ತೆಂಗಿನ ಕೆಂಪು ಮೂತಿ ಕೀಟದ ಹಾವಳಿಗೆ ಏನು ಪರಿಹಾರ?
ತೆಂಗಿನ ಮರ, ಗಿಡಗಳಿಗೆ ಇತ್ತೀಚೆಗೆ ಕೆಂಪು ಮೂತಿ ಕೀಟದ ಕಾಟ ಭಾರೀ ಹೆಚ್ಚಾಗುತ್ತಿದೆ. ರೈತರು ತೆಂಗು ಬೆಳೆಯುವುದೇ ಅಸಾಧ್ಯ ಎನ್ನಲಾರಂಭಿಸಿದ್ದಾರೆ. ಹೀಗೇ ಮುಂದುವರಿದರೆ ರೈತರಿಗೆ ಸಸಿ ನೆಡುವುದೇ ಕೆಲಸವಾದರೂ ಅಚ್ಚರಿ ಇಲ್ಲ. ಇದನ್ನು ಸರಿಯಾಗಿ ಹದ್ದುಬಸ್ತಿಗೆ ತಾರದೆ ಇದ್ದರೆ ಮುಂದೆ ರೈತರು ತೆಂಗು ಬೆಳೆಸುವುದನ್ನೇ ಬಿಡುವ ಸ್ಥಿತಿ ಬಂದರೂ ಅಚ್ಚರಿ ಇಲ್ಲ. ಯಾವ ಕಾರಣಕ್ಕೆ ಈ ದುಂಬಿ ಹೆಚ್ಚಾಗುತ್ತಿದೆ. ಇದರ ನಿಯಂತ್ರಣ ಹೇಗೆ?
ತೆಂಗಿನ ಮರಗಳಿಗೆ ಬರುವ ಎಲ್ಲಾ ರೋಗಗಳಿಂದಲೂ, ಕೀಟಗಳಿಂದಲೂ ಪ್ರಭಲವಾದದ್ದು ಕೆಂಪು ಮೂತಿ ದುಂಬಿ ಕಾಟ. ರಾಜ್ಯದ ಎಲ್ಲಾ ತೆಂಗು ಬೆಳೆಯುವ ಪ್ರದೇಶಗಳಲ್ಲೂ ರೈತರಿಗೆ ಅತೀ ದೊಡ್ಡ ಸಮಸ್ಯೆ ಇದು. ಕೆಲವರಿಗೆ ತೆಂಗಿನ ಮರ/ ಸಸಿಗಳು ಸಾಯುತ್ತಿವೆ. ಯಾಕೆ ಸಾಯುತ್ತವೆ ಎಂದು ಗೊತ್ತಿರುವುದಿಲ್ಲ. ಎಷ್ಟೇ ಜಾಗರೂಕತೆ ವಹಿಸಿದರೂ ಯಾವುದಾದರೂ ಕಳ್ಳ ಮಾರ್ಗದ ಮೂಲಕ ತೆಂಗಿನ ಮರ/ ಸಸಿಗೆ ಧಾಳಿ ಮಾಡುವ ಕೀಟ ಬಂದದ್ದೇ ಗೊತ್ತಾಗುವುದಿಲ್ಲ. ಗೊತ್ತಾದ ನಂತರ ಆ ಮರ/ ಸಸಿಯನ್ನು ಬದುಕಿಸಲು ಸಾಧ್ಯವೇ ಇಲ್ಲ. ಮನೆ ಅಥವಾ ನಿಮ್ಮ ಹೊಲದ ಎಲ್ಲಿಯಾದರೂ ಈ ಕೀಟದ ಒಂದು ದುಂಬಿ ಹಾರಾಡುತ್ತಿದೆಯೆಂದರೆ ಯಾವುದೋ ಒಂದು ಮರ ಇದಕ್ಕೆ ಬಲಿಪಶುವಾಗಿದೆ ಎಂದರ್ಥ. ಹದ್ದು ಹಾರುತ್ತಿದ್ದರೆ ಏನೋ ಸತ್ತಿದೆ ಎಂಬ ಮಾತು ಇರುವಂತೆ ಈ ಕೀಟ ಹಾರಾಡಿದರೆ ತೆಂಗಿನ ಮರ ಡಮಾರ್. ಇದು ಬರೇ ತೆಂಗು ಮಾತ್ರವಲ್ಲ. ಅಡಿಕೆ ಮರಕ್ಕೂ, ಎಣ್ಣೆ ತಾಳೆ ಮರ, ಈಚಲು ಮರ, ಬೈನೆ ಮರ, ತಾಳೆ ಮರ ಎಲ್ಲದಕ್ಕೂ ತೊಂದರೆ ಮಾಡುತ್ತದೆ. ಗರಿಷ್ಟ ಹಾನಿ ತೆಂಗು ಮತ್ತು ಎಣ್ಣೆ ತಾಳೆ ಮರಗಳಿಗೆ. ಸಾಮಾನ್ಯವಾಗಿ ಈ ದುಂಬಿ ಹೆಚ್ಚು ಎತ್ತರಕ್ಕೆ ಹಾರಾಡಲಾರದು. ಆದ ಕಾರಣ ಸಣ್ಣ ಸಸಿ ಮತ್ತು 20-25 ಅಡಿ ಎತ್ತರದವರೆಗಿನ ಮರಗಳಿಗಳಿಗೆ ಮಾತ್ರ ತೊಂದರೆ ಮಾಡುತ್ತದೆ.
