ತೆಂಗಿನೆಣ್ಣೆ ಮತ್ತು ಸಾಂಪ್ರದಾಯಿಕ ಔಷಧೋಪಚಾರಗಳು

ತೆಂಗಿನೆಣ್ಣೆ ಮತ್ತು ಸಾಂಪ್ರದಾಯಿಕ ಔಷಧೋಪಚಾರಗಳು

ಕಲ್ಪವೃಕ್ಷ ತೆಂಗು ನಿಜಕ್ಕೂ ಅಮೃತ ಸಮಾನವಾದ ಉತ್ಪನ್ನಗಳನ್ನು ನಮಗೆಲ್ಲಾ ಕೊಟ್ಟಿದೆ. ಪ್ರಕೃತಿಯಲ್ಲಿ ನಮ್ಮ ಕಾಲ ಬುಡದಲ್ಲೇ ಇರುವ ಸಂಜೀವಿನಿ ಸಸ್ಯಗಳಲ್ಲಿ ಈ ತೆಂಗು ಒಂದು. ಅದರ ಸರ್ವ ಉತ್ಪನ್ನವೂ ಅಮೂಲ್ಯ ಔಷಧಿ. ತೆಂಗಿನ ಸಸಿ ಮನೆ ಬಾಗಿಲಲ್ಲಿ ಇದ್ದರೆ, ಅದು ಶುಭ ಸೂಚಕ ಎಂಬುದು ನಮ್ಮ ಹಿರಿಯರ ನಂಬಿಕೆ. ಇದನ್ನು  ಜಾತಿ-ಧರ್ಮವೆಂಬ ಬೇಧವಿಲ್ಲದೆ ಎಲ್ಲರೂ ಈವರೆಗೂ ಪಾಲಿಸುತ್ತಾ ಬಂದಿದ್ದಾರೆ. ಬೆಳಗ್ಗೆ ಎದ್ದು ದೇವರ ಮುಖ, ನಂತರ ನೋಡುವುದೇ ಮನೆ ಬಾಗಿಲಿನಿಂದ ಕಾಣುವ ತೆಂಗಿನ ಮರವನ್ನು. ತೆಂಗಿನ ಮರವನ್ನು ಕಡಿಯುವುದೂ ಸಹ ಪಾಪದ ಕೆಲಸ ಎಂದು ಜನ ನಂಬಿದ್ದಾರೆ. ಇಂಥ ಪಾವಿತ್ರ್ಯತೆಯನ್ನು ಪಡೆದ ತೆಂಗಿನ ಮರವನ್ನು ಎಲ್ಲರೂ ಬೆಳೆಸುವುದು ತೆಂಗಿನ ಕಾಯಿಗಾಗಿ. ತೆಂಗಿನ  ಕಾಯಿಯಿಂದ ಪಡೆಯುವ ಎಣ್ಣೆಗಾಗಿ. ತೆಂಗಿನ ಮರದಿಂದ ಎಳನೀರು ಕೀಳುವುದೂ ಸಹ ಇತ್ತೀಚಿನ ಬೆಳವಣಿಗೆ. ಹಿಂದೆ  ತೆಂಗಿನ ಮರದಿಂದ ಎಳನೀರು ತೆಗೆದರೆ ಅದಕ್ಕೆ ನೋವಾದೀತು ಎಂದು ನಮ್ಮ ಹಿರಿಯರು ನಂಬಿದ್ದರು.

ನಮ್ಮ ಕರಾವಳಿ ಕರ್ನಾಟಕ ಮತ್ತು ಕೇರಳದ ಪ್ರಮುಖ ಖಾದ್ಯ ಎಣ್ಣೆ ಕೊಬ್ಬರಿ ಎಣ್ಣೆ. ಇದಕ್ಕೆ ನೂರಾರು ವರ್ಷಗಳ ಇತಿಹಾಸ ಇದೆ. ಎಣ್ಣೆಗಳ ಇತಿಹಾಸದಲ್ಲಿ ತೆಂಗಿನೆಣ್ಣೆ ಮೊದಲಿನದ್ದು. ನಮ್ಮ ಹಿರಿಯರ ಕಾಲದಲ್ಲಿ ಮೂರು ನಾಲ್ಕು ಹಳ್ಳಿಗಳಿಗೆ ಒಂದರಂತೆ ಗಾಣದ ಕೊಟ್ಟಿಗೆಗಳನ್ನು ಇಟ್ಟುಕೊಂಡು ತೆಂಗಿನೆಣ್ಣೆ ತೆಗೆಸುತ್ತಿದ್ದರು. ಎಲ್ಲಾ ಬಳಕೆಗೂ ತೆಂಗಿನೆಣ್ಣೆಯನ್ನೇ ಉಪಯೋಗಿಸುತ್ತಿದ್ದರು.

