ತೆಂಗಿನ ಮರಗಳ ಶಿರ ಸ್ವಚ್ಛತೆ ಮತ್ತು ಇಳುವರಿ
ಯಾರ ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಗೊಬ್ಬರ, ನೀರು ಕೊಡುವುದಲ್ಲದೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಹೀಗೆ ಮಾಡುವುದರಿಂದ ಮರ ಆರೋಗ್ಯವಾಗಿರುತ್ತದೆ. ಉತ್ತಮ ಇಳುವರಿಯೂ ಬರುತ್ತದೆ.
ತೆಂಗಿನ ಮರದ ಶಿರ ಬಾಗವನ್ನು ಸ್ವಚ್ಚ ಮಾಡುವ ಕ್ರಮ ಅನಾದಿ ಕಾಲದಿಂದಲೂ ನಡೆದು ಬಂದಿರುವ ನಿರ್ವಹಣೆಗಳಲ್ಲಿ ಒಂದು. ನಮ್ಮ ಹಿರಿಯರು ವರ್ಷಕ್ಕೊಮ್ಮೆ ಶಿರಭಾಗವನ್ನು ಪೂರ್ಣ ಸ್ವಚ್ಚ ಮಾಡುತ್ತಿದ್ದರು. ತೆಂಗಿನ ಕಾಯಿ ತೆಗೆಯುವಾಗೆಲ್ಲಾ ಒಣ ವಸ್ತುಗಳನ್ನು ತೆಗೆದು ಹಾಕುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ನಾವು ಬರೇ ಕಾಯಿ ಮಾತ್ರ ತೆಗೆಯುತ್ತೇವೆ. ಶಿರ ಭಾಗದ ಸ್ವಚ್ಚತೆ ಕಡೆಗೆ ಹೆಚ್ಚು ಗಮನಹರಿಸುವುದಿಲ್ಲ. ಗರಿಗಳು ಒಣಗಿ ಕಾಂಡಕ್ಕೆ ಜೋತು ಬಿದ್ದಿರುತ್ತವೆ. ಕಾಯಿ ಆಗಿ ತೆಗೆದ ನಂತರ ಉಳಿಯುವ ಒಣ ಹೂ ಗೊಂಚಲು ಅಲ್ಲೇ ಇರುತ್ತದೆ. ಆಗಾಗ ಅದು ಉದುರಿ ಬೀಳುತ್ತದೆಯೇ ಹೊರತು ನಾವು ತೆಗೆಯುವ ಗೋಜಿಗೆ ಹೋಗುವುದಿಲ್ಲ. ತೆಗೆದರೂ ಅದನ್ನು ಬುಡದಲ್ಲಿ ಕೊಳೆಯಲು ಹಾಕುತ್ತೇವೆ. ಇದು ನಿಜವಾದ ನಿರ್ವಹಣೆ ಅಲ್ಲ. ತೆಂಗಿನ ಮರದ ತ್ಯಾಜ್ಯಗಳನ್ನು ತೆಂಗಿನ ಮರದ ಬುಡಕ್ಕೆ ಕಚ್ಚಾ ರೀತಿಯಲ್ಲಿ ಹಾಕಬಾರದು ಹಾಕಬೇಕಾದರೆ ಅದನ್ನು ಸ್ವಲ್ಪ ಕಾಂಪೋಸ್ಟು ಮಾಡಿ ಹಾಕಬೇಕು. ಶಿರಭಾಗದ ಒಣಗಲು ಸಿದ್ದವಾದ ಗರಿಯನ್ನು ಸ್ವಲ್ಪ ಹಸಿ ಇದ್ದಾಗಲೇ ಮುರಿದು ತೆಗೆಯಬೇಕು. ಕಾಯಿ ಆದ ಹೂ ಗೊಂಚಲು, ಗರಿಯ ಬುಡದ ರಕ್ಷಾ ಬಲೆ ಇವನ್ನೆಲ್ಲಾ ತೆಗೆದು ಶಿರಭಾಗವನ್ನು ಯಾವಾಗಲೂ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು.
