ತೆಂಗಿನಕಾಯಿಯಲ್ಲಿ ಅಡಗಿರುವ ಆರೋಗ್ಯಕಾರಿ ಗುಣಗಳು
ತೆಂಗಿನ ಕಾಯಿಗೆ ಈಗ ಬಂಗಾರ ಬೆಲೆ ಬಂದು ಬಿಟ್ಟಿದೆ. ಅದಕ್ಕೆ ಕಾರಣಗಳು ಹಲವು. ಒಂದೆಡೆ ಫಸಲು ಕೊರತೆ, ಅಧಿಕ ಎಳನೀರು ಕೊಯ್ಲು, ಕೀಟ ಬಾಧೆ. ಹೀಗೆ ಹಲವಾರು ಕಾರಣದಿಂದ ತೆಂಗಿನ ಕಾಯಿ ಬೆಲೆ ಕಿಲೋ ಒಂದಕ್ಕೆ ೨೫-೩೦ ರೂ ಇದ್ದದ್ದು ೪೫-೫೦ ರೂ. ಗೆ ಏರಿದೆ. ತೆಂಗು ಕಲ್ಪವೃಕ್ಷವೆಂದೇ ಪ್ರಸಿದ್ಧ. ತೆಂಗಿನ ಎಣ್ಣೆಯ ನೈಜ ಪ್ರಯೋಜನಗಳು ಈಗ ಜನರಿಗೆ ಗೊತ್ತಾಗುತ್ತಿವೆ. ಬೇರೆ ಬೇರೆ ಬೆಳೆಗಳ ಎಣ್ಣೆಗಳನ್ನೇ ಉತ್ತಮ ಎಂದು ಭಾವಿಸುತ್ತಿದ್ದವರಿಗೆ ಈಗ ತೆಂಗಿನ ಎಣ್ಣೆಯೇ ಉತ್ತಮ ಎಂದು ಗೊತ್ತಾಗಿದೆ. ಇರಲಿ, ತೆಂಗಿನ ಕಾಯಿಯಲ್ಲಿ ಅಡಗಿರುವ ನಾನಾ ಬಗೆಯ ಆರೋಗ್ಯದಾಯಕ ಗುಣಗಳನ್ನು ಪರಿಶೀಲಿಸುವ…
ಹಸಿ ತೆಂಗಿನಕಾಯಿಯನ್ನು ನೀವು ನಿತ್ಯ ಸೇವಿಸಿದರೆ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬರುತ್ತವೆ. ನಿಮ್ಮ ದೇಹದಲ್ಲಿರುವ ಬೊಜ್ಜು ಕರಗಿಸಲು ತೆಂಗಿನ ಎಣ್ಣೆ ಉತ್ತಮ ಪರಿಹಾರ. ನೀವು ನಿಯಮಿತವಾಗಿ ತೆಂಗಿನಕಾಯಿಯ ಕೊಬ್ಬರಿ ಅಥವಾ ಕೊಬ್ಬರಿ ಎಣ್ಣೆಯನ್ನು ಬಳಕೆ ಮಾಡುತ್ತಾ ಹೋದರೆ ದೇಹದ ತೂಕ ಕಡಿಮೆಯಾಗಲು ನೆರವಾಗುತ್ತದೆ. ನಿಮ್ಮ ಚರ್ಮದ ಸೌಂದರ್ಯವೂ ಅಧಿಕವಾಗುತ್ತದೆ. ನಿಮ್ಮ ಚರ್ಮದ ಮೃದುತ್ವ ಜಾಸ್ತಿಯಾಗುತ್ತದೆ. ಚರ್ಮದಲ್ಲಿರುವ ಬಿರುಕು, ಸುಕ್ಕುಗಳು ಕಡಿಮೆಯಾಗುತ್ತವೆ. ಕಣ್ಣುಗಳ ಕೆಳಗಿನ ಕಪ್ಪು ಕಲೆ (ಡಾರ್ಕ್ ಸರ್ಕಲ್) ಮತ್ತು ಚರ್ಮದ ಬಣ್ಣ (ಟೋನ್) ಸುಧಾರಿಸುತ್ತದೆ. ಸೂರ್ಯನ ತೀಕ್ಷ್ಣ ಬೆಳಕಿನಿಂದ ಆಗುವ ಸನ್ ಬರ್ನ್ ನಿವಾರಣೆಯಾಗುತ್ತದೆ.
