ತುಳುನಾಡಿನಲ್ಲಿ ನಾಗಾರಾಧನೆಯ ಮಹತ್ವ

ತುಳುನಾಡಿನಲ್ಲಿ ನಾಗಾರಾಧನೆಯ ಮಹತ್ವ

ನಾಗರ ಪಂಚಮಿ ಹಬ್ಬ ಮತ್ತೆ ಬಂದಿದೆ. ಎರಡು ವರ್ಷಗಳ ಕಾಲ ಕೊರೋನಾ ಈ ಹಬ್ಬಗಳ ಸಂಭ್ರಮವನ್ನೇ ಮರೆಮಾಚಿತ್ತು. ಆದರೆ ಈ ವರ್ಷ ಮತ್ತೆ ಹಬ್ಬಗಳ ಸಂಭ್ರಮ ಮನೆ ಮಾಡಿದೆ. ನಾಗರ ಹಬ್ಬ ಬಂತು ಅಂದ ಕೂಡಲೇ ಆ ವರ್ಷದ ಹಬ್ಬಗಳಿಗೆ ನಾಂದಿ ಹೇಳಿದ ಹಾಗೆ. ನಂತರ ಸಾಲು ಸಾಲು ಹಬ್ಬಗಳು.. ವರಮಹಾಲಕ್ಷ್ಮಿ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ, ಗೌರಿ ಗಣೇಶ ಹಬ್ಬ, ನವರಾತ್ರಿ, ದೀಪಾವಳಿ... ಹೀಗೆ ಹಬ್ಬಗಳ ಸಾಲು ಮುಂದುವರೆಯುತ್ತದೆ. ನಾಗರ ಪಂಚಮಿಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ನಾಗಾರಾಧನೆ ನಮ್ಮ ದೇಶದಲ್ಲಿ  ಮಾತ್ರವಲ್ಲ ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ  ಚಾಲ್ತಿಯಲ್ಲಿದೆ. ಆಯಾ ಪ್ರದೇಶದ ಸಂಸ್ಕೃತಿಯನ್ನವಲಂಬಿಸಿ ನಾಗಾರಾಧನೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸುಮೇರಿಯಾ, ಬೇಬಿಲೋನಿಯಾ, ಏಸ್ಸಿರಿಯಾ, ಇರಾನ್, ಚೀನಾ, ಆಫ್ರಿಕಾ ಮುಂತಾದ ದೇಶಗಳಲ್ಲಿ ಉರಗಾರಾಧನೆ ಕಂಡು ಬರುತ್ತದೆ. ನಮ್ಮ ದೇಶದಲ್ಲಿ ಕರಾವಳಿಯ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಆಚರಣೆಯಲ್ಲಿದ್ದ ನಾಗಾರಾಧನೆ ಈಗ ವ್ಯಾಪ್ತಿ ಮೀರಿ ಉಳಿದ ಭಾಗಗಳಿಗೂ ವಿಸ್ತರಿಸಿದೆ. ಕಲಿಯುಗದಲ್ಲಿ ಜೀವಂತ ದೇವರೆಂದರೆ ನಾಗ ಎಂಬ ಭಾವನೆಯಲ್ಲಿ ನಾಗಾರಾಧನೆ ನಡೆಯುತ್ತಿದೆ. ನಮ್ಮ ದೇಶದಲ್ಲಿ ನಾಗಾರಾಧನೆಗೆ ಇರುವಷ್ಟು ಪ್ರಾಶಸ್ತ್ಯ ಬೇರೆ ಯಾವ ದೇಶದಲ್ಲೂ ಇರಲಿಕ್ಕಿಲ್ಲ. ನಮ್ಮ ಎಲ್ಲಾ ಇಷ್ಟ ದೇವತೆಗಳೂ ಒಂದಿಲ್ಲೊಂದು ರೀತಿಯಲ್ಲಿ ಸರ್ಪಸಂಬಂಧವನ್ನು ಹೊಂದಿದ್ದಾರೆ. ಶಿವ ನಾಗಭೂಷಣ, ವಿಷ್ಣು ನಾಗ ಶಯನ, ಗಣಪತಿಯ ಉದರ ಸರ್ಪ ರಜ್ಜು ಬಂಧಿತ, ಸುಭ್ರಮಣ್ಯ ನಾಗರೂಪಿ, ದೇವಿ ಶಾಂತ ದುರ್ಗೆ ನಾಗರೂಪಿ, ಹೀಗೆ ಸರ್ಪ ಮುಕುಟ, ಸರ್ಪ ಕಂಕಣ, ಸರ್ಪ ಮುದ್ರಿಕೆ, ಸರ್ಪಾಯುಧಗಳಿಂದ ಅಲಂಕೃತವಾದ ದೇವರುಗಳು ಅನೇಕ.

