ತುಳಸೀದಳ

ತುಳಸೀದಳ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಯಂಡಮೂರಿ ವೀರೇಂದ್ರನಾಥ, ಕನ್ನಡಕ್ಕೆ: ವಂಶಿ
ಪ್ರಕಾಶಕರು
ಹೇಮಂತ ಸಾಹಿತ್ಯ, ಭಾಷ್ಯಂ ರಸ್ತೆ, ಬೆಂಗಳೂರು -೫೬೦೦೫೩
ಪುಸ್ತಕದ ಬೆಲೆ
ರೂ. ೨೦.೦೦, ಮುದ್ರಣ: ೧೯೮೩

೮೦ರ ದಶಕದಲ್ಲಿ ಮನೆ ಮಾತಾಗಿದ್ದ ರೋಚಕ ಕಾದಂಬರಿ ತುಳಸೀದಳ. ಇದನ್ನು ಬರೆದವರು ಖ್ಯಾತ ತೆಲುಗು ಲೇಖಕರಾದ ಯಂಡಮೂರಿ ವೀರೇಂದ್ರನಾಥ ಇವರು. ಪುಸ್ತಕದ ಬೆನ್ನುಡಿಯಲ್ಲಿ ಪ್ರಕಾಶಕರು ಚಲನಚಿತ್ರವಾಗುತ್ತಿರುವ ತುಳಸೀದಳ ಎನ್ನುವ ಶಿರೋನಾಮೆಯಲ್ಲಿ “ಹತ್ತು ವರ್ಷದ ಪಾಪುವಿನ ಮೇಲೆ ಭಯಂಕರವಾದ ಕ್ಷುದ್ರ ಶಕ್ತಿ ಕಾಷ್ಮೋರಾದ ಪ್ರಯೋಗ ! ಇಪ್ಪತ್ತೊಂದು ದಿನ ! ಪಾಪುವಿನ ಸಾವಿಗೆ ಇನ್ನು ಇಪ್ಪತ್ತೊಂದು ದಿನ !! ದಿನಕ್ಕೊಂದು ಬಗೆಯ ಹೊಸ ವ್ಯಾಧಿ ! ಪ್ರತ್ಯಕ್ಷ ನರಕ! ಕಾಷ್ಮೋರಾ ಪಾಪುವನ್ನು ಕಬಳಿಸುತ್ತಿತ್ತು. ಪಾಪು ಬದುಕಬೇಕು, ತಾಯಿ, ತಂದೆ, ವಾಮಾಚಾರಕ್ಕೆ ಬಿಡುಗಡೆ ಮಾಡಬಲ್ಲಂಥ ಮಾಂತ್ರಿಕರು, ಹಿಪ್ನಾಟಿಸಂನಲ್ಲಿ ಪ್ರಾವೀಣ್ಯತೆ ಪಡೆದವರು, ಆಧುನಿಕ ವೈದ್ಯ ವಿಜ್ಞಾನ ಸಂಪನ್ನರು-ಎಲ್ಲರ ಸತತ ಪ್ರಯತ್ನ ನಡೆಯುತ್ತಿತ್ತು.

ಪಾಪು ಬಲಿಯಾಗುತ್ತಿತ್ತು. ಕೊನೆಯ ನಿಮಿಷ ! ಒಂದೊಂದೇ ಸೆಕೆಂಡು ಕಳೆದು ಹೋಗುತ್ತಿತ್ತು. ಪಾಪುವನ್ನು ಬದುಕಿಸುವವರು ಈ ಪ್ರಪಂಚದಲ್ಲಿ ಯಾರೂ ಇಲ್ಲವೇ? ಮೊದಲಿಗೆ ಈ ಮಾರಣ ಹೋಮವೇಕೆ? ಕೊನೆಯ ಸೆಕೆಂಡು ಅಣುವಿನಂತೆ ಸ್ಫೋಟವಾಯ್ತು.

ಸ್ಪೋಟಿಸಿದ ಆ ಕ್ಷಣದಲ್ಲಿ ಸಾವಿರದಲ್ಲಿ ಒಂದು ಭಾಗ...ಏನಾಯ್ತು? ಓದುಗರಲ್ಲಿ ಅತೀವವಾದ ‘ಟೆನ್ಷನ್' ಅನ್ನು ಘಳಿಗೆ ಘಳಿಗೆಗೂ ಉಂಟು ಮಾಡಿ ಅಕ್ಷರಕ್ಷರದಲ್ಲಿ ‘ಸಸ್ಪೆನ್ಸ್' ಹುಟ್ಟಿಸಿ -ಆ ಪಾಪುವನ್ನು ನಿಮ್ಮಲ್ಲಿ ಒಂದಾಗಿಸಿ, ಆ ವೇದನೆಯನ್ನೆಲ್ಲಾ ನಿಮ್ಮದಾಗಿಸಿ, ನಿಮ್ಮನ್ನು ‘ಹಿಪ್ನಟೈಸ್' ಮಾಡುವಂಥ ಮಹತ್ತರ ಕೃತಿ - ತುಳಸೀದಳ."

ತೆಲುಗು ಭಾಷೆಯಲ್ಲಿದ್ದ ಕಾದಂಬರಿಯನ್ನು ಕನ್ನಡದ ಓದುಗರಿಗಾಗಿ ಅನುವಾದ ಮಾಡಿದ್ದಾರೆ ಖ್ಯಾತ ಸಾಹಿತಿ ವಂಶಿ. ಸುಮಾರು ೩೮೦ ಪುಟಗಳಿರುವ ಪುಸ್ತಕವನ್ನು ಅನುವಾದಕರು ಶ್ರೀ ಶ್ರೀ ವೆಂಕಟೇಶ್ವರ ಸ್ವಾಮಿಯವರ ಪವಿತ್ರ ಪದತಲಕ್ಕೆ ಸಮರ್ಪಿಸಿದ್ದಾರೆ.