ತೆಂಗಿನ ಹಾಲು ಮತ್ತು ಎಳನೀರು ಪ್ರಕೃತಿಯು ನಮಗೆ ನೀಡಿದ ಅಮೃತವೆಂದೇ ಹೇಳಬಹುದು. ಇವುಗಳ ಸೇವನೆಯಿಂದ ದೇಹದಲ್ಲಿ ಉಷ್ಣಾಂಶದ ಸಮತೋಲನ ಕಾಪಾಡಿಕೊಳ್ಳಲು ನೆರವಾಗುತ್ತದೆ. ಕೊಬ್ಬಿನಂಶ ಕಡಿಮೆಯಾಗುತ್ತದೆ. ಎಳನೀರಿನಲ್ಲಿ ಕಡಿಮೆ ಕ್ಯಾಲೊರಿ ಮತ್ತು ಸಮೃದ್ಧ ಪೋಷಕಾಂಶಗಳು ಇರುತ್ತವೆ. ನಿಮ್ಮ ದೇಹದಲ್ಲಿರುವ ಮೂಳೆಗಳ ನೋವಿಗೂ ತೆಂಗಿನ ಎಣ್ಣೆ ಉತ್ತಮ ಪರಿಹಾರವಾಗಬಲ್ಲದು. ತೆಂಗಿನ ಎಣ್ಣೆಯನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ ಜೊತೆಗೆ ಮೂಳೆಗಳು ಬಲವಾಗುತ್ತವೆ. ಮೂಳೆಗಳ ಸುತ್ತಲಿನ ಅಂಗಾಂಶಗಳು ಮತ್ತು ಸ್ನಾಯುಗಳನ್ನು ಇದು ಗಟ್ಟಿಗೊಳಿಸುತ್ತದೆ. ಮೂಳೆಯು ಕ್ಷೀಣವಾಗುವುದನ್ನು ತಡೆಗಟ್ಟುತ್ತದೆ.
ತೆಂಗಿನ ಎಣ್ಣೆಯಲ್ಲಿ ಚಳಿಗಾಲದಲ್ಲಿ ಒಡೆಯುವ ತುಟಿಗೆ ಲಿಪ್ ಬಾಮ್ ತರಹ ಬಳಸಬಹುದು. ತೆಂಗಿನ ಎಣ್ಣೆಯ ಬಹುಮುಖ್ಯ ಉಪಯೋಗ ಎಂದರೆ ನಮ್ಮ ಕೂದಲಿನ ಆರೈಕೆ. ಬಹಳ ವರ್ಷಗಳಿಂದ ನಾವು ನಮ್ಮ ತಲೆ ಕೂದಲಿಗೆ ತೆಂಗಿನೆಣ್ಣೆಯನ್ನು ಬಳಸುತ್ತಾ ಬಂದಿದ್ದೇವೆ. ಶುದ್ಧವಾದ ತೆಂಗಿನೆಣ್ಣೆಯು ಕೂದಲು ಒಡೆಯುವುದನ್ನು ತಡೆಗಟ್ಟುತ್ತದೆ. ತಲೆಹೊಟ್ಟನ್ನು ನಿವಾರಿಸುತ್ತದೆ. ತೆಂಗಿನ ಕಾಯಿಯಲ್ಲಿರುವ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶಗಳು ಕೂದಲು ಸುಂದರವಾಗಿ ಹೊಳೆಯಲು ಮತ್ತು ರೇಷ್ಮೆಯಂತೆ ಕಾಣಿಸಲು ಸಹಕಾರಿಯಾಗಿದೆ.