ತೆಂಗಿನ ಕೊಬ್ಬರಿಯಲ್ಲಿ ೬೫ % ಎಣ್ಣೆ ಅಂಶ ಇದೆ. ಇದು ಉಳಿದೆಲ್ಲಾ ಎಣ್ಣೆ ಕಾಳುಗಳಿಗಿಂತ ಹೆಚ್ಚು. ಬರೇ ಎಣ್ಣೆ ಪ್ರಮಾಣ  ಮಾತ್ರವಲ್ಲ, ಎಣ್ಣೆಯಲ್ಲಿ ಸತ್ವಾಂಶಗಳೂ ಉಳಿದೆಲ್ಲಾ ಎಣ್ಣೆಗಿಂತ ಹೆಚ್ಚು ಇದ್ದು, ಇದು ಆರೋಗ್ಯದ ದೃಷ್ಟಿಯಲ್ಲಿ  ಅತ್ಯುತ್ತಮ ಎಣ್ಣೆ. ಇಷ್ಟಕ್ಕೂ ತೆಂಗಿನ ಕಾಯಿಯ ಎಣ್ಣೆ ನಮ್ಮ ಕಣ್ಣೆದುರಿಗೇ ತೆಗೆದು ಕೊಡುವ ಎಣ್ಣೆಯಾದ ಕಾರಣ ಇದರಷ್ಟು ಪರಿಶುದ್ಧ ಎಣ್ಣೆ ಮತ್ತೊಂದಿರಲಿಕ್ಕಿಲ್ಲ.

ಆಧುನಿಕ ವಿಜ್ಞಾನ ತೆಂಗಿನ ಕಾಯಿಯಲ್ಲಿ - ಅದರ ನೀರಿನಲ್ಲಿ- ಎಳೆ ನೀರಿನಲ್ಲಿ - ಎಣ್ಣೆಯಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ ಎಂಬುದನ್ನು ಸಂಶೋಧನೆಯಿಂದ ಕಂಡುಹಿಡಿದಿದೆಯಾದರೂ, ಯಾವುದೇ ಸಂಶೋಧನೆ ಇಲ್ಲದೇ ಅನುಭವದ ಮೇಲೆ ನಮ್ಮ ಹಿರಿಯರು  ಕಂಡುಕೊಂಡ ಹಲವಾರು ಸಂಗತಿಗಳು ಈಗಿನ ಸಂಶೋಧನೆಗಳಿಗೆ ತಳಹದಿಯಾಗಿದೆ.

ನಮ್ಮಲ್ಲಿ ಅನಾದಿಕಾಲದಿಂದ ತಲೆಗೆ ಹಾಕುವ ಎಣ್ಣೆಯಾಗಿ ಬಳಕೆಯಲ್ಲಿದ್ದುದು ತೆಂಗಿನೆಣ್ಣೆ. ಶನಿವಾರ ಪುರುಷರು, ಶುಕ್ರವಾರ ಸ್ತ್ರೀಯರೂ ಎಣ್ಣೆ ಮಜ್ಜನ ಮಾಡುವ ಸಂಪ್ರದಾಯ ನಮ್ಮಲ್ಲಿತ್ತು. ಮೈ, ತಲೆಗೆ ತೆಂಗಿನೆಣ್ಣೆ ಮಜ್ಜನ ಮಾಡಿ ಸ್ನಾನ ಮಾಡುವುದರಿಂದ ಚರ್ಮ ಮತ್ತು ರೋಮ ನಾಳಗಳು ಸುಸ್ಥಿತಿಯಲ್ಲಿರುತ್ತವೆ ಎಂದು ನಂಬಿದ್ದರು. ತಲೆಗೆ ಕೇಶಗಳ ಬುಡದಲ್ಲಿ ಉಂಟಾಗುವ ತಲೆಹೊಟ್ಟು ಇಲ್ಲದಾಗುತ್ತದೆ. ಕೇಶಕ್ಕೆ  ಹೊಳಪು ಬರುತ್ತದೆ. ಕೇಶ ಉದ್ದವಾಗುತ್ತದೆ. ಉದುರುವುವಿಕೆ ನಿಲ್ಲುತ್ತದೆ.  