ಸ್ವಚ್ಚ ಮಾಡುವುದರಿಂದ ಅನುಕೂಲಗಳು: ಯಾವುದೇ ಬೆಳೆ ಇರಲಿ ಬರೇ ಫಸಲು ಮಾತ್ರ ತೆಗೆಯುವುದಲ್ಲ. ಮರದ ಸ್ವಚ್ಚತೆಯ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಮಾವಿನ ಮರದಿಂದ ಕಾಯಿ ಮಾತ್ರ ಪಡೆಯುವುದಲ್ಲ. ವರ್ಷ ವರ್ಷವೂ ಒಣ ಟೊಂಗೆಗಳನ್ನು ತೆಗೆಯುವುದು, ಮುಂತಾದ ನಿರ್ವಹಣೆ ಮಾಡುತ್ತಿದ್ದರೆ ಕೀಟ ರೋಗ ಸಮಸ್ಯೆ ತುಂಬಾ ಕಡಿಮೆಯಾಗುತ್ತದೆ. ಅಡಿಕೆ ಮರದಲ್ಲಿ ಉದುರದೆ ಇರುವ ಗರಿ, ಒಣಗಿದ ಹೊಂಬಾಳೆ ಇತ್ಯಾದಿಗಳನ್ನು ಕಾಲ ಕಾಲಕ್ಕೆ ತೆಗೆಯದೆ ಇದ್ದರೆ ರೋಗ ಕೀಟ ಸಮಸ್ಯೆ ನಿರ್ವಹಣೆ ಮಾಡುವುದೇ ಕಷ್ಟವಾಗುತ್ತದೆ. ಸ್ವಚ್ಚತೆಯ ಕಡೆಗೆ ಗಮನಹರಿಸದೆ ಯಾವುದೇ ಕೀಟನಾಶಕ, ರೋಗ ನಾಶಕ ಬಳಸಿದೆರೆ ಅದು ಕಳ್ಳನನ್ನು ಒಳಗೆ ಉಳಿಸಿಕೊಂಡು ಬಾಗಿಲಿಗೆ ಚಿಲಕ ಹಾಕಿದಂತೆ ಆಗುತ್ತದೆ.
ತೆಂಗಿನ ಮರದ ಶಿರಭಾಗದಲ್ಲಿ ಒಣಗಿದ ಗರಿಗಳು ಕಾಲಕಾಲಕ್ಕೆ ಉದುರಿ ಬೀಳುತ್ತವೆ. ಅದರ ಜೊತೆಗೆ ಒಣ ಹೂ ಗೊಂಚಲುಗಳೂ ಉದುರುತ್ತದೆ. ಕೆಲವೊಮ್ಮೆ ಒಂದೆರಡು ಉದುರದೆ ಇದ್ದರೆ ನಂತರ ಉಳಿದವುಗಳೂ ಉದುರುವುದಿಲ್ಲ.ಕೆಲವು ಮರದ ಗರಿಯ ಬುಡ (Leaf base)ಕಾಂಡದಿಂದ ಬಿಡುವುದು ಸ್ವಲ್ಪ ನಿಧಾನ. ಮಳೆ ಬಂದು ಸ್ವಲ್ಪ ನೆನೆದ ತರುವಾಯ ಬಿಡುತ್ತದೆ. ಇದಲ್ಲದೆ ಶಿರ ಭಾಗದ ಗರಿಯ ಬುಡದಲ್ಲಿ ಒಂದು ರಕ್ಷಾ (Fibrous network of light brown stipules) ಬಲೆ ಇರುತ್ತದೆ. ಇದು ಗರಿಗಳ ಜೊತೆಗೆ ಇರುತ್ತದೆ. ಇದನ್ನು ತೆಗೆಯುತ್ತಾ ಇರಬೇಕು. ಕಾಯಿ ಕಚ್ಚದೆ ಉದುರಿದ ಮಿಡಿ, ಹಾಗೂ ಈ ರಕ್ಷಾ ಬಲೆಯ ಹುಡಿಗಳು ಎಲೆ ಕಂಕುಳಲ್ಲಿ ಶೇಖರಣೆಯಾಗಿರುತ್ತವೆ.ಸಹಜವಾಗಿ ಒಣ ಗರಿಗಳು ಉದುರುವಾಗ ಅದು ಬೀಳುತ್ತದೆ. ಆದರೂ ಹಿಂದಿನ ಎಲೆ ಕಂಕುಳಲ್ಲಿ ಉಳಿದುಕೊಂಡಿರುತ್ತವೆ. ಕೆಲವೊಮ್ಮೆ ಅಪಕ್ವ ಗರಿಗಳು ಒಣಗುವುದೂ ಇದೆ. ಅವು ಶಿರಭಾಗದಲ್ಲಿ ಕೆಳಗಿನ ಗರಿ ಉದುರದೆ ಬೀಳುವುದಿಲ್ಲ. ಉದುರದೆ ಉಳಿಯುವ ಗರಿಗಳಿಂದ ಹಾಗೆಯೇ ಇನ್ನಿತರ ಒಣ ವಸ್ತುಗಳು ಶಿರ ಬಾಗದಲ್ಲಿ ಶೇಖರಣೆ ಆಗಿ, ಅಲ್ಲಿ ಕೆಲವೊಮ್ಮೆ ಕೊಳೆಯುವಿಕೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಕಸಗಳು ಸೇರಿರುವ ಭಾಗಕ್ಕೆ ಕುರುವಾಯಿ ಕೀಟ ಧಾಳಿ ಮಾಡುತ್ತದೆ. ಈ ತ್ಯಾಜ್ಯಗಳು ಕೆಲವು ರೋಗಗಳನ್ನು ಸಹ ಆಮಂತ್ರಿಸುತ್ತವೆ. ರೋಗ ಕಾರಕ ಶಿಲೀಂದ್ರಗಳ ಆಕರ್ಷಣೆಗೆ ಇದು ನೆರವಾಗುತ್ತದೆ.
