ತೆಂಗಿನಕಾಯಿ ಏಡಿ

ತೆಂಗಿನಕಾಯಿ ಏಡಿ

ನೀರಿನಲ್ಲಿ ವಾಸಿಸುವ ಏಡಿ ತೆಂಗಿನ ಮರವನ್ನು ಹತ್ತಿ ಕುಳಿತಿದೆಯೇ? ಎಂದು ಅಚ್ಚರಿ ಪಡಬೇಡಿ. ಈ ವಿಶ್ವ ಕೌತುಕಗಳ ಆಗರ. ನಾವು ವಾಸಿಸುವ ಪರಿಸರದಲ್ಲೇ ನಮ್ಮ ಕಣ್ಣಿಗೆ ನೂರಾರು ವಿಶಿಷ್ಟ ಸಂಗತಿಗಳು ಗೋಚರಿಸುತ್ತವೆ. ತೆಂಗಿನಕಾಯಿ ಏಡಿ ಎಂಬುವುದು ಒಂದು ದೊಡ್ದ ಗಾತ್ರದ ಉಭಯವಾಸಿ ಜೀವಿ. ಸಮುದ್ರದಲ್ಲಿರುವ ಏಡಿಗಳಿಗಿಂತಲೂ ಭಿನ್ನವಾದ ಶರೀರ ರಚನೆಯನ್ನು ಹೊಂದಿರುವ ಇವುಗಳು ತಮ್ಮ ಆಹಾರಕ್ಕಾಗಿ ತೆಂಗಿನ ಮರವನ್ನೇರಿ, ಅಲ್ಲಿರುವ ತೆಂಗಿನಕಾಯಿಗಳನ್ನು ಒಡೆದು ಅವುಗಳ ತಿರುಳನ್ನು ತಿನ್ನುತ್ತವೆ. ಈ ಕಾರಣದಿಂದಲೇ ಇವುಗಳಿಗೆ ಈ ಹೆಸರು ಬಂದಿದೆ. 

ತೆಂಗಿನಕಾಯಿ ಏಡಿಯ ವೈಜ್ಞಾನಿಕ ಹೆಸರು ‘ಬಿರ್ಗಸ್ ಲಾಟ್ರೋ’ (Birgus Latro). ಈ ಜೀವಿಗಳು ಸಿನೋಬಿಟೆಡೇ ಎಂಬ ಕುಟುಂಬಕ್ಕೆ ಸೇರಿವೆ. ಇವುಗಳು ಹಿಂದೂ ಮಹಾಸಾಗರ ಮತ್ತು ಶಾಂತಿ ಮಹಾ ಸಾಗರ (ಫೆಸಿಫಿಕ್) ಗಳಲ್ಲಿ ಕಂಡು ಬರುತ್ತವೆ. ಕಡಲ ತೀರದಲ್ಲಿ ತೆಂಗಿನ ಮರಗಳು ಇರುವ ಹವಳ ದ್ವೀಪಗಳಲ್ಲಿ ಇವುಗಳು ಹೆಚ್ಚಾಗಿ ಕಾಣಸಿಗುತ್ತವೆ. ಈ ಏಡಿ ಬಹುತೇಕ ನೆಲದಲ್ಲಿ ವಾಸ ಮಾಡುತ್ತವೆ. ಇವುಗಳ ತೂಕ ಸುಮಾರು ೪ ಕೆಜಿಯಷ್ಟು ಹಾಗೂ ಗಾತ್ರ ಸುಮಾರು ೧ ಮೀಟರ್ ತನಕವೂ ಇರುತ್ತದೆ. ಏಡಿಗಳ ಜಾತಿಗಳಲ್ಲಿ ಈ ವಿಧ ತುಂಬಾ ದೊಡ್ಡದು.

ಕಡಲ ತಡಿಯಲ್ಲಿರುವ ತೆಂಗಿನ ಮರಗಳಿಗೆ ಸರಾಗವಾಗಿ ಹತ್ತುವ ಇವುಗಳು ತಮ್ಮ ವಿವಿಧ ನಮೂನೆಯ ಕಾಲುಗಳ ಸಹಾಯದಿಂದ ತೆಂಗಿನಕಾಯಿಯನ್ನು ತುಂಡರಿಸಿ ತಿನ್ನುತ್ತವೆ. ತಮ್ಮ ಇಕ್ಕಳದಂತಹ ಕೊಂಡಿಗಳಿಂದ ತೆಂಗಿನಕಾಯಿಯ ಕಣ್ಣಿನ ಭಾಗಕ್ಕೆ ಬಲವಾದ ಏಟು ಕೊಟ್ಟು, ಅಲ್ಲಿ ತೂತು ಮಾಡಿ, ಅದರ ಮುಖಾಂತರ ತನ್ನ ಇನ್ನೊಂದು ಕೊಂಡಿಯನ್ನು ಒಳಗೆ ಹಾಕಿ ಅದರ ಮೂಲಕ ತೆಂಗಿನಕಾಯಿಯ ತಿರುಳನ್ನು ಹೊರತೆಗೆಯುತ್ತದೆ. ಈ ತೆಂಗಿನ ತಿರುಳು ತಿನ್ನುವುದೆಂದರೆ ಇದಕ್ಕೆ ಭಾರೀ ಇಷ್ಟ. 

