ತುಳುನಾಡಿನ ಸ್ಥಳನಾಮಾಧ್ಯಯನ

ತುಳುನಾಡಿನ ಸ್ಥಳನಾಮಾಧ್ಯಯನ

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್)
ಪ್ರಕಾಶಕರು
ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗ, ಶಿರ್ವ
ಪುಸ್ತಕದ ಬೆಲೆ
ರೂ. 400.00, ಮುದ್ರಣ: 2017

*ಡಾ. ರಘುಪತಿ ಕೆಮ್ತೂರು (ಆರ್.ಕೆ. ಮಣಿಪಾಲ್) ಅವರ "ತುಳುನಾಡಿನ ಸ್ಥಳನಾಮಾಧ್ಯಯನ"*

ನಿವೃತ್ತ ಪ್ರಾಂಶುಪಾಲರೂ, ಖ್ಯಾತ ವಿಮರ್ಶಕರೂ, ಸಂಶೋಧಕರೂ ಆದ ಡಾ. ರಘುಪತಿ ಕೆಮ್ತೂರು (ಆರ್. ಕೆ. ಮಣಿಪಾಲ್, 7 - 2 - 105 ಎ 5, "ಪುದರ್", ಹರಿಶ್ಚಂದ್ರ ಮಾರ್ಗ, ಉಡುಪಿ- 576101) ಇವರು 1980ರಲ್ಲಿ ರಚಿಸಿದ ಸಂಶೋಧನಾ ಗ್ರಂಥ "ತುಳುನಾಡಿನ ಸ್ಥಳನಾಮಾಧ್ಯಯನ". ಈ ಮಹಾ ಸಂಶೋಧನಾ ಪ್ರಬಂಧಕ್ಕಾಗಿ ಮೈಸೂರು ವಿ.ವಿ.ಯು 1981ರಲ್ಲಿ ಡಾ. ರಘುಪತಿ ಕೆಮ್ತೂರು ಅವರಿಗೆ ಪಿಎಚ್.ಡಿ ಪದವಿಯನ್ನು ನೀಡಿತು.

ತುಳುನಾಡಿನ ಭೂ ವಿವರ, ಶಾಸನ ಶಾಸ್ತ್ರ, ಭಾಷಾ ಶಾಸ್ತ್ರ, ಜಾನಪದ, ಸಾಮಾಜಿಕ ಮತ್ತು ಸಾಂಸ್ಕೃತಿಕ ಮಾನವ ಶಾಸ್ತ್ರಗಳನ್ನೊಳಗೊಂಡ ಬಹುಮುಖೀ ಅಧ್ಯಯನ ಗ್ರಂಥವನ್ನು ಶಿರ್ವದ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನ ಚರಿತ್ರೆ ಮತ್ತು ಪುರಾತತ್ವ ಶಾಸ್ತ್ರ ವಿಭಾಗವು 2017ರಲ್ಲಿ ಪ್ರಕಾಶಿಸಿದೆ. 16 + 360 ಪುಟಗಳ ಕೃತಿಯ ಬೆಲೆ 400 ರೂಪಾಯಿ.

ಪ್ರೊ. ಟಿ. ಮುರುಗೇಶಿಯವರು ಬರೆದ "ಪ್ರಕಾಶಕರ ಮಾತು", ಕೃತಿಕಾರರ "ಅರಿಕೆ" ಮತ್ತು ವಿಷಯ ತಜ್ಞರುಗಳಾದ ಜಪಾನಿನ ಎಂ. ಸುಝುಕಿ, ಅಸ್ಸಾಂನ ಡಾ. ಎಸ್. ಕೆ. ಫುಕಾನ್, ಡಾ. ಎ. ಸುಂದರಂ, ಡಾ. ಯು. ಆರ್. ಅನಂತಮೂರ್ತಿ, ಡಾ. ಕೆ. ವಿ. ರಮೇಶ್, ಡಾ. ಗೋಪಾಲಕೃಷ್ಣ ಹಾಗೂ ಡಾ. ಎಂ. ಚಿದಾನಂದಮೂರ್ತಿಯವರ ಅಭಿಪ್ರಾಯಗಳು ಕೃತಿಯಲ್ಲಿವೆ.

