧರನ ಅಹಂಕಾರವು ಮತ್ತಷ್ಟು ಹೆಚ್ಚಾಯಿತು ಮತ್ತು ಅವನು ಭಗವಾನ್ ಶಿವನನ್ನೇ ಸೋಲಿಸಿ, ತಾನೇ ಬ್ರಹ್ಮಾಂಡದ ಯಜಮಾನನಾಗುವ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಂಡನು.
ಜಲಂಧರನ ಶಕ್ತಿಯು ದಿನೇ ದಿನೇ ಹೆಚ್ಚುತ್ತಿದ್ದುದರಿಂದ, ದೇವತೆಗಳಿಗೆ ಅಭದ್ರತೆಯು ಕಾಡಲಾರಂಭಿಸಿತು. ಅವರೆಲ್ಲರೂ ಸಹಾಯಕ್ಕಾಗಿ ಭಗವಾನ್ ಶ್ರೀ ಮಹಾವಿಷ್ಣುವಿನ ಮೊರೆಹೊಕ್ಕರು. ಭಗವಾನ್ ವಿಷ್ಣುವು ಈಗ ನಿಜಕ್ಕೂ ಸಂಕಷ್ಟಕ್ಕೆ ಗುರಿಯಾದನು. ಯಾಕೆಂದರೆ, ವೃಂದಾಳು ವಿಷ್ಣುವಿನ ಪರಮ ಭಕ್ತೆಯಾಗಿದ್ದಳು. ಹೀಗಾಗಿ ಆಕೆಗೆ ಅನ್ಯಾಯವನ್ನು ಮಾಡುವಂತಿರಲಿಲ್ಲ. ಆದರೂ ಸಹ, ಜಲಂಧರನ ಕಾರಣದಿಂದ ಎಲ್ಲಾ ದೇವತೆಗಳಿಗೂ ವಿಪತ್ತು ಒದಗುವ ಪರಿಸ್ಥಿತಿ ಇದ್ದುದರಿಂದ, ಭಗವಾನ್ ಶ್ರೀ ವಿಷ್ಣುವು ಸಮಸ್ಯೆಯ ಪರಿಹಾರಕ್ಕೆಂದು ಉಪಾಯವೊಂದನ್ನು ಹೂಡಿದನು.
ಜಲಂಧರನು ಭಗವಾನ್ ಶಿವನೊಂದಿಗೆ ಕಾದಾಟದಲ್ಲಿ ತಲ್ಲೀನನಾಗಿದ್ದಾಗ, ವಿಷ್ಣುವು ಜಲಂಧರನ ರೂಪವನ್ನು ಧರಿಸಿಕೊಂಡು ವೃಂದಾಳ ಬಳಿಗೆ ಬಂದನು. ಮೊದಲ ನೋಟಕ್ಕೇ ವಿಷ್ಣುವನ್ನು ಗುರುತಿಸಲು ವೃಂದಾಳಿಗೆ ಸಾಧ್ಯವಾಗದಿದ್ದ ಕಾರಣ, ಆಕೆಯು ತನ್ನ ಪತಿ ಜಲಂಧರನೇ ಮರಳಿ ಬಂದನೆಂದು ಭ್ರಮಿಸಿ ಆತನನ್ನು ಸ್ವಾಗತಿಸಲು ಮುಂದಾದಳು.
ಆದರೆ, ಅವಳು ಭಗವಾನ್ ಶ್ರೀ ವಿಷ್ಣುವನ್ನು ಸ್ಪರ್ಶಿಸಿದೊಡನೆಯೇ, ಆಕೆಗೆ ಈತನು ತನ್ನ ಪತಿಯಲ್ಲವೆಂದು ತಿಳಿಯಿತು. ಆಗ ಆಕೆಯ ಪಾವಿತ್ರ್ಯವು ನಷ್ಟಗೊಂಡು, ಜಲಂಧರನು ತನ್ನ ಅಮರತ್ವವನ್ನು ಕಳೆದುಕೊಂಡನು. ತನ್ನ ತಪ್ಪನ್ನು ಅರಿತ ವೃಂದಾಳು ಭಗವಾನ್ ಶ್ರೀ ವಿಷ್ಣುವಿನಲ್ಲಿ ತನ್ನ ನಿಜಸ್ವರೂಪವನ್ನು ತೋರಿಸೆಂದು ಕೇಳಿಕೊಂಡಳು. ತನ್ನ ಆರಾಧ್ಯದೈವದಿಂದಲೇ ತಾನು ಮೋಸಹೋಗಿರುವುದನ್ನು ತಿಳಿದು ವೃಂದಾಳು ಹೌಹಾರಿದಳು.