ಹಿಂದೆ ಈಗಿನಂತೆ ಗಾಯಕ್ಕೆ ಹಚ್ಚಲು ಮುಲಾಮುಗಳು ಇರಲಿಲ್ಲ. ಆಗ ತೆಂಗಿನೆಣ್ಣೆಗೆ ಏನಾದರೂ ಮೂಲಿಕೆ ಹಾಕಿಯೋ ಅಥವಾ ಹಾಕದೆಯೋ ಹಚ್ಚಿಕೊಂಡರೆ ಗಾಯ ಕೀವಾಗುತ್ತಿರಲಿಲ್ಲ. ತೆಂಗಿನ ಕಾಯಿಯ ನೀರನ್ನು ೧೦:೧ ಕ್ಕೆ ಕುದಿಸಿ ಅದನ್ನು ಗಡಿ ಎಣ್ಣೆಯಾಗಿ ಮಾಡುತ್ತಿದ್ದರು. ಅದನ್ನು ಹಚ್ಚಿಕೊಂಡರೆ ದೊಡ್ಡ ಗಾಯಗಳೂ ವಾಸಿಯಾಗುತ್ತಿದ್ದವು. ತೆಂಗಿನೆಣ್ಣೆಯನ್ನು  ಗಂಟಲು ಕೆರೆತವಾಗುತ್ತಿದ್ದರೆ ಕುತ್ತಿಗೆ ಒಳ ಭಾಗಕ್ಕೆ ಹಚ್ಚಿಕೊಳ್ಳುವುದು ಹಿರಿಯರ ಚಿಕಿತ್ಸೆ. ಇದು ಈಗಲೂ ಫಲಕಾರಿ. ಇಷ್ಟೇಕೆ  ಕಣ್ಣು ತುರಿಕೆ ಉಂಟಾದರೆ ಕಣ್ಣಿಗೆ ಒಂದೊಂದು ತೊಟ್ಟು ತೆಂಗಿನೆಣ್ಣೆ ಹಚ್ಚಿಕೊಂಡರೆ ತುರಿಕೆ ನಿಲ್ಲುತ್ತದೆ. ಚಳಿಗಾಲದಲ್ಲಿ ಚರ್ಮ ಸುಕ್ಕುಕಟ್ಟದಿರಲು, ತುಟಿ ಮತ್ತು ಚರ್ಮಕ್ಕೆ ತೆಂಗಿನೆಣ್ಣೆ ಹಚ್ಚಿಕೊಳ್ಳುತ್ತಿದ್ದರು. ಕಂಬಳಿಹುಳ ಮೈಗೆ ತಾಗಿದರೆ  ಉಂಟಾಗುವ ತುರಿಕೆ ನಿವಾರಣೆಗೆ ತೆಂಗಿನೆಣ್ಣೆ ಹಚ್ಚಿಕೊಳ್ಳುತ್ತಿದ್ದರು. ಸುಟ್ಟ ಗಾಯಕ್ಕೆ ತೆಂಗಿನೆಣ್ಣೆ ಹಚ್ಚುವ ಕ್ರಮ ಇತ್ತು.