"ಸ್ಥಳನಾಮಗಳು ಮೊದಲಿನಿಂದಲೂ ನನ್ನ ಆಸಕ್ತಿಯ ವಿಷಯವಾಗಿತ್ತು. ನನಗೆ ನೆನಪಿರುವಂತೆ, ನನ್ನೂರು ಮತ್ತು ಪರಿಸರದ ಹೆಸರುಗಳ ಕುರಿತು ಜಾನಪದೀಯವಾಗಿ ನಮ್ಮ ಹಿರಿಯರು ನೀಡುತ್ತಿದ್ದ ನಿಷ್ಪತ್ತಿ ನನ್ನಲ್ಲಿ ಕುತೂಹಲವನ್ನು ಉಂಟುಮಾಡಿತ್ತು. ಇಂಥ ನಿಷ್ಪತ್ತಿಗಳು ಬಹುಮಟ್ಟಿಗೆ ಆಯಾ ಊರಿನ ಜನರು ತಮ್ಮ ಹುಟ್ಟೂರಿನ ಕುರಿತು ತಳೆದಿರುವ ಅಭಿಮಾನದ ದ್ಯೋತಕವಾಗಿದೆ.  ಈ ಅಭಿಮಾನ ಮತ್ತು ಕುತೂಹಲದಿಂದ ಹೊರಟ ನನ್ನ ಸ್ಥಳನಾಮ ಜಿಜ್ಞಾಸೆಯ ಅಭಿಯಾನ, ಈ ಕ್ಷೇತ್ರದಲ್ಲಿ ನಡೆದಿರುವ ವೈಜ್ಞಾನಿಕ ಶೋಧನೆಯ ಬೆಳಕಿನಲ್ಲಿ ಶಾಸ್ತ್ರೀಯವಾದ ಹಳಿಯನ್ನು ಹಿಡಿಯಿತು" ಎಂದು ತಮ್ಮ ಸ್ಥಳನಾಮಗಳ ಅಧ್ಯಯನದ ಕೆಲಸದ ಹಿನ್ನೆಲೆಯ ಬಗ್ಗೆ 'ಅರಿಕೆ'ಯಲ್ಲಿ ಬಿಚ್ಚಿಟ್ಟ ರಘುಪತಿ ಕೆಮ್ತೂರು ಅವರು, ಮುಂದುವರಿದು ಈ ನಿಟ್ಟಿನಲ್ಲಿ ಮಾಡಿದ ಸಂಶೋಧನೆ ಮತ್ತು ಗ್ರಂಥದ ಕುರಿತು ಕೆಳಗಿನಂತೆ ತಿಳಿಸಿದ್ದಾರೆ.

"ಆಕರ ಗ್ರಂಥಗಳ ಪಟ್ಟಿ ಮಾಡಿ ಅವುಗಳನ್ನು ದೊರಕಿಸಿಕೊಂಡು ಓದುತ್ತಾ ಹೋದಂತೆ ಸ್ಥಳನಾಮಗಳ ಅಧ್ಯಯನದಲ್ಲಿ ಖಚಿತವಾದ ವಿಧಾನವನ್ನು ಸ್ಪಷ್ಟಪಡಿಸಲು ಸಾಧ್ಯವಾಯಿತು. ಏಕಮುಖವಾದ ಅಧ್ಯಯನ ವಿಧಾನಗಳಲ್ಲಿನ ಅಪರಿಪೂರ್ಣತೆಗಳೇನು ಎಂಬುದು ಕ್ಷೇತ್ರಕಾರ್ಯದಿಂದಲೂ ಹೆಚ್ಚೆಚ್ಚು ಮನವರಿಕೆಯಾಗಹತ್ತಿತು. ಜಿಲ್ಲೆಯಾದ್ಯಂತ - ವಿಶೇಷವಾಗಿ ತುಳು ಮಾತನಾಡುವ ಪ್ರದೇಶಗಳಲ್ಲಿ (ಕೇರಳದ ಕಾಸರಗೋಡು ಜಿಲ್ಲೆಯನ್ನೂ ಒಳಗೊಂಡು) ಕ್ಷೇತ್ರಕಾರ್ಯ ನಡೆಸಿ, ಆಯಾ ಸ್ಥಳನಾಮಗಳ ಕುರಿತು ಸ್ಥಳೀಯರು ನೀಡುವ ನಿಷ್ಪತ್ತಿ, ಹೇಳುವ ಕತೆಗಳ ಜತೆಗೇನೇ, ಆಯಾ ಸ್ಥಳದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳನ್ನು ಕಣ್ಣಾರೆ ನೋಡಿ, ಸ್ಥಳನಾಮ ಉಗಮವಾಗುವ ಕ್ರಮ ಮತ್ತು ಅದರ ರೂಪಾಂತರದ ಹಿಂದಿನ ಒತ್ತಡಗಳನ್ನು ತೌಲನಿಕವಾಗಿ ಹಾಗೂ ಚಾರಿತ್ರಿಕವಾಗಿ ಖಚಿತಪಡಿಸಿಕೊಳ್ಳಲಾಯಿತು. ಸ್ಥಳನಾಮ ಘಟಕವಾಗಿ ಕಾಣಿಸಿಕೊಳ್ಳುವ ಒಂದು ತುಳು ಶಬ್ದಕ್ಕೆ ಇತರ ದ್ರಾವಿಡ ಭಾಷೆಗಳಲ್ಲಿ ಸಂವಾದಿಯಾಗಿರುವ ರೂಪ, ಅರ್ಥಸಾಮ್ಯ ಅಥವಾ ವೈಷಮ್ಯ; ಇಂಥ ಘಟಕಗಳಿಂದ ರೂಪುಗೊಂಡಿರುವ ಸ್ಥಳನಾಮಗಳ ಪ್ರಾಚೀನತಮ ಉಲ್ಲೇಖಗಳು; ಉಚ್ಛಾರ ಮತ್ತು ರೂಪದಲ್ಲಾದ ವ್ಯತ್ಯಾಸ; ನಿರ್ದಿಷ್ಟ ಭಾಷಾ ವೈಜ್ಞಾನಿಕ ನಿಯಮಗಳಿಂದ ನಿಯಂತ್ರಿತವಾಗಿರುವ ಬಗೆ - ಹೀಗೆ ಹತ್ತಾರು ಅಂಶಗಳನ್ನು ಅಭ್ಯಾಸ ಮಾಡುತ್ತಾ ಹೋದಂತೆ ನನ್ನ ಅಧ್ಯಯನ ಕ್ಷೇತ್ರದ ವ್ಯಾಪ್ತಿ ಮತ್ತು ಮಹತ್ವ ಹಾಗೂ ನನ್ನ ಮೇಲಿರುವ ಹೊಣೆಗಾರಿಕೆ ನಿಲುಕಹತ್ತಿತು".