ಎಳೆ ಮರಗಳಿಗೆ ಅತೀ ಆಗತ್ಯ: ಎಳೆ ಮರಗಳ ಶಿರಭಾಗವನ್ನು ಸ್ವಚ್ಚ ಗೊಳಿಸುತ್ತಾ ಇರಬೇಕಾದ್ದು ಅಗತ್ಯ. ಸುಮಾರು ೧೦-೧೫ ವರ್ಷದವರೆಗೆ ಒಣಗುತ್ತಿರುವ ಗರಿಗಳನ್ನು ಎಳೆದು ತೆಗೆಯುತ್ತಾ ಇರಬೇಕು. ಗರಿಯ ಸುತ್ತ ಇರುವ ಬಲೆಯಂತಹ ವಸ್ತುವನ್ನು ತೆಗೆಯಬೇಕು. ತುದಿ ಭಾಗದಲ್ಲಿ ಪ್ರತೀ ಸುಳಿಯ ಜೊತೆಗೆ ಗರಿಯ ಬುಡದಲ್ಲಿ ಎರಡೂ ಬದಿಗೂ ಅಂಟಿಕೊಂಡು ಈ ಬಲೆಯಂತಹ (ಚಪ್ಪರಿಗೆ) ಒಂದು ರಚನೆ ಬೆಳೆದಿರುತ್ತದೆ.. ಗರಿ ಕಡ್ಡಿ ಬಿಟ್ಟು ಅರಳುವ ಸಮಯಕ್ಕೆ ಶಿರ ಭಾಗ ಸ್ವಚ್ಚ ಮಾಡುವಾಗ ಪರಸ್ಪರ ಬಿಗಿದುಕೊಂಡ ಈ ಬಲೆಯನ್ನು ಒಂದು ಬದಿ ಕತ್ತರಿಸಿದರೆ ಗರಿಗಳು ಅಗಲಕ್ಕೆ ಬರುತ್ತದೆ. ಗರಿಗಳು ಅಗಲ ಬಿದ್ದಷ್ಟು ಬೇಗ ಫಲ ಕೊಡುತ್ತದೆ ಎಂಬುದಾಗಿ ಹಿರಿಯರು ಹೇಳುತ್ತಾರೆ.