ವೃಂದಾಳ ಶಾಪ: ಸ್ವಯಂ ಭಗವಾನ್ ವಿಷ್ಣುವೇ ತನ್ನ ಪತಿ ಜಲಂಧರನ ಮಾರುವೇಷದಲ್ಲಿ ಬಂದು ಮೋಸದಿಂದ ತನ್ನ ಪಾವಿತ್ರ್ಯವನ್ನು ಹಾಳುಗೆಡವಿದ್ದಕ್ಕಾಗಿ, ವೃಂದಾಳು ಭಗವಾನ್ ಶ್ರೀ ವಿಷ್ಣುವನ್ನು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಶಿಲೆಯಾಗಿ ಹೋಗಲಿ ಎಂದು ಆಕೆಯು ಶಪಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವು ಅವಳ ಶಾಪವನ್ನು ಸ್ವೀಕರಿಸುತ್ತಾನೆ ಹಾಗೂ ತಾನೊಂದು ಸಾಲಿಗ್ರಾಮ ಶಿಲೆಯಾಗಿ ಪರಿವರ್ತಿತನಾಗುತ್ತಾನೆ. ಈ ಸಾಲಿಗ್ರಾಮ ಶಿಲೆಯು ಗಂಡಕಿ ನದಿಯ ಸಮೀಪದಲ್ಲಿ ಕಂಡುಬರುತ್ತದೆ.
ಇದಾದ ಬಳಿಕ, ತನ್ನ ಪತ್ನಿಯ ಪಾವಿತ್ರ್ಯದ ಬಲವನ್ನು ಕಳೆದುಕೊಂಡ ಜಲಂಧರನು ಶಿವನಿಂದ ಹತನಾಗುತ್ತಾನೆ. ವೃಂದಾಳೂ ಕೂಡ ತನ್ನ ಪತಿಯ ಮರಣದಿಂದ ಖಿನ್ನಳಾಗಿ ತನ್ನ ಜೀವನವನ್ನು ಅಂತ್ಯಗೊಳಿಸಿಕೊಳ್ಳಲು ತೀರ್ಮಾನಿಸುತ್ತಾಳೆ. ಭಗವಾನ್ ಶ್ರೀ ವಿಷ್ಣುವಿನ ವರ: ವೃಂದಾಳ ಮರಣಕ್ಕೆ ಮುನ್ನ ಭಗವಾನ್ ಶ್ರೀ ವಿಷ್ಣುವು ಆಕೆಯನ್ನು ಹರಸಿ ಆಶೀರ್ವದಿಸುತ್ತಾನೆ ಹಾಗೂ ಆಕೆಗೆ ವರವೊಂದನ್ನು ಅನುಗ್ರಹಿಸುತ್ತಾನೆ. ಅದರ ಪ್ರಕಾರ, ಆಕೆಯು ತುಳಸಿ ಎಂಬ ಹೆಸರಿನಿಂದ ಪ್ರಸಿದ್ಧಳಾಗುತ್ತಾಳೆ ಹಾಗೂ ಯಾವಾಗಲೂ ಸಹ ಭಗವಾನ್ ಶ್ರೀ ವಿಷ್ಣುನೊಂದಿಗೆಯೇ ಆಕೆಯು ಪೂಜಿಸಲ್ಪಡುವಂಥವಳಾಗುತ್ತಾ ಭಗವಾನ್ ವಿಷ್ಣುವಿನ ಪೂಜೆಯು ತುಳಸಿಯಿಲ್ಲದೇ ಎಂದಿಗೂ ಪರಿಪೂರ್ಣವಾಗುವುದೇ ಇಲ್ಲ. ಹೀಗೆ, ಅನಂತರದಿಂದ, ತುಳಸಿಯು ಹಿಂದೂ ವಿಧಿವಿಧಾನಗಳ ಒಂದು ಅವಿಭಾಜ್ಯ ಅಂಗವಾಗಿದೆ. ಅದೃಷ್ಟಹೀನ ದೇವತೆಯಾದ ತುಳಸಿಯು ಕಟ್ಟಕಡೆಗೆ ಅನುಗ್ರಹಿಸಲ್ಪಟ್ಟು ತುಳಸಿ ಎಂಬ ಹೆಸರಿನ ಪವಿತ್ರ ಸಸಿಯಾಗಿ ಹೆಚ್ಚು ಕಡಿಮೆ ಪ್ರತೀ ಮನೆಯ ಅಂಗಳದಲ್ಲಿಯೂ ಪ್ರತಿಷ್ಟಾಪಿಸಲ್ಪಟ್ಟು, ಪ್ರತಿಯೊಬ್ಬರ ಅಂತರಂಗವನ್ನೂ ಕೂಡ ಶುದ್ಧೀಕರಿಸುವವಳಾಗಿದ್ದಾಳೆ.
(ಸಂಗ್ರಹ) ಸತೀಶ್ ಶೆಟ್ಟಿ, ಚಾರ್ಮಾಡಿ
ಚಿತ್ರ ಕೃಪೆ: ಆದ್ವಿಕಾ ಶೆಟ್ಟಿ ಮುಂಡಬೆಟ್ಟು ಗುತ್ತು