ತೆಂಗಿನೆಣ್ಣೆ ಜೀರ್ಣಕಾರಿ. ತಿಂದರೆ ಸುಲಭವಾಗಿ ಕರಗುತ್ತದೆ. ವಿಶೇಷವಾಗಿ ಹಿಂದಿನವರು ಪಲ್ಯ ಇತ್ಯಾದಿ ಕಲಸಿ ಊಟ ಮಾಡುವಾಗ ತೆಂಗಿನೆಣ್ಣೆ ಬಳಸುತ್ತಿದ್ದರು. ಒಗ್ಗರಣೆಗಂತೂ ತೆಂಗಿನೆಣ್ಣೆಯೇ ಸೂಕ್ತ. ತೆಂಗಿನೆಣ್ಣೆ ಕರುಳಿನಲ್ಲಿ ಜಾರೆಣ್ಣೆಯಾಗಿ ಕೆಲಸ ಮಾಡುತ್ತಿತ್ತು ಎನ್ನುತ್ತಾರೆ. ಖಾರದ ಪದಾರ್ಥಕ್ಕೆ ತೆಂಗಿನೆಣ್ಣೆ ಹಾಕಿ ಕಲಸಿ ತಿಂದರೆ ಖಾರ ತಗ್ಗುತ್ತದೆ. ಕರಾವಳಿಯ ಜೈನ ಸಮುದಾಯದವರ ಮೆಣಸಿನ ಗಟ್ಟಿ ಎಂಬ ತಯಾರಿಕೆಗೆ ತೆಂಗಿನೆಣ್ಣೆ ಬೆರೆಸಿಯೇ ಬಳಕೆ ಮಾಡಬೇಕು. ೫ ವರ್ಷದ ನಂತರದ ಮಕ್ಕಳಿಗೆ ಊಟ ಮಾಡಿಸುವಾಗ ೧ ಚಮಚ  ತೆಂಗಿನೆಣ್ಣೆ  ಬೆರೆಸಿ ಊಟ ಮಾಡಿಸಿದರೆ ಜೀವನ ಪರ್ಯಂತ ರೋಗ ನಿರೋಧಕ ಶಕ್ತಿ ಬರುತ್ತದೆ ಎಂಬ ಸಂಗತಿಯನ್ನು  ಹಿರಿಯರು ಹೇಳುತ್ತಾರೆ. ಹಿಂದೆ ಯುವಕರು ಹುಡಿ ಅನ್ನ ಉಣ್ಣುವ ಸಂಪ್ರದಾಯವಿತ್ತು. ಬೆಳಿಗ್ಗೆ  ಮತ್ತು ಮಧ್ಯಾಹ್ನದ ಮಿಗತೆ ಅನ್ನವನ್ನು ಅಗಲದ ಬಾಯಿಯ ಪಾತ್ರೆಯಲ್ಲಿ ಹಾಕಿ ಅದನ್ನು ಆರಲು ಬಿಟ್ಟು ಅದನ್ನು ಅದನ್ನು  ನಂತರ ಮಣ್ಣಿನ ಪಾತ್ರೆಯಲ್ಲಿ ಹಾಕಿ ಇಟ್ಟು ಮರುದಿನ ಅದರಲ್ಲಿ ಒಂದು ಸೌಟು ತೆಂಗಿನೆಣ್ಣೆ ಮತ್ತು ಉಪ್ಪಿನ ಕಾಯಿ ರಸದಲ್ಲೂ ಮತ್ತೊಂದು ಸೌಟನ್ನು ಮೊಸರು ಮತ್ತು ಉಪ್ಪು ಹಾಕಿ ಊಟ ಮಾಡುವುದು ಶ್ರಮದ ಕೆಲಸ ಮಾಡುವವರಿಗೆ  ಹೆಚ್ಚಿನ ಶಕ್ತಿಯನ್ನು ಕೊಡುತ್ತಿತ್ತಂತೆ.  

