ತುಳು ಭಾಷೆ - ತುಳು ನಾಡು

ತುಳು ಭಾಷೆ - ತುಳು ನಾಡು

ಪುಸ್ತಕದ ಲೇಖಕ/ಕವಿಯ ಹೆಸರು
ಬಿ. ಸಚ್ಚಿದಾನಂದ ಹೆಗ್ಡೆ
ಪ್ರಕಾಶಕರು
ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆ
ಪುಸ್ತಕದ ಬೆಲೆ
ನಮೂದಿಸಿಲ್ಲ.

ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳು ಭಾಷೆ - ತುಳುನಾಡು"

ಉಡುಪಿ ಅಂಬಲಪಾಡಿಯ ಬಿ. ಸಚ್ಚಿದಾನಂದ ಹೆಗ್ಡೆಯವರ 32 ಲೇಖನಗಳ ಸಂಕಲನ "ತುಳು ಭಾಷೆ - ತುಳು ನಾಡು" (ಪುರಾಣ ಜಾನಪದಗಳಲ್ಲಿ ತುಳುನಾಡವರು). ಶ್ರೀನಿವಾಸ ಪುಸ್ತಕ ಪ್ರಕಾಶನ ಸಂಸ್ಥೆಯು ಪ್ರಕಟಿಸಿದ, 174 ಪುಟಗಳ ಕೃತಿಯಲ್ಲಿ ಬೆಲೆಯನ್ನು ನಮೂದಿಸಲಾಗಿಲ್ಲ.

ಕೃತಿಯಲ್ಲಿ ಎ. ರಾಜೀವಲೋಚನ ಅವರ "ಪ್ರಕಾಶಕರ ಮಾತು", ಮೈಸೂರಿನ ವಿಜಯನಾಥ ಭಟ್ಟ ("ಕೌಂಡಿನ್ಯ") ಅವರ "ಮುನ್ನುಡಿ" ಮತ್ತು ಕೃತಿಯ ಲೇಖಕ ಸಚ್ಚಿದಾನಂದ ಹೆಗ್ಡೆಯವರ "ಪ್ರಸ್ತಾವನೆ" ಇದೆ.

ತಮ್ಮ ತುಳು ಕಾದಂಬರಿಗಾಗಿ ಪ್ರತಿಷ್ಟಿತ "ಯು.ಎಸ್. ಪಣಿಯಾಡಿ ಪ್ರಶಸ್ತಿ" ಪಡೆದಿರುವ, ಹತ್ತಾರು ಅಧ್ಯಯನಾತ್ಮಕ ಕೃತಿಗಳ  ಲೇಖಕರಾದ ಬಿ. ಸಚ್ಚಿದಾನಂದ ಹೆಗ್ಡೆಯವರ ಕುರಿತು ಹಾಗೂ ಈ ಕೃತಿಯ ಕುರಿತು ವಿಜಯನಾಥ ಭಟ್ಟರು ಕೆಲ ಮಾತುಗಳನ್ನು ಬರೆದಿದ್ದು, ಇದು ಕೃತಿಯ ಪ್ರವೇಶಿಕೆಗೆ ಸೂಕ್ತವಾಗಿದೆ.