ಎಳೆ ಸಸಿಗಳಿಗೆ ಸುಮಾರು ೩೦ ಅಡಿ ಎತ್ತರ ಬೆಳೆಯುವ ತನಕ ಕೆಂಪು ಮೂತಿ ದುಂಬಿ, ಕುರುವಾಯಿ ಕೀಟಗಳು ಹೆಚ್ಚಾಗಿ ಧಾಳಿ ಮಾಡುತ್ತವೆ. ಅವುಗಳಿಗೆ ಶಿರಭಾಗದಲ್ಲಿ ಸಂಗ್ರಹವಾಗಿರುವ ಒಣ ವಸ್ತುಗಳು ಆಶ್ರಯ ಕೊಡುತ್ತದೆ. ಹಾಗಾಗಿ ಶಿರಭಾಗದಲ್ಲಿ ಕಸ ಕಡ್ಡಿಗಳು ಇರದಂತೆ ಸ್ವಚ್ಚವಾಗಿಡಬೇಕು. ಶಿರಭಾಗ ಸ್ವಚ್ಚ ಮಾಡಿ ಅಲ್ಲಿಗೆ ಮರಳು ಹಾಕಬೇಕು ಎನ್ನುತ್ತಾರೆ ಹಿರಿಯರು. ಮರಳು ಹಾಕುವುದರಿಂದ ಎಲೆ ಕಂಕುಳದ ಮೂಲಕ ಒಳ ಸೇರುವ ಕುರುವಾಯಿ ಕೀಟಕ್ಕೆ ಅನನುಕೂಲವಾಗುತ್ತದೆ. ಹಾಗಾಗಿ ಉಪಟಳ ಸ್ವಲ್ಪ ಕಡಿಮೆಯಾಗುತ್ತದೆ. ತೆಂಗಿನ ಮರಕ್ಕೆ ಬರುವ ಮಾರಣಾಂತಿಕ ಕಾಯಿಲೆ, ಎಲೆ ಚುಕ್ಕೆ, ಕಾಯಿ ಚುಕ್ಕೆ ಹಾಗೂ ಮರದ ಗರಿ ಒಣಗುವ ರೋಗ (Lasiodiplodia), ಸುಳಿ ಕೊಳೆ ರೋಗ (Bud Rot) ಸಹ ಸ್ವಚ್ಚತೆ ಇಲ್ಲದ ಕಾರಣವೇ ಹೆಚ್ಚಾಗುತ್ತದೆ. ತೆಂಗಿನ ಮರಗಳ ಶಿರಭಾಗದಲ್ಲಿ ಕಸ ತುಂಬಿದ್ದರೆ ಅಲ್ಲಿಗೆ ಇರುವೆಗಳು, ಇಲಿಗಳು ಬರುತ್ತದೆ. ಇರುವೆಗಳು ತಮ್ಮ ಕಾಲಿನ ಮೂಲಕ ರೋಗಾಣುಗಳನ್ನು, ಕೆಲವು ಕೀಟಗಳನ್ನು ಪಸರಿಸುತ್ತವೆ. ಇಲಿಗಳು ಕೆಲವೊಮ್ಮೆ ಎಳೆ ಕಾಯಿಗಳನ್ನು ತಿನ್ನುವುದೂ ಇದೆ. ಸ್ವಚ್ಚತೆ ಇದ್ದಲ್ಲಿ ಇವುಗಳ ಉಪಟಳ ಕಡಿಮೆ ಇರುತ್ತದೆ.
ಯಾವಾಗ ಸ್ವಚ್ಚ ಮಾಡಬೇಕು: ಮಳೆಗಾಲ ಬರುವ ಮುಂಚೆ ಮರದ ಶಿರಭಾಗ ಸ್ವಚ್ಚಮಾಡುವುದು ಉತ್ತಮ. ಅನುಕೂಲ ಇದ್ದರೆ ಮಳೆಗಾಲ ಮುಗಿಯುವ ಸಮಯದಲ್ಲೂ ಒಮ್ಮೆ ಮಾಡಬೇಕು. ಬೇಸಿಗೆಯಲ್ಲಿ ಅಗತ್ಯ ಇಲ್ಲ. ತೆಂಗಿನ ಮರದ ಗರಿಗಳು ಹಾಗೂ ನಾರುಗಳನ್ನು ಕಡಿದು ಬುಡಕ್ಕೆ ಹಾಕುವ ಅಭ್ಯಾಸ ಕೆಲವೊಂದು ಸಮಯದಲ್ಲಿ ಒಳ್ಳೆಯದಲ್ಲ. ಅದನ್ನು ಪಕ್ಕದಲ್ಲಿ ರಾಶಿ ಹಾಕಿ ಕಾಂಪೋಸ್ಟ್ ಆದ ನಂತರ ಹಾಕುವುದು ಉತ್ತಮ. ಯಾವುದಾದರೂ ಶಿಲೀಂದ್ರ ಸೋಂಕು ಇದ್ದಲ್ಲಿ ತಾಜಾ ತ್ಯಾಜ್ಯಗಳನ್ನು ಹಾಕಿದರೆ ಅದು ಮತ್ತೆ ಮರಕ್ಕೆ ಹರಡುತ್ತದೆ.
