ತೃಪ್ತಿಯೇ ನಿತ್ಯ ಹಬ್ಬವಾಗಲಿ...

ತೃಪ್ತಿಯೇ ನಿತ್ಯ ಹಬ್ಬವಾಗಲಿ...

ನೇಸರನ ಕಿರಣಗಳು, ಮಾಗಿಯ ಹಿಮ ಬಿಂದುಗಳನ್ನು ಛೇದಿಸುತ್ತಾ, ಗಿಡಮರಬಳ್ಳಿಗಳನ್ನು ಹಾದು, ಹಚ್ಚಹಸುರಿನ ಹುಲ್ಲನ್ನು ಸ್ಪರ್ಶಿಸಿ, ಇಬ್ಬನಿಯ ಜೊತೆಗೂಡಿ ಪ್ರತಿಫಲನ ಹೊಂದಿ, ಧೂಳಿನ ಕಣಗಳನ್ನು ಭೇದಿಸಿ, ಕಿಟಕಿಯ ಸರಳುಗಳೊಳಗೆ ಹರಿದು, ಕಣ್ಣ ರೆಪ್ಪೆಯ ಬಳಿ ಸರಿದಾಗ, ಉದಯವಾಗುತ್ತದೆ 2022 ಹೊಸ ವರ್ಷ...

ಸೂರ್ಯನ ಸುತ್ತಲೂ ಭೂಮಿ ಸುತ್ತುವ 365 ದಿನ ಮತ್ತು ತನ್ನ ಕಕ್ಷೆಯಲ್ಲಿ ತಾನೇ ಸುತ್ತಲು ತೆಗೆದುಕೊಳ್ಳುವ 24 ಗಂಟೆಗಳಲ್ಲಿ ನಮ್ಮ ಮೇಲೆ ಆಗುವ ನೆರಳು ಬೆಳಕಿನ ಆಟವನ್ನು ಒಂದು ವರ್ಷ ಮತ್ತು ಒಂದು ದಿನ  ಎಂದು ಅನುಕ್ರಮವಾಗಿ ಗುರುತಿಸಲಾಗುತ್ತದೆ.

ಪಾಶ್ಚಿಮಾತ್ಯರು  ಜನವರಿ 1 ನ್ನು ವರ್ಷದ ಪ್ರಾರಂಭವೆಂತಲೂ ಡಿಸೆಂಬರ್ 31 ನ್ನು ಕೊನೆಯ ದಿನ ಎಂತಲೂ ಪರಿಗಣಿಸುತ್ತಾರೆ. ಒಂದೊಂದು ನಾಗರಿಕತೆಯಲ್ಲಿ ಒಂದೊಂದು ದಿನವನ್ನು ಪ್ರಾರಂಭದ ದಿನವಾಗಿ ಗುರುತಿಸಲಾಗಿದೆ. ಭಾರತೀಯ ಹಿಂದೂ ಪಂಚಾಂಗದ ಪ್ರಕಾರ ಚೈತ್ರ ಮಾಸದ ಪ್ರಾರಂಭದ ದಿನವನ್ನು ಹೊಸ ವರ್ಷ ಎಂತಲೂ ಫಾಲ್ಗುಣದ ಕೊನೆಯ ದಿನವನ್ನು ಅಂತ್ಯ ಎಂತಲೂ ಕರೆಯಲಾಗುತ್ತದೆ.

ಸೃಷ್ಟಿಯ ಸಹಜ ಕ್ರಿಯೆಯನ್ನು ಯಾರು ಏನೇ ಕರೆದುಕೊಳ್ಳಲ್ಲಿ ಅಂತಹ ವಿಶೇಷವೇನು ಇಲ್ಲ. ಆದರೆ ರೂಢಿಗತವಾಗಿ ಯುವ ಸಮೂಹ ಕ್ಯಾಲೆಂಡರ್ ನ ಜನವರಿ 1 ಹೊಸ ವರ್ಷದ ಸ್ವಾಗತ ಸಮಾರಂಭವಾಗಿ ಆಚರಿಸುತ್ತಾರೆ. ಸಂಭ್ರಮಕ್ಕೆ ಯಾವ ದಿನವಾದರೇನು? ಹೊಸ ವರ್ಷದ ಸಂಭ್ರಮ ಮತ್ತು ಉನ್ಮಾದ...