"ಈ ಮೊದಲು, ತನ್ನ ವೃತ್ತಿ ಜೀವನದುದ್ದ ಜೀವವಿಮಾ ರಂಗದಲ್ಲಿ ದುಡಿಯುತ್ತಿದ್ದಾಗ ಹೆಗ್ಡೆಯವರು - ತನ್ನ ವೃತ್ತಿಪರ ಬೇಡಿಕೆಗೆ ಪೂರಕವಾಗಿ ವಿಪುಲ ಸಾಹಿತ್ಯವನ್ನು ಸೃಷ್ಟಿಸಿದುದಲ್ಲದೆ, ತನ್ಮೂಲಕ ಆ ಕ್ಷೇತ್ರದ ಉಚ್ಛಾಧಿಕಾರಿಗಳ ಹಾಗೂ ಕುಶಲಕರ್ಮಿಗಳ ಅಪಾರ ಆದರಕ್ಕೆ ಪಾತ್ರರಾಗಿದ್ದರು. ನಿವೃತ್ತರಾದ ಮೇಲೆ ಅವರು ತಮ್ಮನ್ನು ತಮ್ಮ ಜನಾಂಗದ - ವಿಶೇಷವಾಗಿ ಬಂಟರ ಅಥವಾ ನಾಡವರ - ನಾಡು, ನಡೆ, ನುಡಿಗಳ ಹುಟ್ಟು, ಬೆಳವಣಿಗೆಯ ಚರಿತ್ರೆ ಮತ್ತು ತಳ ಶೋಧನೆಗೆ ಕೈಹಾಕಿದುದು ಒಂದು ಸ್ವಾಗತಾರ್ಹ ಬೆಳವಣಿಗೆ. ಹಲವಾರು ಲೇಖಕರ, ಸಂಶೋಧಕರ, ಕತೆಗಾರರ, ಜನಪದ ಸಾಮಾನ್ಯರ ಹಾಗೂ ವಿದ್ವಾಂಸರ ಆಕರ ಮೂಲಗಳನ್ನು ಅಗೆದು, ಅಗಿದು, ಅರೆದು, ಅರಗಿಸಿಕೊಂಡು - ಅವುಗಳಲ್ಲಿನ ಪರಸ್ಪರ ಪೂರಕ ಹಾಗೂ ವಿರೋಧಿ, ಸಾಧು ಹಾಗೂ ಪ್ರಚೋದಕ, ಪ್ರಾಮಾಣಿತ ಹಾಗೂ ಅನುಮಾನಿತ, ಪ್ರಕಟಿತ ಹಾಗೂ ಅಪ್ರಕಟಿತ ಕಲ್ಪನೆಗಳು, ವ್ಯಾಖ್ಯೆಗಳು, ನಿಲುವುಗಳು, ತಕರಾರುಗಳು, ವಿಷಯ ಮಂಡನೆಗಳು, ದೃಷ್ಟಿಕೋನಗಳು - ಇವನ್ನೆಲ್ಲಾ ತುಲನಾತ್ಮಕವಾಗಿ, ಸತಾರ್ಕಿಕವಾಗಿ, ಸತ್ಯನಿಷ್ಟವಾಗಿ ತಿರುವಿ, ತೀಡಿ, ತಿದ್ದಿ, ವಿಶ್ಲೇಷಿಸಿ, ಪೋಣಿಸಿ ಈ ಹೊತ್ತಗೆಯ ರೂಪದಲ್ಲಿ ಓದುಗರಿಗೆ, ಆಸಕ್ತರಿಗೆ, ಪ್ರಸಾದಿಸಲೆಳಸುವ ಅವರ ದಾಷ್ಟ್ರ್ಯ, ದಾರ್ಢ್ಯ, ಪರಿಶ್ರಮ ಹಾಗೂ ಅದರಲ್ಲಿ ತೊಡಗುವ ಪ್ರಾಮಾಣಿಕತೆ ಇವುಗಳು ಸಹೃದಯರ ಮನಸೆಳೆಯದೆ ಇರಲಾರವು".

"... ಅಂತೆಯೇ ಅವರ ಬರವಣಿಗೆಯಲ್ಲಿ ಎಲ್ಲೂ ಓದುಗನನ್ನು ತನ್ನ ತರ್ಕಕ್ಕೆ, ನಿಲುವಿಗೆ ಬಲಾತ್ಕಾರವಾಗಿ ಒಲಿಸಿಕೊಳ್ಳುವ ಛಲವಿಲ್ಲ. ಅವರ ಆಖ್ಯಾಯಿಕೆಯ ಓಘದಲ್ಲಿ ನಿಚ್ಛಳವಾಗಿ ಕಂಡು ಬರುವ ಏಕೈಕ ಗುಣವೆಂದರೆ ಓದುಗನೆದುರು ತಾನು ಕಂಡು, ಕೇಳಿ, ಅರಿತ ತಥ್ಯಗಳನ್ನು ಹರಡಿ ಅವನನ್ನು ಮತ್ತೆ ಮತ್ತೆ ಕೆಣಕಿ, ಚಿಂತನೆಗೆ ಹಚ್ಚುವ ಹುನ್ನಾರ. ತಾನು ಕಂಡ ಪ್ರತಿಯೊಂದು ಉತ್ತರಕ್ಕೂ ಹಲವಾರು ಸಂಭಾವ್ಯ ಪ್ರಶ್ನೆಗಳನ್ನು ಓದುಗನತ್ತ ಎಸೆದು ಅವನ ಪ್ರತಿಕ್ರೀಯೆಯ ನಿರೀಕ್ಷೆಯಲ್ಲಿ ನಿಂತಂತೆ ಕಂಡುಬರುವ ಹೆಗ್ಡೆಯವರ ಗತ್ತು - ಒಬ್ಬ ಚತುರ ಚದುರಂಗ ಪ್ರವೀಣನು ಒಂದು 'ನಡೆ'ಯನ್ನು ನಡೆಸಿ, ಮತ್ತೆ ಎದುರಾಳಿಯ ಪ್ರತೀಕ್ಷೆಯನ್ನು ನಿರೀಕ್ಷಿಸುವಂತಹ ಭಂಗಿಯನ್ನು ನೆನಪಿಸುತ್ತದೆ".