ಅನಿಷ್ಟ ಕಾಲವೆನಿಸಿದ ರಾಹು ಕಾಲವನ್ನು ನಾಗದೇವರಿಗೆ ಸಂಬಂಧಿಸಿದ ಕಾಲವೆನ್ನುತ್ತಾರೆ. ನಾಗನಿಗೆ ಸಂಬಂಧಿಸಿದ ಕೆಲಸ ಕಾರ್ಯಗಳನ್ನು ರಾಹುಕಾಲದಲ್ಲಿ ಮಾಡುತ್ತಾರೆ. ರಾಹುದೋಷ ಇದ್ದವರು ನಾಗಾರಾಧನೆಯನ್ನೂ, ಸರ್ಪ ದೋಷ ಇದ್ದವರು ರಾಹುವಿನ ಆರಾಧನೆಯನ್ನೂ ಮಾಡಬೇಕು ಎನ್ನುವುದು ವಾಡಿಕೆ.

ಕರ್ನಾಟಕದ ಕರಾವಳಿ ಜಿಲ್ಲೆಯಾದ್ಯಂತ ಪ್ರತೀ ಹಳ್ಳಿ ಹಳ್ಳಿಯಲ್ಲೂ ವಿಶೇಷವಾಗಿ ಹೇಳಬೇಕೆಂದರೆ ಪ್ರತೀ ಮನೆಗೂ ಒಂದೊಂದರಂತೆ ನಾಗ ಬನ ಇರುತ್ತಿತ್ತು. ಇತ್ತೀಚಿನ ಹತ್ತಿಪ್ಪತ್ತು ವರ್ಷಗಳಿಂದ ಮೂಲ ಮನೆಯಿಂದ ವಿಭಕ್ತ ಕುಟುಂಬಗಳಾಗಿ ಬೇರೆ ಮನೆ ಮಾಡಿದವರನ್ನು ಹೊರತಾಗಿ ಉಳಿದೆಲ್ಲಾ ಉಳಿದೆಲ್ಲಾ ಮನೆ, ಕುಟುಂಬಕ್ಕೆ  ಒಂದೊಂದು ನಾಗ ಬನ ಇರುತ್ತಿತ್ತು. ಇನ್ನೂ ವಿವರವಾಗಿ ಹೆಳಬೇಕೆಂದರೆ ಹೆಜ್ಜೆ ಹೆಜ್ಜೆಗೂ ನಾಗ ಬನ, ನಾಗನ ಕಟ್ಟೆ, ನಾಗನ ಕಲ್ಲು, ನಾಗನ ಹುತ್ತ, ನಾಗ ದೇವಸ್ಥಾನ, ಆಲಡೆ ಇರುತ್ತದೆ. ಪ್ರತೀಯೊಂದು ದೇವಸ್ಥಾನಗಳಲ್ಲೂ ಭೂತ ಸ್ಥಾನಗಳಲ್ಲೂ ಸಂಬಂಧ ಪಟ್ಟಂತೆ  ಪ್ರತ್ಯೇಕ ನಾಗ ಬನ ಇರುತ್ತದೆ. ನಾಗ ಒಂದು ಸ್ಥಳ ಕರ್ತು(ಕ್ಷೇತ್ರ ಪಾಲ) ಎಂದು ಗುರುತಿಸಲ್ಪಡುತ್ತದೆ. ನಾಗ ಬನವೆಂದರೆ ಈಗಿನ ಕಾಂಕ್ರೀಟು ಗೂಡಲ್ಲ. ಮರಮಟ್ಟು, ಬಳ್ಳಿಗಳು, ಸಸ್ಯಗಳು, ಬಾವಲಿಗಳು, ಪಕ್ಷಿಗಳು ವಾಸವಾಗಿರುವ ಕಗ್ಗತ್ತಲೆಯ ವನ. ಇದನ್ನು ನಾಗ ಬನ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಈ ನಾಗ ಬನಕ್ಕೆ  ಎಲ್ಲರೂ ಯಾವಾಗಲೂ ಹೋಗಲಿಕ್ಕಿಲ್ಲ. ಅಗತ್ಯ ಇದ್ದವರು ಶುಚಿರ್ಭೂತರಾಗಿ ಹೋಗಬೇಕು. ಅಲ್ಲಿಂದ ಒಂದು ಕಡ್ಡಿಯನ್ನೂ ಹೊರ ತೆಗೆಯಲಿಕ್ಕಿಲ್ಲ.  