ತೆಂಗಿನ ಎಣ್ಣೆ ಸೇವನೆಯಿಂದ ಲಾಭವಿದೆಯೇ?
ತೆಂಗಿನ ಮರವನ್ನು ನಾವು ಕಲ್ಪವೃಕ್ಷ ಎಂದು ಕರೆಯುತ್ತೇವೆ. ಏಕೆಂದರೆ ಇದರ ಎಲ್ಲಾ ಭಾಗಗಳು ಉಪಯುಕ್ತವೇ ಆಗಿದೆ. ತೆಂಗಿನ ಕಾಯಿ ಎನ್ನುವುದು ನಮಗೆ ಪ್ರಕೃತಿ ನೀಡಿದ ವರ ಎನ್ನಬಹುದು. ಏಕೆಂದರೆ ಎಳನೀರು ದೇಹದ ದಾಹ ತೀರಿಸಿ ಬಲ ನೀಡುತ್ತದೆ. ತೆಂಗಿನ ಕಾಯಿ ಆರೋಗ್ಯಕ್ಕೆ ಬಹು ಉತ್ತಮ. ತೆಂಗಿನ ಎಣ್ಣೆಯೂ ಬಹಳ ಉತ್ತಮ ಎಂದು ತಿಳಿದು ಬರುತ್ತದೆ. ಅನಾದಿ ಕಾಲದಿಂದ ಮಾನವ ತೆಂಗಿನ ಎಣ್ಣೆಯನ್ನು ಬಳಸುತ್ತಾ ಬರುತ್ತಿದ್ದು, ಇತ್ತೀಚೆಗೆ ಅದನ್ನು ಬದಿಗಿಟ್ಟು ಉಳಿದ ಎಣ್ಣೆಗಳನ್ನು ಬಳಸುತ್ತಿದ್ದಾನೆ. ಇದೆಲ್ಲಾ ವಿವಿಧ ಕಂಪೆನಿಗಳ ಮಾರಾಟ ತಂತ್ರ ಎನ್ನುತ್ತಾರೆ ಖ್ಯಾತ ವೈದ್ಯರೂ, ಲೇಖಕರೂ ಆಗಿರುವ ಡಾ. ಬಿ ಎಂ ಹೆಗ್ಡೆ. ಇವರ ಪ್ರಕಾರ ಎಲ್ಲಕ್ಕಿಂತ ಶ್ರೇಷ್ಟ ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯ ನಿಯಮಿತ ಬಳಕೆಯಿಂದ ಆರೋಗ್ಯವೂ ಚೆನ್ನಾಗಿರುತ್ತದೆ.
ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯಲು ಸಹಾಯ ಮಾಡುತ್ತದೆ. ಚರ್ಮವೂ ಕಾಂತಿಯುತವಾಗಿರುತ್ತದೆ. ತೆಂಗಿನ ಎಣ್ಣೆಯು ಪೋಷಕಾಂಶಗಳ ಆಗರ ಎನ್ನುತ್ತಾರೆ ಆಯುರ್ವೇದ ತಜ್ಞರು. ಇದು ಆಂಟಿ ಮೈಕ್ರೋಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ತೆಂಗಿನ ಎಣ್ಣೆಯಲ್ಲಿ ಪೊಟ್ಯಾಸಿಯಮ್, ಮೆಗ್ನೀಸಿಯಂ, ವಿಟಮಿನ್ ಸಿ ಮತ್ತು ವಿಟಮಿನ್ ಇ ಸಹಾ ಇದೆ. ಈ ಕಾರಣದಿಂದ ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಗರಿಷ್ಟ ಪ್ರಮಾಣದಲ್ಲಿ ತೆಂಗಿನ ಎಣ್ನೆಯನ್ನು ಬಳಕೆ ಮಾಡಲಾಗುತ್ತದೆ.
ತೆಂಗಿನ ಎಣ್ಣೆಯನ್ನು ಟಾನಿಕ್ ರೀತಿಯಲ್ಲಿ ಬಳಕೆ ಮಾಡಬಹುದಾಗಿದೆ. ಇದರಿಂದ ನಮ್ಮ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ಸಾಬೀತಾಗಿದೆ. ಈ ಚಳಿಗಾಲದ ಸಮಯದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಲು ಪ್ರತೀ ದಿನ ಒಂದು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ದೇಹಕ್ಕೆ ಹಲವು ರೀತಿಯ ಪ್ರಯೋಜನಗಳು ಲಭ್ಯವಾಗುತ್ತವೆ ಎಂದು ಹೇಳಲಾಗಿದೆ.
ತೆಂಗಿನ ಎಣ್ಣೆಯು ಶಕ್ತಿ ವರ್ಧಕ. ತೆಂಗಿನ ಎಣ್ಣೆಯ ಸೇವನೆಯು ದೇಹಕ್ಕೆ ಶಕ್ತಿ ನೀಡುತ್ತದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಹ ಮಂದವಾಗಿರುತ್ತದೆ. ಈ ಸಮಯದಲ್ಲಿ ಒಂದು ಚಮಚ ತೆಂಗಿನ ಎಣ್ಣೆಯನ್ನು ಸೇವಿಸುವುದರಿಂದ ನಮ್ಮ ದಿನ ಇಡೀ ಉಲ್ಲಾಸಮಯವಾಗಿರುತ್ತದೆ. ದೇಹವು ದುರ್ಬಲವಾಗದೇ ಶಕ್ತಿಯುತವಾಗಿರುವಂತೆ ತೆಂಗಿನ ಎಣ್ಣೆ ನೋಡಿಕೊಳ್ಳುತ್ತದೆ. ತೆಂಗಿನ ಎಣ್ಣೆ ಜೀವಕೋಶಗಳ ಆರೋಗ್ಯವನ್ನು ಸುಧಾರಿಸುತದೆ. ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ತೆಂಗಿನ ಎಣ್ಣೆಯ ಸೇವನೆ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಜೀರ್ಣಕ್ರಿಯೆಯನ್ನು ಸರಿ ಪಡಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವಲ್ಲಿ ತೆಂಗಿನ ಎಣ್ಣೆ ಬಹು ಉಪಕಾರಿ. ತೆಂಗಿನ ಎಣ್ಣೆಯ ಸೇವನೆಯು ನಿಮ್ಮ ದೇಹದ ತೂಕವನ್ನು ಇಳಿಸುವಲ್ಲಿ ಸಹಕಾರಿ. ಇದರಲ್ಲಿ ಆಂಟಿ ವೈರಲ್ ಗುಣಲಕ್ಷಣಗಳ ಜೊತೆಗೆ ಪೋಷಕಾಂಶಗಳೂ ಇವೆ. ಇದು ಹಸಿವನ್ನು ಕಡಿಮೆ ಮಾಡಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ತೆಂಗಿನೆಣ್ಣೆ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ. ಚಳಿಗಾಲದಲ್ಲಿ ಒಡೆಯುವ ಚರ್ಮಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಅದು ಮೊಯಿಶ್ಚರೈಸರ್ ತರಹ ಕೆಲಸ ಮಾಡುತ್ತದೆ. ಮುಖದ ಮೇಲಿನ ಕಲೆಗಳನ್ನು ನಿವಾರಿಸುತ್ತದೆ. ಈ ಕಾರಣಗಳಿಂದ ನಿಯಮಿತವಾಗಿ ತೆಂಗಿನ ಎಣ್ಣೆಯನ್ನು ಸೇವನೆ ಮಾಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