ಇತಿಹಾಸ, ಚರಿತ್ರೆಯ ರಚನೆ ಕುರಿತು ವಿಜಯನಾಥ ಭಟ್ಟರು ತಮ್ಮ ಅಭಿಪ್ರಾಯ, ನಿಲುವುಗಳನ್ನು ಮುನ್ನುಡಿಯಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದು, ಅದು ಹೀಗಿದೆ.

"ಹಾಗೆಂದು ಇತಿಹಾಸದ, ಚಾರಿತ್ರಿಕ ಘಟನೆಗಳನ್ನು, ಪಾತ್ರಗಳನ್ನು ಹಾಗೂ ಪ್ರಕಟಣೆಗಳನ್ನೇ ಆಧಾರವಾಗಿಟ್ಟುಕೊಂಡು ಯಾವುದೇ ಒಂದು ನಿರ್ದಿಷ್ಟವಾದ, ನಿರ್ದುಷ್ಟವಾದ ನಿರ್ಧಾರಗಳನ್ನು ಮೂಡಿಸುವ ಪ್ರಯತ್ನ ತುಂಬಾ ಅಪಾಯಕಾರಿ. ಏಕೆಂದರೆ, ಹೆಚ್ಚಿನ ಚರಿತ್ರೆ ಬರೆದುದಲ್ಲ ; ಬರೆಯಿಸಲ್ಪಟ್ಟುದು. ಅಂತಹ ಸಂದರ್ಭದಲ್ಲಿ ಉತ್ಪ್ರೇಕ್ಷೆ, ರೋಚಕತೆ ಅನಿವಾರ್ಯವಾಗುತ್ತದೆ. ಸತ್ಯ ನಿಷ್ಠೆಗಿಂತ (ಅಧಿಕಾರಾರೂಢ) ವ್ಯಕ್ತಿ ನಿಷ್ಟೆ, ವಸ್ತು ನಿಷ್ಟೆಗಿಂತ 'ಅಸ್ತು' ನಿಷ್ಟೆ ಮೇಲ್ಮೈಪಡೆಯುತ್ತದೆ. ಇಂತಹ ಅಸತ್ಯ, ಅರ್ಧ ಸತ್ಯಗಳು ಕಾಲಾಂತರದ ಸವಕಳಿಕೆಯಿಂದಾಗಿ ಕತೆಯೋ, 'ಅಂತೆ' ಕತೆಯೋ, ದಂತ ಕತೆಯೋ ಆಗಿ ಪರಿವರ್ತನೆಗೊಂಡು, ಸತ್ಯ ಸಾಧಕರ, ಸತ್ಯ ಶೋಧಕರ ದೃಷ್ಟಿಯಿಂದ ನಿಷ್ಪ್ರಯೋಜಕವಾಗುತ್ತವೆ. ಈ ಸತ್ಯವನ್ನು ಹೆಗ್ಡೆಯವರು ಮನಗಂಡಿದ್ದಾರೆ".

"ತುಳು ಭಾಷೆಯಿಂದ ತುಳುನಾಡೇ ?", ಕೃತಿಯ ಮೊದಲ ಮತ್ತು ಸುಧೀರ್ಘವಾದ ಲೇಖನ. ತುಳು ಲಿಪಿ, ಭಾಷೆ ಮತ್ತು ವಲಸೆ ಇತ್ಯಾದಿ ಮುಖ್ಯ ವಿಷಯಗಳ ಬಗ್ಗೆ ಲೇಖಕರು ಅಪಾರ ಆಸ್ಥೆಯಿಂದ ನಡೆಸಿದ ಅಧ್ಯಯನದ ಫಲವಾಗಿ ಆಕರಪೂರ್ಣವಾದ ಲೇಖನವಾಗಿ ಇದು ಮೂಡಿಬಂದಿದೆ.

