ತೆಂಗಿನ ಕೆಲವು ಹೈಬ್ರೀಡ್ ತಳಿಗಳು
ಸಿ ಪಿ ಸಿ ಆರ್ ಐ ಕೇಂದ್ರದಿಂದ ಬಿಡುಗಡೆಯಾದ ಹೈಬ್ರೀಡ್ ತಳಿಗಳ ವಿವರ ಇಲ್ಲಿದೆ. ಇಲ್ಲಿ ಯಾವ ಯಾವ ಯಾವ ಪ್ರದೇಶಕ್ಕೆ ಯಾವ ತಳಿ ಸೂಕ್ತವೋ ಆ ತಳಿಗಳಿಗೆ ಒತ್ತು ನೀಡಲಾಗಿದೆ. ಇದೆಲ್ಲವನ್ನೂ ಇಲ್ಲಿ ಪ್ರಾಯೋಗಿಕವಾಗಿ ಅಭ್ಯಸಿಸಿಯೇ ಬಿಡುಗಡೆ ಮಾಡಲಾಗುತ್ತದೆ.
ಚಂದ್ರ ಸಂಕರ: ಇದು ಗಿಡ್ದ ತಳಿ ಮತ್ತು ಎತ್ತರದ ತಳಿ ಮಧ್ಯೆ (COD X WCT) ಸಂಕರಣ ಮಾಡಿ ಪಡೆಯಲಾದ ತಳಿ. ಇದು ಎಳನೀರಿನ ಉದ್ದೇಶಕ್ಕೆ ಮತ್ತು ಒಬ್ಬರಿ ಉದ್ದೇಶಕ್ಕೂ ಬಳಸಬಹುದಾದ ತಳಿಯಾಗಿದ್ದು ಮರವೊಂದರ ಸರಾಸರಿ ೧೧೦ ಕಾಯಿಗಳ ಇಳುವರಿ ನೀಡಬಲ್ಲುದು. ನೀರಿನ ಒತ್ತಯವನ್ನು ಸ್ವಲ್ಪ ಮಟ್ಟಿಗೆ ಸಹಿಸಿಕೊಳ್ಳುತ್ತದೆ. ಹಳದಿ ಮಿಶ್ರ ಹಸುರು ಬಣ್ಣದ ತಳಿ. ಕೇರಳ ಕರ್ನಾಟಕ ಮತ್ತು ತಮಿಳುನಾಡಿಗೆ ಹೊಂದಿಕೆಯಾಗುವ ತಳಿ. ಉತ್ತಮ ಕೊಬ್ಬರಿ ಇಳುವರಿಯನ್ನು (೧೬೦-೨೩೦ ಗ್ರಾಂ ಕಾಯಿಗೆ) ನೀಡಬಲ್ಲ ತಳಿ. ೪ ವರ್ಷಕ್ಕೆ ಇಳುವರಿ ಪ್ರಾರಂಭ.
ಕೇರ ಸಂಕರ: ಇದು ಲಕ್ಷ ದ್ವೀಪ ಎತ್ತರದ ತಳಿ ಮತ್ತು ಗಂಗಬೊಂಡ ತಳಿಯ ಜೊತೆಗೆ ಸಂಕರಣ ಮಾಡಿ ಪಡೆಯಲಾದ ತಳಿ. ಮರವೊಂದರ ಸರಾಸರಿ ೧೦೬ ಕಾಯಿಗಳ ಇಳುವರಿ ನೀಡಬಲ್ಲುದು. ಕೊಬ್ಬರಿ ಮತ್ತು ಎಣ್ಣೆ ಪ್ರಮಾಣ ಉತ್ತಮವಾಗಿಯೇ ಇದೆ. ಕೇರಳ, ಕರ್ನಾಟಕ, ಆಂದ್ರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸೂಕ್ತವಾದ ತಳಿ. ಹಳದಿ ಮಿಶ್ರ ಹಸುರು ಬಣ್ಣದ ತಳಿ. ೪ ವರ್ಷಕ್ಕೆ ಇಳುವರಿಗೆ ಪ್ರಾರಂಭ. (ಚಿತ್ರ ೧)
