*ತುಳಿದವರ ನಡುವೆ..*
ತರಗೆಲೆಗಳ ಹೊದಿಕೆಯ ಕೆಳಗೆ
ಯಾರಿಗೂ ಬೇಡದವನಾಗಿ ಬಿದ್ದಿದ್ದೆ...
ಯಾರಿಗೂ ನನ್ನ ಪರಿವೆಯೇ ಇರಲಿಲ್ಲ..
ಅಲ್ಲೇ ಹೂತು ಹೋಗಿದ್ದೆ...
ದಿನಗಳು ಉರುಳುತ್ತಿದ್ದವು
ನನ್ನೊಳಗೆ ಏನೇನೋ ಆಶಾಭಾವ ಏನೋ ಹೊಸತನ!
ತಣ್ಣನೆ ಗಾಳಿ, ಹನಿ ಹನಿ ಮಳೆ
ನಾನು ಬಿದ್ದುಕೊಂಡಿದ್ದ ಸುಡುತಿದ್ದ ಭೂಮಿ ಮೆದುವಾಗಿ
ನನಗಿಳಿಯಲು ಹದವಾಗಿತ್ತು...
ಜಡ ಬಿಟ್ಟೆ ಮೆಲ್ಲನೆ ಮೊಳಕೆಯೊಡೆದೆ.. ಗೆದ್ದಲ ಹುಳ, ಇರುವೆಗಳ ಹಸಿವೆಯ
ನಡುವೆಯೂ ಹೆದರದೆ ಚಿಗುರಿದೆ ಗಿಡವಾದೆ...
ರವಿಯ ಬೆಳಕಿಗೆ ಬೀಸು ಗಾಳಿಗೆ
ಬಿಡಿಸಿದೆ ಬದುಕಿನ ಜೋಳಿಗೆ
ತುಳಿವವರ ನಡುವೆ ಚಿವುಟುವವರ ಮಧ್ಯೆ ಉಸಿರು ಬಿಗಿಹಿಡಿದು ಬದುಕಿದೆ..!
ಬೆಳೆಯುತ್ತಿದ್ದೆ ಕೆಲವರು ಚುಚ್ಚುತ್ತಿದ್ದರು, ನನ್ನ ಪುಟ್ಟ ರೆಂಬೆಗಳನ್ನು ಎಳೆದಾಡುತ್ತಿದ್ದರು
ಸುಮ್ಮನಿದ್ದೆ ಬೆಳೆಯುತ್ತಿದ್ದೆ..
ಕೊನೆಗೆ ಹೆಮ್ಮರವಾಗಿ ಬೆಳೆದೇ ಬಿಟ್ಟೆ..
ನಾನೀಗ ವಿಶಾಲವಾಗಿದ್ದೇನೆ
ಯಾರ ಸಣ್ಣ ತನವೂ ನೆನಪಿಲ್ಲ..
ಉಸಿರಿಗೆ ಗಾಳಿ ಕೊಡುತ್ತಿದ್ದೇನೆ
ಹಕ್ಕಿಗಳ ಗೂಡಿಗೆ ಜಾಗ ಇಡುತ್ತಿದ್ದೇನೆ..
ಬೆಳೆಯಲು ಬಿಡದ ಮನುಷ್ಯನಿಗೂ ನೆರಳು ನೀಡುತ್ತಿದ್ದೇನೆ..
ನಾನು ನೆರವಾಗಿ ಹಾಯಾಗಿದ್ದೇನೆ..
ಆಲದಮರ ಎಂಬ ಹೆಮ್ಮೆ ನನಗೆ!
- *ಕಾ.ವೀ.ಕೃಷ್ಣದಾಸ್* ಕೊಂಚಾಡಿ