" ತುಳುನಾಡಿನ ಸ್ಥಳನಾಮಾಧ್ಯಯನ" ಗ್ರಂಥದಲ್ಲಿ ಕೊನೆಯ ಉಪಸಂಹಾರದ ಸಹಿತ ಒಟ್ಟು 17 ಅಧ್ಯಾಯಗಳಿವೆ. ಅಧ್ಯಯನದ ವ್ಯಾಪ್ತಿ: ಉದ್ಧೇಶ, ಸಮಸ್ಯೆ, ಮೂಲಾಧಾರಗಳು, ತುಳುನಾಡು: ದರ್ಶನ, ಸ್ಥಳನಾಮಾಧ್ಯಯನ : ಮಹತ್ವ, ಸ್ಥಳನಾಮ ಸ್ವರೂಪ, ಜಲ ವಾಚಕಗಳು, ಜಲ ಸಂಬಂಧ ವಾಚಕಗಳು, ಉನ್ನತ ಭೂ ವಾಚಕಗಳು, ನಿಮ್ನ ಭೂ ವಾಚಕಗಳು, ಶಿಲಾ ವಾಚಕಗಳು, ಕದಷೇತ್ರನಾಮಗಳು, ಮಾರ್ಗ ವಾಚಕಗಳು, ಸಸ್ಯ ಹಾಗೂ ಪ್ರಾಣಿ ವಾಚಕಗಳು, ಸ್ಥಳನಾಮಗಳ ಸಾಂಸ್ಕೃತಿಕ ಹಿನ್ನೆಲೆ: ವಾಸ್ತವ್ಯ ಸೂಚಕಗಳು, ಸ್ಥಳನಾಮಗಳಲ್ಲಿ ವ್ಯಕ್ತವಾಗುವ ತುಳು ಜನಪದ ಸಂಸ್ಕೃತಿ, ಸ್ಥಳನಾಮ ಪ್ರತಿರೂಪ, ಸ್ಥಳನಾಮಗಳ ಭಾಷಾ ವೈಜ್ಞಾನಿಕ ಹಿನ್ನೆಲೆ: ಧ್ವನಿ ವೈಜ್ಞಾನಿಕ ಹಾಗೂ ರೂಪ ವೈಜ್ಞಾನಿಕ ಪರಿಶೀಲನೆಗಳು, ವಾಕ್ಯ ವೈಜ್ಞಾನಿಕ ಮತ್ತು ಅರ್ಥ ವೈಜ್ಞಾನಿಕ ಪರಿಶೀಲನೆಗಳು ಎಂಬ ಅಧ್ಯಾಯಗಳ ಮೂಲಕ ಸ್ಥಳನಾಮಗಳ ಸಮಗ್ರ ಚಿತ್ರಣವನ್ನು ಸಂಶೋಧಕರು ನೀಡಿದ್ದಾರೆ.

ದೇವಸ್ಥಾನಗಳ ಆಡಳಿತ ಮಂಡಳಿಗಳು ಪ್ರಕಟಿಸಿದ ಕ್ಷೇತ್ರ ಪರಿಚಯಗಳ ಕೃತಿಗಳಲ್ಲಿ ಕ್ಷೇತ್ರ ಪುರಾಣಗಳನ್ನೂ, ಕೆಲವು ಕೃತಿಗಳಲ್ಲಿ ಕೆಲವು ಐತಿಹ್ಯಗಳ ಬಗ್ಗೆ ಬರೆದಿರುತ್ತದೆ. ಹಲವು ಕ್ಷೇತ್ರ ಮತ್ತು ಸ್ಥಳಗಳ ಬಗ್ಗೆ ಮೌಖಿಕವಾಗಿಯೂ ಕ್ಷೇತ್ರ ಪುರಾಣಗಳನ್ನೂ, ಐತಿಹ್ಯಗಳನ್ನು ಕೆಲವರು ಹೇಳುವುದಿದೆ. ತಂದೆ ಹೇಳಿದ್ದು, ಅಜ್ಜ ಹೇಳಿದ್ದು, ಊರವರು ಹೇಳಿದ್ದು, ಹಿರಿಯರು ಹೇಳಿದ್ದು ಎಂದು ಹೇಳುತ್ತಾ ಹಿಂದಿನವರು ಹೇಳಿದ್ದನ್ನು ಇತರರಿಗೂ ಹೇಳಿ ವಿಷಯವನ್ನು ದಾಟಿಸಿಬಿಡುವುದು ಈಗಲೂ ಎಲ್ಲೆಡೆ ಸರ್ವೇ ಸಾಮಾನ್ಯವಾಗಿ ನಡೆಯುತ್ತಿದೆ. ಇಂಥ ಕ್ಷೇತ್ರ ಪುರಾಣಗಳ ಬಗ್ಗೆ ಸಂಶೋಧಕರು ಗ್ರಂಥದಲ್ಲಿ ಈ ಕೆಳಗಿನಂತೆ ಸ್ಪಷ್ಟ ಮಾತುಗಳಲ್ಲಿ, ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲದಂತೆ ಬರೆದಿದ್ದಾರೆ.