ಚಂದ್ರ ಲಕ್ಷ: ಇದು ಲಕ್ಷ ದ್ವೀಪ ಎತ್ತರದ ತಳಿ ಮತ್ತು ಚೌಘಾಟ್ ಓರೆಂಜ್ ಡ್ವಾರ್ಪ್ ಜೊತೆಗೆ ಸಂಕರಣ ಮಾಡಿ ಪಡೆಯಲಾದ ತಳಿ. ಮರವೊಂದರ ಸರಾಸರಿ ೧೦೯ ಕಾಯಿಗಳ ಇಳುವರಿ ನೀಡಬಲ್ಲುದು. ಕೊಬ್ಬರಿ ಮತ್ತು ಎಣ್ಣೆ ಪ್ರಮಾಣ ಉತ್ತಮವಾಗಿಯೇ ಇದೆ. ಕೇರಳ, ಕರ್ನಾಟಕ ರಾಜ್ಯಗಳಿಗೆ ಸೂಕ್ತವಾದ ತಳಿ. ೪-೫ ವರ್ಷಕ್ಕೆ ಇಳುವರಿಗೆ ಪ್ರಾರಂಭ. ಹಳದಿ ಮಿಶ್ರ ಹಸುರು ಬಣ್ಣದ ತಳಿ. ೧ ಕಾಯಿಗೆ ೧೫೦-೨೧೦ ಗ್ರಾಂ ಕೊಬ್ಬರಿ ತೂಕ. (ಚಿತ್ರ ೨)
ಕಲ್ಪ ಸಂಮೃದ್ಧಿ: ಇದು ಮಲಯನ್ ಹಳದಿ ಡ್ವಾರ್ಫ್ ಹಾಗೂ ಪಶ್ಚಿಮ ಕರಾವಳಿಯ ಗಿಡ್ದ ಮತ್ತು ಎತ್ತರದ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ತಳಿ. ಇದು ಮರವೊಂದರ ಸರಾಸರಿ ೧೧೭ ಕಾಯಿಯ ಇಳುವರಿಯನ್ನು ನೀಡಬಲ್ಲುದು . ಕೊಬ್ಬರಿ ಮತ್ತು ಎಣ್ಣೆ ಅಂಶ ಚೆನ್ನಾಗಿದೆ. ಎಳನೀರಿಗೆ ಸೂಕ್ತವಾದತಳಿ. ಕೇರಳ ಮತ್ತು ಅಸ್ಸಾಂಗಳಿಗೆ ಸೂಕ್ತವಾದ ತಳಿ. ತಿಳಿ ಹಸುರು ಬಣ್ಣದ ತಳಿ.
ಕಲ್ಪ ಸಂಕರ : ಇದನ್ನು ಪಶ್ಚಿಮ ಕರಾವಳಿಯ ಎತ್ತರದ ತಳಿ ಮತ್ತು ಚೌಘಾಟ್ ಗ್ರೀನ್ ಡ್ವಾರ್ಫ್ ಜೊತೆ ಸಂಕರಣ ಮಾಡಿ ಪಡೆದ ತಳಿ. ಇದು ಸುಮಾರು ೮೪ ಕಾಯಿಯ ಇಳುವರಿ ನಿಡಬಲ್ಲುದು. ಬೇರು ಸೊರಗು ರೋಗ ಇರುವ ಪ್ರದೇಶಗಳಿಗೆ ಸೂಕ್ತವಾದ ತಳಿ. ಕೊಬ್ಬರಿಗೆ ಉತ್ತಮ. ಎಣ್ಣೆಯ ಇಳುವರಿ ಕಡಿಮೆ. ಎಳನೀರಿಗೆ ಹೊಂದಿಕೆಯಾಗುತ್ತದೆ. ಹಚ್ಚ ಹಸುರು ಬಣ್ಣದ ತಳಿ. (ಚಿತ್ರ ೩)