ಮರ ಕಡಿಯಲಿಕ್ಕಿಲ್ಲ. ಮಣ್ಣು ಅಗೆಯಲಿಕ್ಕಿಲ್ಲ. ಇಲ್ಲಿ  ಮರದ ತರಗೆಲೆ ಬಿದ್ದು ಮಣ್ಣು ಬಹಳ ಫಲವತ್ತಾಗಿರುತ್ತದೆ. ಮಾನವ ಹಸ್ತಕ್ಷೇಪ ಇಲ್ಲದೆ ಮರ ಮಟ್ಟು ಗಿಡ ಗಂಟಿಗಳು ನಿರಾತಂಕವಾಗಿ ಬೆಳೆಯುತ್ತಿರುತ್ತವೆ. ಸಾಮಾನ್ಯವಾಗಿ ಪಕ್ಷಿಗಳು ಇಲ್ಲಿ ವಾಸಿಸಲು ಇಚ್ಚೆ ಪಡುತ್ತವೆ. ವರ್ಷಕ್ಕೆ ಒಂದೆರಡು ಬಾರಿ ನಾಗರ ಪಂಚಮಿ , ಷಷ್ಟಿ ಮತ್ತು ಪತ್ತನಾಜೆಗೆ ನಾಗನಿಗೆ ಹಾಲು ಎರೆಯುವುದು, ತಂಬಿಲ ಮಾಡುವುದು ಬಿಟ್ಟರೆ ಅಂಥ ಸೇವೆಗಳೇನಾದರೂ ಇದ್ದರೆ ಇತರ ಸಮಯದಲ್ಲಿ ಮಾಡುವುದಿರುತ್ತದೆ. ನಾಗಬನ ಯಾರಿಗೂ ಸಂಬಂಧ ಪಟ್ಟ ಸ್ಥಳವಲ್ಲ. ಸ್ಥಳ ವಿಂಗಡನೆಯಲ್ಲಿ ಇದನ್ನು ಪ್ರತ್ಯೇಕವಾಗಿ ಇಡುವ ಕೆಲಸವನ್ನು ಬ್ರಿಟೀಷರೇ ಮಾಡಿಹೋಗಿದ್ದಾರೆ. ಇದನ್ನು ಪರಂಬೋಕು ಇಲ್ಲವೇ ನಾಗ ಬನ ಎಂದು ನಮೂದಿಸಿರುತ್ತಾರೆ. ಮುಸ್ಲಿಮರು, ಕ್ರಿಶ್ಚಿಯನ್ನರನ್ನು ಹೊರತಾಗಿ ಎಲ್ಲರೂ ನಾಗಾರಾಧನೆ ಮಾಡುವವರು. ನಾಗ ದೋಷಕ್ಕಿಂತ ಮಿಗಿಲಾದ ದೋಷಗಳಿಲ್ಲ. ಎಲ್ಲಾ ನಮೂನೆಯ ಚರ್ಮ ಸಂಬಂಧಿತ ಖಾಯಿಲೆಗೆ ನಾಗ ಆರಾಧನೆಯೇ ಪರಿಹಾರ. ಯಾವುದೇ ಔಷದೋಪಚಾರದಲ್ಲಿ ಗುಣವಾಗದೇ ಇದ್ದುದು ನಾಗ ಸೇವೆಯಲ್ಲಿ ಗುಣಮುಖವಾದ ಸಾಕಷ್ಟು ನಿದರ್ಶನಗಳಿವೆ. ಎಲ್ಲವೂ ಅವರವರ ನಂಬಿಕೆಗೆ ಬಿಟ್ಟ ಸಂಗತಿಗಳು. ನಮ್ಮ ರಾಜ್ಯವಲ್ಲದೆ ನೆರೆಯ ತಮಿಳುನಾಡು, ಕೇರಳದಲ್ಲಿ ತುಳುನಾಡಿಗಿಂತಲೂ ಹೆಚ್ಚು ಭಕ್ತಿ ಭಾವನೆಯಿಂದ ನಾಗಾರಾಧನೆ ಮಾಡಲಾಗುತ್ತದೆ. ನಮ್ಮ ದೇಶದಲ್ಲಿ ನಾಗರ ಪಂಚಮಿ ಒಂದು ರಾಷ್ಟ್ರೀಯ ಹಬ್ಬವಾಗಿ ಪರಿಗಣಿಸಲ್ಪಟ್ಟಿದೆ.