"ತುಳುನಾಡಿನಲ್ಲಿ ಸ್ಥಳಗಳ ಹೆಸರನ್ನೇ ಮುಖ್ಯವಾಗಿಸಿಕೊಂಡು ಹುಟ್ಟಿದ ಶಾಸ್ತ್ರೀಯ ಕೃತಿಗಳು ಇಲ್ಲವೆನ್ನಲು ಖೇದವಾಗುತ್ತದೆ. ಅದೇನಿದ್ದರೂ ಸ್ಥಳ ಪುರಾಣ, ಐತಿಹ್ಯ ಗ್ರಂಥಗಳು, ಸ್ವ ಕಪೋಲಕಲ್ಪಿತ 'ಪ್ರಸಂಗ' ಗಳಿಗೆ ಸೀಮಿತವಾಗಿ ಬಿಟ್ಟಿದೆ. ಸಹ್ಯಾದ್ರಿ ಖಂಡ, ಕ್ಷೇತ್ರ ಪುರಾಣಗಳು, ಹಾಸ್ಯ ಕಥನಗಳು, ಸ್ಥಳೈತಿಹ್ಯಗಳು, ತೀರಾ ರಂಜನೀಯವೂ, ಅಷ್ಟೇ ಕೃತಕವೂ ಆದ ಮೂಲಗಳಾಗಿರುವುದರಿಂದ, ಇವುಗಳ ಚಾರಿತ್ರಿಕ ಮಹತ್ವ ಸೊನ್ನೆ ಎನ್ನಬೇಕಾಗುತ್ತದೆ. ನಮ್ಮ ದೇಶದಲ್ಲಿ 'ಮೀಮಾಂಸೆ' ಎಂಬ ಪ್ರಕಾರ ಎಷ್ಟೊಂದು ವಿಸ್ತಾರವಾಗಿ, ವಿಶ್ಲೇಷಣಾತ್ಮಕವಾಗಿ ಬೆಳೆಯಿತೋ, ಅಷ್ಟೊಂದು ಪ್ರಮಾಣದಲ್ಲಿ 'ವಿಮರ್ಶೆ' ಬೆಳೆದುಬಂದಿಲ್ಲ. ಎಂಬುದಕ್ಕೆ ಈ 'ಸ್ಥಳ ಮೀಮಾಂಸೆ' ಗಳು ಸ್ಪಷ್ಟ ಸಾಕ್ಷಿಯಾಗಬಲ್ಲವು. ಇವುಗಳಲ್ಲಿ ಬಹುಪಾಲು ಅನುಕರಣಪರವೂ, ಸ್ವಯಂಸ್ಪೂರ್ತವೂ ಆಗಿ ಹುಟ್ಟಿರುವ ಅಸಂಬದ್ಧ ಅಪಲಾಪಗಳು".

ತುಳುನಾಡು ಮತ್ತು ಇಲ್ಲಿನ ಆಡಳಿತ ನಡೆದುಬಂದ ಇತಿಹಾಸದ ಬಗ್ಗೆ ಡಾ. ರಘುಪತಿ ಕೆಮ್ತೂರು ಅವರು ಹೀಗೆ ದಾಖಲಿಸಿದ್ದಾರೆ:

" ತುಳುನಾಡನ್ನು ಆಳ್ವಖೇಡ, ತುಳು ರಾಜ್ಯ, ತುಳು ವಿಷಯ, 'ಅನೂಪ ದೇಶ' ಮುಂತಾಗಿ ಕರೆಯಲಾಗಿದೆ. 'ಸತೀನರಾಃ' ಎಂಬ ಅಶೋಕನ ಶಾಸನದ ಉಲ್ಲೇಖ ಅಳಿಯ ಸಂತಾನದ ಅಥವಾ ಹೆಮ್ಮಕ್ಕಳ ಸಂತತಿಯ ತುಳುವರನ್ನೇ ಉದ್ಧೇಶಿಸಿದೆ ಎಂದು ಎಂದು ವಾದಿಸಲಾಗಿದೆ. ಟಾಲೆಮಿ (ಕ್ರಿ. ಶ. ಸುಮಾರು 150) ಹೆಸರಿಸುವ Olokhoira ಆಳ್ವಖೇಡದ ರೂಪಾಂತರವೆಂದು ವಿದ್ವಾಂಸರು ಗೊತ್ತುಹಚ್ಚಿದ್ದಾರೆ. ತುಳುನಾಡು ಹೆಚ್ಚುಕಮ್ಮಿ ಕನ್ನಡ ದೊರೆಗಳ ಅಧೀನವಾಗಿಯೇ ಉಳಿದು ಬಂದಿದ್ದರೂ, ಇಲ್ಲಿಯ ದೊರೆಗಳಿಗೆ - ಸುಮಾರು ಹದಿನಾಲ್ಕು ಶತಕಗಳ ದೀರ್ಘಕಾಲ ಆಳಿದ ಆಳುವರಿಗೆ  - ಆಂತರಿಕ ಸ್ವಾಯತ್ತತೆ ಇದ್ದಿರಬೇಕು. ಕ್ರಿ. ಶ. ದ ಆದಿಯಲ್ಲಿ ನನ್ನನ್ ಎಂಬ ದೊರೆ, ಇಲ್ಲಿದ್ದ 'ಕೋಶರ್' ಎಂಬ ಜನಾಂಗದವರನ್ನು ಸೋಲಿಸಿ ನೆಲೆಗೊಂಡಂತೆ ತಮಿಳು ಸಾಹಿತ್ಯದಿಂದ ತಿಳಿದುಬರುತ್ತದೆ. ನಾಲ್ಕನೇ ಶತಮಾನದ ಆದಿಯಿಂದ ಚರಿತ್ರೆಯ ಪುಟಗಳಲ್ಲಿ ಕಾಣಿಸಿಕೊಳ್ಳುವ ಕದಂಬರ ಕೈಕೆಳಗೆ ತುಳುನಾಡು ಇದ್ದಿರಬೇಕು. ಹಲ್ಮಿಡಿ ಶಾಸನದಲ್ಲಿ 'ಅಳಪಗಣ' ಎಂಬ ಉಲ್ಲೇಖವಿದ್ದು, ಅದು ತುಳುನಾಡಿನ ಆಳುವರೊಂದಿಗೆ ಕದಂಬರು ಹೊಂದಿದ್ದ ಸಂಬಂಧವನ್ನೇ ಸೂಚಿಸುತ್ತದೆ ಎನ್ನಬಹುದು. ಪ್ರಾಚೀನ ಅಳುಪರು 'ಮಂಗಲಪುರ' (ಮಂಗಳೂರು)ದ ಜತೆಗೆ 'ಉದಯಪುರ' (ಉದ್ಯಾವರ) ವನ್ನು ರಾಜಧಾನಿಯನ್ನಾಗಿಸಿಕೊಂಡು ಆಳುತ್ತಿದ್ದರು; ನಂತರ 'ಬರಕನೂರು' (ಬಾರಕೂರು) ಇವರ ಎರಡನೇ ರಾಜಧಾನಿಯಾಯಿತು. ವಿಜಯ ನಗರ ಕಾಲದಲ್ಲಂತೂ ತುಳುನಾಡನ್ನು 'ಬಾರಕೂರು ರಾಜ್ಯ' ಮತ್ತು 'ಮಂಗಳೂರು ರಾಜ್ಯ' ಎಂದೇ ವಿಭಾಗ ಮಾಡಿದ್ದು, ಸಾಮಂತ ಒಡೆಯ ಇಲ್ಲಿಯ ಆಳ್ವಿಕೆಯನ್ನು ನೋಡಿಕೊಳ್ಳುತ್ತಿದ್ದರು. ಮಧ್ಯಯುಗೀನ ಚರಿತ್ರೆಯಲ್ಲಿ ಚೌಟರು, ಬಂಗರು, ಅಜಿಲರು, ತೊಳಾರರು, ಸಾಮಂತರು, ಭೈರರಸರು ಮುಂತಾದವರು ಪ್ರಾಬಲ್ಯಕ್ಕೆ ಬಂದಿದ್ದು, ಸ್ಥಳೀಯ ಆಡಳಿತವನ್ನು ನಡೆಸುತ್ತಿದ್ದರು. 16ನೇ ಶತಮಾನದ ಮಧ್ಯಭಾಗದಲ್ಲಿ ಕೆಳದಿಯ ಸದಾಶಿವ ನಾಯಕನು ಈ ಭಾಗವನ್ನೆಲ್ಲ ಗೆದ್ದನು. ಅನಂತರ ಈ ಭಾಗದಲ್ಲಿ ಯಾವೊಬ್ಬ ಪ್ರಬಲ ಅರಸನೂ ತಲೆಯೆತ್ತಿದಂತೆ ಕಂಡುಬಂದಿಲ್ಲ".

ತುಳುನಾಡ ಜನರಿಗೂ, ಪ್ರಕೃತಿಗೂ ಇದ್ದ ಸಂಬಂಧವನ್ನು ಸ್ಥಳನಾಮದ ಹಿನ್ನೆಲೆಯಲ್ಲಿ ನಿಖರವಾಗಿಯೇ ಸಂಶೋಧಕರು ಗುರುತಿಸುತ್ತಾರೆ.

"ಸ್ಥಳನಾಮವು ಮೂಲತಃ ಒಂದು ಭೌಗೋಳಿಕ ಅಂಶ ಅಥವಾ ಘಟಕವಾಗಿದ್ದು, ಅದು ಪ್ರಕೃತಿಯ ವರ್ಣನಾತ್ಮಕ ನಾಮ ವಿಶೇಷಣವಾಗಿ ಕಾರ್ಯವೆಸಗುತ್ತಿತ್ತು. ಅಲ್ಲದೆ ಒಂದು ಕಾಲದಲ್ಲಿ ಮಾನವ ಹಾಗೂ ಪ್ರಕೃತಿ - ಈ ದ್ವಂದ್ವಗಳ ವಿರುದ್ಧ ಶಕ್ತಿಗಳ ಪರಸ್ಪರ ಸಂಬಂಧ - ಹೋರಾಟ ಮುಂತಾದವನ್ನು ಇದು ಸೊಗಸಾಗಿ ನಿರೂಪಿಸಬಲ್ಲುದು. ತುಳುನಾಡಿನ ಸ್ಥಳನಾಮಗಳನ್ನಷ್ಟೇ ತೆಗೆದುಕೊಂಡರೂ, ಇಲ್ಲಿಯ ಸ್ಥಳನಾಮಗಳಲ್ಲಿ ಹೆಚ್ಚಿನವು ಪ್ರಕೃತಿ ವಾಚಕಗಳಾಗಿರುವುದು ನಮ್ಮ ಜನರ ಪ್ರಕೃತಿ ನಿಷ್ಠತೆಯನ್ನೂ ಬಿಂಬಿಸಬಲ್ಲುದು. ಈ ಪ್ರಕೃತಿ ನಿಷ್ಠತೆ ಆದಿ ಮಾನವನ ಒಂದು ಪ್ರಮುಖ ಗುಣ. ಇಂದು ದ್ರಾವಿಡ ಮೂಲ ಜನಾಂಗದ ಗುಣ ಸ್ವಭಾವಗಳನ್ನು ಬಹುಮಟ್ಟಿಗೆ ತುಳುನಾಡು ಉಳಿಸಿಕೊಂಡು ಬಂದಿದೆ".