***

ಕುಣಿದು ಕುಪ್ಪಳಿಸುವಾ ಹೊಸವರ್ಷ, ಮುತ್ತಿನ ಮತ್ತಿನಲ್ಲಿ ತೇಲಾಡುವ ಹೊಸವರ್ಷ, ಇದೇನಿದು. ಹೊಸ ವರ್ಷದ ಆಚರಣೆಯೆಂದರೆ ದುರ್ಘಟನೆಯೇ, ಯುದ್ದವೇ, ಗಂಭೀರ ವಿಷಯವೇ ? ಪೋಲೀಸ್ ಬಂದೋಬಸ್ತ್ ಮತ್ತು ಮುನ್ನೆಚ್ಚರಿಕೆ ನೋಡಿದರೆ ಯಾರೋ ಅನಾಗರಿಕರೋ, ದರೋಡೆಕೋರರೋ ಹೊಸ ವರ್ಷ ಆಚರಿಸಲು ಅಲ್ಲಿ ಸೇರಿದಂತಿದೆ.

ಸಾವಿರಾರು ಪೋಲೀಸರು, ದ್ರೋಣ್ ಕ್ಯಾಮರಾದ ಕಣ್ಗಾವಲು, ಕೆಲವು ರಸ್ತೆಗಳ ಬಂದ್, ಕುಡುಕ ಚಾಲಕರ ಮೇಲೆ ಕಠಿಣ ಕ್ರಮ, ಪೋಲೀಸ್ ಮುಖ್ಯಸ್ಥರಿಂದ ಎಲ್ಲಾ ಠಾಣೆಗಳಿಗೂ ಕಟ್ಟೆಚ್ಚರದ ಸೂಚನೆ. ಛೆ...ಛೆ...ಛೆ......

ಡಿಸೆಂಬರ್ 31 ಎಂಬುದು ಪ್ರತಿಭಟನೆಯೇ ? ಚಳವಳಿಯೇ ?ಹರತಾಳವೇ ?ಗಲಭೆಯೇ ? ಭಯಂಕರ ವಿದ್ಯುಮಾನವೇ? ನಾಚಿಕೆಯಾಗಬೇಕು ನಾಗರಿಕ ಸಮಾಜಕ್ಕೆ. ಹೌದು, ಡಿಸೆಂಬರ್ 31 ರ ರಾತ್ರಿ 12 ಗಂಟೆ ಸಾಮಾನ್ಯವಾಗಿ ನಾವೆಲ್ಲರೂ ಅನುಸರಿಸುವ ಇಂಗ್ಲೀಷ್ ಕ್ಯಾಲೆಂಡರಿನ ಹೊಸ ವರ್ಷದ ಮೊದಲ ದಿನ. ಹಿಂದಿನ ವರ್ಷಕ್ಕೆ ಬೀಳ್ಕೊಟ್ಟು ಹೊಸ ವರ್ಷವನ್ನು ಸಂಭ್ರಮಿಸುವುದು ಸ್ವಾಗತಾರ್ಹ.

ಏಕೆಂದರೆ ಯಾವುದೋ ಒಂದು ನೆಪದಲ್ಲಿ ಒಂದು ಹಬ್ಬವೋ ಸಂಭ್ರಮವನ್ನೋ ಮನುಷ್ಯ ಅನುಭವಿಸಿದರೆ ಅದು ಸಂಕೀರ್ಣ ಬದುಕಿನ ಸಂದರ್ಭದಲ್ಲಿ ಅತ್ಯಂತ ಉತ್ತಮ ಸಂಪ್ರದಾಯ ಎನ್ನಬಹುದು. ಆದರೆ, ಸಂಭ್ರಮ ಸಡಗರದ ರೀತಿ ನೀತಿ ಉನ್ಮಾದವಾಗಿ ಕಾನೂನು ಸುವ್ಯವಸ್ಥೆಗೇ ಸವಾಲಾದರೆ ಅದು ಹುಚ್ಚುತನವೆನಿಸಿಕೊಳ್ಳುತ್ತದೆ.