ನಾಗಾರಾಧನೆ ಹೆಚ್ಚಾಗಿರುವ ಕಡೆ ಅರಣ್ಯಗಳು ವಿಫುಲವಾಗಿದ್ದವು. ಅರಣ್ಯದ ಮಾನವ ಹಸ್ತಕ್ಷೇಪ ರಹಿತ ಪ್ರದೇಶಗಳಲ್ಲಿ ಉರಗಗಳ ಸಂತಾನ ಸಮೃದ್ಧವಾಗಿರುತ್ತದೆ ಎಂಬುದು ಸತ್ಯವಾದ ವಿಚಾರ. ನಾಗರ ಹಾವು ಸಾವಯವ ವಸ್ತುಗಳಾದ ತರಗೆಲೆ ಮತ್ತು ತಂಪಿನ ವಾತಾವರಣದಲ್ಲಿ ಮೊಟ್ಟೆ ಇಟ್ಟು ಸಂತಾನಾಭಿವೃದ್ದಿ ಮಾಡುತ್ತದೆ. ಇದರ ಸಂತಾನಾಭಿವೃದ್ದಿಗೆ ಯಾವುದೇ ಅನನುಕೂಲವಾಗದಿರಲಿ ಎಂಬ ಕಾರಣಕ್ಕೆ ಹಿಂದಿನವರು ಯೋಚಿಸಿ ಅದಕ್ಕೆಂದೇ ಜಾಗವನ್ನು ಮೀಸಲಿಟ್ಟಿದ್ದರು. ನಾಗನ ಆರಾಧನೆಯಲ್ಲಿ ಸೌಂದರ್ಯವೂ, ಅಪಾಯವೂ ಒಂದುಗೂಡಿದೆ ಎನ್ನಬಹುದು. ಹೆಡೆಯನ್ನು  ವಿಚಿತ್ರವಾಗಿ ಅರಳಿಸಬಲ್ಲ ನಾಗರ ಹಾವು ನಿಸರ್ಗದ ಒಂದು ಕುತೂಹಲದಾಯಕ ನಿಗೂಢ ಜೀವಿ. ಗೆದ್ದಲು ಹುಳಗಳು ವಾಸವಿದ್ದು ನಂತರ ತೊರೆದು ಹೋಗಿರುವ ಹುತ್ತದಲ್ಲಿ ಹಾವುಗಳು ವಾಸವಾಗಿರುತ್ತದೆ ಎಂಬ ನಂಬಿಕೆ ಇದೆ. ಜೀವ ಶಕ್ತಿಯ ಸಂಕೇತವಾಗಿ, ಫಲವಂತಿಕೆಯ ಪ್ರತೀಕವಾಗಿ ನಾಗಾರಾಧನೆ ಜನಪದ ಜೀವನದಲ್ಲಿ ನೆಲೆ ಕಂಡಿದೆ.

