ತುಷಾರ ಹಾರ
‘ತುಷಾರ ಹಾರ' ಇದು ಲೇಖಕಿಯಾದ ಶ್ಯಾಮಲಾ ಮಾಧವ ಅವರ ಕಣ್ಣೀರ ಕಥೆ. ಬರೆದೂ ಬರೆದು ನೋವನ್ನು ಹಗುರ ಮಾಡಿ ಕೊಂಡ ತಾಯಿಯ ಕಥೆಯಿದು. ಕಂದನ ನೋವಿನ ನುಡಿ ಹಾರವೇ ಈ ‘ತುಷಾರ ಹಾರ’ ಎನ್ನುತ್ತಾರೆ ಶ್ಯಾಮಲಾ ಮಾಧವ ಇವರು. ತಮ್ಮ ಕೃತಿಗೆ ಅವರು ಬರೆದ ಮುನ್ನುಡಿಯ ಆಯ್ದ ಭಾಗ ಇಲ್ಲಿದೆ...
“ನನ್ನ ಪಾಲಿಗೆ ಸರ್ವಸ್ವವೂ ಆಗಿದ್ದ ನನ್ನ ಕಂದನನ್ನು ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿ ಹೆಣೆದ ನುಡಿಹಾರವೇ ಈ 'ತುಷಾರ ಹಾರ'. ನೆನೆದಷ್ಟೂ ಗಾಢವಾಗುವ ಈ ನೋವನ್ನು ಬರೆದು ಹಗುರಾಗುವುದೆಂದಿದೆಯೇ? ಎಷ್ಟು ತೇಜೋಮಯನೋ, ಅಷ್ಟೇ ಸರಳನೂ ಆಗಿ ಬಾಳಿ, ಪರಿಚಿತರ ಹೃದಯಗಳಲ್ಲಿ ಉಳಿದು ಹೋದ ನನ್ನ ತುಷಾರ್‌ನನ್ನು ನುಡಿಹಾರವಾಗಿ ನಿಮ್ಮ ಕೈಗಳಲ್ಲಿರಿಸಿರುವೆ.
ಒಳಿತೆಂಬುದಕ್ಕೆ ಭಾಷ್ಯವೇ ಆಗಿದ್ದ, ಮಾನವೀಯತೆಯ ಸಾಕಾರ ನನ್ನ ಕಂದನ ಬಗ್ಗೆ ನನ್ನ ನುಡಿಗಳನ್ನು ಹಾರವಾಗಿಸಿದ ಮೇಲೆ ಇಲ್ಲೀಗ ಉಳಿದಿರುವುದು ಕೃತಿ ಸಂಬಂಧವಾದ ಕೃತಜ್ಞತೆಯ ನುಡಿಗಳಷ್ಟೆ. ‘ನಮ್ಮ ದುರ್ಭರ ನೋವಿನ ದಿನಗಳಲ್ಲಿ ಭರವಸೆಯ ಬೆಳಕು ತೋರುತ್ತಾ, ಧೈರ್ಯ, ಸಾಂತ್ವನದ ದನಿಯಾಗಿ ನನ್ನೊಡನೆ ನಿಂತ ಗೆಳತಿ, ಸಾಹಿತಿ ನೇಮಿಚಂದ್ರರ ಒತ್ತಾಸೆಯೇ ನನ್ನೀ ಹಾರವನ್ನು ನೇಯ್ದ ದಾರ, “ಬರೆಯಿರಿ ಶ್ಯಾಮಲಾ, ಓದುವವರಿಗೆ ಇದು ಖಂಡಿತ ಉಪಯುಕ್ತವೇ ಆದೀತು...” ಎಂಬ ಅವರ ಒತ್ತಾಸೆಯಂತೆ ನನ್ನ ಮನದ ನೋವನ್ನು ಇಲ್ಲಿ ಅಕ್ಷರಕ್ಕಿಳಿಸಿರುವೆ. ರೋಗ ಪತ್ತೆಯಾದ ಆರಂಭದಲ್ಲಿ ದಾರಿ ಕಾಣದೆ ನನ್ನ ಮನದ ಬೇಗುದಿಯನ್ನು ಪ್ರಥಮವಾಗಿ ತೆರೆದಿಟ್ಟ ನನ್ನ ಪತ್ರಕ್ಕೆ ಸ್ಪಂದಿಸಿ ಉತ್ತರಿಸಿ, ಸಹಕರಿಸಿದಂತೆಯೇ, ಎಲ್ಲ ಮುಗಿದ ಮೇಲಿನ ನನ್ನೀ ಅಂತರ್ಯವನ್ನೂ ತೆರೆದ ಮನದಿಂದ ಓದಿ ಹಿನ್ನುಡಿ ಬರೆದಿತ್ತ ನೇಮಿಚಂದ್ರ, ತಮ್ಮ ಬರಹಗಳಿಂದ ಹಲವರ ಬಾಳಿಗೆ ಬೆಳಕಾದವರು. ಪ್ರೀತಿ ತುಂಬಿ ಅವರಿಗೆ ಆಭಾರ ಸಲಿಸುತ್ತಿರುವೆ.