"ತುಳು ಭಾಷೆ - ಕನ್ನಡ ಭಾಷೆಗಿಂತಲೂ ಸಹಸ್ರಮಾನಕ್ಕೂ ಅಧಿಕ ವರ್ಷ ಹಳೆಯದೆಂಬುದಕ್ಕೆ ಕ್ರಿ. ಪೂ. ಎರಡನೇ ಶತಮಾನದ ಗ್ರೀಕ್ ನಾಟಕ cherishan mime ಸಾಕ್ಷಿಯಾಗಿದೆ. ಈ ನಾಟಕದಲ್ಲಿ ಸ್ಥಳೀಯ ಪಾತ್ರಗಳು ತುಳು ಭಾಷೆಯಲ್ಲೇ ಮಾತನಾಡುತ್ತವೆ. ಅವರ ಸಂಭಾಷಣೆಯನ್ನು 'ತುಳು ಭಾಷೆ'ಯದ್ದೆಂದು ಬಹಳಷ್ಟು ಕಾಲದವರೆಗೆ ಗುರುತಿಸಲು ವಿಶ್ಲೇಷಣೆಕಾರರು ವಿಫಲರಾಗಿದ್ದಾರು. ತುಳುವಿನಲ್ಲಿ ಹಲವಾರು ಪ್ರಾದೇಶಿಕ ಜಾತ್ಯಾಧಾರಿತ ಪ್ರಭೇದಗಳು ಇದ್ದು, ಈಯೆಲ್ಲಾ ಪ್ರಭೇದಗಳ ಪರಿಚಯವಿಲ್ಲದ ಕಾರಣ ವಿಮರ್ಶಕರು ಈ ಕೆಲಸದಲ್ಲಿ ದಾರಿ ತಪ್ಪಿದರು. ಅದರಲ್ಲಿ ಉಲ್ಲೇಖಗೊಂಡಿರುವ  - 'ಲೇ ಲೇ ಲೇ ಲೇಲೆ ದಿಕ್ಕ' ಮುಂತಾದ ಒರಲ್ ಗಳಿಂದ 'ಚೆರಿಶನ್ ' ನಲ್ಲಿ ಉಲ್ಲೇಖಗೊಂಡಿರುವ ತುಳು - ಬಾಕುಡರ ಭಾಷೆಯೆಂದು ಈಗ ಗುರುತಿಸಲ್ಪಟ್ಟಿದೆ. ಇದರಿಂದ ಇಲ್ಲಿ ಬಾಕುಡರು, ನಾಯಕರು (?) ಮುಂತಾದ ತುಳು ಭಾಷಿಕರು - ತುಳುವ ಬ್ರಾಹ್ಮಣರ ಹಾಗೂ ಬಂಟ / ನಾಡವರ ವಲಸೆಗಿಂತಲೂ ಮೊದಲೇ ಇಲ್ಲಿ ವಾಸಿಸುತ್ತಿದ್ದರು - ಎನ್ನುವುದು ಸಾಬೀತಾಗುತ್ತದೆ. ಕನ್ನಡನಾಡಿನ ಪಶ್ಚಿಮ ಕರಾವಳಿ  - ತುಳು ಭಾಷೆಯನ್ನಾಡುವ ವಿವಿಧ ಜನ ಜಾತಿಗಳ ವಸತಿ ಪ್ರದೇಶವಾಗಿ ಬ್ರಾಹ್ಮಣರ ವಲಸೆಗಿಂತ ಸಾವಿರ ವರ್ಷಕ್ಕೂ ಮೊದಲೇ ರೂಪುಗೊಂಡಿತ್ತು. ಆದರೆ ಈ ಮೂಲ ನಿವಾಸಿಗಳು ಕೂಡ ವಲಸೆಗಾರರು" ಎಂಬ ಬಹು ಮುಖ್ಯ ಅಂಶವನ್ನು ಲೇಖನದಲ್ಲಿ ಕೃತಿಕಾರರು ದಾಖಲಿಸಿದ್ದಾರೆ.