ನಾಗನಿಗೆ ಸಾವಿರ ವರ್ಷ ಆಯುಸ್ಸು ಇದೆ ಎಂತಲೂ, ಅದಕ್ಕೆ ಅತೀಂದ್ರಿಯ ಜ್ಞಾನ ಇದೆಯೆಂತಲೂ, ಬಹು ಸಂಖ್ಯೆಯ ಹೆಡೆಗಳಿವೆ, ಎರಡು ತಲೆಯ ಹಾವುಗಳಿವೆ, ನಾಗಮಣಿ ನೀಡುವ ಅಪರೂಪದ ನಾಗರ ಹಾವು ಇದೆ ಎಂತಲೂ ನಮ್ಮಲ್ಲಿ ಹಲವರ ನಂಬಿಕೆಗಳಿವೆ. ಅದರ ಬಾಯಿಯಿಂದ ಚೆಲ್ಲಲ್ಪಟ್ಟ ಜೊಲ್ಲು ನೊರೆಯನ್ನು ಮೆಟ್ಟಿದರೆ ಕಾಲೊತ್ತು ಉಂಟಾಗುತ್ತದೆಯೆಂದೂ ಜನರ ನಂಬಿಕೆ. ನಗರ ಹಾವು, ಅದರ ಬೀದಿ ಮತ್ತು ನಾಗ ಬನದಲ್ಲಿ ಸೇವೆ ಮಾಡಿದರೆ ದೃಷ್ಟಿ ದೋಷ, ಕುಷ್ಟ ರೋಗ, ಸಂತಾನ ಕ್ಷಯಾದಿ ದೋಷ ಪರಿಹಾರವಾಗುತ್ತದೆ ಎಂಬುದು ನಂಬಿಕೆ. ಸರ್ಪವೊಂದು ಸತ್ತದ್ದು ಕಂಡರೆ ಅದಕ್ಕೆ ವಿಧಿವತ್ತಾಗಿ ಅಂತ್ಯ ಸಂಸ್ಕಾರ ಮಾಡಿ ಸುಡಬೇಕು. ಅದರ ಉತ್ತರ ಕ್ರಿಯಾದಿ ಕರ್ಮಗಳನ್ನು (ಸರ್ಪ ಸಂಸ್ಕಾರ) ಮಾಡಬೇಕು. ನೋಡಿ ಹಾಗೆಯೇ ಹೋಗಬಾರದು ಎಂಬೆಲ್ಲಾ ನಂಬಿಕೆಗಳು ಕರಾವಳಿಯಾದ್ಯಂತ ಆಚರಿಸಲ್ಪಡುತ್ತವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕುಕ್ಕೆ ಸುಬ್ರಮಣ್ಯ, ಕಾಳಾವರ, ಕುಡುಪು, ಮಂಜೇಶ್ವರ, ಬಳ್ಳ ಮಂಜ, ಪಡುಬಿದ್ರಿ, ಕುಮಾರ ಮಂಗಲ, ಮುಗು, ಕಾಟು ಕುಕ್ಕೆ, ಕುಕ್ಕಂಗೋಡ್ಲು, ಕೊಕ್ಕರಾಡಿ, ಕಜಕ್ಕಾರು, ಪಾವಂಜೆ, ಕೊಟೆಕಾರು,  ಮೊದಲಾದೆಡೆ ಪ್ರಸಿದ್ದ ನಾಗ ಕ್ಷೇತ್ರಗಳಿವೆ. ತಮಿಳು ನಾಡಿನಲ್ಲಿ ನಾಗನನ್ನು 'ಮುರುಗನ್' ಹಾಗೂ 'ಶೇಯೋನ್' ಎಂದು ಕರೆದು ಆರಾಧಿಸುತ್ತಾರೆ. ತುಳುನಾಡಿನಲ್ಲಿ ಆಲಡೆ ಅಥವಾ ಬ್ರಹ್ಮ ಸ್ಥಾನ ಎಂದು ಕರೆಯಲ್ಪಡುವ ವಿಶಿಷ್ಟ ಆರಾಧನ ಕ್ಷೇತ್ರಗಳಿದ್ದು ಇಲ್ಲಿಗೆ ಬೇರೆ ಬೇರೆ ಊರಿನವರು ತಮ್ಮ ಕುಟುಂಬದ ನಾಗ ಎಂದು ಬಂದು ಪೂಜಿಸುವ ಸಂಪ್ರದಾಯ ಇದೆ. ಆಲಡೆಯಲ್ಲಿ ಬೇರೆ ಬೇರೆ ದೈವಗಳಿದ್ದರೂ ನಾಗನ ಉಪಸ್ಥಿತಿ ಅನಿವಾರ್ಯ.