"ಯಾವಾಗೆಲ್ಲ ನಾವು ಹೊಳೆ, ಪರ್ವತ, ಕಾಡು, ನಾಡು, ಪಟ್ಟಣ ಅಥವಾ ಹಳ್ಳಿಗಳ ಹೆಸರನ್ನು ಅರ್ಥಮಾಡಿಕೊಳ್ಳುವುದಿಲ್ಲವೋ, ಆಗ ಮೂಲ ಭಾಷೆಯ ಅರ್ಥವನ್ನು ನಾವು ಮರೆತುಬಿಟ್ಟಿದ್ದೇವೆ ಎಂದೇ ತಿಳಿಯತಕ್ಕದ್ದು".

ಸ್ಥಳನಾಮಗಳ ಅಧ್ಯಯನದಿಂದಾಗುವ ಪ್ರಯೋಜನಗಳು ಹಲವು. ಇದರಲ್ಲೊಂದು: "ಮಾನವನು ಮೂಲತಃ ಅಲೆಮಾರಿಯಾಗಿದ್ದು ಕ್ರಮೇಣ ತಾತ್ಪೂರ್ತಿಕ ನೆಲೆಯನ್ನು ಕಂಡುಕೊಂಡಿದ್ದು; ಅನಂತರ ವ್ಯವಸಾಯದ ಕಲೆಯನ್ನು ಕಲಿಯುತ್ತಲೇ ಪ್ರಕೃತಿಯನ್ನು ತೀವ್ರವಾಗಿ ತನ್ನ ಉದ್ಧೇಶಕ್ಕೆ , ಸ್ವಾರ್ಥಕ್ಕೆ ತಕ್ಕಂತೆ ಬಳಸಿಕೊಂಡದ್ದು ; ಜೀವನಾವಶ್ಯಕ ವಸ್ತುಗಳ ಪೂರೈಕೆಯಾದ ಮೇಲೆ, ತನ್ನ ವಿರಾಮ ಕಾಲದಲ್ಲಿ ದೇವರು - ಧರ್ಮ - ಮಾನವ ಸಂಬಂಧಗಳಂಥ ಅಮೂರ್ತ ಹಾಗೂ ತಾತ್ವಿಕ ವಿಷಯಗಳ ಮೇಲೆ  'ತಲೆ ಓಡಿಸಿ' ದ್ದು ; ಆ ಮೂಲಕ ಈಚೆಗೆ ಸಂಸ್ಕೃತಿ - ನಾಗರಿಕತೆ - ವಿಜ್ಞಾನದ ಬಹುಮುಖವಾದ, ವ್ಯಾಪಕವಾದ ಬೆಳವಣಿಗೆಗೆ ಹಾದಿ ಮಾಡಿಕೊಟ್ಟದ್ದು - ಇವೇ ಮುಂತಾದ ಕೆಲವು ಸಾಂಸ್ಕೃತಿಕ ಘಟ್ಟಗಳನ್ನು ನಾವು, ವ್ಯವಸ್ಥಿತವಾಗಿ ವರ್ಗೀಕರಿಸಿದ ಸ್ಥಳನಾಮಗಳ ಪಟ್ಟಿಯಿಂದ ಗುರುತಿಸಬಲ್ಲೆವು".

ತುಳುನಾಡಿನ ಭೂ ಪ್ರಕೃತಿಯೂ, ಬೆಲ್ಜಿಯಂ ದೇಶದ ಭೂ ಪ್ರಕೃತಿಯೂ ಸಮಾನ ಅಂಶಗಳನ್ನು ಹೊಂದಿರುವುದನ್ನು ಸಂಶೋಧಕರು ಜಲ ವಾಚಕ ಸ್ಥಳನಾಮಗಳ ಮೂಲಕ ಗಮನಸೆಳೆದಿದ್ದಾರೆ.