"ತುಳುನಾಡಿನ ಪ್ರಾಗಿತಿಹಾಸ", "ಪ್ರಾಚೀನ ತುಳುನಾಡು", "ಸತಿಯ ಪುತ್ರರು", "ತುಳುನಾಡನ್ನಾಳಿದ 'ನಣ್ಣನ್' ಹಾಗೂ ಕೋಶರರು", "ತುಳುವ ಅರಸರಾದ ಆಳೂಪರು", " ಪ್ರಾಚೀನ ತುಳುನಾಡಿನಲ್ಲಿ ನಗರಗಳ ಬೆಳವಣಿಗೆ", "ಪುರಾಣ, ಜಾನಪದಗಳಲ್ಲಿ ತುಳುನಾಡವರು", " ಪುರಾಣಗಳಲ್ಲಿ ತುಳುನಾಡು", "ಪರಶುರಾಮ ಸೃಷ್ಟಿಯ ಕಥೆ", " ಸಿರಿ ಬಲಿಯೇಂದ್ರ", "ಭೂತಾಳ ಪಾಂಡ್ಯರಾಯನ ಚರಿತ್ರೆ", "ಮಯ್ಯೂರವರ್ಮನ ಕಥೆ" ಇತ್ಯಾದಿ ಪ್ರತ್ಯೇಕ ಪ್ರತ್ಯೇಕ ಲೇಖನಗಳು ತುಳುನಾಡಿನ ಮೇಲೆ ನಡೆಸಿದ ಅಧ್ಯಯನಗಳೇ ಆಗಿವೆ. ಈ ಮೇಲಿನ ಎಲ್ಲಾ ಲೇಖನಗಳನ್ನು ಓದಿದಾಗ ತುಳುನಾಡಿನ ಸಮಗ್ರ ಪರಿಚಯದ ಸತ್ಯ ದರ್ಶನವಾಗುತ್ತದೆ.

"ಪ್ರಾಚೀನ ತುಳುನಾಡಿನಲ್ಲಿ ನಗರಗಳ ಬೆಳವಣಿಗೆ" ಮತ್ತು "ಮಹಾನ್ ದೈವಭಕ್ತ ಪರಪಳಿ (ಪಲ್ಪಟ) ನಾಯಕ" ಎಂಬೆರಡು ಲೇಖನಗಳನ್ನು ಓದಿದಾಗ, ಉಡುಪಿ ನಗರದ ನಿಜ ಇತಿಹಾಸ ಮತ್ತು ಕನಕದಾಸರ ಭಕ್ತಿಗೆ  ಕೃಷ್ಣನ ವಿಗ್ರಹ ತಿರುಗಿತೆಂಬುದು ಕೇವಲ ಬುರುಡೆ ಎಂಬುದು ಬಟಾಬಯಲಾಗುತ್ತದೆ. ವಾಸ್ತವಾಂಶದ ಅನಾವರಣವಾಗುತ್ತದೆ.

"ಉದ್ಯಾವರ ಅತಿ ಪ್ರಾಚೀನ ಕಾಲದಿಂದಲೂ ತುಳುನಾಡನ್ನಾಳಿದ ಆಳೂಪರ ರಾಜಧಾನಿಯಾಗಿತ್ತು - ಎನ್ನಲಾಗುತ್ತದೆ. ಉದ್ಯಾವರವೇ ಕಾಲಕ್ರಮೇಣದಲ್ಲಿ 'ಉಡುಪಿ'ಯಾಗಿ ಬೆಳೆದಿರಬೇಕೆನಿಸುತ್ತದೆ. 'ಒಡಿಪು' ಎಂದರೆ ಗಡಿಯೆಂದರ್ಥ. ಒಡಿಪು ಉದಿಯಾವರ ಪಟ್ಟಣದ ಗಡಿಯಾಗಿತ್ತು. ಪಟ್ಟಣದ ಪೂರ್ವದ ಗಡಿಗೆ ತಾಗಿ ಇರುವ ಪ್ರದೇಶ 'ಶಿವಳ್ಳಿ'. ಹೊರಗಿಂದ ಬಂದ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದರು. ಉಡುಪಿ ದೇವಸ್ಥಾನಗಳ ನಗರವಾದಾಗ, ಈ ಬ್ರಾಹ್ಮಣರು ತಮ್ಮ ಗಡಿಯನ್ನು ವಿಸ್ತರಿಸಿ ಅದನ್ನೇ 'ಶಿವಬೆಳ್ಳೆ' ಹಾಗೂ 'ರಜತಪೀಠ'ವೆಂದು ಕರೆದರು".

