ತುಷ್ಟೀಕರಣದ ಅತಿರೇಕ
ಶಿವಮೊಗ್ಗದಲ್ಲಿ ದುಷ್ಟ ಮತಾಂಧ ಶಕ್ತಿಗಳು ದಾಂಧಲೆಯೆಬ್ಬಿಸಿ ಹಿಂಸಾಚಾರಕ್ಕೆ ಕಾರಣವಾಗಿವೆ. ಈದ್ ಮಿಲಾದ್ ಸಂದರ್ಭದಲ್ಲಿ ಪ್ರಚೋದನಕಾರಿ ಬ್ಯಾನರ್ ಅಳವಡಿಸುವ ಮೂಲಕ ರಾಷ್ಟ್ರಭಕ್ತರನ್ನು ಕೆರಳಿಸುವ ಪ್ರಯತ್ನ ನಡೆಸಿದ್ದೇ ಗಲಭೆಗೆ ಹೇತುವಾಗಿದೆ. ಬಳಿಕವಂತೂ ‘ಹೊರಗಡೆ'ಯಿಂದಲೂ ಬಂದ ದಾಂಧಲೆಕೋರರು ಹಿಂದೂಗಳಿಗೆ ಸೇರಿದ ಆಸ್ತಿಪಾಸ್ತಿಯ ಮೇಲೆ ದಾಳಿ ನಡೆಸಿದ್ದಾರೆ. ಶಿವಮೊಗ್ಗ ಬೂದಿ ಮುಚ್ಚಿದ ಕೆಂಡದಂತಿದೆ. ಹಾಗಿದ್ದೂ ಗೃಹ ಸಚಿವರು ತಾವಾಗಿ ಅಂತಹುದೇನೂ ನಡೆದಿಲ್ಲ ಎಂಬುದಾಗಿಯೂ ಸಮಜಾಯಿಷಿ ನೀಡುತ್ತಾರೆ. ರಾಜ್ಯದ ಇನ್ನಿತರ ಕೆಲವು ಕಡೆಗಳಲ್ಲೂ ಈದ್ ನ ಸಂದರ್ಭದಲ್ಲಿ ಧಾರ್ಮಿಕ ಭಾವನೆ ಕೆಣಕುವಂತಹ ಬ್ಯಾನರ್ ಗಳನ್ನು ಅಳವಡಿಸಿದ ವರದಿಗಳಿವೆ. ಇದೇ ವೇಳೆ, ಡಿ ಜೆ ಹಳ್ಳಿ, ಶಿವಮೊಗ್ಗ ಗಲಭೆ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗಳಿಗೆ ಸಂಬಂಧಿಸಿ ದಾಖಲಾಗಿದ್ದ ಮೊಕದ್ದಮೆಗಳನ್ನು ರದ್ದು ಮಾಡುವಂತೆ ಉಪಮುಖ್ಯಮಂತ್ರಿಯವರು ಆದೇಶಿಸಿದ ಕುರಿತೂ ವರದಿಯಾಗಿದೆ. ಇವೆಲ್ಲ ಪ್ರಕರಣಗಳಲ್ಲಿ ಮುಸ್ಲಿಮರು ಆರೋಪಿಗಳಾಗಿ ಹೆಸರಿಸಲ್ಪಟ್ಟವರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೊಡನೆ ಮತಾಂಧ ಶಕ್ತಿಗಳು ಸಕ್ರಿಯವಾಗುತ್ತವೆ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಸಂಚು ಹೂಡುತ್ತವೆ ಎಂಬುದಾಗಿ ವಿರೋಧ ಪಕ್ಷಗಳು ಆರೋಪಿಸುವುದಿದೆ. ಕಾಂಗ್ರೆಸ್ ಸರಕಾರದಡಿ ಇಂತಹವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಅವರಿಗೆ ದುಷ್ಟ ಸಂಚು ರೂಪಿಸಲು ಕುಮ್ಮಕ್ಕು ನೀಡುತ್ತಿವೆ ಎಂದೂ ಆರೋಪಿಸಲಾಗುತ್ತದೆ. ಈಗಿನ ಬೆಳವಣಿಗೆಯನ್ನು ಗಮನಿಸಿದರೆ ವಿರೋಧ ಪಕ್ಷಗಳ ಇಂತಹ ಆರೋಪ ಸತ್ಯವಾಗಿರುವಂತೆಯೇ ತೋರಿಬರುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರವು ಮತಾಂಧರ ಕುರಿತಂತೆ ಮೃದು ನಿಲುವು ತಳೆಯುತ್ತಿರುವುದರಿಂದಾಗಿ ಅವರೆಲ್ಲ ಈಗ ಒಮ್ಮೆಗೆ ಚಿಗಿತು ನಿಂತಿರುವಂತೆ ತೋರುತ್ತದೆ.
ಶಿವಮೊಗ್ಗದಲ್ಲಾಗಲಿ, ರಾಜ್ಯದ ಇತರೆಡೆಗಳಲ್ಲಾಗಲಿ ಈ ರೀತಿ ಮತಾಂಧತೆಯನ್ನು ಪ್ರದರ್ಶಿಸುವ, ಗಲಭೆಯೆಬ್ಬಿಸುವ ವ್ಯಕ್ತಿಗಳ ವಿರುದ್ಧ ಸರಕಾರವು ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸದಿದ್ದರೆ ಪರಿಸ್ಥಿತಿ ಮುಂದಕ್ಕೆ ಇನ್ನಷ್ಟು ಬಿಗಡಾಯಿಸಬಹುದು. ಇದು ಬಹುಸಂಖ್ಯಾತರಲ್ಲಿ ಅಭದ್ರತೆಯ ಭಾವನೆಯನ್ನು ಹುಟ್ಟು ಹಾಕಬಹುದು. ಈಗಾಗಲೆ ರಾಷ್ಟ್ರೀಯ ತನಿಖಾ ದಳದವರು ಬಂಧಿಸಿರುವ ಐಸಿಸ್ ಉಗ್ರರ ವಿಚಾರಣೆಯ ವೇಳೆ, ಕರ್ನಾಟಕ ಕೂಡಾ ಅವರ ನೆಲೆ ವಿಸ್ತರಣೆಯ ಪ್ರಮುಖ ತಾಣವಾಗಿರುವುದು ಬೆಳಕಿಗೆ ಬಂದಿದೆ. ಇಂತಹ ಬೆಳವಣಿಗೆ ರಾಜ್ಯದ ಪಾಲಿಗೆ ಆತಂಕಕಾರಿಯಾದುದು. ಇಂತಿರುವಾಗ ಸರಕಾರವು ಮೃದು ಧೋರಣೆ ತೋರಿದ್ದೇ ಆದಲ್ಲಿ ಅದು ಮತ್ತಷ್ಟು ಅನಾಹುತಗಳಿಗೆ ಕಾರಣವಾದೀತು. ಹಾಗಾಗಲು ಅವಕಾಶ ನೀಡದಂತಹ ಬದ್ಧತೆಯನ್ನು ಸರಕಾರ ಪ್ರದರ್ಶಿಸಲಿ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೫-೧೦-೨೦೨೩
ಚಿತ್ರ ಕೃಪೆ: ಇಂಟರ್ನೆಟ್ ತಾಣ