ನಾಗನಿಗೆ ಸಸ್ಯ ಶ್ಯಾಮಲೆಯಾದ ತಂಪಾದ ವಾತಾವರಣವೇ ಇಷ್ಟಕರ. ಇಲ್ಲಿನ ಪುರಾತನ ನಾಗಬನ, ನಾಗ ಸಾನಿಧ್ಯಗಳು ಕಾಡಿನ ಮಧ್ಯೆ ಇಲ್ಲವೇ ಅದಕ್ಕಾಗಿಯೇ ನಿರ್ಮಿತವಾದ ಮರಮಟ್ಟುಗಳ ಸ್ಥಳದಲ್ಲಿರುತ್ತದೆ. ಕೇವಲ ಹುತ್ತವಿದ್ದರೂ ಅದರಲ್ಲಿ ನಾಗ ಇದೆ ಎಂಬ ನಂಬಿಕೆಯಲ್ಲಿ ಜನ ಆರಾಧಿಸುತ್ತಾ ಬರುತ್ತಾರೆ. ಹೆಚ್ಚಿನ ಕಡೆ ನಾಗನ ಹೆಡೆಯನ್ನು ಕಲ್ಲಿನಲ್ಲಿ ಕೆತ್ತಿ ಸ್ಥಾಪಿಸಿರುವುದನ್ನು ಕಾಣಬಹುದು. ನಾಗನ ಕಲ್ಲಿನಲ್ಲಿ ಬೇರೆ ಬೇರೆ ಕೆತ್ತನೆಗಳಿದ್ದು, ಅದಕ್ಕನುಗುಣವಾಗಿ ಅದು ಯಾವ ಸ್ವರೂಪಿ ನಾಗ ಎಂಬುದನ್ನು ಊಹಿಸಲಾಗುತ್ತದೆ. ಬ್ರಹ್ಮಚಾರಿ (ಉಪನಯನವಾಗಿ ಮದುವೆಯಾಗದ ವಟು) ನಾಗನಿಗೂ ಸಂಬಂಧ ಇದೆ ಎಂಬುದು ನಂಬಿಕೆ. ಹೆಚ್ಚಿನವರು ಮನೆಯಲ್ಲಿ ನಿತ್ಯ ಪೂಜೆಯಲ್ಲಿ ನಾಗನ ಹೆಡೆಯನ್ನು  ಪೂಜಿಸುತ್ತಾರೆ.

ನಾಗನಿಗೆ ವಿಶೇಷ ಸೇವೆಯಾಗಿ ತಂಬಿಲ, ನಾಗ ಪ್ರತಿಷ್ಟೆ, ಸರ್ಪಸಂಸ್ಕಾರ, ಆಶ್ಲೇಶ ಬಲಿ, ನಾಗದರ್ಶನ, ಧಕ್ಕೆ ಬಲಿ, ನಾಗ ಮಂಡಲ ಸೇವೆ, ಬ್ರಹ್ಮ ಮಂಡಲ, ಕಾಡ್ಯನಾಟ, ಬೆರ್ಮೆರೆ ನಲಿಕೆ ಮುಂತಾದವುಗಳನ್ನು ಮಾಡುತ್ತಾರೆ. ನೈಸರ್ಗಿಕ ಮರಮಟ್ಟುಗಳು ಮಾನವ ಹಸ್ತಕ್ಷೇಪ ಇಲ್ಲದೆ ಬೆಳೆದು ಅರಣ್ಯವಾಗಿ ಮಾರ್ಪಟ್ಟು ನಾಗ ಬನಗಳಿದ್ದ ಸ್ಥಳ ಈಗ ವ್ಯವಸ್ಥಿತ ಕಾಂಕ್ರೀಟು ಬನಗಳಾಗುತ್ತಿವೆ. ಇಲ್ಲಿನ ಬಿಸಿ ವಾತಾವರಣಕ್ಕೆ ನಾಗರ ಹಾವಂತೂ ವಾಸಿಸುವುದು ಕಷ್ಟ. ಆದರೆ ಸಾನಿಧ್ಯದ ಬಗ್ಗೆ ಹೇಳುವಂತಿಲ್ಲ. ಏನಿದ್ದರೂ ಸಾಂಪ್ರದಾಯಿಕವಾಗಿ ನಾಗ ಬನ ಹೇಗಿತ್ತೋ ಹಾಗೇ ಇದ್ದರೆ ಅದು ಸುಂದರ.