" ಕ್ರಿ. ಶ. 14ನೇ ಶತಮಾನದವರೆಗೆ 'ಉಡುಪಿ' ಎಂಬ ಪಟ್ಟಣದ ಹೆಸರು ಯಾವುದೇ ಐತಿಹಾಸಿಕ ದಾಖಲೆಗಳಲ್ಲಿ ಕಂಡು ಬರುವುದಿಲ್ಲ. ಹಿಂದಿನ 'ಉದಿಯಾವರ'ವೇ ನಂತರದ 'ಉಡುಪಿ' ಯಾಗಿರಬೇಕೆನ್ನುವ ಅಭಿಪ್ರಾಯ ನನ್ನದು. 'ಉಣುಪಿ' ಎಂದರೆ ತುಳುವಿನಲ್ಲಿ  ಊಟ ಮಾಡುವುದು ಎಂದರ್ಥ. 'ಉಟುಪಿರಾ' ಎಂದರೆ ಮಲೆಯಾಳಿ ಭಾಷೆಯಲ್ಲಿ ಭೋಜನಶಾಲೆಯೆಂದರ್ಥ. ಸಹಸ್ರಾರು ಮಲೆಯಾಳಿಗಳು ವರ್ಷವೂ ಬೇರೆ ಬೇರೆ ಉದ್ಧೇಶಕ್ಕಾಗಿ ತುಳುನಾಡನ್ನು ಸಂದರ್ಶಿಸುತ್ತಿದ್ದರು. ಪ್ರಾಚೀನವಾದ ಕೊಲ್ಲೂರು ಮುಕಾಂಬಿಕಾ ದೇವಸ್ಥಾನವನ್ನು ಸಂದರ್ಶಿಸದ ಮಲೆಯಾಳಿ ಆಸ್ತಿಕನೇ ಇಲ್ಲವೆನ್ನಬಹುದು. ಉಡುಪಿಯಲ್ಲೂ ಹಲವಾರು ಪ್ರಾಚೀನ ದುರ್ಗಾ ದೇವಸ್ಥಾನಗಳಿದ್ದು ಕೊಲ್ಲೂರಿನ ಭಕ್ತರು ಇಲ್ಲಿಗೂ ಬಂದು ದೇವಸ್ಥಾನಗಳನ್ನು ಸಂದರ್ಶಿಸುವ ಪರಿಪಾಠ ಹೊಂದಿದ್ದರು. ಅವರೇ ಈ ಪಟ್ಟಣವನ್ನು 'ಉಟುಪಿ' ಎಂದು ಕರೆದಿರಬಹುದೇನೋ ? ಉಡುಪಿಯ ಕೃಷ್ಣ ಮಠದ ಕಟ್ಟಡ ಮೊದಲು ನಾಥ ಪಂಥದ ಜೋಗಿಗಳ (ಬಂಕಿನಾಥ) ಭೋಜನಶಾಲೆಯಾಗಿತ್ತು. ಹಸ್ತಮಲಕಾಚಾರ್ಯರು ಬಂಕಿನಾಥ ಭೋಜನಶಾಲೆಯ ಒಂದು ಭಾಗದಲ್ಲಿ ವೇಣುಗೋಪಾಲ ಸ್ವಾಮಿಯ ಪ್ರತಿಮೆ ಸ್ಥಾಪಿಸಿ, ಪೂಜಿಸಲು ಪ್ರಾರಂಭಿಸಿದಂದಿನಿಂದ ಒಂದು ವೈಷ್ಣವ ಪಂಥದ ಯಾತ್ರಾ ಸ್ಥಳವಾಗಿ ಕೂಡ ಜನರನ್ನು ಆಕರ್ಷಿಸುತ್ತಾ ಬಂದಿದೆ. ... ಹನ್ನೆರಡು ವರ್ಷಕ್ಕೊಮ್ಮೆ ಉತ್ತರ ದೇಶಗಳಿಂದ ಬಂದು 'ಕದಿರೆ'ಯನ್ನು ಸಂದರ್ಶಿಸುವ ಬಾರಹ ಪಂಥದ ಜೋಗಿಗಳಿಗೆ ಇಲ್ಲಿ ಮೂರು ದಿನ ಆತಿಥ್ಯ ನೀಡುವ ಪರಿಪಾಠ ಇಂದಿಗೂ ಉಡುಪಿಯ ಅಷ್ಟ ಮಠಾಧೀಶರು ನಡೆಸಿಕೊಂಡು ಬರುತ್ತಿದ್ದಾರೆ".