ಕ್ರಿಸ್ಮಸ್, ಹೊಸ ವರ್ಷ, ಯುಗಾದಿ, ಓಣಂ, ಪೊಂಗಲ್, ರಂಜಾನ್, ಹುಟ್ಟುಹಬ್ಬ , ವಾರ್ಷಿಕೋತ್ಸವ, ಏನೇ ಇರಲಿ, ಕುಟುಂಬದವರು, ಸ್ನೇಹಿತರು, ಜೊತೆಗಾರರು, ಪ್ರೇಮಿಗಳು ಯಾರೇ ಆಗಿರಲಿ, ಒಟ್ಟಿಗೆ ಸೇರಿ ಸಂಭ್ರಮದಿಂದ ಆಚರಿಸುವುದು ಎಲ್ಲರೂ ‌ಸಂತೋಷಪಡಬೇಕಾದ ವಿಷಯವೇ. ಅದನ್ನು ಹೇಗೆ ಬೇಕಾದರೂ ಆಚರಿಸಿಕೊಳ್ಳಿ. ಅದು ನಿಮ್ಮ ಸ್ವಾತಂತ್ರ್ಯ . 

ಆದರೆ ನೆನಪಿಡಿ. ಅದಕ್ಕೆ ಮೊದಲು ಸ್ವಾತಂತ್ರ್ಯ ಎಂದರೇನು ಎಂಬುದರ ಅರ್ಥ, ವ್ಯಾಪ್ತಿ, ವ್ಯಾಖ್ಯಾನ, ಮಿತಿ, ಪ್ರಾಯೋಗಿಕತೆ, ನೈತಿಕತೆ ಮತ್ತು ಕಾನೂನಿನ ಮಾನ್ಯತೆಯ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಸಂಭ್ರಮದ ಆಚರಣೆ ಅಪರಾಧ ಮತ್ತು ಅನೈತಿಕವಾಗುವ ಸಾಧ್ಯತೆಯೇ ಹೆಚ್ಚು. ಈ ವಿಷಯದಲ್ಲಿ ಸ್ವಾತಂತ್ರ್ಯ ಎಂದರೆ...

ಇನ್ನೊಬ್ಬರಿಗೆ ತೊಂದರೆಯಾಗದ ಹಾಗೆ, ಕಾನೂನಿನ  ನೀತಿ ನಿಯಮಗಳನ್ನು ಮೀರದ ಹಾಗೆ, ಸಮಾಜದ ಮತ್ತು ವೈಯಕ್ತಿಕ ನಡವಳಿಕೆಗಳನ್ನು  ಆ ಸಂದರ್ಭದಲ್ಲಿ ನೆನಪಿಟ್ಟುಕೊಂಡು ಸಾಮಾನ್ಯ ಜ್ಞಾನ ಉಪಯೋಗಿಸಿ ನಾವು ನಮಗಿಷ್ಟವಾದಂತೆ ಸಂಭ್ರಮಿಸುವುದೇ ಸ್ವಾತಂತ್ರ್ಯ.  ಇಲ್ಲಿ ಸ್ವಾತಂತ್ರ್ಯದ ಅರ್ಥವನ್ನು ಚರ್ಚೆಗಾಗಿ ಏನೇನೋ ಕಲ್ಪಿಸಿಕೊಂಡು ಸ್ವೇಚ್ಛೆ ಮತ್ತು ತಲೆ ಹರಟೆ ಮಾಡಿ ಎಲ್ಲವನ್ನೂ ಒಂದೇ ವ್ಯಾಪ್ತಿಗೆ ತಂದರೆ ಖಂಡಿತ ಅದು ಆತ್ಮವಂಚನೆಯಾಗುತ್ತದೆ ಮತ್ತು ಸಮಾಜ ದ್ರೋಹವಾಗುತ್ತದೆ.

ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಹೊಸ ವರ್ಷವನ್ನು ಅರ್ಥಪೂರ್ಣವಾಗಿ  ಆಚರಿಸೋಣ. ಕುಡಿತ ಕುಚೇಷ್ಟಗಳ, ಪೋಲೀಸ್ ಕಾವಲಿನ ಅನಾಗರಿಕ ವರ್ತನೆಯ ಅತಿರೇಕದ ಅತಿರಂಜಿತ " UN HAPPY NEW YEAR " ಆಗದಂತೆ ಎಚ್ಚರಿಕೆ ವಹಿಸೋಣ. ಅದನ್ನು ಮುಂದೆ ನಮ್ಮ ಮಕ್ಕಳು ಪಾಲಿಸುವಂತೆ ಅವರಿಗೆ ಆದರ್ಶ ಪ್ರಾಯರಾಗೋಣ. ತೃಪ್ತಿಯೇ ನಿತ್ಯ ಹಬ್ಬ

***

ದೀಪದಿಂದ ದೀಪವ ಹಚ್ಚಬೇಕು ಮಾನವ. ಅದಕ್ಕಾಗಿ,ಸಂಕಲ್ಪ ಯಾತ್ರೆ ಮಾನಸಿಕವಾಗಿ. ಹೊಸ ಎತ್ತರಕ್ಕೆ ಏರಿಸಬೇಕಿದೆ ನಮ್ಮ ಚಿಂತನೆಗಳನ್ನು. ವಿಷಯ ಯಾವುದೇ ಇರಲಿ, ಅದನ್ನು ಸಮಗ್ರ ದೃಷ್ಟಿಕೋನದಿಂದ, ಸಮಷ್ಟಿ ಪ್ರಜ್ಞೆಯಿಂದ ವಿಮರ್ಶಿಸಬೇಕಿದೆ. ಯೋಚಿಸುವ ಮನಸ್ಸನ್ನು ವಿಶಾಲಗೊಳಿಸಿಕೊಳ್ಳಬೇಕಿದೆ. ವಕೀಲಿಕೆ - ಚರ್ಚೆ ಮೀರಿ ಮಂಥನದ ಸಮಯದಲ್ಲಿ ಪ್ರಶಾಂತತೆ ಕಾಪಾಡಬೇಕಿದೆ.

ನಿರ್ಧಾರ ಮಾಡುವ ಮೊದಲು ವಿಷಯದ ಆಳಕ್ಕೆ ಇಳಿಯಬೇಕಿದೆ. ವಿಷಯ ಅರಿಯಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ. ಸಭ್ಯತೆ - ಸೌಜನ್ಯತೆ ಮೈಗೂಡಿಸಿಕೊಳ್ಳಬೇಕಿದೆ. ಆಗ ಮೂಡುವ ಅರಿವಿನಿಂದ. ಪ್ರಕೃತಿಯ ಮಡಿಲಿನಿಂದ ಪ್ರೀತಿಯನ್ನು ಬೊಗಸೆಯಿಂದ ಮೊಗೆದು ಸ್ವಲ್ಪ ಸ್ವಲ್ಪವೇ ಹಂಚೋಣ. ನಮ್ಮೊಳಗಡಗಿರುವ ಅರಿಷಡ್ವರ್ಗಗಳ ಮೇಲೆ ಸ್ವಲ್ಪ ಸ್ವಲ್ಪವೇ ನಿಯಂತ್ರಣ ಸಾಧಿಸೋಣ.

ಒಟ್ಟು ಬದುಕಿನ ಘನತೆಯನ್ನು ಸ್ವಲ್ಪ ಸ್ವಲ್ಪವೇ ಎತ್ತರಕ್ಕೇರಿಸಿಕೊಳ್ಳುತ್ತಾ ಸಾರ್ಥಕತೆಯತ್ತಾ ಸಾಗೋಣ. ಹೊಸ ವರುಷ ಎಂಬುದೇನಿಲ್ಲ ಅರಿತವಗೆ, " ಕಳೆದುಕೊಳ್ಳುವುದು ಏನೂ ಇಲ್ಲ, ಪಡೆದುಕೊಳ್ಳುವುದೇ ಎಲ್ಲವೂ. ಶುಭಾಶಯಗಳು. ಎಲ್ಲರಿಗೂ ಒಳ್ಳೆಯದಾಗಲಿ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