ಕಲ್ಪ ಶ್ರೇಷ್ಟ: ಇದನ್ನು ಮಲಯನ್ ಹಳದಿ ಡ್ವಾರ್ಫ್ ಮತ್ತು ತಿಪಟೂರು ಟಾಲ್ ತಳಿಗಳ ಮಧ್ಯೆ ಸಂಕರಣ ಮಾಡಿ ಪಡೆಯಲಾದ ತಳಿ. ಇದರಲ್ಲಿ ಕೊಬ್ಬರಿ ಪ್ರಮಾಣ ಮತ್ತು ಎಣ್ಣೆ ಪ್ರಮಾಣ ಅತ್ಯುತ್ತಮವಾಗಿದೆ. ತಿಳಿ ಹಸುರು ಬಣ್ಣದ ತಳಿ. ಹೆಚ್ಚು ನೀರು ಮತ್ತು ಸಿಹಿಯಾದ ನೀರು ಇರುವ ಕಾರಣ ಎಳನೀರಿಗೆ ಸೂಕ್ತವಾದ ತಳಿ. (ಚಿತ್ರ ೪)
ಪುತ್ತೂರು ತಾಲೂಕು, ಕುಕ್ಕೆ ಸುಬ್ರಮಣ್ಯ ಸಮೀಪದ ನೆಟ್ಟಣದ ಬಿಳಿನೆಲೆ ಗ್ರಾಮದ ಕಿದು (ಕಿಡು) ಎಂಬಲ್ಲಿರುವ ತೆಂಗಿನ ತಳಿ ಸಂಗ್ರಹಾಲಯದಲ್ಲಿ ಸುಮಾರು ೧೨೦ ಹೆಕ್ಟೇರು ಪದೇಶದಲ್ಲಿ ಇದೆಲ್ಲಾ ತಳಿಗಳ ಸಂಗ್ರಹ ಇದೆ. ೧೯೯೮ ಇಲ್ಲಿಗೆ Coconut Genetic Resource Network (COGENT) ಮಂಜೂರಾಗಿರುತ್ತದೆ. ಇಲ್ಲಿ ತಳಿಗಳ ಮಧ್ಯೆ ಕೃತಕ ಹೈಬ್ರೀಡೀಕರಣ, ನೈಸರ್ಗಿಕ ಹೈಬ್ರೀಡೀಕರಣ ಕಾರ್ಯಗಳು ನಡೆಯುತ್ತವೆ. ನೈಸರ್ಗಿಕವಾಗಿ ತೆಂಗಿನ ಸಂಕರಣ ನಡೆದು ಉತ್ತಮ ತಳಿಯನ್ನು ಪಡೆಯುವುದಕ್ಕೋಸ್ಕರ ಏಷ್ಯಾ ಖಂಡದ ಬೇರೆ ಬೇರೆ ತಳಿಗಳನ್ನು ಮಿಶ್ರ ಮಾಡಿ ಬೆಳೆಸಲಾಗುತ್ತಿದೆ. ಒಂದು ಸಾಲು ಗಿಡ್ದತಳಿಗಳನ್ನು ನೆಟ್ಟಿದ್ದರೆ ಮತ್ತೊಂದು ಸಾಲು ಎತ್ತರದ ತಳಿಗಳು. ಕೆಲವು ಸಣ್ಣ ಕಾಯಿ ಕೊಡುವವುಗಳಾದರೆ ಮತ್ತೆ ಕೆಲವು ದೊಡ್ದ ಕಾಯಿಗಳವು. ಇನ್ನೂ ಕೆಲವು ಅತೀ ಸಣ್ಣ ಕಾಯಿ ಕಾಯಿ ಕೊಡಬಲ್ಲ (ಮೈಕ್ರೋ) ತಳಿಗಳು. ಬೇರೆ ಬೇರೆ ಬಣ್ಣದ ತಳಿಗಳು. ಮರದ ಲಕ್ಷಣವೂ ಬಿನ್ನ ಭಿನ್ನ. ಇವುಗಳ ಮಧ್ಯೆ ನೈಸರ್ಗಿಕವಾಗಿ ಪರಾಗಸ್ಪರ್ಷ ಆದಾಗ ದೊರೆಯುವ ಹೊಸ ತಳಿಗಳನ್ನು ಇಲ್ಲಿ ಬೆಳೆಸಿ ಅದರ ಅಧ್ಯಯನ ಕೈಗೊಳ್ಳಲಾಗುತ್ತದೆ. ಇಲ್ಲಿ ಕೆಲವು ತಾಕುಗಳ ಮರಗಳಿಂದ ಮಾತ್ರ ಬೀಜದ ಆಯ್ಕೆ ಮಾಡಿ ಅದನ್ನು ಆರಿಸಿ ರೈತರಿಗೆ ಬೆಳೆಸಲು ಮಾರಾಟ ಮಾಡಲಾಗುತ್ತದೆ. ಕೆಲವು ತಾಕುಗಳ ಬೀಜಗಳ ಸಸ್ಯೋತ್ಪಾದನೆ ಮಾಡಿ ಅದರ ಗುಣಾವಗುಣಗಳನ್ನು ಅಭ್ಯಸಿಲಿಕ್ಕಾಗಿಯೇ ಪ್ರತ್ಯೇಕವಾಗಿ ಬೇರೆ ತಾಕಿನಲ್ಲಿ ಬೆಳೆಸಲಾಗುತ್ತದೆ. ಈ ಮೂಲಕ ತೆಂಗಿನಲ್ಲಿ ಹೊಸ ತಳಿಗಳ ಅನ್ವೇಶಣೆ ನಡೆಯುತ್ತದೆ. ಇಂತಹ ಬೇರೆ ಬೇರೆ ತೆಂಗಿನ ತೋತಗಳನ್ನು ಇಲ್ಲಿ ಕಾಣಬಹುದು.
ತಂತ್ರಜ್ಞಾನಗಳು: ತೆಂಗಿನ ಕಾಯಿಯಿಂದ ಡೆಸಿಕೇಟೆಡ್ ಕೋಕೋನಟ್, ವರ್ಜಿನ್ ಕೋಕೋನಟ್ ಆಯಿಲ್. ಕೋಕೂನೆಟ್ ಚಿಪ್ಸ್, ಕೋಕೋನಟ್ ಭರ್ಫಿ, ನೀರಿನ ವಿನೆಗರ್ ಹೀಗೇ ಹಲವಾರು ಮೌಲ್ಯವರ್ಧಿತ ಉತ್ಪನ್ನಗಳನ್ನು, ತೆಂಗಿನಎಣ್ಣೆಯ ಕ್ಯಾಪ್ಸ್ಯೂಲ್, ತೆಂಗಿನ ಗೆರಟೆಯ ಚಾರ್ಕೋಲ್, ತೆಂಗಿನ ಮರದ ಕಾಂಡದಿಂದ ಬೇರೆ ಬೇರೆ ಸಾಧನ ಸಲಕರಣೆಗಳನ್ನು ಮಾಡುವ ತಂತ್ರಜ್ಞಾನವನ್ನು ಕೇಂದ್ರ ಅಭಿವೃದ್ಧಿಪಡಿಸಿದೆ.
ತೆಂಗಿನ ಮರದಿಂದ ಬರೇ ಕಾಯಿ, ಎಳನೀರು ತೆಗೆಯುವುದಲ್ಲದೆ ತೆಂಗಿನ ಮರದ ಹೂ ಗೊಂಚಲಿನಿಂದ ಹುಳಿ ರಹಿತವಾಗಿ ಶೀತಲೀಕೃತ ನೀರಾ ಸಂಗ್ರಹಿಸುವ ತಂತ್ರಜ್ಞಾನವನ್ನು ಬಿಡುಗಡೆ ಮಾಡಿ ಹಲವಾರು ತೆಂಗು ಬೆಳೆಗಾರರಿಗೆ ತೆಂಗಿನ ಬೆಳೆಯಲ್ಲಿ ಲಾಭ ದೊರಕಿಸಿಕೊಡಲು ನೆರವಾಗಿದೆ.