ಮಂಗಳೂರಿನ ಮಂಗಳಾದೇವಿಯ ನಿಜ ಇತಿಹಾಸವೂ ಈ ಲೇಖನದಲ್ಲಿದೆ. ಕನಕದಾಸರು ಉಡುಪಿಗೆ ಬಂದದ್ದೇ ಇಲ್ಲ ಎಂದು ಈಗಾಗಲೇ ಕೆಲವು ಮಂದಿ ಇತಿಹಾಸಕಾರರು ತಮ್ಮ ಆಳ ಅಧ್ಯಯನದ ಬಳಿಕ ಸಾಬೀತುಪಡಿಸಿದ್ದಾರೆ. ಉಡುಪಿಯ ಕೃಷ್ಣನ ವಿಗ್ರಹ ಪೂರ್ವದಿಂದ ಪಶ್ಚಿಮಕ್ಕೆ ತಿರುಗಿದ ಕಥೆ ಒಂದು ಸುಳ್ಳಿನ ಕಥೆ ಎಂದು ಉಡುಪಿ ಮಠಾಧೀಶರುಗಳಿಗೇ ಗುರುಗಳಾಗಿದ್ದ, ಸಂಸ್ಕೃತ ವಿದ್ವಾಂಸರಾದ ಡಾ. ಬನ್ನಂಜೆ ಗೋವಿಂದಾಚಾರ್ಯರ ಸಹಿತ ಹಲವಾರು ಮಂದಿ ಈಗಾಗಲೇ ಪ್ರತಿಪಾದಿಸಿದ್ದಾರೆ. ಬಿ. ಸಚ್ಚಿದಾನಂದ ಹೆಗ್ಡೆಯವರು, ಇನ್ನೂ ಸ್ವಲ್ಪ ಮುಂದುವರಿದು, ಉಡುಪಿಯ ಬನ್ನಂಜೆಯಲ್ಲಿ ವಾಸವಿದ್ದ ಮಹಾದಾನಿ ಪರಪಳಿ (ಪಲ್ಪಟ) ನಾಯಕರಿಗಾಗಿ ಉಡುಪಿ ದೇವಸ್ಥಾನದ ಗೋಡೆಯಲ್ಲಿ ಕಿಂಡಿ ಕೊರೆಯಲಾಯಿತು. ಕಾಲಕ್ರಮೇಣ ಈ ಪಲ್ಪಟ ಅಥವಾ ಪರಪಳಿ ನಾಯಕರನ್ನೇ ಕನಕದಾಸರೆಂದು ಬಿಂಬಿಸಲಾಯಿತು ಎಂದು ವಿಸ್ತ್ರತವಾಗಿ ಬರೆದಿದ್ದಾರೆ.

"ಕೋಟಿ ಚೆನ್ನಯರು" ಎಂಬ ಲೇಖನದಲ್ಲಿ, ಕೋಟಿ ಚೆನ್ನಯರ ಐತಿಹಾಸಿಕ ಕಥೆಯಲ್ಲಿ ಬರುವ ಪಂಜ, ಪೆರುಮಲೆ, ಎಣ್ಮೂರಿನ ಬಲ್ಲಾಳರು ಬಂಟರಾಗಿರುವ ಸಾಧ್ಯತೆ ಇಲ್ಲ ಎಂದು ಲೇಖಕರು ಪ್ರತಿಪಾದಿಸಿದ್ದಾರೆ. ಬಲ್ಲಾಳ ಎಂಬುದು ಒಂದು ಅಧಿಕಾರದ ಸ್ಥಾನವಾಗಿದ್ದು ; ತುಳುನಾಡಿನಲ್ಲಿ ಬಂಟ / ನಾಡವ ಬಲ್ಲಾಳರು ಮಾತ್ರವಲ್ಲದೆ ಬೂಡು ಬಲ್ಲಾಳರು, ಜೈನ ಬಲ್ಲಾಳರು, ಬ್ರಾಹ್ಮಣ ಬಲ್ಲಾಳರು ಇದ್ದಾರೆ. ಪಂಜ, ಪೆರುಮಲೆ, ಎಣ್ಮೂರಿನ ಬಲ್ಲಾಳರು ತುಳುನಾಡಿನ ಮೇಲೆ ತಮಿಳರ ಆಕ್ರಮಣವಾಗುವ ಸಂದರ್ಭದಲ್ಲಿ ಅವರ ಸೈನ್ಯದ ಜೊತೆಗೆ ಬಂದ "ವೆಲ್ಲಾಳ" ರೇ ಆಗಿದ್ದಿರಬಹುದು ಎಂದು ಸಾಧಾರವಾಗಿ ತರ್ಕಿಸಿದ್ದಾರೆ.