ಕರಾವಳಿಯಲ್ಲಿ ನಾಗಾರಾಧನೆ ಮಾಡುವುದರಿಂದಾಗಿ ನಾಗರ ಹಾವಿನ ಸಂತತಿ ಹೆಚ್ಚಾಗಿದೆ ಎಂದು ಉರಗ ತಜ್ಞರ ನಂಬಿಕೆ. ಕರಾವಳಿ ಪ್ರದೇಶದಲ್ಲಿ ಯಾರೂ ನಾಗರಹಾವನ್ನು ಕೊಲ್ಲಲು ಹೋಗುವುದಿಲ್ಲ. ಈ ಕಾರಣದಿಂದಾಗಿ ಹಾವಿನ ಸಂತತಿ ಬೆಳೆದು ಪ್ರಾಕೃತಿಕ ಸಮತೋಲನ ಕಾಪಾಡುವಂತಿದೆ. ನಾಗನಿಗೆ ಹಾಲೆರೆಯುವುದು ಮೂಢನಂಬಿಕೆಯೇ (ಸತ್ಯ ವಿಷಯವೆಂದರೆ ಹಾವು ಎಂದೂ ಹಾಲು ಕುಡಿಯುವುದಿಲ್ಲ) ಆದರೂ ಒಂದು ಸಂಸ್ಕೃತಿ, ಆಚರಣೆಯಂತೆ ನಡೆದುಕೊಂಡು ಬರುತ್ತಿದೆ. ಹಾಲು ಹಾವಿನ ಆಹಾರ ಅಲ್ಲವಾದುದರಿಂದ ಸುಮ್ಮನೇ ಹಾವಿಗೆ ಬಲವಂತವಾಗಿ ಹಾಲನ್ನು ಕುಡಿಸುವುದನ್ನು ಮಾದಬಾರದು. ಇದರಿಂದ ಹಾವಿಗೆ ಅನಾರೋಗ್ಯ ಕಾಡುತ್ತದೆ. ಸಾವೂ ಬರಬಹುದು. ಪುಣ್ಯ ಸಂಪಾದನೆ ಮಾಡಲು ಹೋದ ನೀವು ಹಾವಿನ ಸಾವಿನ ಪಾಪವನ್ನು ಹೊತ್ತುಕೊಳ್ಳಬೇಕಾಗಬಹುದು. ಹಾಲನ್ನು ಶಾಸ್ತ್ರಕ್ಕೆ ಬೇಕಾದಷ್ಟು ಸ್ವಲ್ಪವೇ ಸ್ವಲ್ಪ ಪ್ರಮಾಣದಲ್ಲಿ ನಾಗನ ಕಲ್ಲಿಗೆ ಎರೆಯುವುದು ಉತ್ತಮ. ಉಳಿದ ಹಾಲನ್ನು ನಾಗರ ಪಂಚಮಿಯ ಸಲುವಾಗಿ ಅನಾಥ ಮಕ್ಕಳಿಗೆ ಅಥವಾ ವೃದ್ಧಾಶ್ರಮಗಳಿಗೆ ನೀಡಿದರೆ ಉತ್ತಮ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಎಲ್ಲರಿಗೂ ನಾಗರ ಪಂಚಮಿಯ ಹಾರ್ದಿಕ ಶುಭಾಶಯಗಳು.

ಚಿತ್ರ ಕೃಪೆ: ಅಂತರ್ಜಾಲ ತಾಣ