ಹಿಂದೆ ತೆಂಗಿನ ಕಾಯಿಯನ್ನು ಒಣಗಿಸಿ ಗಾಣದಲ್ಲಿ ಎಣ್ಣೆ ತೆಗೆಯುತ್ತಿದ್ದರು. ಆಗ ಈಗಿನಂತೆ ತೆಂಗಿನ ಮರಗಳು ಇರಲಿಲ್ಲ.  ಹೆಚ್ಚಿನ ಕೃಷಿಕರಲ್ಲಿ ತೆಂಗಿನ ಕಾಯಿಗೆ ಬರ. ಗಾಣದಲ್ಲಿ ಎಣ್ಣೆ ತೆಗೆಯಲು ಕಾಯಿ ಇಲ್ಲದವರು ಕಾಯಿ ತುಂಡು ಮತ್ತು ಬೆಲ್ಲವನ್ನು ಜಗಿದಾದರೂ ಎಣ್ಣೆ ಸೇವನೆ ಮಾಡುತ್ತಿದ್ದರು. ಊಟ ಮಾಡುವಾಗ ಗೋಟು ಕಾಯಿಯ ಚೂರುಗಳನ್ನು  ಜಗಿಯುತ್ತಿದ್ದರು. ಕೆಲವರು, ಸ್ವತಃ ಮನೆಯಲ್ಲೇ ಎರಡು ಮೂರು ಕಾಯಿಯ ಎಣ್ಣೆ ತೆಗೆಯುತ್ತಿದ್ದರು. ಅದು ಹಸಿ ಕಾಯಿಯನು ಹೆರೆದು ಅರೆದು ಸೋಸಿ ಕುದಿಸಿ  ಪಡೆಯುವ ಎಣ್ಣೆ. ಪರಿಶುದ್ಧವಾದ ಈ ಎಣ್ಣೆ ತುಪ್ಪಕ್ಕೆ ಸಮನಾದುದು ಎನ್ನುತ್ತಾರೆ ಹಿರಿಯರು. ಒಟ್ಟಿನಲ್ಲಿ ತೆಂಗಿನೆಣ್ಣೆ ನಮ್ಮ ಕಾಲಬುಡದಲ್ಲೇ ಇರುವ ಔಷಧಿ. ಆದರೆ ನಮಗೆ ಅದು ಸಣ್ಣದು. ಇದು ಬೇಡ ನಮ್ಮ ಹಿರಿಯರಂತೆ ಆರೋಗ್ಯವಾಗಿ, ಧೀರ್ಘಾಯುವಾಗಿ ಬದುಕಲು ತೆಂಗಿನೆಣ್ಣೆ ಬಳಕೆ ಮಾಡಿ.

ಹಸಿ ಕಾಯಿಯ ಎಣ್ಣೆ ತೆಗೆಯುವ ಕ್ರಮ: ಮೊದಲಾಗಿ ತೆಂಗಿನ ಕಾಯಿಯನ್ನು ತುರಿಮಣೆಯಲ್ಲಿ ಹೆರೆಯಬೇಕು. ನಂತರ ಅದನ್ನು ಸಣ್ಣಗೆ ಅರೆದು ಅದರ ಹಾಲು ತೆಗೆಯಬೇಕು. ಸೋಸಿದ ಹಾಲನ್ನು ಅಗಲದ ಪಾತ್ರೆಯಲ್ಲಿ ಹಾಕಿ ೩-೪ ಗಂಟೆ ಕುದಿಸಿದಾಗ ಎಣ್ಣೆ ದೊರೆಯುತ್ತದೆ. ಅದರ ಜಿಡ್ಡು, ತುಪ್ಪ ಕಾಯಿಸಿದಾಗ ತಳದಲ್ಲಿ ದೊರೆಯುವ ಜಿಡ್ಡಿನಂತೆ ಇರುತ್ತದೆ. ಈ ಎಣ್ಣೆ ಗಾಣದಲ್ಲಿ ತೆಗೆದ ಎಣ್ಣೆಯಷ್ಟು ಪಾರದರ್ಶಕವಾಗಿರುವುದಿಲ್ಲ. ಆದರೆ ಉತ್ತಮ ರುಚಿ, ಸುವಾಸನೆ ಇರುತ್ತದೆ. ತೆಂಗಿನೆಣ್ಣೆಯ ಸಾಂಪ್ರದಾಯಿಕ ಬಳಕೆ ಬಗ್ಗೆ ಓದುಗರಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳಿದ್ದರೆ ಪ್ರತಿಕ್ರಿಯೆ ವಿಭಾಗದಲ್ಲಿ ಹಂಚಿಕೊಳ್ಳಬಹುದು.

(ಮಾಹಿತಿ: ರಾಧಾಕೃಷ್ಣ ಹೊಳ್ಳ)

ಚಿತ್ರ ಕೃಪೆ: ಅಂತರ್ಜಾಲ ತಾಣ