ತೆಂಗಿನ ಬೆಳೆಯಲ್ಲಿ ರೋಗ ನಿರ್ವಹಣೆ: ತೆಂಗಿನ ಮರಗಳಿಗೆ ಮಾರಕವಾದ ರೋಗಗಳಲ್ಲಿ ಸುಳಿಕೊಳೆ ರೋಗ ಒಂದು. ಕೆಲವು ವರ್ಷಗಳ ಹಿಂದೆ ಕಿದು ತೋಟದಲ್ಲಿ ಕಂಡು ಬಂದಂತೆ ಸುಮಾರು ಅರ್ಧಕ್ಕೂ ಹೆಚ್ಚಿನ ಮರಗಳು ಸುಳಿ ಕೊಳೆ ರೋಗಕ್ಕೆ ತುತ್ತಾಗಿವೆ, ಇದಕ್ಕೆ ಬೋರ್ಡೋ ಪೇಸ್ಟ್ ಉಪಚಾರ ಮಾಡುವುದೊಂದೇ ಪರಿಹಾರವಾಗಿದೆ.
ಕೀಟ ನಿರ್ವಹಣೆ: ತೆಂಗಿನ ಮರಗಳಿಗೆ ಬಾಧಿಸುವ ನುಶಿ ರೋಗ, ಕೋರೀಡ್ ಬಗ್, ಬಿಳಿ ನೊಣ ನಿಯಂತ್ರಣಕ್ಕೆ ಬುಡದಿಂದಲೇ ಸಿಂಪರಣೆ ಮಾಡಲು ಅನುಕೂಲವಾಗುವ ಟ್ರಾಕ್ಟರ್ ಚಾಲಿತ ಸಿಂಪರಣಾ ವಿಧಾನ.
ತೆಂಗಿನ ಬೇಸಾಯದ ಸರಳೀಕರಣ: ತೆಂಗಿನ ಮರದ ಉಳಿಕೆಗಳನ್ನು ತೆಂಗಿನ ಮರದ ಬುಡದಲ್ಲಿ ಬೆಳೆಯುವ ಸಾವಯವ ತ್ಯಾಜ್ಯಗಳನ್ನು ಮರಳಿ ಬುಡಕ್ಕೆ ಹಾಕಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ವಿಧಾನ.
ತೆಂಗಿನ ಬೇಸಾಯದಲ್ಲಿ ಲಾಭ ತರಬಲ್ಲ ಮಿಶ್ರ ಬೆಳೆಗಳು: ತೆಂಗಿನ ಮರದ ಬುಡದಲ್ಲಿ ತರಕಾರಿ, ಅನನಾಸು, ಮೇವಿನ ಹುಲ್ಲು, ಸುವರ್ಣ ಗಡ್ಡೆ, ಹೂವಿನ ಬೆಳೆ, ಮಧ್ಯಂತರದಲ್ಲಿ ಬಾಳೆ, ಧೀರ್ಘಾವಧಿ ಕೊಕ್ಕೋ ಬೆಳೆ ಮರಕ್ಕೆ ಕಾರಿಮೆಣಸು, ಹಾಗೆಯೇ ಬಹು ಬೆಳೆ ಪದ್ದತಿಗಳ ಮೂಲಕ ತೆಂಗಿನ ಮರದ ತುದಿಯಲ್ಲಿ ಪಡೆಯುವ ಉತ್ಪಾದನೆಯಷ್ಟೇ ಉತ್ಪತ್ತಿಯನ್ನು ಇಲ್ಲಿಯೂ ಪಡೆಯಬಹುದೆಂಬುದನ್ನು ಕೇಂದ್ರ ತನ್ನ ಸಂಶೋಧನೆಯಲ್ಲಿ ಕಂಡು ಕೊಂಡಿದೆ. ಒಟ್ಟಿನಲ್ಲಿ ತೆಂಗು ಬೆಳೆಯುವ ರೈತರಿಗೆ ನೆರವಾಗುವ ಸಾಕಷ್ಟು ಸಂಶೋಧನೆಗಳು ಕೇಂದ್ರ ಸ್ಥಾನವಾದ ಕಾಸರಗೋಡಿನ ಸಿ ಪಿ ಸಿ ಆರ್ ಐ ಮತ್ತು ಅದರ ಪ್ರಾದೇಶಿಕ ಕೇಂದ್ರವಾದ ಕಿದು ಫಾರಂ ನಲ್ಲಿ ಲಭ್ಯವಿದೆ.
ಮಾಹಿತಿ: ರಾಧಾಕೃಷ್ಣ ಹೊಳ್ಳ