" ತುಳುನಾಡಿನಲ್ಲಿ ಕಂಡುಬರುವ ತೀರಾ ಸಾಮಾನ್ಯವಾದ ಜಲ ವಾಚಕ ಸ್ಥಳನಾಮ 'ಬೊಳ್ ಜೆ' (ಬೊಳ್ಳಜೆ, ಬೊಳ್ಜ ಇತ್ಯಾದಿ)ಯ ಪ್ರತಿಧ್ವನಿ 'ಬೆಲ್ಜಿಯಂ' ಎಂಬ ದೇಶ ವಾಚಕದಲ್ಲಿದೆ. ಇವೆರಡೂ ಪದಗಳು ಸಮಾನ ಭೂಗುಣವನ್ನು ಹೊಂದಿವೆ; ಅರ್ಥಾತ್ ಪದೇ ಪದೇ ನೆರೆಯ ಹಾವಳಿಗೆ ಒಳಗಾಗುವ ತೀರಾ ಜವುಗು ಸ್ಥಳಗಳು, ಹೊಳೆಯ ಬದಿಯ ಸ್ಥಳಗಳು. ಶಬ್ದ - ವ್ಯುತ್ಪತ್ತಿ ದೃಷ್ಟಿಯಿಂದಲೂ ಇವು ಸಮಾನಾರ್ಥಕವಾಗಿರುವುದು ಮಹತ್ವದ ವಿಚಾರ. ಈ ನಿಟ್ಟಿನಲ್ಲಿ ಅತ್ಯಂತ ತಲಸ್ಪರ್ಶಿಯಾದ, ವ್ಯಾಪಕವಾದ ಶೋಧನೆ ನಡೆದಲ್ಲಿ , ಮೂಲ ದ್ರಾವಿಡ ಜನಾಂಗದ ಏಕೆ, ಮೂಲ ಮಾನವ ಜನಾಂಗದ ಕೇಂದ್ರವನ್ನೂ , ವಲಸೆಯ ಮಾರ್ಗವನ್ನೂ , ಅದಕ್ಕೆ ಕಾರಣವನ್ನೂ ಗುರುತಿಸಬಹುದಲ್ಲದೆ, ಮಾನವನ ಪೂರ್ವ ಚರಿತ್ರೆಯನ್ನೂ ಇನ್ನಷ್ಟೂ ಕರಾರುವಾಕ್ಕಾಗಿ ಪುನಾರಚಿಸುವುದು ಸಾಧ್ಯವಾದೀತು" ಎಂದು ಡಾ. ರಘುಪತಿ ಕೆಮ್ತೂರು ಅವರು ಅಚಲ ವಿಶ್ವಾಸದಿಂದ ಬರೆಯುತ್ತಾರೆ.

ಮೂಲ ಸ್ಥಳನಾಮಗಳು ಸಂಸ್ಕೃತೀಕರಣಗೊಂಡಿರುವ ಬಗ್ಗೆ ಸಂಶೋಧಕರು ಇಲ್ಲಿ ದಾಖಲಿಸಿದ್ದಾರೆ.

"ಉಳಿದ ಕಡೆಗಳಲ್ಲಿ ಎಂತೋ ತುಳುನಾಡಿನಲ್ಲೂ ಅಂತೆ, ಬ್ರಾಹ್ಮಣ ಅಥವಾ ವಿದ್ವಾಂಸ ವರ್ಗದಿಂದ, ಎಷ್ಟೋ ದೇಶೀ ಹೆಸರುಗಳು ಸಂಸ್ಕೃತೀಕರಣಗೊಂಡಿವೆ; ಪರಿಷ್ಕೃತವಾಗಿವೆ. ಹೀಗೆ ಸಂಸ್ಕೃತೀಕರಣ ನಡೆದಾಗ ಕೆಲವೊಮ್ಮೆ ಮೂಲರೂಪದ ಅರ್ಥವೇ ಹೊರಬಿದ್ದರೂ, ಅದು ಕಠಿಣ ಸಂಸ್ಕೃತವಾಗಿರುವುದರಿಂದ, ಜನಸಾಮಾನ್ಯರ ಬುದ್ಧಿಗೆ ನಿಲುಕುವಂತಿಲ್ಲ; ಹಾಗಾಗಿ, ಅವರಿಂದ ಎಂದಿಗೂ ಅಂಕಿತ ಪಡೆಯದ ಕೇವಲ ಗ್ರಂಥಸ್ಥ ಅಥವಾ 'ಪಂಡಿತ - ವ್ಯವಹಾರಸ್ಥ' ರೂಪಗಳಿವು. ಉದಾ: ಕೊಡಿಪಾಡಿ - ಪ್ರಾಗ್ರ್ಯವಾಟ, ಇಡೆತುದೆ - ಸರಿದಂತಾರಾಖ್ಯದೇಶ. ಬಾಳೆಕುದ್ರು - ರಂಭಾದ್ವೀಪ, ಮುಂತಾದುವು. ಇನ್ನೂ ಕೆಲವು ಪರಿಷ್ಕೃತ ರೂಪಗಳು ಪ್ರಾಯಃ ಶಿಷ್ಟತೆಯ ಗೀಳಿನಿಂದ, ಅಂದರೆ ಸಮಾಜ ಶಾಸ್ತ್ರೀಯ ಪರಿಭಾಷೆಯಾದ 'ಸಂಸ್ಕೃತೀಕರಣ' ಪ್ರಕ್ರಿಯೆಯ ಅನುಸಾರ ಹುಟ್ಟಿಕೊಂಡವು. ಉದಾ. ಗೆ 'ಬ್ಯಾಕೇರಿ' ಯನ್ನು ಇತ್ತೀಚೆಗೆ 'ಸಂಪಿಗೆನಗರ' ಎಂದೂ, 'ಬೋಳ್ಗುಡ್ಡೆ' ಯನ್ನು 'ಪುಷ್ಪನಗರ' ಎಂದೂ, ಬಗ್ಗೆರೆಕಲ್ಲ' ನ್ನು 'ಸುಭಾಸ್ ನಗರ' ಎಂದೂ ಕರೆಯಲಾಗುತ್ತದೆ. ಇದು ಪ್ರಾಯಃ ಪಂಡಿತರ ಹಸ್ತಕ್ಷೇಪವಿಲ್ಲದೇ, ಕೇವಲ ಹೊಸತರ ಆಕಾಂಕ್ಷೆಯಿಂದ ಹುಟ್ಟಿಕೊಂಡ, ಮೂಲಾರ್ಥದೊಂದಿಗೆ ಏನೇನೂ ಸಂಗತವಾಗದ ಅರ್ಥ ನೀಡುವ ಪರ್ಯಾಯ ರೂಪ. ಇನ್ನು ಕೆಲವು ಭಿನ್ನಾರ್ಥಕ ಸಂಸ್ಕೃತೀಕರಣಗಳು ಪಂಡಿತ ವರ್ಗದಿಂದ, ಸ್ಥಳ ಪುರಾಣದ ಕವಿಗಳಿಂದ ಸೃಷ್ಟಿಯಾಗಿವೆ. ಉದಾ: ಕದಿರೆ - ಕದಳೀವನ, ಸುವರ್ಣ ಕದಳಿ; ಒಡಿಪು (ಉಡುಪು) - ಶಿವರೂಪ್ಯ (?), ರಜತಪೀಠ, ರೌಪ್ಯಪೀಠ; ಬಾರಕೂರು - ಬಾರಹಕನ್ಯಾಪುರ, ಕೊಲ್ಲೂರು - ಕುವಲಯಪುರ, ಮೂಳೂರು - ಮೂಲಾಪುರ, ಸೌಕೂರು - ಸೌಖ್ಯಪುರ, ಮುಂತಾದುವು. 