ತಾನು ತೆಗೆದ ತೆಂಗಿನ ಕಾಯಿಯ ಸಿಪ್ಪೆಯನ್ನು ತನ್ನ ಬಿಲದ ಒಳಗೆ ತೆಗೆದುಕೊಂಡು ಹೋಗಿ ಅಲ್ಲಿ ಹಾಸಿಗೆಯಂತೆ ಹರಡುತ್ತದೆ. ಇದು ಬಿಲವನ್ನು ಬೆಚ್ಚಗೆ ಇರಿಸಲು ಸಹಕಾರಿಯಾಗುತ್ತದೆ. ಕೆಲವು ಸಲ ಮರಳ ಕೊರತೆಯಿಂದ ತನ್ನನ್ನು ರಕ್ಷಿಸಿಕೊಳ್ಳಲೂ ಈ ತೆಂಗಿನ ಚಿಪ್ಪನ್ನು ಬಳಸಿಕೊಳ್ಳುತ್ತದೆ. ಆ ಕಾಯಿಯ ಒಳಗೆ ಮುದುಡಿಕೊಂಡು ಮಲಗುವುದೆಂದರೆ ಈ ಏಡಿಗೆ ಬಹಳ ಇಷ್ಟ. ತೆಂಗಿನ ಕಾಯಿಯ ಒಳಗೆ ನುಸುಳಿದ ಏಡಿ ಕೆಲವು ಸಲ ಆ ಕಾಯಿಯನ್ನು ತನ್ನ ಮೈಮೇಲೆ ಹೊತ್ತು ಕೊಂಡೇ ತಿರುಗುತ್ತದೆ. ಇದರಿಂದ ಅದು ತನ್ನ ಶತ್ರುಗಳಿಂದಲೂ ಪಾರಾಗುತ್ತದೆ.

ಈ ಏಡಿಯನ್ನು ದರೋಡೆಕೋರ ಏಡಿ ಹಾಗೂ ತೆಂಗು ಕಳ್ಳ ಏಡಿ ಎಂದೂ ಕರೆಯುತ್ತಾರೆ. ಭಾರತದಲ್ಲಿ ಈ ತೆಂಗಿನಕಾಯಿ ಏಡಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹಗಳಲ್ಲಿ ಕಂಡು ಬರುತ್ತವೆ. ಇದರ ಉದರ ಭಾಗದಲ್ಲಿ ಎಣ್ಣೆಯ ಅಂಶವಿದ್ದು, ಇದು ಮಾಂಸಹಾರಿಗಳಿಗೆ ಬಹಳ ರುಚಿಕರ ಖಾದ್ಯವಾಗಿದೆ. ಆದುದರಿಂದ ಇವುಗಳ ಬೇಟೆ ಅವ್ಯಾಹತವಾಗಿ ನಡೆಯುತ್ತಲೇ ಇರುವ ಕಾರಣದಿಂದ ಇವುಗಳನ್ನು ಸಂರಕ್ಷಿತ ವನ್ಯ ಜೀವಿಗಳ ಪಟ್ಟಿಗೆ ಸೇರಿಸಲಾಗಿದೆ. 

ಸಮುದ್ರದ ನೀರಿನಲ್ಲಿ ವಾಸಿಸದೇ ಬಹುತೇಕ ಭೂಮಿಯಲ್ಲೇ ಜೀವನ ಸಾಗಿಸುವ ಇವುಗಳ ಕಿವಿರುಗಳು ಭೂವಾಸದಲ್ಲಿ ಉಸಿರಾಟಕ್ಕೆ ಅನುಕೂಲಕರವಾಗುವಂತೆ ಬದಲಾವಣೆ ಹೊಂದಿದೆ. ಈ ಏಡಿಗಳು ಮೊಟ್ಟೆಯಿಡುವ ಸಮಯ ಬಂದಾಗ ಹುಣ್ಣಿಮೆ ಮತ್ತು ಅಮವಾಸ್ಯೆ ಕಾಲದಲ್ಲಿ ಗಂಡು-ಹೆಣ್ಣು ಏಡಿಗಳು ಜೊತೆಗೂಡಿ ಸಮುದ್ರ ತೀರಕ್ಕೆ ಹೋಗುತ್ತವೆ. ಹೆಣ್ಣು ಏಡಿಯು ತನ್ನ ಉದರದ ಕೆಳಭಾಗದಲ್ಲಿ ಮೊಟ್ಟೆಗಳನ್ನು ಹೊತ್ತುಕೊಂಡು ಅದಕ್ಕೆ ರಕ್ಷಣೆ ಕೊಡುತ್ತದೆ. ಮೊಟ್ಟೆಯೊಡೆದು ಹೊರಬರುವ ಮರಿ ಕೆಲವು ಸಮಯ ನೀರಿನಲ್ಲಿ ಕಳೆದು ಪೂರ್ಣವಾಗಿ ಬೆಳವಣಿಗೆಯಾದ ನಂತರ ನೆಲದಲ್ಲಿ ನೆಲೆಸಲು ಹೊರಬರುತ್ತವೆ. ಹೀಗೆ ಸಮುದ್ರ ನೀರಿನಿಂದ ಹೊರಬಂದ ಪ್ರೌಢ ಏಡಿಗಳು ತೆಂಗಿನ ಮರವನ್ನು ತಮ್ಮ ಆಹಾರಕ್ಕೆ ನೆಲೆಯಾಗಿ ಮಾಡಿಕೊಳ್ಳುತ್ತವೆ. ಹೀಗಿದೆ ತೆಂಗಿನ ಏಡಿಯ ರೋಚಕ ಬದುಕು.

ಚಿತ್ರ ಕೃಪೆ: ಅಂತರ್ಜಾಲ ತಾಣ