ಯಾವ ಕಾರಣಕ್ಕೆ ಸಂಖ್ಯೆ ಹೆಚ್ಚುತ್ತಿದೆ?: ಯಾವುದೇ ಒಂದು ಕೀಟ- ರೋಗಾಣು ಸಂಖ್ಯಾಭಿವೃದ್ದಿ ಹೆಚ್ಚಳವಾಗಿದೆ ಎಂದರೆ ಅದರ ಸಂತತಿ ಹೆಚ್ಚಳಕ್ಕೆ ಅನುಕೂಲವಾಗುವ ಸನ್ನಿವೇಶ ಏರ್ಪಟ್ಟಿದೆ ಎಂದರ್ಥ. ಒಂದೋ ನಾವು ಅವುಗಳ ಸಂತತಿಯ ಹೆಚ್ಚಳಕ್ಕೆ ಅನುಕೂಲ ಕಲ್ಪಿಸಿಕೊಟ್ಟಿದ್ದೇವೆ, ಅಥವಾ ಅವುಗಳಿಗೆ ಬೇಕಾಗುವ ಆಹಾರ ಯಥೇಚ್ಚವಾಗಿ ಸಿಕ್ಕಿದೆ ಎಂದರ್ಥ. ನಮ್ಮ ಹಿರಿಯರು ಹೇಳುವುದುಂಟು. ತೆಂಗಿನ ಮರದ ಯಾವುದೇ ಹಸಿ ಭಾಗವನ್ನು ಕಡಿಯಬಾರದು ಎಂದು. ಕಾರಣ ಅದರ ಯಾವುದೇ ಹಸಿ ಭಾಗ ಕಡಿದಾಗ ಅದರಲ್ಲಿ ಒಂದು ರಸ (SAP) ಸೋರುತ್ತದೆ. ಈ ರಸದ ವಾಸನೆಗೆ ಕೆಂಪು ಮೂತಿ ದುಂಬಿ ಬರುತ್ತದೆ. ತಲೆತಲಾಂತರದಿಂದಲೂ ನಾವು ತೆಂಗಿನ ಮರಗಳನ್ನು ಕಡಿಯುತ್ತಿರಲಿಲ್ಲ. ಇತ್ತೀಚೆಗೆ ಕೆಲವು ಅನಿವಾರ್ಯ ಕಾರಣಗಳಿಗೆ ತೆಂಗಿನ ಮರ ಕಡಿಯಲಾಗುತ್ತದೆ. ಕಡಿದ ಮರವನ್ನು ಅದರ ಭಾಗಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತೇವೆ. ಇದು ಕೊಳೆತಾಗ ಅದರಲ್ಲಿ ಸೋರಲ್ಪಡುವ ರಸದ ವಾಸನೆಗೆ ಕೆಂಪು ಮೂತಿ ಹುಳ ಬರುತ್ತದೆ. ಕೆಲವು ಪ್ರದೇಶಗಳಲ್ಲಿ ಈಚಲು ಮರಗಳನ್ನು ಕಡಿಯುತ್ತಾರೆ. ಈ ಮರ ಕಡಿದಾಗಲೂ ಅದರ ರಸದ ವಾಸನೆಗೆ ಕೆಂಪು ಮೂತಿ ದುಂಬಿಗಳು ಬರುತ್ತವೆ.
ಭೈನೆ ಮರ: ಕರಾವಳಿ ಮಲೆನಾಡಿನಲ್ಲಿ ವ್ಯಾಪಕವಾಗಿ ಕಂಡು ಬರುವ ಬೈನೆ ಮರ ಬಗನಿ (ಈಂದ್ ಮರ) Caryota urine ಹಿಂದಿನ ಕಾಲದಲ್ಲಿ ಕೆಲವು ಉಪಯೋಗಗಳಿಗೆ ಬಳಕೆಯಾಗುತ್ತಿತ್ತು. ಇದರ ಕಾಂಡದ ಒಳ ಭಾಗವನ್ನು ತೆಗೆದು, ಗಟ್ಟಿಯಾದ ಚಿಪ್ಪು ಭಾಗವನ್ನು ನೀರು ಹಾಯಿಸಲು ಬಳಕೆ ಮಾಡುತ್ತಿದ್ದರು. ಈಗ ಅದರ ಉಪಯೋಗ ಇಲ್ಲ. ಅಲ್ಲಲ್ಲಿ ಹುಟ್ಟಿ ಬೆಳೆಯುವ ಈ ಮರಕ್ಕೂ, ಗಿಡಕ್ಕೂ ಕೆಂಪು ಮೂತಿ ದುಂಬಿ ದಾಳಿ ಮಾಡುತ್ತದೆ. ಅಲ್ಲದೆ ಈ ಮರ ಸ್ವಲ್ಪ ಕಾಲ ಬೆಳೆದು ಕೊನೆಗೆ ಸುಳಿಯ ಎಲೆಯ ಬದಲಿಗೆ ಹೂ ಗೊಂಚಲನ್ನು ಬಿಟ್ಟು ನಂತರ ಸತ್ತು ಹೋಗುತ್ತದೆ. ಹೀಗೆ ಸತ್ತಾಗ ಅದರ ಕಾಂಡದ ರಸದ ವಾಸನೆಗೆ ಕೆಂಪು ಮೂತಿ ದುಂಬಿ ಬರುತ್ತದೆ. ಅಲ್ಲಿ ಸಂತಾನಾಭಿವೃದ್ದಿಯಾಗುತ್ತದೆ. ಈಗ ಈ ಮರಗಳನ್ನು ಉಪಯೋಗಿಸುವವರು ಇಲ್ಲದ ಕಾರಣ ಅದರಷ್ಟಕ್ಕೆ ಸಾಯುವುದೇ ಹೆಚ್ಚು. ಹಾಗಾಗಿ ಕೆಂಪು ಮೂತಿ ದುಂಬಿಯ ಸಂತತಿ ಹೆಚ್ಚಳವಾಗಿ ಹಾನಿ ಹೆಚ್ಚಾಗುತ್ತಿದೆ.
ಎಳನೀರಿನ ಸಿಪ್ಪೆ ಮತ್ತು ಅದರ ನಿರ್ವಹಣೆ: ಕೊಳೆಯುವ ಯಾವ ವಸ್ತುಗಳಿದ್ದರೂ ಆದರ ವಾಸನೆಗೆ ಕೆಂಪು ಮೂತಿ ದುಂಬಿ ಹುಡುಕಿಕೊಂಡು ಬರುತ್ತದೆ. ಹಿಂದೆ ಜನ ಎಳನೀರಿನ ಬಳಕೆ ಮಾಡುತ್ತಿದ್ದುದು ಕಡಿಮೆ. ಬಳಕೆ ಮಾಡಿದರೂ ಅದನ್ನು ಒಡೆದು ಗಂಜಿ ತಿಂದು ಅಥವಾ ಎಳೆಯದಾಗಿದ್ದರೆ ಅದರ ಮೆದು ಚಿಪ್ಪನ್ನೂ ತಿಂದು ಉಳಿದ ತ್ಯಾಜ್ಯಗಳನ್ನು ಸಿಕ್ಕ ಸಿಕ್ಕಲ್ಲಿ ಬಿಸಾಡುತ್ತಿರಲಿಲ್ಲ. ಅದನ್ನು ಒಂದೆಡೆ ಒಣಗಲು ಹಾಕಿ, ಬಿಸಿನೀರು ಕಾಯಿಸಲು ಉರುವಲಾಗಿ ಬಳಕೆ ಮಾಡುತ್ತಿದ್ದರು. ಈಗ ಹಾಗಿಲ್ಲ. ಬಿಸಿನೀರು ಕಾಯಿಸುವ ಕ್ರಮ ಕಡಿಮೆಯಾಗಿದೆ. ಎಳನೀರು ಕುಡಿದು ಅದರ ಒಳಗಿನ ಗಂಜಿಯನ್ನು ತಿನ್ನುವುದಕ್ಕೂ ವ್ಯವಧಾನ ಇಲ್ಲ.ಅದನ್ನು ಹಾಗೆಯೇ ಬಿಸಾಡುತ್ತಾರೆ. ಅದು ಒಣಗಲೂ ಅವಕಾಶ ಇಲ್ಲದೆ ಕೊಳೆಯಲ್ಪಟ್ಟು ಅದರ ವಾಸನೆಗೆ ಕೆಂಪು ಮೂತಿ ದುಂಬಿ ಆಕರ್ಷಿಸಲ್ಪಡುತ್ತದೆ. ಇದೂ ಸಹ ಅವುಗಳ ಸಂಖ್ಯೆ ಹೆಚ್ಚಳಕ್ಕೆ ಅನುಕೂಲಮಾಡಿಕೊಟ್ಟಿದೆ.