ತೆಂಗಿನಕಾಯಿಯ ನಿಯಮಿತವಾದ ಬಳಕೆಯು ನಿಮ್ಮ ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕರುಳಿನ ಅಸ್ವಸ್ಥೆಗಳು ಇದ್ದರೆ ಅದನ್ನು ಪರಿಹರಿಸುತ್ತದೆ. ತೆಂಗಿನ ಕಾಯಿಯ ಸೇವನೆಯಿಂದ ಫೈಬರ್, ಖನಿಜಗಳು ಮತ್ತು ಅಪಾರ ಪೋಷಕಾಂಶಗಳು ನಿಮ್ಮ ದೇಹಕ್ಕೆ ಲಭಿಸುತ್ತವೆ. ಹಸಿ ಕೊಬ್ಬರಿಯ ಸೇವನೆ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಆಂಟಿ ವೈರಲ್, ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಪರಾಸಿಟಿಕ್ ಗುಣಗಳನ್ನು ಹೊಂದಿದೆ. ತೆಂಗಿನ ಎಣ್ಣೆಯನ್ನು ಅಡುಗೆಗೆ ಬಳಕೆ ಮಾಡಿದರೆ ಅನಾರೋಗ್ಯಕ್ಕೆ ಕಾರಣವಾಗುವ ಹಲವಾರು ವೈರಸ್ ಗಳು ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ತೆಂಗಿನ ಕೊಬ್ಬರಿ ಮತ್ತು ಎಳನೀರಿನ ಸೇವನೆಯು ಬಾಯಿಯಲ್ಲಿರುವ ದುರ್ವಾಸನೆಯನ್ನು ಹತೋಟಿಯಲ್ಲಿಡುತ್ತದೆ. ತೆಂಗಿನ ಹಾಲನ್ನು ಮೌತ್ ವಾಶ್ ಆಗಿಯೂ ಬಳಕೆ ಮಾಡಬಹುದು. ಇದು ಉಸಿರಾಟದ ಹೊತ್ತಿನಲ್ಲಿ ಬರುವ ಕೆಟ್ಟ ವಾಸನೆಯನ್ನು ನಿರೋಧಿಸುತ್ತದೆ. ತೆಂಗಿನ ಕೊಬ್ಬರಿಯ ಬಳಕೆಯು ಹಲ್ಲಿನ ಶಕ್ತಿಯನ್ನು ವೃದ್ಧಿಸುತ್ತದೆ. ಇದರಲ್ಲಿರುವ ಕ್ಯಾಲ್ಸಿಯಂ ಅಂಶವು ಹಲ್ಲು ಮತ್ತು ಮೂಳೆಗಳಿಗೆ ಉಪಕಾರಿ.
ನೀವು ಮೇಕಪ್ ಮಾಡಿಕೊಂಡಿದ್ದರೆ ಅದನ್ನು ತೆಗೆಯಲು ತೆಂಗಿನ ಎಣ್ಣೆ ಬಹಳ ಉಪಕಾರಿ. ಸ್ವಲ್ಪ ತೆಂಗಿನ ಎಣ್ಣೆಯನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಮಸಾಜ್ ಮಾಡಿ. ನಂತರ ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆಯಿರಿ. ಇದರಿಂದ ನಿಮ್ಮ ಮೇಕಪ್ ತೊಳೆದು ಹೋಗುತ್ತದೆ. ಕ್ನೆಯಲ್ಲಿ ಮತ್ತೊಮ್ಮೆ ಬಿಸಿಯಾದ ನೀರಿನಿಂದ ಮುಖವನ್ನು ತೊಳೆಯಿರಿ.
ತೆಂಗಿನ ಕಾಯಿಯ ಬಳಕೆಯು ಮಲಬದ್ಧತೆಯನ್ನು ನಿವಾರಿಸುತ್ತದೆ. ಇದರಲ್ಲಿರುವ ಫೈಬರ್ ಅಂಶವು ಕರುಳಿನ ಕಾರ್ಯಕ್ಷಮತೆಯನ್ನು ನೈಸರ್ಗಿಕವಾಗಿ ಉತ್ತೇಜಿಸುತ್ತದೆ. ಈ ಕಾರಣದಿಂದ ಮಲಬದ್ಧತೆ ದೂರವಾಗುತ್ತದೆ. ತೆಂಗಿನ ಕಾಯಿಯ ಬಳಕೆಯು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡುತ್ತದೆ. ದೈನಂದಿನ ಆಹಾರದಲ್ಲಿ ನೀವು ತೆಂಗಿನಕಾಯಿಯನ್ನು ಬಳಸುತ್ತಾ ಬಂದರೆ ಸಕ್ಕರೆಯ ಪ್ರಮಾಣ ನಿಯಂತ್ರಣಕ್ಕೆ ಬಂದು ಮಧುಮೇಹ ಹತೋಟಿಯಲ್ಲಿರುತ್ತದೆ. ಇಷ್ಟೆಲ್ಲಾ ಉಪಯೋಗಗಳಿರುವ ತೆಂಗಿನಕಾಯಿಯನ್ನು ನೀವು ನಿಯಮಿತವಾಗಿ ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