ನನ್ನೀ ಬರಹಕ್ಕೆ ಬೆಳಕು ತೋರಬಹುದೇ ಎಂದು ಕೇಳಿದೊಡನೆ, “ಖಂಡಿತ ಪ್ರಕಟಿಸೋಣ,” ಎಂದು ನನ್ನೀ 'ತುಷಾರ ಹಾರ'ವನ್ನು ಕೈಗೆತ್ತಿಕೊಂಡು, ಸ್ಪಟಿಕಶುದ್ಧವಾಗಿ ತಮ್ಮ 'ಬಹುರೂಪಿ'ಯ ಮೂಲಕ ಬೆಳಕಿಗೆ ತಂದು, ಓದುಗರ ಕೈಗಿಡುತ್ತಿರುವ ಪುಸ್ತಕ ಪ್ರೀತಿಯ ಸಹೃದಯಿ ನೇಹಿಗ, 'ಅವಧಿ'ಯ ಜಿ.ಎನ್. ಮೋಹನ್ ಅವರಿಗೆ ಹೃದಯ ತುಂಬಿ ಅನಂತ ಆಭಾರ ಸಲಿಸುತ್ತಿರುವೆ.
ತುಷಾರ್‌ನ ಕಲೀಗ್ ಹಾಗೂ ಗೆಳೆಯ ಸಂಜಯ್ ಖಿಲಾರೆ ರಚಿಸಿಕೊಟ್ಟ ತುಷಾರ್‌ನ ಕ್ಯಾರಿಕೇಚರನ್ನು, ಪುಸ್ತಕದ ಮುಖಪುಟಕ್ಕಾಗಿ ಕೇಳಿದೊಡನೆ ತನ್ನ ಬ್ಲಾಗ್‌ನಿಂದ ಒದಗಿಸಿ ಕೊಟ್ಟವರು, ಇನ್ನೋರ್ವ ಕಲೀಗ್ ಹಾಗೂ ಗೆಳೆಯ ಸಂಜಯ್ ಮುಖರ್ಜಿ ಅವರು. ಅವರಿಬ್ಬರಿಗೂ ನಾನು ಚಿರಋಣಿ! ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ' ಎಂಬಂತೆ ತುಷಾರ್'ನ ಸಖ್ಯದ ಸವಿಯನ್ನುಂಡು, ಆ ಭಾವನಿರ್ಭರತೆಯನ್ನು ಅಕ್ಷರಕ್ಕೆ ಇಳಿಸಲಾಗದೆ ಹೋದ, ಆ ನೋವಿನ ದಿನಗಳಲ್ಲೂ, ಈಗಲೂ ಪ್ರೀತಿಯಿಂದ ಜೊತೆಯಾಗಿರುವ ಉಳಿದೆಲ್ಲ ಗೆಳೆಯ ಗೆಳೆತಿಯರಿಗೂ ಹೃದಯ ತುಂಬಿ ಪ್ರೀತಿ.
ತುಷಾರ್ ನ ಶ್ರೇಯವನ್ನೇ ಬಯಸುತ್ತಾ, ಆ ದುರ್ಭರ ದಿನಗಳಲ್ಲಿ ದಿನಕ್ಕೆ ಮೂರು ನಾಲ್ಕು ಸಲ ಕರೆಮಾಡಿ ವಿಚಾರಿಸಿಕೊಳ್ಳುತ್ತಾ, ಮತ್ತೆ ನನಗೆ ಹೇಳಲೇನೂ ಇಲ್ಲವಾದ ಮೇಲೆ ತಾವೂ ಅಯೋಮಯರಾಗಿ ಉಳಿದ ಆತ್ಮೀಯ ಕೆ.ಟಿ ಗಟ್ಟಿ ಅವರನ್ನು ನೆನೆಯದೆಂತು ಇರಲಿ?
“ನಮ್ಮ ಮಗು ಖಂಡಿತ ಹುಷಾರಾಗುವವನು, ಶ್ಯಾಮಲಾ,” ಎಂದು ಧೈರ್ಯ ತುಂಬಲೆಳಸಿದ, ನೋವಿನಲ್ಲಿ ಜೊತೆಯಾದ ಗೆಳತಿಯರು ದಯಾ, ಶಾರದಾ, ಕ್ರಿಸ್ತಿನ್, ಮಮತಾ, ಸ್ವರ್ಣ, ಪ್ರಭಾರನ್ನು ಮರೆಯಲೆಂತು? ''ಡಾಕ್ಟರ್, ಎಷ್ಟೊಂದು ಪ್ರಾರ್ಥಿಸಿದೆ; ಆದರೆ, ಆ 'ಅವನು' ಕೇಳಿಸಿಕೊಳ್ಳಲೇ ಇಲ್ಲ” ಎಂದು ನಾನು ಬರೆದಾಗ, “ಅಯ್ಯೋ, ಅವನು ತನ್ನ ತಂಗಿ ಸುಭದ್ರೆಯ ಪ್ರಾರ್ಥನೆಯನ್ನೇ ಕೇಳಿಸಿಕೊಳ್ಳಲಿಲ್ಲ; ಅವನ ಆಯುಷ್ಯ ಅಷ್ಟೇ, ನಾನೇನು ಮಾಡಲಿ, ಎಂದ, ಎಂದುತ್ತರಿಸಿ ತಿಳಿ ಹೇಳಿದ ಮಂಗಳೂರಿನ ನಮ್ಮ ಪ್ರಿಯ ಡಾಕ್ಟರ್ ಡಾ. ಕೆ ಎಸ್ ಭಟ್ ಅವರನ್ನು ಮರೆಯಲೆಂತು?