ಸತ್ತ ತೆಂಗಿನ ಮರ: ಸುಳಿ ಕೊಳೆತು ಸತ್ತ ತೆಂಗಿನ ಮರ, ಸಿಡಿಲು ಬಡಿದು ಸತ್ತ ತೆಂಗಿನ ಮರ, ಅಥವಾ ಇನ್ಯಾವುದೋ ಕಾರಣಕ್ಕೆ ಸತ್ತ ತೆಂಗಿನ ಮರ, ಗಿಡವನ್ನು ನಾವು ತಕ್ಷಣ ವಿಲೇವಾರಿ ಮಾಡುವುದಿಲ್ಲ. ಸತ್ತ ತಕ್ಷಣ ಆ ಮರದ ಕಾಂಡ ಭಾಗ ಹಾಗೆಯೇ ಇನ್ನಿತರ ಭಾಗ ಕೊಳೆಯಲು ಪ್ರಾರಂಭವಾಗುತ್ತದೆ. ಕೊಳೆಯುವಿಕೆ ಉಂಟಾದಾಗ ಅದರ ರಸ ಸ್ರಾವ ಉಂಟಾಗಿ ಅದಕ್ಕೆ ಕೆಂಪುಮೂತಿ ದುಂಬಿಗಳು ಬರುತ್ತವೆ. ಅಲ್ಲಿ ಸಂತಾನಾಭಿವೃದ್ದಿಯಾಗುತ್ತದೆ. ಹೀಗೆ ಸಂತಾನ ವೃದ್ದಿಯಾಗಿ ಅಲ್ಲಿ ಆಹಾರ ಮುಗಿದು ಬೇರೆ ಆಸರೆ ಹುಡುಕಿ ತೆಂಗನ್ನು ಆಶ್ರಯಿಸುತ್ತವೆ. ಈ ಕಾರಣದಿಂದಲೂ ಈಗೀಗ ಕೆಂಪು ಮೂತಿ ದುಂಬಿಗಳು ಹೆಚ್ಚಾಗುತ್ತಿವೆ. ತೆಂಗಿನ ಮರದ ಗರಿಗಳು ಒಣಗಿ ಜೋತು ಬಿದ್ದಿವೆ ಎಂಬ ಸ್ಥಿತಿ ಬಂದರೆ ನಂತರ ಅದು ಸಹಜ ಸ್ಥಿತಿಗೆ ಬರುವುದಿಲ್ಲ ಎಂಬುದು ನಿಶ್ಚಿತ. ಹಾಗಾಗಿ ಅದನ್ನು ಕಡಿದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ, ಬಿಸಿ ಉಪಚಾರ ಅಥವಾ ಕೀಟನಾಶಕದ ಉಪಚಾರ ಮಾಡಿ ಕೀಟಗಳು ಬಾರದಂತೆ ತಡೆಯಲೇ ಬೇಕು. ಗಾಳಿಗೆ ಮುರಿದು ಬೀಳುವ ಅಡಿಕೆ ಮರ, ತಲೆ ಕಳೆದುಕೊಂಡರೂ ಸ್ವಲ್ಪ ಸಮಯದ ತನಕ ಕಾಂಡಕ್ಕೆ ಬೇರಿನ ಮೂಲಕ ಆಹಾರ ಸರಬರಾಜು ಆಗುತ್ತಿರುತ್ತದೆ. ಅದು ಮೇಲೆ ಬಳಕೆ ಆಗದೆ ಕಾಂಡದಲ್ಲಿ ರಸ ಸೋರುವಿಕೆ ಉಂಟಾಗುತ್ತದೆ. ಆ ವಾಸನೆಗೂ ದುಂಬಿಗಳು ಬರುತ್ತವೆ.