ಬೆಳ್ಳಾರೆ ಎಂಬ ಸ್ಥಳನಾಮದ ಬಗ್ಗೆ ಸಂಶೋಧಕರು ಹೀಗೆ ಬರೆದಿದ್ದಾರೆ: "ತುಳುವಿನಲ್ಲಿ 'ಬುಳೇರಿ' ಎಂದೂ ಕರೆಯಲಾಗುತ್ತಿರುವ ಈ ಸ್ಥಳ ತಗ್ಗಿನಲ್ಲಿದ್ದು, ಮಳೆಗಾಲದಲ್ಲಿ ನೆರೆಗೆ ತುತ್ತಾಗುವ ಸ್ಥಳ. ಮಳೆಗಾಲದಲ್ಲಿ ಇಲ್ಲಿಯ ಗೌರಿ ಹೊಳೆಗೆ ಕಟ್ಟಿದ ಸೇತುವೆ ಮುಳುಗಿ ಬಿಡುವುದುಂಟು. ತುಳುವಿನಲ್ಲಿ 'ಬೊಳ್ಳ' (ಬೆಳ್ಳ) ಎಂದರೆ 'ನೆರೆ' ಎಂದಿದ್ದರೂ ಇದು ದ್ರಾವಿಡ ಭಾಷೆಗಳಲ್ಲಿ ಜಲಾರ್ಥಕವಾಗಿದೆ; ಅಥವಾ ಜಲಾಧಿಕ್ಯವನ್ನು ಸೂಚಿಸುತ್ತದೆ. ಆದ್ದರಿಂದ 'ಬೆಳ್ಳಾರ್' ಬೆಳ್ + ಆರ್ + ಎ - ದ್ವಿರುಕ್ತಿಗೆ (tautology) ಒಂದು ನಿದರ್ಶನವಾಗಿದೆ ಎನ್ನಬಹುದು.

ಸ್ಥಳನಾಮಗಳಿಗೆ ಸಂಬಂಧಿಸಿದಂತೆ  "ತುಳುನಾಡಿನ ಸ್ಥಳನಾಮಗಳು", " ತುಳು ಮತ್ತು ಕನ್ನಡ ಸ್ಥಳನಾಮ ವಸ್ತುಕೋಶ" ಮತ್ತು "ಹೆಸರಿನಲ್ಲೇನಿದೆ ?" ಎಂಬ ಅಧ್ಯಯನಾತ್ಮಕ ಕೃತಿಗಳನ್ನು ರಚಿಸಿ, ಈ ಕ್ಷೇತ್ರದಲ್ಲಿ ಬಹಳಷ್ಟು ಕ್ಷೇತ್ರಕಾರ್ಯ ಮಾಡಿ ಸಾಧನೆ ಮೆರೆದವರು ಡಾ. ರಘುಪತಿ ಕೆಮ್ತೂರು ಅವರು. ಇವರೇ ತಮ್ಮ ಪಿಎಚ್ ಡಿ ಮಹಾ ಪ್ರಬಂಧಕ್ಕಾಗಿ ಸಿದ್ಧಪಡಿಸಿದ "ತುಳುನಾಡಿನ ಸ್ಥಳನಾಮಾಧ್ಯಯನ" ಗ್ರಂಥವು ಕನ್ನಡದಲ್ಲಿ ಸ್ಥಳನಾಮಗಳಿಗೆ ಸಂಬಂಧಿಸಿ ಇದುವರೆಗೆ ಬಂದ ಕೃತಿಗಳಲ್ಲಿಯೇ ಅತ್ಯಂತ ಹೆಚ್ಚು ಮಹತ್ವದ್ದು ಮತ್ತು ಪರಿಪೂರ್ಣವಾದದ್ದು ಎನ್ನುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಐತಿಹಾಸಿಕವೆನ್ನಬಹುದಾದ ಕೆಲಸ ಮಾಡಿದ ಡಾ. ಆರ್.ಕೆ. ಮಣಿಪಾಲ್ ಅವರನ್ನು ಸರ್ವರೂ ಅಭಿನಂದಿಸಬೇಕಾಗಿದೆ.

 

~ *ಶ್ರೀರಾಮ ದಿವಾಣ, ಶಿವನಹಳ್ಳಿ (ಉಡುಪಿ)*