“ಚಲ್‌ರೇ, ವಾಪಸ್ ಆಕೇ ಮಿಲ್‌ತಾ ಹ್ಞೂ” ಎಂದು ಗೆಳೆಯರೊಡನೆ ಮಾತು ಮುಗಿಸುತ್ತಿದ್ದ ನನ್ನ ಕಂದ!
ಅಹರ್ನಿಶಿ ನೋವಿನ ಕಡಲಲ್ಲೇ ಮುಳುಗಿದ್ದ ನನ್ನೆದುರು ತುಷಾರ ಶಬ್ದಾರ್ಥ ಸಂಪದವನ್ನೇ ತೆರೆದಿಟ್ಟು, ತುಷಾರ್ ಎಲ್ಲೂ ಹೋಗಿಲ್ಲ, ಅವನು ಅಲ್ಲೇ ಎಲ್ಲೋ ದೂರ ಶಿಖರಗಳಿಂದ ನಿಮ್ಮನ್ನು ನೋಡುತ್ತಾ ಪ್ರೇರೇಪಿಸುತ್ತಿದ್ದಾನೆ ಎಂದು ಭಾವಿಸಿ, ಸಮಾಧಾನ ತಂದುಕೊಳ್ಳಿ; ತಾಯಂದಿರ ದಿನ ಅನಿಸಿಕೊಳ್ಳುವ ಈ ಹೊತ್ತು, ಶುಷ ನಿಮ್ಮನ್ನು, 'ಅಮೇಜಿಂಗ್ ಅಮ್ಮಾ' ಎಂದು ಕರೆದುದು ಕೇಳಿತಲ್ಲವೇ, ಎಂದು ಸಾಂತ್ವನದ ನುಡಿಗಳನ್ನು ಬರೆದು ನನ್ನನ್ನು ಚೇತರಿಸಿದವರು ಮೈಸೂರಿನ ಪ್ರಿಯ ಆತ್ಮಬಂಧು ಎಸ್.ಜಿ. ಸೀತಾರಾಮ್ ಅವರು. “ನೋವಿನಿಂದ ಬರೆದು ಮುಗಿಸಿದೆ, ಎಂದೇಕೆ ಹೇಳುತ್ತೀರಿ? ತುಂಬು ಹೆಮ್ಮೆಯಿಂದ, ಮೆಚ್ಚುಗೆಯಿಂದ, ಅಕ್ಕರೆಯಿಂದ ನನ್ನ ಕೂಸಿಗೆ ಒಂದು ನುರಿ ಹೂಗೊಂಚಲನ್ನು ಸಲ್ಲಿಸಿದೆ, ಎಂದು ಹೇಳಿ,” ಎಂದು ತಿದ್ದಿದ ಆ ಅಕ್ಕರೆಗೆ ಸಮನಾದುದು ಇದೆಯೇ?
ಎಲ್ಲ ಅರಿತಿದ್ದೂ ನನ್ನ ಕಂದನಿಗೆ ರೋಗಮುಕ್ತನಾಗಬೇಕೆಂಬ ಆಸೆಯಿತ್ತು. ಚಿಕಿತ್ಸೆ ಕೈ ಬಿಟ್ಟಾಗ ಅವನು ನಿರಾಶನೇ ಆದ. ಅವನು ಸಾಧಿಸಬೇಕಾದುದು ಇನ್ನೂ ಬಹಳವಿತ್ತು. ಅವನನ್ನು ಉಳಿಸಿಕೊಳ್ಳಲಾಗದ ಆ ನೋವು ಕೊನೆಯುಸಿರು ಇರುವವರೆಗೂ ಮಾಯುವಂತಹುದಲ್ಲ. ಆರೋಗ್ಯಶಾಲಿಯಾಗಿ ಸದಾ ಚಟುವಟಿಕೆಯಿಂದಿದ್ದ, ತುಷಾರ ಮಣಿಗಳಂತಹ ಸ್ಪಟಿಕಶುದ್ಧ ಮನದ ನನ್ನ ಕಂದನನ್ನೊಯ್ದ ಈ ಮಾರಕ ಕಾಯಿಲೆ ಈ ಜಗದಿಂದ ನಿರ್ಮೂಲವಾಗುವ ದಿನ ಬೇಗನೇ ಬರಲೆಂದು ಆಶಿಸುತ್ತಾ, ನನ್ನ ತುಷಾರ ಹಾರ'ವನ್ನು ಕೈಗೆತ್ತಿಕೊಂಡು ಸ್ಪಂದಿಸುವ ಸಹೃದಯಗಳಿಗೆ ನನ್ನ ನಲ್ಲೆ.”