ಬಾಳೆ ಹಣ್ಣು , ಹಲಸಿನ ಹಣ್ಣು: ಕೊಳೆಯುವ ಬಾಳೆ ಹಣ್ಣು, ಮರದಲ್ಲಿ ಕೊಯಿಲು ಮಾಡದೆ ಉಳಿದ ಹಲಸಿನ ಹಣ್ಣುಗಳ ಕೊಳೆತ ವಾಸನೆಗೆ ಸಹ ಕೆಂಪು ಮೂತಿ ದುಂಬಿ ಬರುತ್ತದೆ. ಆದ ಕಾರಣ ಅದನ್ನು ಸಿಕ್ಕ ಸಿಕ್ಕಲ್ಲಿ ಬಿಸಾಡಬಾರದು. ಇದನ್ನು ನೆಲದಲ್ಲಿ ಹೂತು ಹಾಕಬೇಕು. ಇತ್ತೀಚೆಗೆ ನಮ್ಮಲ್ಲಿ ಹಾಳಾಗುವ ಹಣ್ಣು ಹಂಪಲುಗಳನ್ನು ವಿವೇವಾರಿ ಮಾಡಲು ಹಸುಗಳ ಸಾಕಣೆಯೂ ಕಡಿಮೆಯಾಗಿದೆ. ಹಾಗಾಗಿ ಅದನ್ನು ಬಿಸಾಡುತ್ತೇವೆ.
ತೆಂಗಿನ ಮರದ ರಸ, ಹಾಗೆಯೇ ತಾಳೆ ಜಾತಿಗೆ ಸೇರಿದ ಯಾವುದೇ ಮರದ ರಸ ಅದು ಅಡಿಕೆಯೂ ಆಗಬಹುದು. ಅದು ಸತ್ತ ನಂತರ ಅದನ್ನು ಉಳಿಸಿಕೊಳ್ಳಬೇಡಿ. ಅದನ್ನು ಕಡಿಯಿರಿ. ಒಣಗಿಸಿರಿ. ಉರುವಲಾಗಿ ಬಳಕೆ ಮಾಡಿ. ಆಗ ಅವು ಕೊಳೆಯುವ ಪ್ರಮೇಯ ಬರುವುದಿಲ್ಲ. ಕೊಳೆಯುವಂತೆ ಮಾಡಿದರೆ ಅದರ ರಸ ಕೆಂಪು ಮೂತಿ ಹುಳವನ್ನು ಎಲ್ಲೆಲ್ಲಿಂದಲೋ ಬರುವಂತೆ ಮಾಡುತ್ತದೆ. ಇದರಿಂದ ನಮ್ಮ ತೆಂಗಿನ ಮರಕ್ಕೆ ಸಂಚಕಾರ ಉಂಟಾಗುತ್ತದೆ. ತೆಂಗಿನ ಮರಕ್ಕೆ ಕೆಂಪು ಮೂತಿ ದುಂಬಿ ಹೊಡೆದರೆ ಅದನ್ನು ಯಾವುದೇ ಕಾರಣಕ್ಕೂ ಬದುಕಿಸಲು ಆಗುವುದಿಲ್ಲ. ಬದುಕಿದರೂ ಫಲ ಕೊಡಲಾರದು.
ತೆಂಗಿನ ಮರಗಳನ್ನು ಈಗ ಕಡಿಯುವುದು ಹೆಚ್ಚಾಗಿದೆ. ತೆಂಗಿನ ಮರಗಳು, ಸಸಿಗಳು ಸಾಯುವುದು ಹೆಚ್ಚಾಗಿದೆ. ೧೦೦ ಜನರಲ್ಲಿ ಒಬ್ಬರೂ ಸತ್ತ ಮರ- ಸಸಿಯನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದಿಲ್ಲ. ಅದು ಕೊಳೆತು ರಸ ಸ್ರವಿಸಿ ಕೆಂಪು ಮೂತಿ ದುಂಬಿ ದಾಳಿ ಮಾಡಿಯೇ ಅಡ್ಡಲಾಗುತ್ತಿದೆ. ಕೆಂಪು ಮೂತಿ ದುಂಬಿಯ ಕಾಟದಿಂದ ತೆಂಗು ಬೆಳೆಗಾರರು ಪಾರಾಗಬೇಕಿದ್ದರೆ ತೆಂಗು, ಅಡಿಕೆ, ಬೈನೆ, ಈಚಲು ಯಾವುದೇ ಮರ ಕಡಿದರೂ ಅದನ್ನು ತಕ್ಷಣ ಸಿಗಿದು, ಒಣಗಿಸಿ ರಸಸ್ರಾವ ಆಗದಂತೆ ಮಾಡಿದರೆ ಮಾತ್ರ ಸಾಧ್ಯ.
ಚಿತ್ರ ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