"ಯದ್ದೋಡಿ ಕೇತು ಮರಕಾಲನ ಸಂಧಿ" ಎಂಬ ಲೇಖನದಲ್ಲಿ ಭೂತರಾಜ ದೈವದ ಕಥೆ ಬರುತ್ತದೆ. ಕೇತು ಮರಕಾಲನ ಸಂಧಿಯಲ್ಲಿ ಬರುವ ಪೆರ್ಗಡೆಯೇ, ಭೂತವೊಂದರ ಆಕ್ರೋಶದಿಂದ ಸತ್ತು ಭೂತರಾಜ ದೈವವಾಯಿತು ಎಂಬ ಅಂಶವನ್ನು ಇಲ್ಲಿ ಉಲ್ಲೇಖಿಸಲಾಗಿದೆ.

"ಬನವಾಸಿಯ 'ಚುಟುಕುಲ' ಯಾ ಆನಂದ ವಂಶದವರು", "ನಂದೂರಾಯನ ಕೋಟೆ", " ಮಯ್ಯೂರವರ್ಮನ ಕಥೆ", "ಸತ್ಯದ ಸಿರಿ", " ಕಾಕ್ರಸೆಟ್ಟಿ ಮಠ", "ಕಾಂತ ಬೈದ್ಯ - ದೇಯಿ ಬೈದೆತಿ", "ಮಾಯಿಂದಾಲೆ", "ಕುಜುಂಬ ಕಾಂಜ", " ಪೆರಿಂಜೆಗುತ್ತು ದೇವುಪೂಂಜ", "ಅಗೋಳಿ ಮಂಜಣ", " ಕಾಂತಾಬಾರೆ ಬೂದಾಬಾರೆ", "ಬೊಬ್ಬರಿಯನ ತಾಯಿ - ದುಗ್ಗು ಶೆಡ್ತಿ", "ಪಳ್ಳಿ ಎಲಿಯಾಲದ ಬಾಲುಮಾಡೆದಿ", "ಮಂಡಾಡಿಯ ಹೋರ್ವರು", "ಚೌಟರ ರಾಣಿ ಅಬ್ಬಕ್ಕ" ಮೊದಲಾದ ಲೇಖನಗಳೂ ಗ್ರಂಥದಲ್ಲಿದ್ದು, ಎಲ್ಲವೂ ಅಧ್ಯಯನಪೂರ್ಣ, ಮಾಹಿತಿಪೂರ್ಣ, ವಿಮರ್ಶಾತ್ಮಕ ಲೇಖನಗಳಾಗಿವೆ.

ಸತ್ಯಾನ್ವೇಷಿಗಳು, ಸತ್ಯ ಪ್ರಿಯರು, ಇತಿಹಾಸ, ಚರಿತ್ರೆಯಲ್ಲಿ ಆಸಕ್ತಿಯುಳ್ಳವರಿಗೆ ಬಿ. ಸಚ್ಚಿದಾನಂದ ಹೆಗ್ಡೆಯವರ "ತುಳುಭಾಷೆ - ತುಳುನಾಡು" ಒಂದು ಅತ್ಯಮೂಲ್ಯ ಆಕರ ಗ್ರಂಥವಾಗಿದೆ. ಈ ಕೃತಿಯಲ್ಲಿರುವ ಲೇಖನಗಳು ಸತ್ಯದ ಬೆಳಕುಗಳಾಗಿದ್ದು, ಈ ಪ್ರಖರ ಬೆಳಕಿನಲ್ಲಿ ಅನೇಕ ಸುಳ್ಳುಗಳು, ಕಟ್ಟು ಕಥೆಗಳು ಬೆತ್ತಲಾಗುತ್ತವೆ.

~ *ಶ್ರೀರಾಮ ದಿವಾಣ*