ದೊಡ್ಡ ಮರಗಳ ಸ್ವಚ್ಚತೆ: ಬೆಳೆದ ಮರಗಳಿಂದ ಕಾಯಿ ಕೀಳುವ ಸಮಯದಲ್ಲಿ ಒಣ ಗರಿಗಳನ್ನು ತೆಗೆಯುವುದು ಹಾಗೂ ಒಣ ಹೂ ಗೊಂಚಲನ್ನು ತೆಗೆಯುವುದು ಮಾಡಬೇಕು. ಶಿರಭಾಗಕ್ಕೆ ಏರಿ ಸ್ವಚ್ಚ ಮಾಡುವುದು ದೊಡ್ಡ ಮರಗಳಲ್ಲಿ ಕಷ್ಟ ಸಾಧ್ಯ. ತೆಂಗಿನ ಮರಗಳ ಶಿರ ಭಾಗ ಸ್ವಚ್ಚಮಾಡುವುದರಿಂದ ಕೀಟ ಸಮಸ್ಯೆಗಳಾದ ಮೈಟ್ ಗಳು, ಕುರುವಾಯಿ ಕೀಟ ಹಾಗೂ ಕೆಂಪು ಮೂತಿ ದುಂಬಿ ಸಮಸ್ಯೆ, ಹಾಗೂ ರೋಗಗಳು ತುಂಬಾ ಕಡಿಮೆಯಾಗಿ ಮರದ ಆರೋಗ್ಯ ಸುಧಾರಿಸುತ್ತದೆ. ಇದರಿಂದ ಇಳುವರಿ ಹೆಚ್ಚಳವಾಗುತ್ತದೆ. ಎಳೆ ಮರಗಳಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಕಾಯಿ ಗೊನೆ ಗರಿ ಕಂಕುಳಲ್ಲಿ ನಿಲ್ಲದೆ ಹೊರಕ್ಕೆ ಜಾರುವುದುಂಟು. ಹೀಗೆ ಆದರೆ ಆ ಗೊನೆ ಬೆಳೆಯುವಾಗ ಮುರಿಯುತ್ತದೆ. ಮರದ ಶಿರ ಭಾಗ ಸ್ವಚ್ಚ ಮಾಡುವಾಗ ಅದನ್ನು ಎಳೆಯದಿರುವಾಗ ಕಷ್ಟ ಇಲ್ಲದೆ ಎಲೆ ಕಂಕುಳಲ್ಲಿ ಇಟ್ಟು ಮುರಿಯದಂತೆ ರಕ್ಷಿಸಬಹುದು. ಯಾವುದೇ ಕಾರಣಕ್ಕೆ ಎಳೆ ಗರಿಗಳನ್ನು ಕಡಿಯಬೇಡಿ.
ತೆಂಗಿನ ಮರದಲ್ಲಿ ಪ್ರತೀ ವರ್ಷವೂ ಅಧಿಕ ಇಳುವರಿ ಬರುತ್ತದೆಯೋ ಅಂತವರ ತೆಂಗಿನ ಮರದ ಶಿರಭಾಗವನ್ನು ಒಮ್ಮೆ ನೋಡಿ. ಬಹಳ ಸ್ವಚ್ಚವಾಗಿ ಇರುತ್ತದೆ. ತೆಂಗಿನ ಮರಗಳಿಗೆ ಅಗತ್ಯವಾಗಿ ಮಾಡಬೇಕಾದ ಕೆಲಸ ಶಿರ ಭಾಗದ ಸ್ವಚ್ಚತೆ. ಇತ್ತೀಚೆಗೆ ತೆಂಗಿನ ಮರಗಳ ಶಿರ ಭಾಗ ಸ್ವಚ್ಚತೆ ಮಾಡುವ ಕ್ರಮವನ್ನು ನಾವು ಅನಿವಾರ್ಯವಾಗಿ ಬಿಟ್ಟಿದ್ದೇವೆ. ಮರ ಏರುವವರ ಸಮಸ್ಯೆ ಇದಕ್ಕೆ ಕಾರಣ. ಅದೇ ಕಾರಣದಿಮ್ದ ಈಗ ತೆಂಗಿಗೆ ಸುಳಿ ಕೊಳೆಯೂ ಹೆಚ್ಚಾಗುತ್ತಿದೆ.
ಮಾಹಿತಿ ಮತ್ತು ಚಿತ್ರಗಳು : ರಾಧಾಕೃಷ್ಣ ಹೊಳ್ಳ